ಬೆಂಗಳೂರು: ಕೋವಿಡ್-19 ನಿಯಂತ್ರಣಕ್ಕೆಂದು ಅನ್‍ಲಾಕ್ 5.0 ಮಾರ್ಗಸೂಚಿಗಳ ಜಾರಿ ಭಾಗವಾಗಿ ರಾಜ್ಯ ಸರ್ಕಾರವು ಬಿಬಿಎಂಪಿಯ ಮಾರ್ಷಲ್‍ಗಳು ಮತ್ತು ಪೋಲಿಸರ ಮೂಲಕ ಮಾಸ್ಕ್ ಧರಿಸದವರಿಗೆ 1,000 ರೂ. /- ದುಬಾರಿ ದಂಡ ವಿಧಿಸಿ ಜನಸಾಮಾನ್ಯರ ಲೂಟಿಗಿಳಿದಿರುವುದನ್ನು ಕೂಡಲೇ ನಿಲ್ಲಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ. ಕೂಡಲೇ ಈ ದುಬಾರಿ ದಂಡದ ಲೂಟಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದೆ.
ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ ಎಂಬುದನ್ನು ಜನತೆಗೆ ಮನವರಿಕೆ ಮಾಡಿಕೊಟ್ಟು ಜನತೆಯು ಸ್ವಯಂಪ್ರೇರಿತವಾಗಿ ಧರಿಸುವಂತೆ ಮಾಡಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗುವ ಬದಲು ಇಂತಹ ದುಬಾರಿ ದಂಡಕ್ಕೆ ಮುಂದಾಗಿರುವುದು ಬಿಜೆಪಿ ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ನೀಡುತ್ತಿರುವ ಕಿರುಕುಳವಾಗಿದೆ ಎಂದು ಸಿಪಿಐ(ಎಂ) ಟೀಕಿಸಿದೆ.
ಈಗಾಗಲೇ ಲಾಕ್ಡೌನ್ ಮತ್ತು ಆರ್ಥಿಕ ಹಿನ್ನೆಡೆಯಿಂದಾಗಿ ಸಂಕಷ್ಟದಲ್ಲಿರುವ ಜನತೆಯ ಮೇಲೆ ಇಂತಹ ದುಬಾರಿ ದಂಡ ಮತ್ತೊಂದು ಹೊರೆಯನ್ನು ಹೊರಿಸಲಿದೆ . ಜನತೆಯಲ್ಲಿ ಸ್ವಯಂಪ್ರೇರಿತ ಅರಿವು ಪ್ರಜ್ಞೆಯನ್ನು ಮೂಡಿಸುವಲ್ಲಿ ವಿಫಲವಾಗಿರುವ ರಾಜ್ಯ ಬಿಜೆಪಿ ಸರ್ಕಾರವು ಜನತೆಯ ಮೇಲೆ ಒಂದರ ನಂತರ ಒಂದರಂತೆ ಒಂದೊಂದೇ ಇಂತಹ ದಬ್ಬಾಳಿಕೆ ಕ್ರಮಗಳನ್ನು ಜಾರಿಮಾಡುತ್ತಿರುವುದು ಬಿಜೆಪಿ ಸರ್ಕಾರಕ್ಕೆ ಜನತೆಯ ಬಗ್ಗೆ ಕಾಳಜಿ ಇಲ್ಲದಿರುವುದನ್ನು ತೋರುತ್ತದೆ ಎಂದು ಸಿಪಿಐಎಂ ನ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿಯಾದ ಕೆ.ಎನ್ ಉಮೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಉಪಕರಣ ಖರೀದಿ, ಕೋವಿಡ್ ಆರೈಕೆ ಕೇಂದ್ರಗಳ ಸ್ಥಾಪನೆ ಮತ್ತು ಕೋವಿಡ್ ಚಿಕಿತ್ಸೆಗೆ ಕೈಗೊಳ್ಳಲಾಗಿರುವ ಕ್ರಮಗಳು ಮತ್ತು ಖರ್ಚುಗಳಲ್ಲಿ ಕೋಟ್ಯಾಂತರ ರೂಗಳ ಭ್ರಷ್ಟಾಚಾರ ಮತ್ತು ಹಗರಣದಲ್ಲಿ ತೊಡಗಿರುವ ಬಿಜೆಪಿಯು ಇಂತಹ ಲೂಟಿಗೆ ಮುಂದಾಗಿದೆ. ಜನತೆಯು ಸಹಾ ಬಿಜೆಪಿ ರಾಜ್ಯ ಸರ್ಕಾರದ ಮೇಲೆ ತಮ್ಮ ಭರವಸೆ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ತಮ್ಮ ಜೀವವನ್ನು ಕಾಪಾಡಿಕೊಳ್ಳಲು ಅಗತ್ಯ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸುವುದು ಮತ್ತು ಅಂತರ ಕಾಪಾಡುವುದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಿಪಿಐ(ಎಂ) ಮನವಿ ಮಾಡಿದೆ.