ಬೆಂಗಳೂರು: ಕೋವಿಡ್ ನಾಲ್ಕನೇ ಅಲೆ ಗಂಭೀರತೆಯ ಮುನ್ನಚ್ಚರಿಕೆ ಭಾಗವಾಗಿ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಪಾಲನೆ ಕಟ್ಟುನಿಟ್ಟಾಗಿ ಪಾಲಿಸಲು ನಿರ್ಧರಿಸಲಾಗಿದೆ. ಮಾಸ್ಕ್ ಧರಿಸದಿದ್ದರೆ ಸದ್ಯಕ್ಕೆ ದಂಡ ಹಾಕುವುದಿಲ್ಲ. ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಬಗ್ಗೆ ನಿಗಾ ವಹಿಸಲು ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಲಸಿಕೆ ತೆಗೆದುಕೊಳ್ಳದವರಿಗೆ ಹೆಚ್ಚಿನ ಸಮಸ್ಯೆ ಆಗುತ್ತಿದೆ, ಜಾಗ್ರತೆ ವಹಿಸಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಇದನ್ನು ಓದಿ: ಕೋವಿಡ್ 4ನೇ ಅಲೆ: ನಾಲ್ಕೈದು ವಾರಗಳಲ್ಲಿ ಪ್ರಕರಣಗಳು ಹೆಚ್ಚಳ; ಡಾ. ಸಿ.ಎನ್.ಮಂಜುನಾಥ್
ಮುಖ್ಯಮಂತ್ರಿ ನಿವಾಸ ಕಚೇರಿ ಕೃಷ್ಣಾದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯದಲ್ಲಿನ ಕೋವಿಡ್ ನಿಯಂತ್ರಣ ಸ್ಥಿತಿಗತಿ ಕುರಿತು ಚರ್ಚಿಸಲಾಗಿದೆ. ಕೋವಿಡ್ ನಾಲ್ಕನೇ ಅಲೆ ಬರಬಹುದೆಂಬ ಸಾಧ್ಯತೆ ಹಿನ್ನೆಲೆಯಲ್ಲಿ ಸಭೆ ನಡೆದಿದೆ.
ಸಭೆಯಲ್ಲಿ ಕೆಲವು ಕ್ರಮಗಳ ಬಗ್ಗೆ ತೀರ್ಮಾನ ಮಾಡಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಒಳಾಂಗಣ ಹಾಗೂ ಹೆಚ್ಚು ಜನಸಂದಣಿ ಪ್ರದೇಶದಲ್ಲಿ ಅಂತರ ಕಾಯ್ದುಕೊಳ್ಳಬೇಕು. ರಾಜ್ಯದಲ್ಲಿ ಯಾರೆಲ್ಲ ಸೋಂಕಿತರು ಪತ್ತೆಯಾಗುತ್ತಿದ್ದಾರೂ ಅದರಲ್ಲಿ ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇವತ್ಗು 1.9 ಪರ್ಸೆಂಟ್ ಬೆಂಗಳೂರಿನಲ್ಲಿ ಆಗಿದೆ. ಅವರ ಮೇಲೆ ನಿಗಾ ಇಡುವುದು ಹಾಗೂ ಅವರಿಗೆ ಅವಶ್ಯಕತೆ ಇದ್ರೆ ಚಿಕಿತ್ಸೆ ನೀಡಲಾಗುವುದು ಎಂದು ಡಾ. ಕೆ ಸುಧಾಕರ್ ಹೇಳಿದ್ದಾರೆ.
ಯಾರು ಲಸಿಕೆಯನ್ನು ತೆಗೆದುಕೊಂಡಿಲ್ಲ ಅವರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಇಡೀ ವಿಶ್ವದಲ್ಲಿ ಇದು ಸಾಬೀತಾಗಿದೆ. ಮೂರನೆ ಡೋಸ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರು ಈ ಡೋಸ್ ತೆಗೆದುಕೊಳ್ಳಬೇಕು. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣ ಬಳಸಿಕೊಂಡು ಹೆಚ್ಚು ಅರಿವು ಮೂಡಿಸಲಾಗುವುದು ಎಂದರು.
ಇದನ್ನು ಓದಿ: ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸಶೋಧ ನೀತಿ (STIP 2020) ಕೈಗಾರಿಕಾ ಕ್ರಾಂತಿಯ ನಾಲ್ಕನೇ ಅಲೆಯಲ್ಲಿ ಸಹ ಭಾರತ ಹಿಂದೆ ಬೀಳುತ್ತಾ?
ಲಸಿಕೆ, ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಲು ಜನತೆಗೆ ಮನವಿ ಮಾಡುತ್ತಿದ್ದೇವೆ, ನಾಲ್ಕನೇ ಅಲೆವರೆಗೆ ಕಾಯದೆ ಲಸಿಕೆ ಹಾಕಿಸಿಕೊಳ್ಳಿ. ದಕ್ಷಿಣ ಕೊರಿಯಾ, ಥಾಯ್ಲೆಂಡ್, ಜಪಾನ್ಗಳಿಂದ ಬೆಂಗಳೂರಿಗೆ ಬರುವವರ ಮೇಲೆ ನಿಗಾ ಇರಿಸಬೇಕು, ಏರ್ಪೋರ್ಟ್ಗಳಲ್ಲಿ ನಿಗಾ ಇಡಲು ನಿರ್ಧರಿಸಲಾಗಿದೆ. ಬಿಬಿಎಂಪಿಗೂ ವಿದೇಶಿ ಪ್ರವಾಸಿಗರ ಮೇಲೆ ನಿಗಾ ಇಡಲು ಸೂಚನೆ ನೀಡಲು ನಿರ್ಧರಿಸಲಾಗಿದೆ.
ಲ್ಯಾಬ್ ವರದಿ ಬರುವವರಗೆ ರಾಜ್ಯದಲ್ಲಿ ಯಾವ ತಳಿ ಇದೆ ಎಂದು ಹೇಳಲು ಆಗುವುದಿಲ್ಲ. ಸದ್ಯ ಲ್ಯಾಬ್ ನವರು ಜಿನೋಮಿಕ್ ಸೀಕ್ವೆನ್ಸ್ಗೆ ಮಾದರಿ ಪಡೆದಿದ್ದಾರೆ ಅದರ ವರದಿ ಬರಲಿದೆ. ಒಮಿಕ್ರಾನ್ನ ತಳಿಯೇ ಆದರೆ, ರೋಗ ಲಕ್ಷಣಗಳು ಒಂದೇ ಇರುತ್ತವೆ. ವರದಿ ಬರುವವರೆಗೂ ಕಾದು ನೋಡಬೇಕು ಎಂದರು.
ಪ್ರತಿನಿತ್ಯ 10 ಸಾವಿರ ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತದೆ. ನಮ್ಮ ಆರೋಗ್ಯ ಇಲಾಖೆ ವತಿಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದೇ 27ರಂದು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಅಂದಿನ ಸಭೆಯ ಬಳಿಕ ಮತ್ತಷ್ಟು ಮಾರ್ಗಸೂಚಿಗಳು ಪ್ರಕಟವಾಗಲಿದೆ. ತಕ್ಷಣಕ್ಕೆ ಯಾವುದೆ ನಿರ್ಬಂಧಗಳನ್ನು ಜಾರಿ ಮಾಡುವುದಿಲ್ಲ. ಕೊರೊನಾದ ನಾಲ್ಕನೆಯ ಅಲೆ ಭೀಕರವಾಗಿರುವುದಿಲ್ಲ ಎಂದು ಹೇಳಲಾಗುತ್ತಿದೆ ಎಂದು ಸಚಿವ ಸುಧಾಕರ್ ಹೇಳಿದರು.
ಇದನ್ನು ಓದಿ: ಕೊವೀಡ್ -19 ಎರಡನೇ ಅಲೆಗೆ ‘ಸರಕಾರದ ನಿದ್ದೆ’ ಕಾರಣವಾಯ್ತಾ?
ಎಲ್ಲ ಪಕ್ಷಗಳೂ ಸಭೆ, ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಸಾರ್ವಜನಿಕರೂ ಸಾಮಾಜಿಕ ಅಂತರ ಪಾಲಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಸುಧಾಕರ್ ಮನವಿ ಮಾಡಿದರು.
ಸಭೆಯಲ್ಲಿ ಕಂದಾಯ ಸಚಿವ ಆರ್ ಅಶೋಕ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಅಭಿವೃದ್ಧಿ ಆಯುಕ್ತೆ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಡಾ: ಎಂ.ಕೆ.ಸುದರ್ಶನ್, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕಿ ಡಾ: ಅರುಂಧತಿ ಚಂದ್ರಶೇಖರ್,ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹಾಗೂ ಮೊದಲಾದವರು ಉಪಸ್ಥಿತರಿದ್ದರು.