ಬಳ್ಳಾರಿ: ಕೋವಿಡ್ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಇಂತಹ ತರಬೇತಿಗಳು ಅತ್ಯಂತ ಅತ್ಯವಶ್ಯಕವಾಗಿದ್ದು, ಎಲ್ಲರೂ ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಿ ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಸಲಹೆ ನೀಡಿದ್ದಾರೆ.
ಶುಶ್ರೂಷಕರಿಗೆ ನಿರೀಕ್ಷಿತ ಕೋವಿಡ್-19 ಮೂರನೇ ಅಲೆಯ ಹಿನ್ನೆಲೆಯಲ್ಲಿ 10 ದಿನಗಳ ತರಬೇತಿ ಕಾರ್ಯಕ್ರಮವು ವಿಮ್ಸ್ ನ ಅರವಳಿಕೆ ಶಾಸ್ತ್ರ ವಿಭಾಗ ಹಾಗೂ ಮಕ್ಕಳ ವಿಭಾಗದ ನೇತೃತ್ವದಲ್ಲಿ ಪಿ.ಎಂ.ಎಸ್.ಎಸ್.ವೈ ಟ್ರಾಮಾಕೇರ್ ಆಸ್ಪತ್ರೆಯಲ್ಲಿ ಆರಂಭವಾದ ತರಬೇತಿಗೆ ಪ್ರೀತಿ ಗೆಹ್ಲೋಟ್ ಚಾಲನೆ ನೀಡಿದರು.
ಇದನ್ನು ಓದಿ: ಕೋವಿಡ್ 3ನೇ ಅಲೆ ಮತ್ತು ಮಕ್ಕಳ ಮೇಲಿನ ಪರಿಣಾಮ–ಎಂ.ಎಸ್.ಸಿ. ವತಿಯಿಂದ ನಡೆದ ವಿಚಾರ ಸಂಕಿರಣ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಮ್ಸ್ ನ ನಿರ್ದೇಶಕರಾದ ಡಾ.ಟಿ.ಗಂಗಾಧರ್‍ಗೌಡ ಅವರು ಮಾತನಾಡಿ ʻʻಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲಾಗಿದೆ. ಎಲ್ಲಾ ಆರೋಗ್ಯ ಸಿಬ್ಬಂದಿಗಳು ತಂಡವಾಗಿ ಕಾರ್ಯ ನಿರ್ವಹಿಸಿದರೆ 3ನೇ ಅಲೆಯನ್ನು ಸಹ ಅತ್ಯಂತ ಯಶಸ್ವಿಯಾಗಿ ಎದುರಿಸಬಹುದುʼʼ ಎಂದು ಸಲಹೆ ನೀಡಿದರು.
ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ದುರುಗಪ್ಪನವರು ಮಾತನಾಡಿ 3ನೇ ಅಲೆಯನ್ನು ಯುದ್ಧದ ರೀತಿಯಲ್ಲಿ ಎದುರಿಸಲು ನಾವೆಲ್ಲಾ ಸನ್ನದ್ಧರಾಗಬೇಕೆಂದು ಆತ್ಮಸ್ಥೈರ್ಯ ತುಂಬಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್ ಜನಾರ್ಧನ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಬಸರೆಡ್ಡಿ ಅತಿಥಿಗಳಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಅರವಳಿಕೆ ವಿಭಾಗದ ಡಾ.ಪರಿಮಳಾ, ಡಾ.ಕಿರಣ್‍ಚಂದ್, ಮಕ್ಕಳ ತಜ್ಞರಾದ ಡಾ.ವಿಶ್ವನಾಥ್, ಅರವಳಿಕೆ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಟ್ರಾಮಾಕೇರ್‍ನ ನೋಡಲ್ ಅಧಿಕಾರಿಗಳಾದ ಡಾ.ಶಿವನಾಯ್ಕ, ಡಾ.ಉಮಾಶಂಕರ್, ಟ್ರಾಮಾಕೇರ್ ಆಸ್ಪತ್ರೆಯ ನೋಡಲ್ ಅಧಿಕಾರಿಯಾದ ಡಾ.ಸುರೇಶ್ ಸಿ.ಎಂ., ಅರವಳಿಕೆ ವಿಭಾಗದ ಪ್ರಾದ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ.ಬಿ.ದೇವಾನಂದ, ಮುಖ್ಯ ತರಬೇತುದಾರರಾದ ಡಾ.ಬಾಲಭಾಸ್ಕರ್, ಡಾ.ಶ್ರೀನಿವಾಸಲು, ಜಿಲ್ಲಾಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ಬಾಲವೆಂಕಟೇಶ್ವರ, ವಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಅಶ್ವಿನ್‍ಕುಮಾರ್‍ಸಿಂಗ್, ಟಿ.ಬಿ.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ವೈ.ವಿಶ್ವನಾಥ್, ಟ್ರಾಮಾಕೇರ್‍ನ ಮುಖ್ಯ ನೋಡಲ್ ಅಧಿಕಾರಿಗಳಾದ ಡಾ.ಎನ್.ಮಂಜುನಾಥ್ ಮತ್ತು 50 ಶುಶ್ರೂಷಕ ಶಿಬಿರಾರ್ಥಿಗಳು ಹಾಗೂ ಶುಶ್ರೂಷಕರ ಮೇಲ್ವಿಚಾರಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ತರಬೇತುದಾರರಾದ ಅರವಳಿಕೆ ತಜ್ಞ ಡಾ.ಶ್ರೀನಿವಾಸಲುರವರು ವಂದನಾರ್ಪಣೆಯನ್ನು ನೆರವೇರಿಸಿದರು.
ಜಿಲ್ಲಾಡಳಿತ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಗಳ ಒತ್ತಾಸೆಯಂತೆ ಬಳ್ಳಾರಿ ತೀವ್ರ ನಿಗಾ ಘಟಕದಲ್ಲಿ ಕಾರ್ಯ ನಿರ್ವಹಿಸುವ ಈ ತರಬೇತಿಯು 10 ದಿನಗಳ ಕಾಲ ನಡೆಯಲಿದೆ.