ಕೋವಿಡ್‌ 2 ನೇ ಅಲೆ : ಸೋಂಕು, ಸಾವಿನ ಸಂಖ್ಯೆ ಹೆಚ್ಚಳ, ಕಣ್ಮುಚ್ಚಿ ಕುಳಿತಿರುವ ಸರಕಾರ

ಕೊರೊನಾ ಎರಡನೆ ಅಲೆಯ ಪ್ರಮಾಣ ಹೆಚ್ಚಾಗುತ್ತಲೆ ಇದೆ, ಸಾವುಗಳ ಸಂಖ್ಯೆಯು ಹೆಚ್ಚಾಗುತ್ತದೆ, ಕೆಲವೆಡೆ ಆಕ್ಸಿಜನ್ ಕೊರತೆ ಯಾದರೆ, ಇನ್ನೊಂದೆಡೆ ಲಸಿಕೆಯ ಕೊರತೆ, ಮತ್ತೊಂದೆಡೆ ಹಾಸಿಗೆಗಳ ಕೊರತೆ, ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೆ ಕ್ಯೂ ನಿಲ್ಲುವ ಸ್ಥಿತಿ ಈಗ ನಿರ್ಮಾಣವಾಗಿದೆ? ಆಳುವ ಸರಕಾರಗಳು ಏನು ಮಾಡುತ್ತಿವೆ? ಮುಂಜಾಗ್ರತೆ ವಿಚಾರದಲ್ಲಿ ಎಡವುತ್ತಿವೆಯಾ ಕೇಂದ್ರ ಮತ್ತು ರಾಜ್ಯ ಸರಕಾರಗಳು?

ಸತತ 10 ದಿನಗಳಿಂದ 1 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಭಾರತದಲ್ಲಿ ಇದೀಗ ನಿತ್ಯ ಹೊಸ ಸೋಂಕಿತರ ಪ್ರಮಾಣ 2 ಲಕ್ಷ ಗಡಿ ದಾಟಿದೆ. ಇದೇ ವೇಳೆ ಸಾವಿನ ಪ್ರಮಾಣದಲ್ಲಿಯೂ ಭಾರೀ ಏರಿಕೆಯಾಗಿದೆ. ಗುರುವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ ದಾಖಲೆ 2, ಲಕ್ಷದ 739 ಜನರಲ್ಲಿ ಸೋಂಕು ದೃಢಪಟ್ಟಿದ್ದು, 1,038 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ಇತ್ತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ – ಅತ್ತ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ – ಸೋಂಕಿತರ ಸಮಸ್ಯೆ ಕೇಳೋರು ಯಾರು?

ಕೊರೋನಾ 2ನೇ ಅಲೆ ತೀವ್ರಗೊಳ್ಳುಲು ಆರಂಭವಾದ ಮೇಲೆ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಸಾವಿನ ಸಂಖ್ಯೆ ಸರಾಸರಿ 700ರ ಆಸುಪಾಸಿನಲ್ಲಿತ್ತು. ನಂತರ ವಾರಗಳಲ್ಲಿ ಅದು ಕ್ರಮವಾಗಿ 845, 1038 ಕ್ಕೆ ಬಂದು ನಿಂತಿದೆ, ಮುಂದಿನ ವಾರದಲ್ಲಿ ಕ್ರಮವಾಗಿ 2000 ದಿಂದ 5000 ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ 2020ರ ಸೆಪ್ಟೆಂಬರ್ 18 ರಂದು ಕೊರೋನಾಕ್ಕೆ 1247 ಮಂದಿ ಬಲಿಯಾಗಿದ್ದು, ಭಾರತದಲ್ಲಿನ ಈ ವರೆಗಿನ ದೈನಂದಿನ ಗರಿಷ್ಠ ಸಂಖ್ಯೆಯಾಗಿತ್ತು. ಪ್ರಸ್ತುತದ ಅಂಕಿ ಸಂಖ್ಯೆಯನ್ನು ನೋಡಿದರೆ, ಈ ಸಂಖ್ಯೆ ಇನ್ನೆರಡು ದಿನಗಳಲ್ಲಿ ಮೀರುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ 2, ಲಕ್ಷದ 739 ಮಂದಿಯಲ್ಲಿ ಸೋಂಕು ದೃಢಪಡುವುದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1 ಕೋಟಿ 40 ಲಕ್ಷದ 74 ಸಾವಿರದ 564ಕ್ಕೆ ಏರಿಕೆಯಾಗಿದೆ. ಈ ನಡುವೆ ಸಕ್ರಿಯ ಪ್ರಕರಣಗಳ ಸಂಖ್ಯೆ  14 ಲಕ್ಷದ 71 ಸಾವಿರದ 877ಕ್ಕೆ ತಲುಪಿದೆ. ಇನ್ನು ಒಂದೇ ದಿನ ದೇಶದಲ್ಲಿ 1,038 ಮಂದಿ ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದು, ಇದರೊಂದಿಗೆ ಈ ವರೆಗೆ ದೇಶದಲ್ಲಿ ವೈರಸ್’ಗೆ ಸಾವನ್ನಪ್ಪಿದವರ ಸಂಖ್ಯೆ 1 ಲಕ್ಷದ 73 ಸಾವಿರದ 123ಕ್ಕೆ ಏರಿಕೆಯಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 93,528 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ 1 ಕೋಟಿ 24 ಲಕ್ಷದ 29 ಸಾವಿರದ 564ಕ್ಕೆ ತಲುಪಿದೆ.

ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದರು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್’ಗೆ ಲಸಿಕೆಯ ಮೊದಲ ಆಧ್ಯತೆಯನ್ನು ನೀಡಲಾಗಿತ್ತು. ನಂತರದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಆಧ್ಯತೆ ನೀಡಲಾಗಿತ್ತು, ಇದೀಗ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗುತ್ತಿದೆ. ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 11 ಕೋಟಿ 44 ಲಕ್ಷದ 93 ಸಾವಿರದ 238 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿಯನ್ನು ನೀಡಿದೆ.

ಇದನ್ನೂ ಓದಿ : ರೆಮಿಡಿಸಿವರ್‌ ಔಷಧ ಅಭಾವದಿಂದ ಸಾವಿನ ಪ್ರಮಾಣ ಹೆಚ್ಚಳ, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊರೊನಾ ಮೊದಲ ಅಲೆಯಿಂದ ಪಾಠವನ್ನು ಕಲಿಯದೆ ಎಚ್ಚೆತ್ತುಕೊಳ್ಳದಿದ್ದರ ಪರಿಣಾಮವಾಗಿ ಈಗ ಮತ್ತೆ ಬೆಡ್‌ ಗಳ ಕೊರತೆ ಉಂಟಾಗಿದೆ. ಮಹಾರಾಷ್ಟ್ರದಲ್ಲಿ ಆಕ್ಸಿಜನ್‌ ಕೊರತೆ ಹೆಚ್ಚಾಗಿ ಕಾಡುತ್ತಿದ್ದು, ಆಕ್ಸಿಜನ್‌ ನೀಡುವಂತೆ ಮಹರಾಷ್ಟ್ರ ಸಿಎಂ ಕೇಂದ್ರಕ್ಕೆ ಮನವಿಯನ್ನು ಮಾಡಿದ್ದಾರೆ, ಪಾಲ್ಘರ್ ಜಿಲ್ಲೆಯ ನಲ ಸೋಪರ ಎಂಬಲ್ಲಿರುವ ವಿನಾಯಕ ಆಸ್ಪತ್ರೆಯಲ್ಲಿ ಸೋಮವಾರ ಒಂದೇ ದಿನ ಏಳು ಮಂದಿ ರೋಗಿಗಳ ಸಾವು ಮೃತರ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್‍ಗಳ ಕೊರತೆ ಜತೆಗೆ ನಿರ್ವಹಣಾ ವೈಫಲ್ಯವೇ ಈ ಸಾವುಗಳಿಗೆ ಕಾರಣವೆಂದು ಆರೋಪಿಸಲಾಗುತ್ತಿದೆ. ‌

ಇಲ್ಲಿ ನಿಮಗೊಂದು ಕೋಷ್ಟಕ ಕಾಣುತ್ತಿದೆ, ಲಸಿಕೆ ಅಭಿಯಾನಕ್ಕೆ ಮೋದಿ ಸರಕಾರ ಕರೆ ನೀಡಿತ್ತು. ಎಲ್ಲೆಲ್ಲಿ ಎಷ್ಟೆಷ್ಟು ಜನರಿಗೆ ಲಸಿಕೆ ನೀಡಿದ್ದಾರೆ, ಸೋಂಕಿತರ ಪ್ರಮಾಣ ಎಷ್ಟಿದೆ ಎನ್ನುವ ಮಾಹಿತಯನ್ನು ನೋಡ್ತಾ ಹೋಗೋಣ.

 ಕೊರೊನಾ ಸೋಂಕಿತರ ಸಂಖ್ಯೆ ಪ್ರಮಾಣ ಕೊರೊನಾ ಸೋಂಕಿತರ ಸಾವುಗಳ ಪ್ರಮಾಣ ಕೊರೊನಾ ಲಸಿಕೆ ಪ್ರಮಾಣ ( 1 ಲಕ್ಷಕ್ಕೆ)
ರಾಜ್ಯಗಳು ಏಪ್ರಿಲ್ 13 % ಗರಿಷ್ಠ ಏಪ್ರಿಲ್13 % ಗರಿಷ್ಠ ಮಾರ್ಚ್ ಏಪ್ರಿಲ್13
ಮಹಾರಾಷ್ಟ್ರ 57,979 262 314 70 1,005 8,733
ಛತ್ತೀಸ್‌ಗಡ 12,246 373 110 200 1508 15493
ಉತ್ತರ ಪ್ರದೇಶ 11,951 182 55 60 626 4,086
ದೆಹಲಿ 9,299 127 46 35 2,274 12,319
ಕರ್ನಾಟಕ 8,152 81 45 34 1,219 9,541
ತಮಿಳುನಾಡು 5,715 84 20 14 617 5,166
ಮಧ್ಯಪ್ರದೇಶ 5,666 225 27 75 1,002 7,687
ಕೇರಳ 5,615 64 17 57 1,751 14,755
ಗುಜರಾತ್ 5,047 325 46 141 1,675 15,195
ರಾಜಸ್ಥಾನ್ 4,443 139 18 91 1369 12,441
ಪಶ್ಚಿಮ ಬಂಗಾಳ 3,799 92 11 18 1,129 8,378
ಹರಿಯಾಣ 3,182 124 13 42 1,062 9,427
ಪಂಜಾಬ್ 3,164 120 56 74 664 6645
ಆಂಧ್ರಪ್ರದೇಶ 3136 30 10 11 1268 7270
ಬಿಹಾರ 2,856 75 6 36 516 4047
ತೆಲಂಗಾಣ 2,549 94 6 49 1,102 6020

ಗುಜರಾತ್ ನ ಅಹಮದಾಬಾದ್ ನ ಕೋವಿಡ್-19 ಆಸ್ಪತ್ರೆಯ ಹೊರಗೆ ಆಂಬ್ಯುಲೆನ್ಸ್ ಗಳ ಸಾಲುಗಳು ರೋಗಿಗಳನ್ನು ಹೊತ್ತು ನಿಂತಿದ್ದು, ಸೂರತ್ ನ ಜಹಗಿರ್ಪುರ ಚಿತಾಗಾರ ಹೊರಗೆ ಕೋವಿಡ್ ಸೌಲಭ್ಯ ಇರುವ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದು ಆ ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. ಗುಜರಾತ್ ರಾಜ್ಯದಲ್ಲಿ ಹೊಸದಾಗಿ 6 ಸಾವಿರದ 690 ಕೊರೋನಾ ಕೇಸುಗಳು ಮತ್ತು 67 ಸಾವು ಪ್ರಕರಣಗಳು ವರದಿಯಾಗಿವೆ. ಇದು ಕೇವಲ ಗುಜರಾತ್‌ ನ ಕಥೆಯಲ್ಲ, ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ಛತ್ತೀಸ್‌ಗಢ, ಮಧ್ಯಪ್ರದೇಶ, ಉತ್ತರಪ್ರದೇಶದ ಹಲವು ದೊಡ್ಡ ನಗರಗಳ ವ್ಯಥೆಯಾಗಿದೆ.

ಕೊರೋನಾ 2ನೇ ಅಲೆಯಲ್ಲಿ ಸಾವಿನ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಲೇ, ಚಿತಾಗಾರಗಳಿಗೆ ಅಂತ್ಯಸಂಸ್ಕಾರಕ್ಕೆ ತರುವ ಶವಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಆದರೆ ಚಿತಾಗಾರಗಳಲ್ಲಿ ಏಕಕಾಲಕ್ಕೆ ಅಷ್ಟೊಂದು ಜನರ ಅಂತ್ಯಕ್ರಿಯೆಗೆ ವ್ಯವಸ್ಥೆ ಇಲ್ಲದ ಕಾರಣ ಭಾರೀ ಸಮಸ್ಯೆ ಎದುರಾಗಿದೆ. ಹಲವು ನಗರಗಳ ಚಿತಾಗಾರಗಳಲ್ಲಿ ದಿನದ 24 ಗಂಟೆಯೂ ಮೃತರ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ. ಗುಜರಾತ್‌ನ ಸೂರತ್‌ ಚಿತಾಗಾರವೊಂದರಲ್ಲಿ ದಿನಕ್ಕೆ 80- 100 ಶವಗಳನ್ನು ಅಂತ್ಯ ಸಂಸ್ಕಾರಕ್ಕೆ ತರಲಾಗುತ್ತಿದೆ. ಮಹಾರಾಷ್ಟ್ರದ ಮುಂಬೈ, ಅಹಮದ್‌ ನಗರ, ಪುಣೆ, ಥಾಣೆ, ನಾಂದೇಡ್‌ನಲ್ಲೂ ಇದೇ ಪರಿಸ್ಥಿತಿ ಇದೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡವರು ಅಂತ್ಯಸಂಸ್ಕಾರಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ  ನಿರ್ಮಾಣವಾಗಿದ್ದು ಜನಾಕ್ರೋಶಕ್ಕೆ ಕಾರಣವಾಗ್ತಾ ಇದೆ.

ಇನ್ನು ಛತ್ತೀಸ್‌ಗಢದ, ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿಯೂ ಸಾವಿನ ಪ್ರಕರಣಗಳು ಏರಿಕೆ ಆಗುತ್ತಿದ್ದು, ಮೃತ ದೇಹಗಳ ನಿರ್ವಹಣೆ ಭೀತಿ ಸೃಷ್ಟಿಸುತ್ತಿದೆ. ಛತ್ತೀಸ್‌ ಗಡದಲ್ಲಿ ಚಿತಾಗಾರದಲ್ಲಿ ನಿರಂತರವಾಗಿ ಉರಿಯುತ್ತಿರುವ ಬೆಂಕಿಯಿಂದಾಗಿ ಕುಲುಮೆಯ ಸತ್ತಲೂ ಹಾಕಿರುವ ಉಕ್ಕಿನ ರಚನೆಗಳು ಕರಗುತ್ತಿವೆ. ನಿರಂತರ ಹೊಗೆಯಿಂದಾಗಿ ಚಿತಾಗಾರಗಳ ಅಕ್ಕ ಪಕ್ಕದ ನಿವಾಸಿಗಳು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಹರಿದ್ವಾರದಲ್ಲಿ ನಡೆಯುತ್ತಿರುವ ಕೊಂಭಮೇಳದಲ್ಲಿ ಕಳೆದ 48 ಗಂಟೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ, ಹಾಗಾಗಿ ಕುಂಭಮೇಳವನ್ನು ಕೊರೊನಾ ಹಾಟ್ಸ್ಪಾಟ್‌ ಎಂದು ಕರೆಯಲಾಗುತ್ತಿದೆ. ಇಷ್ಟೆಲ್ಲ ಅನಾಹುತ ಸೃಷ್ಟಿಸಿದ್ದರು ಕುಂಭಮೇಳವನ್ನು ನಿಲ್ಲಿಸುವುದಿಲ್ಲ ಎಂದು ಉತ್ತರಾಖಂಡ ಸರಕಾರ ಸ್ಪಷ್ಟಪಡಿಸಿದೆ. ಇನ್ನೊಂದೆಡೆ  ಮುಖ್ಯಮಂತ್ರಿ  ತೀರ್ಥಸಿಂಗ್‌ ರಾವತ್‌, ‘ಕುಂಭಮೇಳ ಹರಿವ ನದಿಯಲ್ಲಿ ನಡೆಯುವಂಥದ್ದು. ಇಲ್ಲಿ ಕೊರೋನಾ ಬರುವುದಿಲ್ಲ’ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ತೀರ್ಥಸಿಂಗ್‌ ರ ಈ ಹಾಸ್ಯಾಸ್ಪದ ಹೇಳಿಕೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಕೇಂದ್ರ ಸರಕಾರವೂ ಕುಂಭಮೇಳದ ಅವಘಡಗಳನ್ನು ನೋಡಿಕೊಂಡು ಕನ್ಮುಚ್ಚಿಕುಳಿತಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಇನ್ನೂ ಕರ್ನಾಟಕದ ವಿಚಾರಕ್ಕೆ ಬರುವುದಾದರೆ, ಕರ್ನಾಟಕದಲ್ಲೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಮರಣ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ರಾಜ್ಯದ ರಾಜಧಾನಿಯಲ್ಲಿ  ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಾದ ಪರಿಣಾಮ ಚಿತಾಗಾರದ ಎದುರು ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ  ಬೆಡ್‌ಗಳ ಕೊರತೆ ಉಂಟಾಗಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳುತ್ತಿದೆ.

ಕರ್ನಾಟಕದಲ್ಲಿ ನಿನ್ನೆ ಹೊಸದಾಗಿ 14738 ಜನರಿಗೆ ಸೊಂಕು ದೃಢ ಪಟ್ಟಿದ್ದು, 3591 ಸೋಂಕಿತರು ಗುಣಮುಖರಾಗಿದ್ದಾರೆ, ಹಾಗೆಯೇ 66 ಸೋಂಕಿತರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1109650ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 999958 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 96561 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 13112 ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 555 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. 85,480 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಕಳೆದೆರಡು ವಾರಗಳಿಂದ ಸೋಂಕಿತರ ಸಂಖ್ಯೆ ಬೆಳೆಯುತ್ತಲೇ ಇದೆ. ಸಾವುಗಳ ಸಂಖ್ಯೆಯು ಬೆಳೆಯುತ್ತಲೇ ಇದೆ.

ಜನವರಿಯ ತಿಂಗಳಿನಲ್ಲಿ 66 ಜನ ಸೋಂಕಿತರು ಸಾವನ್ನಪ್ಪಿದ್ದರು. ಫೆಬ್ರವರಿ ತಿಂಗಳಲ್ಲಿ 88 ಜನ ಮೃತಪಟ್ಟಿದ್ದರು. ಹಾಗೂ ಮಾರ್ಚ್ ತಿಂಗಳಿನಲ್ಲಿ 147 ಜನ ಸೋಂಕಿತರು ಬಲಿಯಾಗಿದ್ದರು. ಆದರೆ ಏಪ್ರಿಲ್ ತಿಂಗಳ 14ಕ್ಕೆ ಅಂದ್ರೆ ಕೇವಲ 14  ದಿನದಲ್ಲಿ 326 ಜನ ಸೋಂಕಿತರು ಮೃತಪಟ್ಟಿದ್ದಾರೆ. ತಿಂಗಳಾಂತ್ಯಕ್ಕೆ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇರುವುದನ್ನು ಈ ಅಂಕಿ ಅಂಶಗಳು ತೋರಿಸುತ್ತಿವೆ. ದಿನವೊಂದಕ್ಕೆ 30 ರಿಂದ 40 ಮೃತದೇಹಗಳು ಬರುತ್ತಿರುವ ಕಾರಣ ಚಿತಾಗಾರದಲ್ಲಿ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಈಗ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ. ಚಿತಾಗಾರದ ಸಿಬ್ಬಂದಿಗೆ ಸರಿಯಾದ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಬೆಂಗಳೂರಿನಲ್ಲಿ ಹಾಸಿಗೆಯ ಕೊರತೆ ಎದ್ದು ಕಾಣಿಸುತ್ತಿದೆ. ಬಿಬಿಎಂಪಿ ಕೊರೋನಾ ಹಾಸಿಗೆ ನಿರ್ವಹಣಾ ವ್ಯವಸ್ಥೆಯ ಪ್ರಕಾರ ಬೆಂಗಳೂರಿನಲ್ಲಿ 197 ಐಸಿಯು ಬೆಡ್‌ಗಳಿದ್ದು, 169 ಐಸಿಯು ಬೆಡ್‌ ಭರ್ತಿಯಾಗಿದೆ. ಉಳಿದಂತೆ ಕೇವಲ 28 ಬೆಡ್‌ಗಳು ಮಾತ್ರ ಲಭ್ಯವಿವೆ. ಸೋಂಕು ಏರುಗತಿಯ ಆರಂಭಿಕ ಹಂತದಲ್ಲೇ ಈ ಪರಿಸ್ಥಿತಿ ನಿರ್ಮಾಣವಾದರೆ, ಮುಂದಿನ ವಾರದಿಂದ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ವೇಳೆ ಸೋಂಕಿತರ ಪರಿಸ್ಥಿತಿ ಏನು ಎಂಬ ಆತಂಕ ಮೂಡಿದೆ. ಮತ್ತೊಂದೆಡೆ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಶೇ.50 ರಷ್ಟು ಬೆಡ್‌ಗಳನ್ನು ಕೊರೋನಾಗೆ ಮೀಸಲಿಡುವಂತೆ ಸರ್ಕಾರ ಸೂಚಿಸಿದ್ದರೂ, ಏಕಾಏಕಿ ಕೊರೋನೇತರ ರೋಗಿಗಳನ್ನು ಖಾಲಿ ಮಾಡಿಸಲು ಸಾಧ್ಯವಿಲ್ಲ. ಕನಿಷ್ಠ 2-3 ವಾರಗಳ ಕಾಲಾವಕಾಶ ಬೇಕು ಎಂದು ಖಾಸಗಿ ಆಸ್ಪತ್ರೆಗಳು ಅಸಹಾಯಕತೆ ವ್ಯಕ್ತಪಡಿಸಿವೆ.

ವೆಂಟಿಲೇಟರ್ಮತ್ತು ಐಸಿಯು ಬೆಡ್ಗಳ ಲಭ್ಯತೆ : ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌ ಪೈಕಿ ಸರ್ಕಾರಿ ಆಸ್ಪತ್ರೆಗಳಲ್ಲಿನ 65 ರಲ್ಲಿ 55 ಭರ್ತಿಯಾಗಿವೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 45 ಬೆಡ್‌ಗಳ ಪೈಕಿ ಸಂಪೂರ್ಣ ಭರ್ತಿಯಾಗಿವೆ. ಖಾಸಗಿ ಆಸ್ಪತ್ರೆಗಳಲ್ಲಿನ 22 ಬೆಡ್‌ಗಳ ಪೈಕಿ 12 ಭರ್ತಿಯಾಗಿದ್ದು, ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ 55 ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌ಗಳಲ್ಲಿ 28 ಭರ್ತಿಯಾಗಿವೆ.

ಬೆಂಗಳೂರಿನ ಆಸ್ಪತ್ರೆಗಳಲ್ಲಿರುವ ಐಸಿಯು ಬೆಡ್ಡಗಳ ಮಾಹಿತಿ ಈ ರೀತಿ ಇದೆ

ಆಸ್ಪತ್ರೆ ಹೆಸರು

ಒಟ್ಟು ಹಾಸಿಗೆಗಳು ಭರ್ತಿಯಾದ ಹಾಸಿಗೆಗಳು

ಖಾಲಿ

ಸರ್ಕಾರಿ ಆಸ್ಪತ್ರೆ

57 52

5

ಖಾಸಗಿ ಆಸ್ಪತ್ರೆಗಳು

18 08

10

ಖಾಸಗಿ ವೈದ್ಯ ಕಾಲೇಜು

52 39

13

ಒಟ್ಟು

127 99

28

 ವಿವಿಧ ಆಸ್ಪತ್ರೆಗಳಲ್ಲಿ ಕೊರೋನಾ ಬೆಡ್‌ ಲಭ್ಯತೆ ವಿವರ:

ಆಸ್ಪತ್ರೆ ಹೆಸರು

ಒಟ್ಟು ಹಾಸಿಗೆಗಳು ಭರ್ತಿಯಾದ ಹಾಸಿಗೆಗಳು

ಖಾಲಿ

ಸರ್ಕಾರಿ ಆಸ್ಪತ್ರೆ

872 763 109

ಸರ್ಕಾರಿ ವೈದ್ಯ ಕಾಲೇಜು   

350 349

001

ಖಾಸಗಿ ಆಸ್ಪತ್ರೆಗಳು

316 117

199

ಖಾಸಗಿ ವೈದ್ಯ ಕಾಲೇಜು

750

492

258

ಒಟ್ಟು

2,119 1,635 484

ಕೊರೊನಾ ನಿಯಂತ್ರಣವನ್ನು ಮಾಡುವುದಕ್ಕಾಗಿ ಲಾಕ್ಡೌನ್‌ ಜಾರಿಗೆ ತನ್ನಿ ಎಂದು ತಜ್ಞರು ಸಲಹೆಗಳನ್ನು ನೀಡುತ್ತಿದ್ದಾರೆ. ಸೋಂಕು ಹೆಚ್ಚಳವಿರುವ ಮಹಾರಾಷ್ಟ್ರದಲ್ಲಿ 15 ದಿನಗಳ ಲಾಕ್ಡೌನ್‌ ಘೋಷಣೆ ಮಾಡಲಾಗಿದೆ. ದೆಹಲಿಯಲ್ಲಿ ವಾರಾಂತ್ಯದ ಲಾಕ್ಡೌನ್‌ ಮಾಡಲಾಗುತ್ತಿದೆ, ಹಾಗಾಗಿ ರಾಜ್ಯದಲ್ಲೂ ಲಾಕ್ಡೌನ್‌  ಜಾರಿ ಮಾಡಿ ಇದರಿಂದ ಮಾತ್ರ ಕೊರೊನಾ ನಿಯಂತ್ರಣ ಮಾಡಲು ಸಾಧ್ಯ ಎಂದು ತಜ್ಞರು ಹೇಳುತ್ತಿದ್ದಾರೆ. ತಜ್ಞರ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಕಾರಣಕ್ಕೂ ಲಾಕ್ಡೌನ್‌ ಮಾಡುವುದಿಲ್ಲ, ಏಪ್ರಿಲ್‌ 18 ರಂದು ಸರ್ವ ಪಕ್ಷಗಳ ಸಭೆಯಲ್ಲಿ ಚರ್ಚಿಸಿ ಕಠಿಣ ಕ್ರಮ ಜಾರಿ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗುತ್ತೆ. ಆದರೆ ಲಾಕ್ಡೌನ್‌ ಆಯ್ಕೆ ನಮ್ಮ ಮುಂದೆ ಇಲ್ಲ ಎಂದು ಸಿಎಂ ಸ್ಪಷ್ಟ ಪಡಿಸಿದ್ದಾರೆ.ಚುನಾವಣೆಯಲ್ಲಿ ಕೊರೊನಾ ನಿಯಮಗಳನ್ನು ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೂರು ಪಕ್ಷಗಳು ಉಲ್ಲಂಘನೆ ಮಾಡುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಮಸ್ಕಿಯ ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಗೌಡ ಪಾಟೀಲ್‌ ಕೋವೀಡ್‌ ಸೋಂಕಿಗೆ ಒಳಗಾಗಿದ್ದು, ಅವರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲಾ ಕಡೆಗಳಲ್ಲಿ ಅರಾಮಾಗಿ ಓಡಾಡಿಕೊಂಡಿದ್ದಾರೆ. ಪ್ರತಾಪ್‌ ಗೌಡ ಹಾಗೆ ಯಡಿಯೂರಪ್ಪ ಜೊತೆ ಓಡಾಡುತ್ತಿದೆ, ಶಾಸಕ ರಾಜೂಗೌಡ ಅವರಿಗೆ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿದೆ. ಆದರೂ ಸಿಎಂ ಬೆಳಗವಾವಿ, ಬೀದರ್‌ ಎಂದೆಲ್ಲ ಓಡಾಡಿಕೊಂಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಸರಕಾರ ಹಾಗೂ ರಾಜಕಾರಣಿಗಳು ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಇನ್ನೂ 18 ರಂದು ನಡೆಯುತ್ತಿರುವ ಸರ್ವಪಕ್ಷ ಸಭೆಗಳಿಗೆ ಎಲ್ಲಾ ಪಕ್ಷಗಳಿಗೆ ಆಹ್ವಾನ ನೀಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ವಿಧಾನಸಭೆಯಲ್ಲಿ ಪ್ರಾತಿನಿಧ್ಯ ಇರುವ ಪಕ್ಷಗಳನ್ನು ಮಾತ್ರ ಕರೆಯಲಾಗಿದೆ. ಇದು ಹೇಗೆ ಸರ್ವಪಕ್ಷಗಳ ಸಭೆ ಯಾಗುತ್ತದೆ. ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಹೊರತು ಪಡಿಸಿ ಹತ್ತಾರು ಪಕ್ಷಗಳು ಇವೆ. ಆ ಪಕ್ಷಗಳ ಅಭಿಪ್ರಾಯವು ಮುಖ್ಯ ಹಾಗಾಗಿ 18 ರ ಸಭೆಗೆ ಎಲ್ಲಾ ಪಕ್ಷಗಳನ್ನು ಕರೆಯಬೇಕು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್‌ ಆಗ್ರಹಿಸಿದ್ದಾರೆ.

ಹಾಗಾಗಿ ಈಗ ಎಲ್ಲರ ಚಿತ್ತ 18 ರತ್ತ ನೆಟ್ಟಿದೆ. ಈ ಕೊರೊನಾ ಹೋಗೋದು ಯಾವಾಗ? ನಾವು ನೆಮ್ಮದಿಯಿಂದ ಓಡಾಡುವುದು ಯಾವಾಗ ಎಂಬ ಪ್ರಶ್ನೆಗಳು ಜನರಲ್ಲಿ ಮೂಡುತ್ತಿವೆ. ಸರಕಾರದ ಮುಂಜಾಗ್ರತೆ, ಅಗತ್ಯ ಸೌಲಭ್ಯ ನೀಡುವಿಕೆ, ಸಾರ್ವಜನಿಕರಿಗೆ ಪೌಷ್ಟಿಕ ಆಹಾರ ಧಾನ್ಯಗಳ ವಿತರಣೆ, ಉಚಿತ ಚಿಕಿತ್ಸೆಯನ್ನು ನೀಡಲು ರಾಜ್ಯ ಸರಕಾರ ಮುಂದಾಗಬೇಕಿದೆ. ಮಾಸ್ಕ ಧರಿಸೋಣ, ದೈಹಿಕ ಅಂತರ ಕಾಪಾಡುವ ಮೂಲಕ ಕೋವಿಡ್‌ ಚೈನ್‌ ಬ್ರೇಕ್‌ ಮಾಡೋಣ.

Donate Janashakthi Media

Leave a Reply

Your email address will not be published. Required fields are marked *