ಕೋವಿಡ್ ಹೋಯಿತು… ವಿಜ್ಞಾನವೂ ಹೋಯಿತು…..

– ಡಾ: ಎನ್.ಬಿ.ಶ್ರೀಧರ

೨೦೫೦ ನೇ ಇಸವಿ. ಮನೆಯ ಮುಂದೆ ಆರಾಮ ಖುರ್ಚಿಯಲ್ಲಿ ಮಂದ ಬೆಳಕನ್ನು ದಿಟ್ಟಿಸುತ್ತಾ ೯೫ ವರ್ಷದ ವೃದ್ಧನೊಬ್ಬ ಕುಳಿತಿದ್ದ. ಚಿಕ್ಕ ಹುಡುಗನೊಬ್ಬ ಗಾಳಿಯಲ್ಲಿಯೇ ಅದೇನೋ ಕಂಪ್ಯುಟರ್ ಚಿತ್ರಿಸಿ ಆನ್ಲೈನ್ ಗೇಮು ಆಡುತ್ತಿದ್ದವ ಅಜ್ಜನತ್ತ ನೋಡಿ ” ಅಜ್ಜಾ.. ಈಗ ೫೦ ವರ್ಷಗಳ ಹಿಂದೆ ಕೋವಿಡ್ ಎಂಬ ಖಾಯಿಲೆ ಬಂದು ಜಗತ್ತನ್ನೇ ನಿಲ್ಲಿಸಿಬಿಟ್ಟಿತಂತಲ್ಲಾ? ಅದೇನು ಅಂತಹ ಮಹಾ ಕಾಯಿಲೆ ? ಅದನ್ನು ಹೇಗೆ ಓಡಿಸಲಾಯಿತು ? ಎಂದು ಕೇಳಿದ. ಕೋವಿಡ್

ಅಜ್ಜ ಕುಳಿತಿದ್ದ ಖುರ್ಚಿಗೆ ಬಾಗಿ ಕುಳಿತು ದೃತರಾಷ್ಟ್ರನಿಗೆ ಸಂಜಯ ಮಹಾಭಾರತದ ಯುದ್ಧದ ಆನ್ಲೈನ್ ಕಾಮೆಂಟ್ರಿ ಯನ್ನು ”’ ಧರ್ಮಕ್ಷೇತ್ರೇ ಕುರುಕ್ಷೇತ್ರೆ.. ಎಂದು ಪ್ರಾರಂಭಿಸಿದಂತೆ ಅರೆನಿಮೀಲಿತ ನೇತ್ರಗಳನ್ನು ಅರ್ಧ ಮುಚ್ಚಿ ಎಲ್ಲವನ್ನೂ ನೆನಪಿಸಿಕೊಂಡು ವಿವರವಾಗಿ ಹೇಳಲಾರಂಭಿಸಿದ..ಕೋವಿಡ್

ನೋಡು ಮರೀ.. ಕೋವಿಡ್ ಬಂದಾಗ ಜನ ಸಾಮಾನ್ಯರಿಗೆ ಪ್ರಥಮ ಬಾರಿಗೆ ಕ್ವಾರಂಟೈನ್, ಐಸೋಲೇಷನ್, ಪ್ಯಾಂಡಮಿಕ್, ವ್ಯಾಕ್ಸಿನೇಶನ್ ಇತ್ಯಾದಿಗಳನ್ನು ಒತ್ತಾಯ ಪೂರ್ವಕವಾಗಿ ಅರ್ಥ ಮಾಡಿಸಲಾಯಿತು. ಅಪರೇಶನ್ ಸಮಯಕ್ಕೆ ಕೇವಲ ವೈದ್ಯರು ಧರಿಸುತ್ತಿದ್ದ ಮಾಸ್ಕ್ ಎಲ್ಲರ ಮುಖಕ್ಕೆ ಏರಿ ಕುಳಿತಿತು. ಲಾಕ್ ಡೌನ್ ಎಂಬ ಹೊಸ ಪ್ರಯೋಗದ ಬಿಸಿಯೂ ಸಹ ತಲುಪಿತು. ಇವನ್ನೆಲ್ಲಾ ಧಿಕ್ಕರಿಸಿದ ಅಮೇರಿಕಾದಂತ ಮುಂದುವರೆದ ದೇಶಗಳ ನಾಗರೀಕರೇ ಪಟ ಪಟ ಸತ್ತು ಹೋದರು. ಕಳೆದ ಅನೇಕ ಸಾವಿರ ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಎಲ್ಲಾ ದೇವಸ್ಥಾನದ, ಮಸೀದಿ ಚರ್ಚುಗಳ ಬಾಗಿಲುಗಳು ಮುಚ್ಚಿ ಹೋಗಿ ಈ ಕಾಯಿಲೆಯಿಂದ ಪ್ರಪಂಚದ ಅಲ್ಲಾ ಏಸು ಸೇರಿದಂತೆ ನೂರಾರು ಕೋಟಿ ದೇವರೂಗಳೂ ಕಾಯಲಾರವು ಎಂಬುದು ಜನರಿಗೆ ಖಚಿತವಾಗಿ ಗೊತ್ತಾಗಿಹೋಯಿತು.ಕೋವಿಡ್

ಮೊದಲ ಬಾರಿ ವಿಜ್ಞಾನ ವಿಜ್ರಂಭಿಸಿತು. ಮೊಟ್ಟ ಮೊದಲ ಭಾರಿಗೆ ಜ್ಯೋತಿಷಿಗಳು, ಪೂಜಾರಿಗಳು, ಸ್ವಾಮಿಜಿಗಳು ಮುದುರಿಕೊಂಡು ಮೂಲೆಗೆ ಕುಳಿತರು. ಜನ ಎಲ್ಲಿ ಇದ್ದಾರೋ ಅಲ್ಲಲ್ಲೇ ಲಾಕ್ ಆಗಿ ಸಂಕಷ್ಟ ಅನುಭವಿಸಿದರು. ಮೊದಲ ಬಾರಿಗೆ ಕೇಂದ್ರ ಸರ್ಕಾರಕ್ಕೆ ಇದರ ಗಂಭೀರತೆ ಅರಿವಾಗಿ ವಿಜ್ಞಾನಿಗಳು ಹೇಳಿದ ಹಾಗೆ ಪ್ರತಿಬಂಧಕ ಕ್ರಮಗಳನ್ನು ಆಧುನಿಕ ವೈದ್ಯಕೀಯ ವಿಜ್ಞಾನ ಹೇಳಲಾರಂಭಿಸಿತು. ಕೇವಲ ಶೇ ೧ ರಷ್ಟು ಜನ ಸತ್ತರೂ ಸಹ ಅದರ ಸಂಖ್ಯೆ ೧.೪ ಕೋಟಿ ಎಂದು ತಿಳಿದು ಪ್ರಧಾನಿಗಳು ಗಾಬರಿಯಾದರು. ಈವರೆಗೂ ಜನರ ಆರೋಗ್ಯದ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದ ಸರ್ಕಾರಗಳೆಲ್ಲ ಇತರ ದೇಶಗಳಲ್ಲಿ ಜನ ಸಾಯುವುದನ್ನು ಕಂಡು ಗಾಬರಿಯಾದರು. ಎಲ್ಲಾ ವಿಮಾನಗಳು ನಿಂತವು. ಬಸ್ಸುಗಳು ಡಿಪೋ ಬಿಟ್ಟು ಕದಲಲಿಲ್ಲ. ಟ್ರ‍ೇನುಗಳ ಇಂಜಿನ್ ಆಫ್ ಮಾಡಲಾಯಿತು. ಮೊಟ್ಟ ಮೊದಲ ಬಾರಿಗೆ ರಸ್ತೆಗಳು ವಾಹನದ ಹೊಗೆ ಇಲ್ಲದೇ ಶುದ್ಧವಾದವು. ಹಿಮಾಲಯ ಪರ್ವತವೂ ಸಹ ಗೋಚರಿಸಿತು. ಮೊತ್ತ ಮೊದಲ ಭಾರಿಗೆ ಭಾರತವು ಸ್ವಚ್ಚ ಭಾರತವಾಯಿತು. ವಾಕಿಂಗ್ ಹೋಗುವ ಜನರನ್ನು ಲಾಟಿ ಬೀಸಿ ಮನೆಯಲ್ಲಿ ಬಾಲ ಮುದುರಿಕೊಂಡು ಕೂರುವಂತೆ ಮಾಡಿದರು. ಸಾವಿರ ಜನಕ್ಕೆ ಒಬ್ಬ ವೈದ್ಯರು ಇರುವುದನ್ನು ಮನಗಂಡ ಸರ್ಕಾರ ಇವರಲ್ಲಿ ೧೦೦ ಜನಕ್ಕೆ ಕೊರೊನಾ ತಗಲಿದರೂ ಯಾರು ಇವರ ಚಿಕಿತ್ಸೆ ಮಾಡಲು ಇರುತ್ತಾರೆ ಎಂದು ಗಾಬರಿಯಾಯ್ತು. ಕೋವಿಡ್

ಇದನ್ನು ಓದಿ : ಬಡತನ ಕಡಿತದ ಬಗ್ಗೆ ಸರ್ಕಾರದ ಹಕ್ಕುಗಳು ಸುಳ್ಳು. ಕಾರಣ ಇಲ್ಲಿದೆ

ಪ್ರಧಾನಿಗಳು ಇರುವ ವೈದ್ಯರುಗಳೇ ಕೆಲಸ ಮಾಡುವಂತೆ ಉತ್ತೇಜನ ನೀಡಲು ಅವರಿಗಾಗಿ ಶಂಖ, ಜಾಗಟೆ ಭಾರಿಸಿ, ದೀಪ, ಮೇಣದ ಭತ್ತಿ ಹಚ್ಚಿ ಪ್ರೋತ್ಸಾಹಿಸಲು ಕೋರಿದರು. ಎಲ್ಲಾ ಜನರೂ ಹಾಗೆಯೇ ಮಾಡಿದರೂ ಸಹ. ಅವರನ್ನು ದೇಶ ಕಾಯುವ ಸೈನಿಕರಿಗೆ ಹೋಲಿಸಿ “ಕೊರೋನಾ ವಾರಿಯರ್ಸ್” ಎಂದು ಪ್ರಮಾಣ ಪತ್ರ ನೀಡಿ ಹುರಿದುಂಬಿಸಿದರು. ಸ್ವಯಂಘೋಷಿತ ಬುದ್ಧಿ ಜೀವಿಗಳು ಎಂದಿನಂತೆ ಜಾಗಟೆ ಭಾರಿಸಿದರೆ ಕೊರೋನಾ ಹೋಗುತ್ತದೆಯೇ ಎಂದು ವ್ಯಂಗ್ಯವಾಡಿದರು. ಯಾರೂ ಅವರನ್ನು ಲೆಕ್ಕಿಸಲಿಲ್ಲ. ಪರಿಣಾಮ? ವೈದ್ಯರು, ನರ್ಸುಗಳು, ಸಿಬ್ಬಂದಿ ವರ್ಗದವರು ಪ್ರಧಾನಿಗಳ ಉತ್ತೇಜನದಿಂದ ದೇಶಪ್ರೇಮ ಉಕ್ಕಿ ಜೀವದ ಹಂಗು ತೊರೆದು ರೋಗಿಗಳ ಸೇವೆ ಮಾಡಿದರು. ಆಕ್ಸಿಜನ್ ಖರ್ಚಾಯಿತು. ಕೋಟಿಗಟ್ಟಲೇ ಖರ್ಚು ಮಾಡಿ ಆಕ್ಸಿಜನ್ ಘಟಕ ಹಾಕಲಾಯಿತು. ಆಮ್ಲಜನಕದ ಕೊರತೆಯಿಂದ ಒಂದಿಷ್ಟು ಪಾಪದ ಜನ ಇಹಲೋಕ ತೊರೆದರು. ತಬ್ಲಿಘಿಗಳು ಕೊರೋನಾ ಹಬ್ಬಿಸಿದರು ಎಂದು ಬೊಬ್ಬಿರಿಯಲಾಯಿತು.

ರಾಜ್ಯದ ವಯೋವೃದ್ಧ ಮುಖ್ಯಮಂತ್ರಿಗಳಿಗೆ ಸಚಿವ ಸಂಪುಟ ವಿಸ್ತರಿಸಲು ಹೈಕಮಾಂಡ್ ಅಡ್ಡ ಹಾಕಿದ್ದರಿಂದ ಇರುವ ಕೆಲವೇ ಜನರ ಜೊತೆ ಏನೇನೋ ಮಾಡಿ ಪರಿಸ್ಥಿತಿ ಸುಧಾರಿಸಲು ಹೆಣಗಾಡಿದರು. ಬೇಲಿಯೇ ಎದ್ದು ಹೊಲ ಮೇಯ್ದಂತೆ ವೈದ್ಯಕೀಯ ಮಂತ್ರಿಗಳೇ ಏನೇನೋ ತಿಂದು ಬಿಸಾಕಿದರು ಎಂಬ ಅಭಿಪ್ರಾಯ ಬಂತು. ಕೆಲವೊಂದು ಅಧಿಕಾರಿಗಳಿಗೆ ಹಬ್ಬ ಹರಿದು ಬಿತ್ತು. ಬೀದಿ ವ್ಯಪಾರಿಗಳು ಮನೆ ಸೇರಿದರು. ಜನಕ್ಕೆಲ್ಲಾ ಜೀವನ ಸಾಗಿಸಲು ಇಷ್ಟೇ ಹಣ ಸಾಕೇ ಎಂದು ಆಶ್ಚರ್ಯವಾಯಿತು. ಮೊಟ್ಟ ಮೊದಲ ಭಾರಿಗೆ ದೂರ ದೂರ ತೆರಳಿ ಹಣ ಖರ್ಚು ಮಾಡುವ ಸಭೆಗಳೆಲ್ಲಾ ಆನ್ಲೈನ್ ಝೂಮ್ ಇತ್ಯಾದಿ ಹೊಸರೀತಿಯಲ್ಲಿ ನಡೆಯಲಾರಂಭಿಸಿ ಹೊಸಯುಗಕ್ಕೆ ದಾರಿ ಹಾಕಿದವು. ದೇಶವೇ ಅಂತರ್ಜಾಲದಲ್ಲಿ ಲೀನವಾಯಿತು. ಮದುವೆಗಳೆಲ್ಲಾ ಮುಂದೆ ಹೋದವು. ಮದುವೆ ಮಾಡಲು ಡಿಸಿ ಅನುಮತಿ ಬೇಕಾಯಿತು.ಕೋವಿಡ್

ಶರೀರದಲ್ಲಿ ಅನೇಕ ಕಾಯಿಲೆಗಳನ್ನು ಹೊತ್ತು ತಿರುಗಾಡುತ್ತಿದ್ದ ಶ್ರೀಮಂತ ಮಹೋದಯರೆಲ್ಲಾ ಕೊರೊನಾದೆದುರು ಮಂಡಿಯೂರಿ ಸ್ವಯಂ ಮಂಗಳ ಹಾಡಿಕೊಂಡರು. ಬಾಬಾ ರಾಮದೇವನಂತ ಸ್ವಯಂಘೋಷಿತ ಆಯುರ್ವೇದಿಗಳು ೩೦೦೦ ವರ್ಷದ ಪುರಾತನವಾದ ಮತ್ತು ಈವರೆಗೂ ಜಗತ್ತಿನಲ್ಲಿ ಪ್ಲೇಗು, ಮಲೇರಿಯಾ, ಸಿಡುಬು ಇತ್ಯಾದಿ ಮಹಾಕಾಯಿಲೆಗಳನ್ನು ಓಡಿಸುವುದಿರಲಿ, ಅವುಗಳ ಕಿರುಬೆರಳುಗಳನ್ನೂ ಸಹ ಮುಟ್ಟಲಾಗದ ಪದ್ಧತಿಯಿಂದ ಕಾಯಿಲೆಯನ್ನು ಒದ್ದೋಡಿಸುತ್ತೇವೆ ಎಂದು ಕೊರೋನಿಲ್ ಎಂಬಿತ್ಯಾದಿ ವಸ್ತುಗಳನ್ನು ಮಾರಲು ಹೊರಟರು. ಪ್ರಧಾನಿಗಳು ಹುರಿದುಂಬಿಸಿದಾಗ ಯಾವುದೇ ಹೆಚ್ಚಿನ ಸಂಬಳಕ್ಕೆ ಒತ್ತಾಯಿಸದೇ ಜೀವ ಪಣಕ್ಕಿಟ್ಟು ಕೆಲಸ ಮಾಡಲು ಹೊರಟ ಆಧುನಿಕ ವೈದ್ಯಕೀಯ ಪದ್ಧತಿಯನ್ನು ಕೆಲಸಕ್ಕೆ ಬಾರದು ಎಂದು ರಾಮದೇವ ಬಾಬಾ ನಿಂದಿಸಿದಾಗ ಇದ್ದಕ್ಕಿದ್ದ ಹಾಗೆ ವೈದ್ಯರುಗಳು ವ್ಯಗ್ರಗೊಂಡರು. ಈ ಸಭೆಯಲ್ಲಿದ್ದು ಕೊರೋನಿಲ್ ಬಿಡುಗಡೆ ಮಾಡಿದ ವೈದ್ಯಕೀಯ ಮಂತ್ರಿ ಹರ್ಷವರ್ಧನರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಬಾಬಾ ಒಲ್ಲದ ಮನಸ್ಸಿನಿಂದ ಕ್ಷಮೆ ಕೊರಿದ ಮೇಲೆ ಪರಿಸ್ಥಿತಿ ಶಾಂತವಾಯಿತು. ಅದೇ ಸಭೆಯಲ್ಲಿ ಭಾಗವಹಿಸಿ ಬಾಬಾ ಗುಣಗಾನ ಮಾಡಿದ ಮತ್ತೊಬ್ಬ ಮಂತ್ರಿ ಗಡ್ಕರಿ ಕೂದಳೆಲೆಯಲ್ಲಿ ತಪ್ಪಿಸಿಕೊಂಡರು. ಕರ್ನಾಟಕದಲ್ಲಿಯೂ ಸಹ ಇದೇ ರೀತಿಯ ಪ್ರಹಸನ ನಡೆಯಿತು. ಬೆಂಗಳೂರಿನಲ್ಲಿ ಪಾದರಾಯಪುರದಂತ ವಿವಿಧ ಊರುಗಳಲ್ಲಿ ಕೊರೋನಾ ತಡೆಯಲು ಕ್ವಾರಂಟೈನ್ ಮಾಡಲು ಹೋದ ಪೋಲೀಸರನ್ನೇ ಅಲ್ಲಿನ ಜನ ಹಿಡಿದು ಬಡಿದರು.ಕೋವಿಡ್

ಕೊರೋನಾಗೆ ಮದ್ದು ಕಂಡು ಹಿಡಿಯುತ್ತೇನೆ ಎಂದು ಸ್ವಯಂ ಘೋಷಿತ ಗಿಡಮೂಲಿಕೆ ವೈದ್ಯರೊಬ್ಬರು ಹೊರಟು ಇಡೀ ದಿನ ಮಾಧ್ಯಮಗಳಲ್ಲೆಲ್ಲಾ ಕುಳಿತು ಪ್ರಚಾರ ಗಿಟ್ಟಿಸಿದರು. ಭಾರತದ ಔಷಧ ನಿಯಂತ್ರಕರಿಗೆ ಔಷಧದ ಸಂಶೋಧನೆಗಾಗಿ ಅರ್ಜಿ ಹಾಕುವ ಬದಲು ಮುಖ್ಯಮಂತ್ರಿ, ಆರೋಗ್ಯ ಮಂತ್ರಿಗೆ ಅರ್ಜಿ ಹಾಕಿ ೧೦ ಜನರಲ್ಲಿ ಪ್ರಯೋಗ ಮಾಡಿ ಔಷಧಿ ಕಂಡು ಹಿಡಿದಿರುವೆ ಎಂದು ಸಿಂಪಥಿ ಗಿಟ್ಟಿಸಿದರು. ಪ್ರಯೋಗ ಮಾಡತೊಡಗಿದ ಸಂಸ್ಥೆಯವರೇ ಇದರಲ್ಲಿ ಅಂಥಹ ಸತ್ವವಿಲ್ಲ ಎಂದಾಗ ತೆಪ್ಪಗಾದರು. ಉಚಿತವಾಗಿ ಔಷಧಿ ಹಂಚಿ ನಂತರ ಆರ್ಡರು ಪಡೆಯುವ ಹುನ್ನಾರವೂ ನಡೆಯಿತು. ಖಾಸಗಿ ಆಸ್ಪತ್ರೆಗಳು ಯಥೋಚಿತವಾಗಿ ರೋಗಿಗಳನ್ನು ಸುಲಿಯುವ ಪ್ರಯತ್ನ ಮಾಡಿದವು. ಅಂಗಡಿಗಳ ಮುಂದೆ ಚೌಕಬಾರ ಬರೆದು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಯಿತು. ಜನ ಮನೆಯಲ್ಲಿಯೇ ಕುಳಿತು ತಿಂದು ತೇಗಿ ವ್ಯಾಯಾಮವಿಲ್ಲದೇ ತೂಕ ಹೆಚ್ಚಿಸಿಕೊಂಡು ಗುಂಡಗಾದರು. ಸಂದರ್ಭದ ದುರುಪಯೋಗ ಪಡೆದ ವರ್ತಕರು ಸಿಕ್ಕಾಪಟ್ಟೆ ಬೆಲೆಗೆ ವಸ್ತುಗಳನ್ನು ಮಾರಿದರು. ಔಷಧ ತಯಾರಕರು ಮತ್ತು ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ಅವರ ತಾಕತ್ತಿಗೆ ತಕ್ಕಂತೆ ಜನರನ್ನು ಸುಲಿದರು. ಕೊರೋನಾ ಹೋಗದಿದ್ದರೇನಂತೆ? ನಾವು ಜನರ ರೋಗ ನಿರೋಧಕ ಶಕ್ತಿಯನ್ನು ಸಿಕ್ಕಾಪಟ್ಟೆ ಹೆಚ್ಚಿಸಿ ಕೊರೋನಾ ಒದ್ದೋಡಿಸುತ್ತೇವೆ ಎಂದು ಹಿಂಬಾಗಿಲಿನಲ್ಲಿ ಬೇರೆ ಬೇರೆ ಹೆಸರಿನ ಮೂಲಿಕೆ ಮದ್ದುಗಳು ಮಾರಾಟ ಪ್ರಾರಂಭಿಸಿದವು. ಖಷಾಯಗಳು ಅಡುಗೆಮನೆಯನ್ನು ತುಂಬಿದವು. ಇದಕ್ಕೆ ಅನುವಾಗಿ ಈ ಕಾಯಿಲೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿಯೇ ಚಿಕಿತ್ಸೆಯ ಬಗ್ಗೆ ಎಂದಿನಂತೆ ಭಿನ್ನ ಭಿನ್ನ ಅಭಿಪ್ರಾಯಗಳು ಬಂದವು.ಕೋವಿಡ್

ದೇಶದಲ್ಲಿ ಸಾಕಷ್ಟು ಸಂಶೋಧನಾ ಸಂಸ್ಥೆಗಳಿದ್ದರೂ ಅದರಲ್ಲಿನ ವಿಜ್ಞಾನಿಗಳು ಸೋಮಾರಿಯಾಗಿದ್ದರಿಂದ ಸಂಶೋಧನೆ ಎಂದರೇನು ಎಂಬುದೇ ಅವರಿಗೆ ಮರೆತು ಹೋಗಿದೆ ಎಂದು ಪ್ರಧಾನಿಗಳು ಭಾವಿಸಿ ಫಂಡು ಕೊಡದೇ ಖಾಸಗಿ ಭಾರತ್ ಬಯೋಟೆಕ್ ಬಾಗಿಲು ತಟ್ಟಿ ಎದ್ದೋ ಬಿದ್ದೋ ಲಸಿಕೆ ಕಂಡು ಹಿಡಿಯಲಾಯಿತು. ಲಸಿಕೆ ಹಾಕುವ ಹಬ್ಬ ಪ್ರಾರಂಭವಾಯಿತು. ಎರಡು ಲಸಿಕೆ ಪಡೆದು ಆಧಾರ ಕಾರ್ಡಿಗೆ ಅಂಟಿಸಿದರೆ ಮಾತ್ರ ಮುಂದಿನ ಸೌಲಭ್ಯ ಎಂದಿದ್ದರಿಂದ ದಿನಗಟ್ಟಲೇ ಕ್ಯು ನಿಂತು ಜನ ಹಾಕಿಸಿ ಕೊಂಡರು. ಲಸಿಕೆಯಿಂದ ಪುರುಷತ್ವವೇ ಹೋಗಿ ಬಿಡುವುದಂತೆ, ಅದರಿಂದಲೇ ಖಾಯಿಲೆ ಬರುವುದಂತೆ ಇತ್ಯಾದಿ ಅಂತೆ ಕಂತೆ ಪುರಾಣಗಳನ್ನು ಮನಸೋ ಇಚ್ಚೆ ಟಿವಿಯಲ್ಲಿ ಕುಳಿತವರು ಒದರಲಾರಂಭಿಸಿದರು. ವಿವಿಧ ಬಣ್ಣಗಳಲ್ಲಿ ದುಂಡಗೇ ಮೈಯೆಲ್ಲಾ ಮುಳ್ಳಿನಂತಾ ಭಾಗಗಳನ್ನು ಅಂಟಿಸಿಕೊಂಡ ಗರ ಗರ ಸುತ್ತುತ್ತಿರುವ ವೈರಾಣುವನ್ನು ಸದಾ ಹಿನ್ನೆಲೆಯಲ್ಲಿರಿಸಿ ಮೊದಲೇ ಹೆದರಿದ ಜನರನ್ನು ಹೆದರದಂತೆ ಧೈರ್ಯದಿಂದ ಇರುವುದನ್ನು ಮನದಟ್ಟು ಮಾಡಬೇಕಾದ ಎಲೆಕ್ಟ್ರಾನಿಕ್ ಮಾಧ್ಯಮಗಳು ಟಿಆರ್‌ಪಿಗಾಗಿ. ಕೋವಿಡ್

ಕ್ರಮೇಣ ಜನರಲ್ಲಿ ರೋಗ ನಿರೋಧಕ ಶಕ್ತಿ ಬಂತು. ಲಸಿಕೆ ಹಾಕಿಸಿಕೊಳ್ಳದವರು ಪಟ ಪಟ ಉದುರಿಬಿದ್ದಂತೆ ಎಲ್ಲರೂ ಲಸಿಕೆ ಹಾಕಿಸಿ, ಓಡಿ ಹೋಗಿ ಆಕ್ಸಿಜನ್ ಮಾಸ್ಕಿಗೆ ಮೂಗು ಒಡ್ಡಿ ಬಚಾವಾದರು. ವಿಜ್ಞಾನದ ಮೇಲೆ ನಂಬಿಕೆ ಇರುವವರು ಇನ್ನೇನು ನವಭಾರತದ ಉದಯವಾಯಿತು. ಕಳೆದ ೧೦೦೦ ವರ್ಷಗಳಲ್ಲಿ ಜಗತ್ತಿಗೆ ಏನೇನೂ ಹೊಸ ಸಂಶೋಧನೆಯ ಮೂಲಕ ಜನರ ಜೀವನ ಹಸನು ಮಾಡದ ಭಾರತ ದೇಶ ಸ್ವಂತವಾಗಿ ಲಸಿಕೆ ತಯಾರಿಸುವಷ್ಟರ ಮಟ್ಟಿಗೆ ವಿಜ್ಞಾನ ವಿಜ್ರಂಭಿಸಿತಲ್ಲಾ ಎಂದು ಖುಷಿಪಟ್ಟರು. ಇನ್ನೇನು.. ಭಾರತದಲ್ಲೆಲ್ಲಾ ವಿಜ್ಞಾನದ ಆವಿಷ್ಕಾರಗಳು ಹೆಚ್ಚಿ ವಿಶ್ವಗುರುವಾಗುವುದು ದೂರವಿಲ್ಲ ಎಂದು ನಗುಬೀರಿದರು. ತನ್ನ ಜಿಡಿಪಿಯ ಕೇವಲ ೦.೮೯ % ಭಾಗವನ್ನು ಮಾತ್ರ ವೈಜ್ಞಾನಿಕ ಸಂಶೋಧನೆ ಮೀಸಲಿಡುವ ಭಾರತ ಇನ್ನಾದರೂ ಸಹ ಮುಂದುವರೆದ ದೇಶಗಳಂತೆ ಇದನ್ನು ೨ % ಗೆ ಹೆಚ್ಚಿಸುತ್ತದೆ ಎಂದು ಆಶಾವಾದಿಗಳಾದರು. ಸರ್ಕಾರ ನಡೆಸುವ ಮುಖಂಡರುಗಳು, ತಾವೇ ಸರ್ವಶ್ರೇಷ್ಟರೆನ್ನುವ ಬಿಳಿಯಾನೆಗಳಾದ ಐಎಎಸ್ಸುಗಳು ವಿಜ್ಞಾನಿಗಳ ಮಾರ್ಗದರ್ಶನದಂತೆ ನಡೆಯುವಂತಾಗಬಹುದು ಎಂದುಕೊಂಡರು.

ಮಾನವ ನಿರ್ಮಿತ ದೇವರುಗಳು, ದಿಂಡರು, ದೆವ್ವ, ಭೂತ, ಕೋಲಗಳು, ಡೋಂಗಿ ಬಾಬಾಗಳು, ಬುರುಡೆ ಜ್ಯೋತಿಷಿಗಳು, ಯಜ್ಞ ಯಾಗಾದಿಗಳನ್ನು ಜನ ಅವಲಂಭಿಸದೇ ಇವರೆಲ್ಲಾ ಮೂಲೆ ಸೇರಿ ಜನರೆಲ್ಲಾ ಸ್ವಯಂ ಆತ್ಮ ವಿಶ್ವಾಸದಿಂದ ಸ್ವಂತ ಬಲದ ಮೇಲೆ ವಿಶ್ವಾಸ ಇಡುತ್ತಾರೆ ಎಂದು ಕನಸು ಕಂಡು ಹಿರಿ ಹಿರಿ ಹಿಗ್ಗಿ ಹೀರೇಕಾಯಿಯಂತಾದರು. ಅಮೇರಿಕಾವನ್ನೂ ಮೀರಿಸಿ ಜಗತ್ತಿನ ಶಕ್ತ ರಾಷ್ಟ್ರವಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಸಂತಸಪಟ್ಟರು. ಕೋವಿಡ್

ಕ್ರಮೇಣ ಒಂದೊಂದೇ ಬಸ್ಸು, ರೈಲು, ಲಾರಿ ಪ್ರಾರಂಭವಾದವು. ಮಾರುಕಟ್ಟೆಗಳು ಒಂದೊಂದಾಗಿ ತೆರೆದುಕೊಂಡವು. ಮಾಸ್ಕುಗಳು ಕಸದ ಬುಟ್ಟಿಗೆ ಸೇರಿದವು. ದೇವಸ್ಥಾನ, ಮಸೀದಿ, ಚರ್ಚುಗಳು ಬಾಗಿಲು ತೆರೆದು ಎಂದಿನಂತೆ ನೂಕು ನುಗ್ಗಲು ಪ್ರಾರಂಭವಾದವು. ವಾಹನಗಳೆಲ್ಲಾ ಬೀದಿಗಿಳಿದು ಪರಿಸರವನ್ನು ಇನ್ನಷ್ಟು ಮಲೀನಗೊಳಿಸಿದವು. ಜನರಿಗೆ ಈ ಮೊದಲು ಇದ್ದ ನಂಬಿಕೆಗಳೆಲ್ಲಾ ಮರುಕಳಿಸಿ ಮೊದಲಿಗಿಂತ ನೂಕು ನುಗ್ಗಲು ಏರ್ಪಟ್ಟಿತು. ಹೊಸ ಸಂಶೋಧನಾ ಕೇಂದ್ರಗಳು, ಸಂಸ್ಥೆಗಳು ಪ್ರಾರಂಭವಾಗಿ ಮನುಜನ ಜೀವನ ಸರಳಗೊಳಿಸುವ ಸಂಶೋಧನೆಗಳು ಪ್ರಾರಂಭವಾಗುವ ಬದಲು ಹೊಸ ಹೊಸ ಮಂದಿರಗಳು, ಮೂರ್ತಿಗಳು,ಮಸೀದಿ, ಚರ್ಚುಗಳು ತಲೆ ಎತ್ತಿದವು. ಚೀನಾದಿಂದ ಮಾಡುವ ಆಮದು ಇನ್ನೂ ಜಾಸ್ತಿಯಾಯಿತು. ಇರುವ ಸಂಶೋಧನಾ ಸಂಸ್ಥೆಗಳಿಗೂ ಸಹ ಹಣ ನಿಲ್ಲಿಸಿದ್ದರಿಂದ ಅವೂ ಸೊರಗಿ ಹೋದವು. ಖಾವಿ ಧರಿಸಿದ ಬಾಬಾಗಳು, ಅವಧೂತರುಗಳು, ಕಾಮಿ ಸ್ವಾಮಿಗಳು ಪುನ: ಮುಂಚೂಣಿಗೆ ಬಂದು ಎಲ್ಲರನ್ನೂ ನಿಯಂತ್ರಿಸತೊಡಗಿದರು. ಆಕ್ಸಿಜನ್ ಘಟಕಗಳು ದುಡ್ಡಿಲ್ಲದೇ ಮುಚ್ಚಿ ಹೋದವು. ಆಸ್ಪತ್ರೆಗಳು ಎಂದಿನಂತೆ ಚರಂಡಿ ಘಟಾರಗಳಾದವು. ಕಸಗಳನ್ನು ಎಲ್ಲೆಂದರಲ್ಲಿ ಬಿಸಾಕಲು ಜನ ಪ್ರಾರಂಭಿಸಿದವು. ಕೋವಿಡ್

ಜನಕ್ಕೆ ಕೊರೋನಾ ಎಂಬ ಖಾಯಿಲೆ ಎಂಬುದು ಇತ್ತು ಎಂಬುದು ಮರೆತು ಹೋಯಿತು. ಜೊತೆಗೆ ಅದನ್ನು ನಿಯಂತ್ರಿಸಿದ ವೈದ್ಯರು, ಪೋಲೀಸರು, ಕೊರೋನಾ ವಾರಿಯರುಗಳು ಮೂಲೇ ಸೇರಿ ವಿಜ್ಞಾನ ಕಳೆದು ಹೋಗಿ ಧರ್ಮದ ಆಫೀಮು ತಿಂದು ಅಜ್ಞಾನ, ಅಂಧಕಾರ ಮೆರೆಯಲು ಪ್ರಾರಂಭಿಸಿತು.

ಕೊರೋನಾ ಮತ್ತೊಮ್ಮೆ ಬರಲಿ, ಮರಣ ತಾಂಡವವಾಡಿ, ಕೊಟ್ಯಾಂತರ ಜನರು ಮರಣ ಹೊಂದಿದರೆ ಮಾತ್ರ ಮತ್ತೊಮ್ಮೆ ವಿಜ್ಞಾನ ವಿಜ್ರಂಭಿಸುತ್ತದೆ..ಎಂದು ಸಿಟ್ಟಿನಲ್ಲಿ ಹೇಳಿದ ಅಜ್ಜ … ಕೋವಿಡ್ ಹೋಯಿತು… ಅದರ ಜೊತೆ ತಾತ್ಕಾಲಿಕವಾಗಿ ಅವತರಿಸಿದ ವಿಜ್ಞಾನವೂ ಹೋಯಿತು….. ಎಂದು ಸಂಜಯನಂತೆ ಧೀರ್ಘವಾದ ಉಸಿರು ಎಳೆದುಕೊಂಡ. ಚಿಕ್ಕ ಹುಡುಗನಿಗೆ ಅದೇನು ಅರ್ಥವಾಯಿತೋ ಗೊತ್ತಿಲ್ಲ? ಸುಮ್ಮನೆ ದೃತರಾಷ್ಟ್ರನಂತೆ ತಲೆಯಾಡಿಸುತ್ತಲೇ ಇದ್ದ. ಕೋವಿಡ್

(ಇದೊಂದು ಕಾಲ್ಪನಿಕ ; ಕೇವಲ ಓದಿಗಾಗಿ ಮಾತ್ರ. ಇಲ್ಲಿರುವ ಯಾವುದೇ ಪಾತ್ರಗಳು ಕಾಲ್ಪನಿಕ ಮತ್ತು ಯಾರನ್ನೂ ಹೀಗಳೆಯುವುದಕ್ಕಾಗಿ,ಮನನೋಯಿಸಲು ಅಲ್ಲ)

ಡಾ: ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

ಇದನ್ನು ನೋಡಿ : ರಂಗಭೂಮಿ : ಸಮೂಹದೊಳಗೆ ನಡೆಯುವ ಕ್ರಿಯೆ Janashakthi Media

Donate Janashakthi Media

Leave a Reply

Your email address will not be published. Required fields are marked *