ಬಳ್ಳಾರಿ : ಇದೇ ತಿಂಗಳ ದಿನಾಂಕ 19.4.2021 ಹಾಗೂ 20.04.2021ರಿಂದ ಪ್ರಾರಂಭವಾಗಬೇಕಿದ್ದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯ 2020-2021ನೇ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ 1ನೇ, 3ನೇ ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಕೋವಿಡ್ ಹೆಚ್ಚಳ ಹಾಗೂ ಸಾರಿಗೆ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಲ್ಪಾವಧಿಗೆ ಮುಂದೂಡಲಾಗಿದೆ ಎಂದು ವಿವಿ ಅಧಿಕೃತವಾಗಿ ತಿಳಿಸಿದೆ.
ಬಳ್ಳಾರಿ ವಿ.ವಿ ಪರೀಕ್ಷೆ ಮುಂದೂಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಪ್ರತಿಭಟನೆ ನಡೆಸಿತ್ತು, ಸಂಘಟನೆಯ ಮುಖಂಡರುಗಳಿಗೆ ಪರೀಕ್ಷೆ ಮುಂದೂಡಲು ಚರ್ಚಿಸುವುದಾಗಿ ವಿ.ವಿ ಕುಲಸಚಿವರು ಭರವಸೆಯನ್ನು ನೀಡಿದ್ದರು, ಅದರಂತೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂತೆಗೆಯಲಾಗಿತ್ತು.
ಇದನ್ನೂ ಓದಿ : ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆ ಮುಂದೂಡಲು ಎಸ್ ಎಫ್ ಐ ಒತ್ತಾಯ
ಈ ಪರೀಕ್ಷೆಗಳು ಪಾರಂಭವಾಗುವ ಪರಿಷ್ಕೃತ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಈ ಕುರಿತು ವಿಶ್ವವಿದ್ಯಾಲಯದ ಜಾಲತಾಣ, ಪತ್ರಿಕೆಗಳು ಹಾಗೂ ಮಹಾವಿದ್ಯಾಲಯಗಳ ಸಂಪರ್ಕದಲ್ಲಿರಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಪುನಃ ಪರೀಕ್ಷೆಗಳನ್ನು ಯಾವುದೇ ಕ್ಷಣದಲ್ಲಿ ಆಯೋಜಿಸಬಹುದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸದಾಕಾಲ ಸನ್ನದ್ಧರಾಗಿರಲು ಸೂಚಿಸಲಾಗಿದೆ. ಪರೀಕ್ಷೆ ಕುರಿತ ಯಾವುದೇ ನಕಲಿ ಸುತ್ತೊಲೆಗಳಿಂದ ವಿದ್ಯಾರ್ಥಿಗಳು, ಪಾಲಕರು ಹಾಗೂ ಮಹಾವಿದ್ಯಾಲಯಗಳು ವಿಚಲಿತರಾಗದಿರಲು ವಿನಂತಿಸಲಾಗಿದೆ ಎಂದು ವಿಶ್ವ ವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.