ಬೆಂಗಳೂರು : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಬಸ್ ಪ್ರಯಾಣಿಕರು ಹಾಗೂ ದೇವಾಲಯಗಳಿಗೆ ಭೇಟಿ ನೀಡುವ ಜನರಿಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.
ಶಾಂತಿನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೆರೆ ರಾಜ್ಯದಲ್ಲಿ ಕೋವಿಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಅದರಂತೆ ಯಾರು ಕೇರಳಕ್ಕೆ ಹೋಗಿ ಬರುತ್ತಿದ್ದಾರೋ ಅವರು ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. ಅಯ್ಯಪ್ಪಸ್ವಾಮಿ ಭಕ್ತರೂ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. 60 ವರ್ಷ ದಾಟಿದವರು ಹಾಗೂ ಶೀತ, ಕೆಮ್ಮು, ಜ್ವರದ ಲಕ್ಷಣ ಇರುವವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಸೂಚಿಸಿದರು.
ಬಸ್ನಲ್ಲಿ ಜನ ಹೆಚ್ಚಿರಲಿದ್ದಾರೆ ಹಾಗಾಗಿ ರೋಗ ಲಕ್ಷಣ ಇರುವವರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಬೇಕು. ಅದೇ ರೀತಿ 60 ವರ್ಷ ದಾಟಿದ ಪ್ರಯಾಣಿಕರು ಬಸ್ ಪ್ರಯಾಣದ ವೇಳೆ ಮಾಸ್ಕ್ ಧರಿಸಬೇಕು. ದೇವಾಲಯದಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಿರಲಿದೆ ಅಲ್ಲಿಯೂ ಕೂಡ 60 ವರ್ಷ ದಾಟಿದವರು ಕಡ್ಡಾಯ ಮಾಸ್ಕ್ ಹಾಕಿಕೊಳ್ಳಬೇಕು, ಯಾರಿಗೇ ರೋಗ ಲಕ್ಷಣವಿದ್ದರೂ ಅವರು ಬಸ್ ಹಾಗೂ ಮೆಟ್ರೋ ಪ್ರಯಾಣದ ವೇಳೆ ಮತ್ತು ದೇವಾಲಯದ ಒಳಗಡೆ ಬಂದಿರುವಾಗ ಮಾಸ್ಕ್ ಹಾಕಿಕೊಳ್ಳಬೇಕು. ಅವರ ಆರೋಗ್ಯ ಹಾಗೂ ಬೇರೆಯವರ ಹಿತದೃಷ್ಟಿಯಿಂದ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಹೇಳಿದರು.
ಕೇರಳಕ್ಕೆ ಕೆಎಸ್ಆರ್ಟಿಸಿ ಬಸ್ಗಳು ಪ್ರತಿನಿತ್ಯ ಸಂಚಾರ ಮಾಡುತ್ತಿವೆ. ಆದರೂ ಬಸ್ ಸ್ಯಾನಿಟೈಸರ್ ಮಾಡುವ ಹಂತ ತಲುಪಿಲ್ಲ. ಹಾಗಾಗಿ ಬಸ್ಗಳ ಸ್ಯಾನಿಟೈಸರ್ ಮಾಡುವ ಅಗತ್ಯತೆ ಈಗಿಲ್ಲ. ಸದ್ಯ ಕೊರೊನಾ ಅಪಾಯವಿಲ್ಲ ಎನ್ನುವ ವರದಿ ಇದೆ. ಆದರೂ ಮುನ್ನೆಚ್ಚರಿಕೆ ಪಾಲಿಸಿದರೆ ಎಲ್ಲರಿಗೂ ಒಳ್ಳೆಯದು ಹಾಗಾಗಿ ಸಾರಿಗೆ ಮತ್ತು ಮುಜರಾಯಿ ಇಲಾಖೆಗೆ ಜನರು ಸಹಕರಿಸಿ ಮಾರ್ಗಸೂಚಿ ಪಾಲನೆಗೆ ಅವಕಾಶ ನೀಡಿ ಎಲ್ಲರೂ ನಿಯಮ ಪಾಲಿಸಬೇಕು ಎಂದು ಕರೆ ನೀಡಿದರು.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಇಂದು ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಜೊತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ್ದು, ಪಾಲ್ಗೊಂಡಿದ್ದ ಸಚಿವ ದಿನೇಶ್ ಗುಂಡೂರಾವ್ ಜೆಎನ್.1 ಬಹಳ ವೇಗವಾಗಿ ಹರಡುವ ವೈರಾಣಾಗಿದ್ದರೂ, ಇದು ಹಾನಿಕಾರಕವಾಗಿಲ್ಲ. ಮೃತಪಡುವುದು ವಿರಳ. ಯಾವುದೇ ರೀತಿಯ ಭಯ, ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆ ವಹಿಸುವುದು ಅಗತ್ಯ ಎಮದು ತಿಳಿಸಿದ್ದಾರೆ.