ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿಂದ ಸಾವನ್ನಪ್ಪಿದ್ದ ಕುಟುಂಬದವರಿಗೆ 4 ಲಕ್ಷ ರೂಪಾಯಿ ಪರಿಹಾರ ಪಾವತಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.
ಕೋವಿಡ್-19 ನಿಂದ ಸಾವನ್ನಪ್ಪಿದ್ದ ಕುಟುಂಬದವರಿಗೆ ಪರಿಹಾರ ಪಾವತಿ ಮತ್ತು ಕನಿಷ್ಠ ಮಾನದಂಡಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.
ಭೂ ಕಂಪನ, ಪ್ರವಾಹ ಮತ್ತಿತರ ನೈಸರ್ಗಿಕ ವಿಪತ್ತು ಸಂದರ್ಭಗಳಲ್ಲಿ ಮಾತ್ರ ಪರಿಹಾರ ಅನ್ವಯವಾಗಲಿದೆ ಎಂದು ವಿಪತ್ತು ನಿರ್ವಹಣಾ ಕಾನೂನಿನಲ್ಲಿ ಕಡ್ಡಾಯಮಾಡಿರುವುದರಿಂದ ಕೋವಿಡ್-19 ನಿಂದ ಸಾವನ್ನಪ್ಪಿದ್ದವರಿಗೆ 4 ಲಕ್ಷ ರೂ. ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೋವಿಡ್-19 ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಸುಮಾರು 4 ಲಕ್ಷ ಜನರು ದೇಶದಲ್ಲಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಅಧಿಕೃತ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ಕೋವಿಡ್-19 ನಿಂದ ಸಾವನ್ನಪ್ಪಿದ್ದವರಿಗಾಗಿಯೇ 4 ಲಕ್ಷ ಪರಿಹಾರ ನೀಡಿದರೆ ಇದೊಂದಕ್ಕೆ ಇಡೀ ಎಸ್ ಡಿಆರ್ ಎಫ್ ಹಣವನ್ನೆಲ್ಲಾ ನೀಡಬೇಕಾಗುತ್ತದೆ. ಒಟ್ಟಾರೇ ವೆಚ್ಚ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.