ಕೋವಿಡ್‌ ಡೆಲ್ಟಾ ಪ್ಲಸ್ ವೈರಾಣು ಬಗ್ಗೆ ಹೆಚ್ಚಿನ ಆತಂಕ ಬೇಡ: ಡಾ.ಕೆ.ಸುಧಾಕರ್‌

ಬೆಂಗಳೂರು: ”ಕೋವಿಡ್ ಡೆಲ್ಟಾ ಪ್ಲಸ್ ಸೋಂಕು ವೈರಾಣುವಿನ ಬಗ್ಗೆ ಹೆಚ್ಚಿನ ಆತಂಕಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತೆ ವಹಿಸುವುದು ಅಗತ್ಯವಿದೆʼʼ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್‌ ಅವರು ”ಕೋವಿಡ್ ಡೆಲ್ಟಾ ಪ್ಲಸ್ ವೈರಾಣುವಿನ ಒಂದು ಪ್ರಕರಣ ಬೆಂಗಳೂರಿನಲ್ಲಿ ಮತ್ತು ಮತ್ತೊಂದು ಪ್ರಕರಣ ಮೈಸೂರಿನಲ್ಲಿ ಕಂಡುಬಂದಿದೆ. ಇಬ್ಬರೂ ಸಹ ಸಾಮಾನ್ಯ ಲಕ್ಷಣಗಳನ್ನು ಹೊಂದಿದ ರೋಗಿಗಳಾಗಿದ್ದಾರೆ. ಮೈಸೂರಿನ ರೋಗಿಯೂ ಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ಹೊಸ ವೈರಾಣುವಿನಿಂದ ಸೋಂಕಿತರಿಗೆ ಹೆಚ್ಚು ಸಮಸ್ಯೆಯೇನೂ ಆಗುವುದಿಲ್ಲʼʼ ಎಂದು ತಿಳಿಸಿದರು.

ಇದನ್ನು ಓದಿ: ಡೆಲ್ಟಾ ಪಲ್ಸ್‌ ಕೋವಿಡ್‌ ರೂಪಾಂತರಿ : ಮೂರನೆ ಅಲೆಗೆ ಕಾರಣವಾಗುತ್ತಾ? ಕರ್ನಾಟಕದಲ್ಲೂ 2 ಪ್ರಕರಣ ಪತ್ತೆ

ಅಲ್ಲದೆ, ಡೆಲ್ಟಾ ಪ್ಲಸ್‌ ಸೋಂಕಿತ ಸಂಪರ್ಕಿತರಿಗೂ ಪರೀಕ್ಷೆ ಮಾಡಿಸಿ ನೋಡಿದಾಗಲೂ ನೆಗೆಟಿವ್ ವರದಿ ಬಂದಿದೆ. ಆದ್ದರಿಂದ ಈ ವೈರಾಣು ಬಗ್ಗೆ ಹೆಚ್ಚಿನ ಆತಂಕಪಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಈಗಾಗಲೇ 6 ಜೀನೋಮ್ ಸೀಕ್ವೆನ್ಸ್ ಲ್ಯಾಬ್ ಆರಂಭಿಸಲಾಗುತ್ತಿದೆʼʼ ಎಂದು ಹೇಳಿದರು.

ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಹುಬ್ಬಳ್ಳಿಯ ನಾಲ್ಕು ವೈದ್ಯಕೀಯ ಕಾಲೇಜುಗಳು ಹಾಗೂ ಮಂಗಳೂರು ಮತ್ತು ವಿಜಯಪುರ ಜಿಲ್ಲಾಸ್ಪತ್ರೆಗಳಲ್ಲಿ ಜೀನೋಮ್ ಸೀಕ್ವೆನ್ಸ್ ಲ್ಯಾಬ್ ಆರಂಭಿಸಲಾಗುತ್ತಿದೆ ಎಂದರು.

ಅದೇ ರೀತಿಯಲ್ಲಿ ಕರ್ನಾಟಕ ಗಡಿಭಾಗಗಳ ಪ್ರಸ್ತಾಪಿಸಿದ ಸಚಿವರು ” ಬಸ್, ರೈಲು ಎಲ್ಲಿಂದ ಬಂದರೂ ಆಯಾ ನಿಲ್ದಾಣಗಳಲ್ಲಿ ಎಚ್ಚರ ವಹಿಸಬೇಕು. ಗಡಿಭಾಗದ ಜಿಲ್ಲೆಗಳಲ್ಲಿ ಹೆಚ್ಚು ಪರೀಕ್ಷೆ ಮಾಡಬೇಕು ಎಂದು ಸೂಚಿಸಲಾಗಿದೆ. ಮುಂಜಾಗ್ರತಾ ಕ್ರಮ ವಹಿಸಬೇಕು, ಅಲ್ಲಿಂದ ಒಳಬರುವ ಪ್ರಯಾಣಿಕರಿಗೆ ರ‍್ಯಾಂಡಮ್ ಪರೀಕ್ಷೆ ಮಾಡಬೇಕು ಎಂದು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಕೇರಳದಲ್ಲಿ ಸೋಂಕು ಹೆಚ್ಚಿದ್ದು, ಪಾಸಿಟಿವಿಟಿ ದರ 10% ಗಿಂತ ಅಧಿಕವಾಗಿದೆ. ನಮ್ಮ ರಾಜ್ಯ ಕೇರಳ ಗಡಿ ಹಂಚಿಕೊಳ್ಳುವುದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಮಹಾರಾಷ್ಟ್ರ ಕೂಡ ಗಡಿ ಹಂಚಿಕೊಂಡಿದೆ” ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಭೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮ ಕುರಿತು ಚರ್ಚೆಯಾಗಲಿದೆ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಚಿಕಿತ್ಸೆಯಲ್ಲಿ ಕೆಲ ವ್ಯತ್ಯಾಸ ಇದೆ. ಈ ಬಗ್ಗೆ ತಜ್ಞರು ತಿಳಿಸಿದ್ದಾರೆ ಎಂದರು.

Donate Janashakthi Media

Leave a Reply

Your email address will not be published. Required fields are marked *