- ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿದ್ದ ಸಾಮಗರು ಚಿಕಿತ್ಸೆಗೆ ಸ್ಪಂದಿಸದೆ ಬೆಳಗಿನ ಜಾವ 3 ಗಂಟೆಗೆ ನಿಧನ
ಉಡುಪಿ: ಯಕ್ಷಗಾನ ತಾಳಮದ್ದಳೆಯ ಅರ್ಥದಾರಿ ಮಲ್ಪೆ ವಾಸುದೇವ ಸಾಮಗರು (71) ಶನಿವಾರ ನಿಧನರಾದರು. ಮೃತರಿಗೆ ಪತ್ನಿ ಹಾಗೂ ಒಬ್ಬರು ಪುತ್ರ ಇದ್ದಾರೆ.
ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿದ್ದ ಸಾಮಗರು ಚಿಕಿತ್ಸೆಗೆ ಸ್ಪಂದಿಸದೆ ಬೆಳಗಿನ ಜಾವ 3ಗಂಟೆಗೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮಲ್ಪೆ ವಾಸುದೇವ ಸಾಮಗರು ಯಕ್ಷ ದಿಗ್ಗಜರೆರೆನಿಸಿಕೊಂಡಿದ್ದ ಪ್ರಸಿದ್ಧ ಹರಿದಾಸರಾದ ಮಲ್ಪೆ ರಾಮದಾಸ ಸಾಮಗರ ಪುತ್ರರು. ಮಲ್ಪೆ ಶಂಕರ ನಾರಾಯಣ ಸಾಮಗರು ಇವರ ದೊಡ್ಡಪ್ಪ ಹಾಗೂ ಗುರುಗಳು.
ತೆಂಕು ಹಾಗೂ ಬಡಗು ಎರಡೂ ಯಕ್ಷಗಾನ ಪ್ರಕಾರಗಳಲ್ಲಿ ಹಿರಿಯ ಕಲಾವಿದರಾಗಿದ್ದ ವಾಸುದೇವ ಸಾಮಗರು 80 ಪ್ರಸಂಗಗಳ ಪುಸ್ತಕ ರಚಿಸಿದ್ದಾರೆ. ಅವರ ನಿಧನದಿಂದ ಯಕ್ಷಗಾನ ವಿದ್ವತ್ ಪರಂಪರೆಯ ಅಮೂಲ್ಯ ಕೊಂಡಿ ಕಳಚಿದಂತಾಗಿದೆ.
ಧೀಮಂತಿಕೆಯ ಅರ್ಥಧಾರಿ ಸಾಮಗರು ವೇದ, ಉಪನಿಷತ್ತು, ಪುರಾಣ, ಮೀಮಾಂಸೆಗಳ ಬಗ್ಗೆಯೂ ಅಪಾರ ಜ್ಞಾನಹೊಂದಿದ್ದ ಅಪರೂಪದ ಕಲಾವಿದರಾಗಿದ್ದವರು ವಾಸುದೇವ ಸಾಮಗರು. ‘ಸಂಯಮಂ’ ಎಂಬ ತಾಳಮದ್ದಳೆ ತಂಡ ಹುಟ್ಟುಹಾಕಿ ತಾಳಮದ್ದಳೆಗೆ ಹೊಸ ರೂಪ ಹಾಗೂ ಶಿಸ್ತು ತಂದುಕೊಟ್ಟಿದ್ದರು. ಯಕ್ಷಲೋಕ ದಿಗ್ವಿಜಯ ಪ್ರಸಂಗದ ಪ್ರದೀಪನ ಪಾತ್ರ ಸಾಮಗರಿಗೆ ಅತ್ಯಂತ ಪ್ರಸಿದ್ಧಿ ತಂದುಕೊಟ್ಟಿತ್ತು. ಆ ಪಾತ್ರದ ಹೆಸರನ್ನೇ ಮಗನಿಗೆ ಇಟ್ಟಿದ್ದರು. ಮನ್ಮಥ, ಪರಶುರಾಮ, ಈಶ್ವರ, ಶುಕ್ರಚಾರ್ಯ, ಉತ್ತರ ಪಾತ್ರಗಳ ಪ್ರದರ್ಶನವನ್ನು ಯಕ್ಷಲೋಕ ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಅವರ ಅಭಿಮಾನಿಗಳು.
ರಂಗದಲ್ಲಿ ಕಲಾವಿದನ ಅನುಪಸ್ಥಿತಿ ಎದುರಾಗಿ, ಪಾತ್ರವನ್ನು ನಿರ್ವಹಿಸಬೇಕಾಗಿ ಬಂದಾಗ ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದ ಅವರ ಪ್ರಸಂಗಾವಧಾನತೆ ಅದ್ಭುತ. ಹೊಸ ಕಲಾವಿದರಿಗೆ ಪಾತ್ರಗಳ ಬಗ್ಗೆ ತಿಳಿವಳಿಕೆ ಮೂಡಿಸಿ ರಂಗದಲ್ಲಿ ಬೆಳೆಯುವಂತೆ ಪ್ರೋತ್ಸಾಹಿಸುತ್ತಿದ್ದ ಸಹೃದಯಿಯಾಗಿದ್ದರು ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.
ಕೋಟ ಶ್ರೀಧರ ಹಂದೆಯವರ ಅಮೃತೇಶ್ವರಿ ಮೇಳದ ಮೂಲಕ ವೃತ್ತಿರಂಗಕ್ಕೆ ಕಾಲಿಟ್ಟು, ನಾರಣಪ್ಪ ಉಪ್ಪೂರು, ಚಿಟ್ಟಾಣಿಯವರು, ಕೋಟ ವೈಕುಂಠ, ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆಯವರಂತಹ ಘಟಾನುಘಟಿ ಕಲಾವಿದರ ಸಾಂಗತ್ಯ ಬೆಳೆಸಿಕೊಂಡಿದ್ದರು.