ಕೊವಿಡ್‍ ಕಾಲ ಸಿರಿವಂತರ ಸಿರಿಯನ್ನು ಮತ್ತಷ್ಟು ಹೆಚ್ಚಿಸಿದೆ- ಆಕ್ಸ್ ಫಾಂ ನ ‘ಅಸಮಾನತೆಯ ವೈರಸ್‍’ ವರದಿ

ಭಾರತದಲ್ಲಿ ಮಾರ್ಚ್ 2020ರಿಂದ ಕೊವಿಡ್‍-19 ಮತ್ತು ಲಾಕ್‍ಡೌನ್ ನಿಂದಾಗಿ ಒಂದೆಡೆಯಲ್ಲಿ 12.2 ಕೋಟಿ ಜನಗಳ ಜೀವನಾಧಾರಗಳನ್ನು ಕಸಿದುಕೊಂಡಿದ್ದರೆ, ಇನ್ನೊಂದೆಡೆಯಲ್ಲಿ ನೂರು ಮಂದಿ  ಡಾಲರ್‍ ಬಿಲಿಯಾಧೀಶರ ಸಂಪತ್ತು 12,97,822 ಕೋಟಿ ರೂ.ಗಳಷ್ಟು ಹೆಚ್ಚಿದೆ, ಅಂದರೆ  ದೇಶದ 13.8 ಕೋಟಿ ಅತ್ಯಂತ ಬಡಜನಗಳಿಗೆ ತಲಾ 1ಲಕ್ಷ ರೂ.ನಷ್ಟು ಕೊಡಲು ಸಾಲುವಷ್ಟು!

ಇದು ಈ ವಾರ ಪ್ರಕಟವಾಗಿರುವ ‘ಅಸಮಾನತೆಯ ವೈರಸ್‍’ ಎಂಬ ಆಕ್ಸ್ ಫಾಂ  ವರದಿ ಕಂಡುಕೊಂಡಿರುವ ಸಂಗತಿ.

ಕೊವಿಡ್‍-19 ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಅಸಮಾನತೆಯನ್ನು ತೀಕ್ಷ್ಣಗೊಳಿಸಿದೆ ಎಂದು ಈ ವರದಿ ಹೇಳಿದೆ. ಜಗತ್ತಿನಾದ್ಯಂತ 1000 ಬಿಲಿಯಾಧೀಶರುಗಳ ಸಂಪತ್ತುಗಳು ಕೊವಿಡ್‍-ಪೂರ್ವದ ಮಟ್ಟಗಳಿಗೆ ಮತ್ತೆ ಏರಿವೆ. ಆದರೆ ಜಗತ್ತಿನ ಅತ್ಯಂತ ಬಡಜನಗಳ ಆದಾಯಗಳು ಕೊವಿಡ್‍-ಪೂರ್ವದ ಮಟ್ಟಕ್ಕಾದರೂ ಮತ್ತೆ ಬರಲು  ಕನಿಷ್ಟ ಒಂದು ದಶಕ ಬೇಕಾದೀತು. ಕೊವಿಡ್‍ ಮಹಾಸೋಂಕು ಆರಂಭವಾದಂದಿನಿಂದ ಜಗತ್ತಿನ 10 ಅತ್ಯಂತ ಶ್ರೀಮಂತರ ಸಂಪತ್ತಿನಲ್ಲಿ ಆಗಿರುವ ಹೆಚ್ಚಳ “ಜಗತ್ತಿನಲ್ಲಿ ಯಾರೂ ದಾರಿದ್ರ್ಯಕ್ಕೆ ಬೀಳದಂತೆ ತಡೆಯಲು ಮತ್ತು ಪ್ರತಿಯೊಬ್ಬರಿಗೂ ಲಸಿಕೆಯನ್ನು ಉಚಿತವಾಗಿ ಕೊಡಲು ಸಾಕಷ್ಟಾಗುತ್ತದೆ” ಎಂದು ಈ ವರದಿ ತೌಲನಿಕವಾಗಿ ಹೇಳಿದೆ.

ಭಾರತದಲ್ಲಿ ಕಾರ್ಪೊರೇಟ್‍-ಪರ ಸರಕಾರದ ಧೋರಣೆಗಳಿಂದಾಗಿ ಈ ಅಸಮಾನತೆಯ ವೈರಸಿನ ದುಷ್ಪರಿಣಾಮ ಇನ್ನೂ ಹೆಚ್ಚು. ಮುಕೇಶ್ ಅಂಬಾನಿಯ ಸಂಪತ್ತು ಈ ಅವಧಿಯಲ್ಲಿ 72%ದಷ್ಟು ಹೆಚ್ಚಿ 5,83,700 ಕೋಟಿ ರೂ.ಗಳಿಗೇರಿ, ಆತನನ್ನು ಜಗತ್ತಿನ ನಾಲ್ಕನೇ ಅತಿ ದೊಡ್ಡ ಶ್ರೀಮಂತನಾಗಿ ಮತ್ತು ಏಷ್ಯಾ ಮತ್ತು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿತು. ಈ ಕೊವಿಡ್‍ ಕಾಲದಲ್ಲಿ ಈತ ಒಂದು ಗಂಟೆಯಲ್ಲಿ ಗಳಿಸಿದ ಹಣವನ್ನು ಸಂಪಾದಿಸಬೇಕಾದರೆ ಒಬ್ಬ ಅಕುಶಲ ಕಾರ್ಮಿಕ 10,000 ವರ್ಷ ಕೆಲಸ ಮಾಡಬೇಕಾದೀತು ಎಂದು ಈ ವರದಿ ಅಸಮಾನತೆಯ ಅಗಾಧ ಪ್ರಮಾಣವನ್ನು ಎತ್ತಿ ತೋರಿಸಿದೆ,

“ ಸರಕಾರ ಸಾರ್ವಜನಿಕ ಕಲ್ಯಾಣದ ಮೇಲೆ ಖರ್ಚು ಮಾಡಲು ಹಿಂದೇಟು ಹಾಕಿತು, ಆದರೆ ಕಾರ್ಪೊರೇಟ್‍ ವಲಯಕ್ಕೆ ಮತ್ತು ಭಾರತದ ಕುಲೀನ ವರ್ಗಗಳಿಗೆ ಸಕ್ರಿಯವಾಗಿ ನೆರವುಧನ ಒದಗಿಸಿತು” ಎಂದಿರುವ ವರದಿ ಇದಕ್ಕೆ ಉದಾಹರಣೆಯಾಗಿ ಸರಕಾರದ ಕೊವಿಡ್‍-19 ಪ್ಯಾಕೆಜಿನ ನಾಲ್ಕನೇ ಕಂತು ಅದಾನಿ ಗುಂಪು, ರಿಲಯನ್ಸ್ ಗುಂಪು , ವೆದಾಂತ ಮುಂತಾದವರಿಗೇ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬ ಮಾಧ್ಯಮ ವರದಿಗಳನ್ನು ಉದ್ಧರಿಸಿದೆ.

ಭಾರತದಲ್ಲಿ ಆರ್ಥಿಕ ನಿಧಾನಗತಿ ಅತ್ಯಂತ ಹೆಚ್ಚಾಗಿ ಬಾಧಿಸಿರುವುದು ಅನೌಪಚಾರಿಕ ವಲಯದ ಕಾರ್ಮಿಕರನ್ನು. 12.2 ಕೋಟಿ ಉದ್ಯೋಗನಷ್ಟದಲ್ಲಿ 9.2 ಕೋಟಿ ಈ ವಲಯದ್ದೇ, ಅಂದರೆ 75ಶೇ.ದಷ್ಟು. ಲಾಕ್‍ಡೌನಿನ ಅವಧಿಯಲ್ಲಿ 300ಕ್ಕೂ ಹೆಚ್ಚು ಅನೌಪಚಾರಿಕ ವಲಯದ ಕಾರ್ಮಿಕರು “ಹಸಿವು, ಆತ್ಮಹತ್ಯೆ, ಸುಸ್ತು, ರಸ್ತೆ ಹಾಗೂ ರೈಲು ಅಪಘಾತಗಳು, ಪೋಲಿಸ್‍ ಅಮಾನುಷತೆ ಮತ್ತು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಪಾಲನೆ ದೊರೆಯದೆ” ಪ್ರಾಣ ಕಳಕೊಂಡಿರುವುದು ದಾಖಲಾಗಿದೆ ಎಂದು ಈ ವರದಿ ಉದ್ಧರಿಸಿದೆ.

ಇದನ್ನು ಓದಿ : ಅಂಬಾನಿ ಕಂಪನಿ ಭತ್ತಕ್ಕೆ ಎಂ.ಎಸ್‍.ಪಿ.ಗಿಂತ ಹೆಚ್ಚುಕೊಡುತ್ತಿದೆಯೇ?

ಭಾರತ ಸ್ವಾತಂತ್ರ್ಯಾನಂತರ ದ ಅತಿ ದೊಡ್ಡ ವಲಸೆಯನ್ನು ಕಂಡಿತು, ಸುಮಾರು 1.06 ಕೋಟಿ ವಲಸೆ ಕಾರ್ಮಿಕರು ಸಾವಿರಾರು ಕಿ.ಮೀ. ಗಳಷ್ಟು ನಡೆದು ತಮ್ಮ ಹಳ್ಳಿಗಳಿಗೆ ಮರಳಬೇಕಾಗಿ ಬಂತು ಎಂದಿರುವ ಈ ವರದಿ ಕೊವಿಡ್‍ ಹೇಗೆ ಲಿಂಗ ಅಸಮಾನತೆ, ಶೈಕ್ಷಣಿಕ ಅಸಮಾನತೆ ಮತ್ತು ಆರೋಗ್ಯ ಅಸಮಾನತೆಗಳನ್ನೂ ಹೆಚ್ಚಿಸಿದೆ ಎಂಬ ವಿವರಗಳನ್ನು ಕೊಟ್ಟಿದೆ.

ಲಿಂಗ ಅಸಮಾನತೆ

ಮಹಿಳೆಯರ ಪ್ರಮಾಣ ಹೆಚ್ಚಿರುವ  ವಲಯಗಳೇ ಲಾಕ್‍ಡೌನಿನಿಂದ ಅತಿ ಹೆಚ್ಚು ಬಾಧಿತವಾದವುಗಳು, ಇದರಿಂದಾಗಿ ಎಪ್ರಿಲ್‍ 2020ರಲ್ಲಿ 1.7 ಕೋಟಿ ಮಹಿಳೆಯರು ಉದ್ಯೋಗ ಕಳಕೊಂಡರು. ಲಾಕ್‍ ಡೌನಿನ ಹಿಂದಿನ ಅವಧಿಗೆ ಹೋಲಿಸಿದರೆ ಮಹಿಳಾ ನಿರುದ್ಯೋಗದಲ್ಲಿ 15ಶೇ. ಹೆಚ್ಚಳವಾಯಿತು. ಇದರಿಂದಾಗಿ ಜಿಡಿಪಿಯಲ್ಲಿ 8%ದಷ್ಟು ನಷ್ಟವಾಯಿತು ಎಂದು ಈ ವರದಿ ಹೇಳುತ್ತದೆ.

ಈ ಅವಧಿಯಲ್ಲಿ ಸಂಬಳ ಪಡೆದ ಮತ್ತು ಸಂಬಳವಿಲ್ಲದ ಮಹಿಳೆಯರ ಕೆಲಸಗಳೆರಡೂ ಹೆಚ್ಚಾದವು. ಅಂದರೆ ಮನೆಯಿಂದ ಕೆಲಸ ಮಾಡುವ ಪದ್ಧತಿಯಲ್ಲಿ ಕಚೇರಿ ಕೆಲಸವೂ ಹೆಚ್ಚಿತು, ಮನಗೆಲಸವೂ ಹೆಚ್ಚಿತು, ಕೆಲಸದ ಸಮಯ ಮತ್ತು ವೈಯಕ್ತಿಕ ಸಮಯದ ನಡುವಿನ ಗೆರೆಗಳು ಮಸಕುಗೊಂಡವು ಎಂದು ಈ ವರದಿ ಹೇಳಿದೆ.

ಇನ್ನಷ್ಟು  ಆತಂಕ ಉಂಟುಮಾಡುವ ಸಂಗತಿಯೆಂದರೆ, ಮಾರ್ಚ್ 25 ರಿಂದ ಮೇ 31, 2020ರ ಎರಡು ತಿಂಗಳ ಅವಧಿಯಲ್ಲೆ ರಾಷ್ಟ್ರೀಯ ಮಹಿಳಾ ಆಯೋಗ 1477 ಮನೆಯೊಳಗಿನ ಹಿಂಸಾಚಾರದ ದೂರುಗಳನ್ನು ಸ್ವೀಕರಿಸಿತು ಎಂಬುದು.

ಇದನ್ನೂ ಓದಿ : ಅಭಿವೃದ್ಧಿ ಮತ್ತು ಲಿಂಗ ಸಮಾನತೆ

ಶೈಕ್ಷಣಿಕ ಅಸಮಾನತೆಗಳು

ಅಕ್ಟೋಬರ್‍ 2020ರ ಅಂತ್ಯದ ವರೆಗೆ ಶಾಲಾ-ಕಾಲೇಜುಗಳು ಮುಚ್ಚಿದ್ದರಿಂದ 32 ಕೋಟಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇದರಲ್ಲಿ 84% ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಮತ್ತು 70% ಸರಕಾರೀ ಶಾಲೆಗಳಲ್ಲಿ ಓದುತ್ತಿರುವವರು.

ಅಲ್ಲದೆ 60 ಲಕ್ಷಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ವಿದ್ಯಾರ್ಥಿಗಳಿಗೆ ಅವರ ವಿದ್ಯಾರ್ಥಿವೇತನಗಳು ಸಿಗಲಿಲ್ಲ.

12.6 ಲಕ್ಷ ಶಾಲೆಗಳ 12 ಕೋಟಿ ಮಕ್ಕಳು ಮಧ್ಯಾಹ್ನದ ಊಟದಿಂದ ವಂಚಿತರಾದರು. ಇವರಿಗೆ ಇದೇ ಪೌಷ್ಟಿಕ ಆಹಾರದ ಮೂಲವಾಗಿದೆ. ಸುಪ್ರಿಂ ಕೋರ್ಟ್‍ ಆದೇಶದ ನಂತರವೂ 35ಶೇ. ಮಕ್ಕಳಿಗೆ ಅವು ಸಿಗುತ್ತಿಲ್ಲ ಎಂದು ಕಂಡು ಬಂದಿದೆ ಎಂದು ಈ ವರದಿ ಹೇಳಿದೆ.

ಈ ಅವಧಿಯಲ್ಲಿ ಆನ್‍ಲೈನ್‍ ಶಿಕ್ಷಣದತ್ತ ಒತ್ತಿನಿಂದಾಗಿಯೂ ತೊಂದರೆಯಾಗಿರುವುದು ಬಡ ವಿಭಾಗಗಳಿಗೇ. ಭಾರತದ 20% ಅತಿ ಬಡ ಕುಟುಂಬಗಳಲ್ಲಿ 3% ಮಾತ್ರವೇ ಕಂಪ್ಯೂಟರ್ ಲಭ್ಯತೆ ಹೊಂದಿದ್ದಾರೆ, 9%ಕ್ಕೆ ಮಾತ್ರವೇ ಇಂಟರ್ನೆಟ್‍ ಲಭ್ಯತೆ ಇರುವುದು.

ಇದನ್ನೂ ಓದಿ : ಶಿಕ್ಷಣದಲ್ಲಿ ಆಳುವ ಪಕ್ಷದ ಹೊಸ ಅಜೆಂಡಾ

ಆರೋಗ್ಯ ಅಸಮಾನತೆಗಳು

ಸರಕಾರ ಹೇಳಿದಂತೆ,  ಕೊವಿಡ್‍ ನಿಂದ ರಕ್ಷಣೆಗೆ ಪ್ರತ್ಯೇಕವಾಗಿರುವುದು, ‘ಸಾಮಾಜಿಕ ದೂರ’ ಎಂಬುದು ಬಡವಿಭಾಗಗಳಿಗೆ ಸಾಧ್ಯವಾಗದ ಸಂಗತಿ. ಏಕೆಂದರೆ ಮೇಲಿನ 20% ಕುಟುಂಬಗಳಲ್ಲಿ 93.4% ಸ್ವಂತ ನೈರ್ಮಲ್ಯ ವ್ಯವಸ್ಥೆಗಳನ್ನು ಹೊಂದಿದ್ದರೆ, 20% ಅತಿ ಬಡಕುಟುಂಬಗಳಲ್ಲಿ ಕೇವಲ 6%ಕ್ಕೆ ಮಾತ್ರವೇ ಇದು ಲಭ್ಯವಾಗಿದೆ. ದೇಶದ 59.6% ಮಂದಿಗೆ ಲಭ್ಯವಿರುವುದು ಒಂದು ಕೋಣೆಯ , ಅಥವ ಅದಕ್ಕಿಂತಲೂ ಕಡಿಮೆಯ ವಸತಿ.

ಸಾರ್ವಜನಿಕ ಆರೋಗ್ಯಪಾಲನೆಯ ಸಂಸ್ಥೆಗಳೆಲ್ಲ ಕೊವಿಡ್‍ ತಪಾಸಣೆ ಮತ್ತು ಚಿಕಿತ್ಸೆಗೆ ಮೀಸಲಾಗಿ ಬಿಟ್ಟದ್ದರಿಂದ ಗರ್ಭಿಣಿ ಮಹಿಳೆಯರಿಗೆ ಚಿಕಿತ್ಸೆ ಸೇರಿದಂತೆ ಉಳಿದ ಕಾಯಿಲೆಗಳಿಗೆ ಚಿಕಿತ್ಸೆ ಸಿಗದೆ ಬಡಕುಟುಂಬಗಳು ಸಂಕಷ್ಟಕ್ಕೀಡಾಗಿವೆ.

ಆರೋಗ್ಯಪಾಲನೆಯಲ್ಲಿ ಸರಕಾರದ ಖರ್ಚು ಅತಿ ಕಡಿಮೆ ಪ್ರಮಾಣದಲ್ಲಿ ಇರುವ  ದೇಶಗಳ ಸಾಲಿನಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಪ್ರತಿ ಭಾರತೀಯ ತನ್ನ ಆರೋಗ್ಯ ವೆಚ್ಚದ 70%ವನ್ನು ತನ್ನ ಆದಾಯದಿಂದಲೇ ಭರಿಸಬೆಕಾಗಿದೆ. ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿಗೆ ಕನಿಷ್ಟ ಆರೋಗ್ಯ ಸೌಲಭ್ಯಗಳೂ ಇಲ್ಲ. ಈ ಅಸಮಾನತೆ ಕೊವಿಡ್‍ ಕಾಲದಲ್ಲಿ ಇನ್ನಷ್ಟು ಉಲ್ಬಣಗೊಂಡಿದೆ ಎಂದು ಈ ಆಕ್ಸ್ ಫಾಂ ವರದಿ ಹೇಳುತ್ತದೆ.

ಭಾರತದ ಬಡಜನರು ಕೊವಿಡ್‍ ಹೊಡೆತಗಳಿಂದ ನರಳುತ್ತಿದ್ದಾಗ ಸರಕಾರ ಪ್ರಕಟಿಸಿದ ಮೊದಲ ಪರಿಹಾರ ಪ್ಯಾಕೇಜಿನಲ್ಲಿ ಕುಟುಂಬಗಳ ಸಾಮಾಜಿಕ ರಕ್ಷಣೆಗೆ ಕೊಟ್ಟದ್ದು 0.8% ಮಾತ್ರ.

ಕೊವಿಡ್‍-19 ತಂದ ಬಿಕ್ಕಟ್ಟಿನಿಂದ ಈ ದಿಸೆಯಲ್ಲಿ ಪಾಟ ಕಲಿಯಬೇಕಾಗಿದೆ, ಆರೋಗ್ಯ ವ್ಯವಸ್ಥೆಯನ್ನು ಉತ್ತಮಪಡಿಸಲು ಆರೋಗ್ಯಕ್ಕೆ ಬಜೆಟಿನಲ್ಲಿ ಕೊಡುವ ಹಣದ ಪ್ರಮಾಣವನ್ನು ಜಿಡಿಪಿಯ 2.5%ಕ್ಕೆ ತಕ್ಷಣವೇ ಏರಿಸಬೇಕು ಎಂದು ಆಕ್ಸ್ ಫಾಂ ಇಂಡಿಯಾದ ಮುಖ್ಯಸ್ಥರಾದ ಅಮಿತಾಭ್‍ ಬೆಹರ್‍ ಹೇಳುತ್ತಾರೆ.

ಶ್ರೀಮಂತರು ಮತ್ತು ಕಾರ್ಪೊರೇಟ್‍ಗಳ ಮೇಲೆ ತೆರಿಗೆಯ ಪ್ರಮಾಣವನ್ನೂ ಹೆಚ್ಚಿಸಬೇಕಾಗಿದೆ. ಈ ಕೊವಿಡ್‍ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುವ ಯಾವುದೇ ಪ್ರಯತ್ನದಲ್ಲಿ ಸಮಾಜದ ಶ್ರೀಮಂತ ವಿಭಾಗಗಳಿಂದ ಕರ-ತೆರಿಗೆಗಳ ಮೂಲಕ ಸಂಪನ್ಮೂಲ ಸಂಗ್ರಹವನ್ನು ಹೆಚ್ಚಿಸುವುದು ಒಂದು ಪ್ರಧಾನ ಅಂಶವಾಗಬೇಕಾಗಿದೆ ಎಂದೂ ಅವರು ಹೇಳುತ್ತಾರೆ.

ಸರಕಾರಗಳು ಜನಗಳ ಅಗತ್ಯಗಳನ್ನು ಪೂರೈಸಲು ಬದ್ಧವಾಗಿದ್ದರೆ ಅದಕ್ಕಾಗಿ ನವೀನ ಮತ್ತು ಸೃಜನಾತ್ಮಕ ದಾರಿಗಳನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದೂ ಅವರು ಹೇಳುತ್ತಾರೆ.

ಆದಾಯ ತೆರಿಗೆಯ ಮಿತಿಯಿಂದ ಕೆಳಗಿರುವ ಕುಟುಂಬಗಳಿಗೆ ಬದುಕುಳಿಯಲು ಈ ಕೊವಿಡ್‍ ದುರಿತ ಕಾಲದಲ್ಲಿ ಮಾಸಿಕ 7500ರೂ. ನಗದು ವರ್ಗಾವಣೆ ಮತ್ತು 10 ಕೆ.ಜಿ. ಆಹಾರಧಾನ್ಯಗಳ ಉಚಿತ ವಿತರಣೆ ಮಾಡಬೇಕೆಂಬ ಬೇಡಿಕೆಯನ್ನು ಸತತವಾಗಿ ಉಪೇಕ್ಷಿಸುತ್ತ ಬಂದಿರುವ ಮತ್ತು ಕೊವಿಡ್‍ ಬಿಕ್ಕಟ್ಟನ್ನೇ ಮೂರು ರೈತ-ವಿರೋಧಿ ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ-ವಿರೋಧಿ ಸಂಹಿತೆಗಳು ಮುಂತಾದ  ತನ್ನ ಕಾರ್ಪೊರೇಟ್‍-ಪರ ಕ್ರಮಗಳನ್ನು ಮುಂದೊತ್ತುವುದಕ್ಕಾಗಿ ಬಳಸಿಕೊಂಡಿರುವ ಸರಕಾರದದಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ?

ರೈತರಿಂದ “ಅಂಬಾನಿ – ಆದಾನಿ” ಕಂಪನಿ ವಸ್ತುಗಳ ಬಾಯ್ಕಟ್ ಅಭಿಯಾನ

Donate Janashakthi Media

Leave a Reply

Your email address will not be published. Required fields are marked *