ಬೆಂಗಳೂರು; ಭಾರತ ಗುರುವಾರ ಶತಕೋಟಿ ಡೋಸ್ ಕೊರೊನಾ ಲಸಿಕೆ ಪೂರೈಸುವ ಮೂಲಕ ಮಹತ್ತರ ಮೈಲಿಗಲ್ಲು ಸಾಧಿಸಿದೆ. ಭಾರತದಲ್ಲಿ ವಿತರಿಸಲಾಗಿರುವ ಲಸಿಕೆಯ ಪ್ರಮಾಣ ಅಮೆರಿಕಾ ಮತ್ತು ಐರೋಪ್ಯ ರಾಷ್ಟ್ರಗಳ ಒಟ್ಟು ಲಸಿಕೆಗಿಂತ ಹೆಚ್ಚಾಗಿದೆ.
ಈ ನೂರು ಕೋಟಿ ಡೋಸ್‌ಗಳಲ್ಲಿ ಕರ್ನಾಟಕದ ಪಾಲು 6.21 ಕೋಟಿ ಡೋಸ್. ಜನವರಿ 16ರಂದು ಆರಂಭವಾದ ಲಸಿಕಾ ಅಭಿಯಾನ 9 ತಿಂಗಳುಗಳಲ್ಲಿ ಶತಕೋಟಿ ಪೂರೈಸುವ ಮೂಲಕ ವಿಶ್ವದ ಅತ್ಯಂತ ದೊಡ್ಡ ಹಾಗೂ ವೇಗವಾದ ಲಸಿಕಾ ಅಭಿಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದು ನಿಜವೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಬೆಳಕಿನ ಚಿತ್ತಾರ : 100 ಕೋಟಿ ಡೋಸ್‌ಗಳ ಸಾಧನೆ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯಡಿ ಬರುವ ಕರ್ನಾಟಕದ ಹಂಪಿ ಸೇರಿದಂತೆ ದೇಶದ 100 ಪಾರಂಪರಿಕ ತಾಣಗಳಲ್ಲಿ ಗುರುವಾರ ರಾತ್ರಿ ತ್ರಿವರ್ಣ ಧ್ವಜದ ಬಣ್ಣಗಳ ದೀಪಾಲಂಕಾರ ಮಾಡಲಾಗಿತ್ತು.
ತ್ರಿವರ್ಣ ದೀಪಾಲಂಕಾರ ಮಾಡಿದ 100 ಸ್ಮಾರಕಗಳಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಾದ ಕೆಂಪು ಕೋಟೆ, ಹುಮಾಯೂನ್ ಸಮಾಧಿ ಮತ್ತು ದೆಹಲಿಯ ಕುತುಬ್ ಮಿನಾರ್, ಉತ್ತರ ಪ್ರದೇಶದ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿ, ಒಡಿಶಾದ ಕೋನಾರ್ಕ್ ದೇವಾಲಯ, ತಮಿಳುನಾಡಿನ ಮಮಲ್ಲಪುರಂರಥ ದೇವಾಲಯಗಳು, ಗೋವಾದ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್, ಖಜುರಾಹೋ, ರಾಜಸ್ಥಾನದ ಚಿತ್ತೋರ್ ಮತ್ತು ಕುಂಭಲ್ಗಢ್ ಕೋಟೆಗಳು, ಬಿಹಾರದ ಪ್ರಾಚೀನ ನಳಂದ ವಿಶ್ವವಿದ್ಯಾಲಯದ ಉತ್ಖನನ ಅವಶೇಷಗಳಲ್ಲಿ ದೀಪಾಲಂಕಾರ ಮಾಡಲಾಗಿತ್ತು.
ವಾಸ್ತವ ಏನಿದೆ? : ಈವರೆಗೆ ದೇಶದ ಸುಮಾರು ಅರ್ಧದಷ್ಟು ಅರ್ಹ ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್ ಲಸಿಕೆ ಹಾಕಲಾಗಿದೆ. ಶೇಕಡ 20 ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಈ ವರ್ಷಾಂತ್ಯದೊಳಗೆ ಎಲ್ಲ 94.4 ಕೋಟಿ ವಯಸ್ಕರಿಗೆ ಲಸಿಕೆ ಹಾಕುವುದಾಗಿ ಹೇಳಿದೆ. ಇನ್ನೂ ಲಸಿಕೆ ಪೂರ್ಣಗೊಳ್ಳದೆ 100 ಕೋಟಿ ಡೋಸ್ ನೀಡಲಾಗಿದೆ ಎಂಬ ಅಂಕಿ ಅಂಶಗಳನ್ನು ನಂಬಬಹುದೆ ಎಂಬ ಚರ್ಚೆಗಳು ಎದ್ದಿವೆ. 100 ಕೋಟಿ ಡೋಸ್ ಅಂದರೆ 50 ಕೋಟಿ ಜನರಿಗೆ ಎರಡು ಲಸಿಕೆಗಳನ್ನು ಕೊಟ್ಟಿದೆಯಾ? ಸರಕಾರದ ಅಂಕಿ ಅಂಶದ ಪ್ರಕಾರ 47 ಕೋಟಿ ಜನರಿಗೆ ಮೊದಲ ಡೋಸ್, 29 ಕೋಟಿ ಜನರಿಗೆ ಎರಡು ಡೋಸ್ ನೀಡಲಾಗಿದೆ. ಹಾಗಾದರೆ ವಾಸ್ತವ ಯಾವುದು? ಎಂಬ ಪ್ರಶ್ನೆಗಳು ಎದ್ದಿವೆ.
ಖಾಲಿ ತಟ್ಟೆ ಬಡೆಯಲಾಗುತ್ತಿದೆ: ದೇಶದ 139 ಕೋಟಿ ಜನರಲ್ಲಿ 29 ಕೋಟಿ ಜನರಿಗೆ ಮಾತ್ರ ಎರಡು ಡೋಸ್ ಕೊರೊನಾ ಲಸಿಕೆ ನೀಡಿರುವ ನರೇಂದ್ರ ಮೋದಿ ಸರ್ಕಾರ, ಅತ್ಯವಸರದಿಂದ 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ದೇಶದಲ್ಲಿ ಇಲ್ಲಿಯ ವರೆಗೆ 29 ಕೋಟಿ ಜನರಿಗೆ ಎರಡು ಡೋಸ್ ಮತ್ತು 42 ಕೋಟಿ ಜನರಿಗೆ ಒಂದು ಡೋಸ್ ಲಸಿಕೆ ಮಾತ್ರ ನೀಡಲಾಗಿದೆ. 139 ಕೋಟಿ ಜನರಲ್ಲಿ 68 ಕೋಟಿ ಜನರಿಗೆ ಇನ್ನು ಒಂದು ಡೋಸ್ ಲಸಿಕೆ ಕೂಡಾ ನೀಡಿಲ್ಲ. ಯಾವ ಸಾಧನೆಗೆ ಸಂಭ್ರಮಾಚರಣೆ? ಎಂದು ಪ್ರಶ್ನಿಸಿದ್ದಾರೆ.
ಘೋಷಿತ ಗುರಿಯಂತೆ ದೇಶದ 103 ಕೋಟಿ ವಯಸ್ಕರಿಗೆ ಡಿಸೆಂಬರ್ 31ರೊಳಗೆ 2 ಡೋಸ್ ನೀಡಲು 206 ಕೋಟಿ ಲಸಿಕೆ ಬೇಕಾಗಿದೆ. ಕೊಟ್ಟಿರುವುದು 100 ಕೋಟಿ ಮಾತ್ರ.
ಗುರಿ ತಲುಪಲು ಪ್ರತಿದಿನ 1.51 ಕೋಟಿ ಲಸಿಕೆ ನೀಡಬೇಕಾಗಿದೆ ಇದಕ್ಕಾಗಿ ಬೇಕಾಗಿರುವುದು ಸಿದ್ದತೆ, ಖಾಲಿ ತಟ್ಟೆಯ ಪ್ರಚಾರ ಅಲ್ಲ.
ಅಮೆರಿಕ 56%, ಚೀನಾ 70% ಜನಸಂಖ್ಯೆಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಿ ಬೂಸ್ಟರ್ ಲಸಿಕೆ ನೀಡುವ ಸಿದ್ದತೆಯಲ್ಲಿದೆ. ಭಾರತದಲ್ಲಿ ಕೇವಲ 21% ಜನಸಂಖ್ಯೆಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಲಾಗಿದೆ. ಯಾವ ಸಾಧನೆಗೆ ಸಂಭ್ರಮ?
‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ?
ಸುಳ್ಳು ಸಾಧನೆಗಳ ಖಾಲಿ ತಟ್ಟೆ ಬಡಿಯುತ್ತಾ ದೇಶದ ಜನರನ್ನು ಮರುಳು ಮಾಡುತ್ತಾ ಬಂದ ನರೇಂದ್ರ ಮೋದಿ ಅವರೇ? ಮೊದಲು ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಎರಡು ಡೋಸ್ ಲಸಿಕೆ ನೀಡಲು ಗಂಭೀರವಾಗಿ ಸರ್ಕಾರವನ್ನು ತೊಡಗಿಸಿಕೊಳ್ಳಿ.
ಸಾಧನೆಯ ಸಂಭ್ರಮಾಚರಣೆ ಆ ಮೇಲೆ ಮಾಡೋಣ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.