ಕೋವಿಡ್ ನಿಯಂತ್ರಣ ವಿಫಲವಾಗಿದೆ ಎಂದು ಯೋಜಿತ ಅಭಿಯಾನ: ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌

ತಿರುವನಂತಪುರಂ: ಕೋವಿಡ್-19 ನಿಯಂತ್ರಿಸಲು ಕೇರಳ ರಾಜ್ಯವು ವಿಫಲವಾಗಿದೆ ಎಂದು  ಬಿಂಬಿಸಲು ಯೋಜಿತ ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆರೋಪಿಸಿದ್ದಾರೆ. ರಾಜ್ಯವು  ಕೋವಿಡ್ ನಿಯಂತ್ರಣಕ್ಕೆ ಬಹಳಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಹೇಳಿದರು.

ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ನೆನ್ನೆ ಮಾತನಾಡಿರುವ ಅವರು, ‘ಕೇರಳದ ವಿರುದ್ಧ ಯೋಜಿತ ಅಭಿಯಾನಗಳು ನಡೆಯುತ್ತಿವೆ. ನಮ್ಮಲ್ಲಿ ಉತ್ತಮ ರಕ್ಷಣಾ ಕಾರ್ಯವಿಧಾನವಿದೆ ಎಂದು ವಿವಿಧ ರಾಜ್ಯಗಳ ತಜ್ಞರೇ ಹೇಳುತ್ತಿದ್ದಾರೆ. ಕೇರಳದ ಶೇಕಡಾ 42 ಜನರು ಪ್ರತಿಕಾಯಗಳನ್ನು ಹೊಂದಿದ್ದಾರೆಂದು ಐಸಿಎಂಆರ್ ನಡೆಸಿದ ಸಿರೊಪ್ರೆವೆಲೆನ್ಸ್ ಅಧ್ಯಯನದಿಂದ ತಿಳಿದುಬಂದಿದೆ. ಕೋವಿಡ್‌ ತಡೆಗಟ್ಟುವ ಕಾರ್ಯವಿಧಾನವೂ ನಮ್ಮಲ್ಲಿ ಉತ್ತಮವಾಗಿದೆ ಎಂಬುದನ್ನು ತಜ್ಞರು ತಿಳಿಸಿದ್ದಾರೆ’ ಎಂದು ಹೇಳಿದರು.

ಇದನ್ನು ಓದಿ: ಕೇರಳ: ಕೋವಿಡ್‌ ಎರಡನೇ ಅಲೆ ಎದುರಿಸಲು ರೂ.20 ಸಾವಿರ ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ

“ನಿರ್ಬಂಧಗಳನ್ನು ಸಡಿಲಿಸಿದ ಸಮಯ ಒಟ್ಟು ಪಾಸಿಟಿವಿಟಿ ಪ್ರಮಾಣ ಸುಮಾರು 12%ದಷ್ಟಿತ್ತು, ಆದರೆ ರಾಜ್ಯದ ಆಡಳಿತ ವ್ಯವಸ್ಥೆ ಕೋವಿಡ್ ನಿಯಂತ್ರಣಕ್ಕೆ ವಿಫಲವಾಗಿದೆ ಎಂದು ಬಿಂಬಿಸುವ ಯತ್ನಗಳು ನಡೆಯುತ್ತಿವೆ. ಕೇರಳದ ಪ್ರಸಕ್ತ ವ್ಯವಸ್ಥೆ ಬಹಳಷ್ಟು ಉತ್ತಮವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ರಾಜ್ಯದ ಜನಸಂಖ್ಯಾ ಸಾಂದ್ರತೆ ಅಧಿಕವಾಗಿದೆ” ಎಂದು ಅವರು ಹೇಳಿದರು.

ಕೋವಿಡ್-19ರ ಡೆಲ್ಟಾ ರೂಪಾಂತರಿ ರಾಜ್ಯದಲ್ಲಿ ಪ್ರಕರಣಗಳ ಏರಿಕೆಗೆ ಕಾರಣ, ರಾಜ್ಯದಲ್ಲಿ ಕೋವಿಡ್-19 ಪರೀಕ್ಷೆಗಳನ್ನು ವ್ಯಾಪಕವಾಗಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. “ಬುಧವಾರ 1.96 ಲಕ್ಷ ಪರೀಕ್ಷೆಗಳು ಹಾಗೂ ಗುರುವಾರ 1.63 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಎಲ್ಲಾ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಸಂಪರ್ಕಿತರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ” ಎಂದು ಅವರು ಹೇಳಿದರು.

ಇದನ್ನು ಓದಿ: ನಿಮ್ಮ ಅಕ್ಕಪಕ್ಕದಲ್ಲಿನ ಕೋವಿಡ್‌ ಪ್ರಕರಣಗಳನ್ನು ಸುಲಭವಾಗಿ ತಿಳಿಯಬಹುದು! ಹೇಗೆ ?

ಐಸಿಎಂಆರ್ ನಡೆಸಿದ ಸಮೀಕ್ಷೆ ಪ್ರಕಾರ ಕೇರಳದ 44.4% ಜನಸಂಖ್ಯೆಯಲ್ಲಿ ಕೋವಿಡ್-19 ಪ್ರತಿಕಾಯಗಳಿವೆ ಇದು ಸೋಂಕಿನಿಂದ ಅಥವಾ ಲಸಿಕೆ ನೀಡಿಕೆಯಿಂದ ಆಗಿದೆ. ರಾಜ್ಯದಲ್ಲಿ ಯಾವುದೇ ಸೋಂಕಿತರು ಆಕ್ಸಿಜನ್ ಅಥವಾ ಹಾಸಿಗೆ ಕೊರತೆಯಿಂದ ಸತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೇರಳ ರಾಜ್ಯದಲ್ಲಿ ಗುರುವಾರ ಸತತ ಮೂರನೇ ದಿನ 22,000ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸದ್ಯ, 1.54 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ದೇಶದ ಸಕ್ರಿಯ ಪ್ರಕರಣಗಳ ಪೈಕಿ ಶೇ. 37.1 ರಷ್ಟಿದೆ. ದಿನನಿತ್ಯದ ಸರಾಸರಿ ಪ್ರಕರಣಗಳು 17,443 ಕ್ಕಿಂತ ಹೆಚ್ಚಿವೆ. ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯ ಶೇಕಡಾ 12.93 ರಷ್ಟು ಮತ್ತು ವಾರಕ್ಕೆ 11.97 ರಷ್ಟು ಪ್ರಕರಣಗಳು ಕೇರಳದಿಂದಲೇ ವರದಿಯಾಗುತ್ತಿವೆ.

Donate Janashakthi Media

Leave a Reply

Your email address will not be published. Required fields are marked *