ಕೋವಿಡ್-19 ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತ ಏಕೆ? ಏನು? ಎಷ್ಟು? ಯಾವಾಗ? ಹೇಗೆ? ಭಾಗ-1 ದೇಹ ರಕ್ಷಣಾ ವ್ಯೂಹ ಮತ್ತು ಲಸಿಕೆಯ ವಿಜ್ಞಾನ

  • ಭಾಗ-1 ದೇಹ ರಕ್ಷಣಾ ವ್ಯೂಹ ಮತ್ತು ಲಸಿಕೆಯ ವಿಜ್ಞಾನ

ಕೋವಿದ್-19 ಲಸಿಕೆ ಮುಂದಿನ ತಿಂಗಳೇ ಲಭ್ಯವಾಗುತ್ತದೆ ಎಂಬುದು ಸುದ್ದಿಯಲ್ಲಿದೆ. ಕೋವಿದ್-19 ಕುರಿತು ವಾಸ್ತವಕ್ಕೆ ದೂರವಾದ ಅತಿರಂಜಿತ ನಿಲುವುಗಳನ್ನು ತಾಳಿರುವ ಸರಕಾರ ಮತ್ತು ಮಾಧ್ಯಮಗಳು ಲಸಿಕೆ  ಕುರಿತು ಸಹ ಎಲ್ಲ ಸಮಸ್ಯೆಗಳು ಪರಿಹಾರವಾದವು ಎಂಬಂತೆ ವರ್ತಿಸುತ್ತಿವೆ. ಆದರೆ ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತವೇ ಇದೆ. ಈ ಕುರಿತು ವಾಸ್ತವವನ್ನು ವಿಶ್ಲೇಷಿಸುವ ಲೇಖನ ಸರಣಿ ಇದು. ಲಸಿಕೆ ಎಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ ? ಕೋವಿಡ್ ಲಸಿಕಾ ಕಾರ್ಯಕ್ರಮದ ಸಮಸ್ಯೆಗಳೇನು? ಲಸಿಕೆ ಅಭಿವೃದ್ಧಿಯ ಈಗಿನ ಪರಿಸ್ಥಿತಿ ಏನು? ಭಾರತಕ್ಕೆ ಲಸಿಕೆಯ ಒಟ್ಟು ಅಗತ್ಯ ಎಷ್ಟು? ಲಸಿಕೆಯ ವೆಚ್ಚ ಎಷ್ಟು, ಸಾಗಾಣಿಕೆ ಹೇಗೆ? ಲಸಿಕೆ ಆದ್ಯತೆಯ ಸರಣಿ ಹೇಗಿರಬೇಕು? ಲಸಿಕೆಯನ್ನು ಆದ್ಯತೆಯ ಪ್ರಕಾರ ಹೇಗೆ ತಲುಪಿಸುವುದು? ಲಸಿಕೆ ಕಾರ್ಯಕ್ರಮಕ್ಕೆ ಎಷ್ಟು ಸಿಬ್ಬಂದಿ, ಮೂಲಸೌಕರ್ಯ ಬೇಕು? ಅದನ್ನು ಹೊಂದಿಸುವುದು ಹೇಗೆ? ಈ ಪ್ರಶ್ನೆಗಳಿಗೆ ವಾಸ್ತವ ನೆಲೆಯಲ್ಲಿ ಉತ್ತರ ಕೊಡುವ ಪ್ರಯತ್ನವಿದು. ಹಿಂದಿನ ಹಲವಾರು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನುಭವವಿರುವ, ಆ ದೃಷ್ಟಿಯಿಂದ ಕೋವಿದ್-19 ಲಸಿಕಾ ಕಾರ್ಯಕ್ರಮದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಡಾ| ಕೆ. ಸುಶೀಲಾ ಅವರು ಇದನ್ನು ಬರೆದಿದ್ದಾರೆ. ಈ ಭಾಗ-1 ರಲ್ಲಿ ದೇಹ ರಕ್ಷಣಾ ವ್ಯವಸ್ಥೆಯ ಕುರಿತು ತಿಳಿಸಿ, ಅದರ ಆಧಾರದ ಮೇಲೆ ಲಸಿಕೆಯ ವಿಜ್ಞಾನವನ್ನು ವಿವರಿಸುತ್ತಾರೆ.

– ಡಾ| ಕೆ. ಸುಶೀಲಾ

ಬಹಳಷ್ಟು ಕಾಲದಿಂದ ಈ ಪ್ರಪಂಚದಲ್ಲಿ ನೆಲೆಸಿದ್ದ ಕೊರೊನಾ ವೈರಸ್‌ನಿಂದ ಉದ್ಭವಿಸಿದ ಸಾರ್ಸ್-ಕೊವ್-2 ಎನ್ನುವ ಹೊಸತಳಿ ಮನುಷ್ಯರಲ್ಲಿ ಪ್ರಥಮ ಬಾರಿಗೆ ಕೋವಿಡ್-19 ಎನ್ನುವ ಕಾಯಿಲೆಯನ್ನು ಉಂಟು ಮಾಡಿ ಈಗಷ್ಟೆ ಒಂದು ವರ್ಷ ಸಂದಿದೆ. ಅತ್ಯಲ್ಪ ಕಾಲದಲ್ಲೇ, ಯಾವುದೇ ಪಾಸ್‌ಪೋರ್ಟ್, ವೀಸಾಗಳ ಹಂಗಿಲ್ಲದೆ ಪ್ರಪಂಚದ ದೇಶಗಳನ್ನೆಲ್ಲಾ ಪ್ರವೇಶಿಸಿ, ಅತೀ ಶೀಘ್ರವಾಗಿ ಅಲ್ಲಿನ ಜನರಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೋಂಕುಂಟು ಮಾಡಿ, ತಳವೂರುವುದರಲ್ಲಿ ಈ ವೈರಸ್ ಸಫಲವಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅತೀ ಕನಿಷ್ಟ ಮತ್ತು ಅರಾಜಕತೆ, ಬಡತನ, ಜನಸಾಂದ್ರತೆ ಅತೀ ಗರಿಷ್ಟ ಮಟ್ಟದಲ್ಲಿರುವ ದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ಸಾವು-ನೋವನ್ನುಂಟು ಮಾಡಿದೆ.

ಈ ಮಹಾಸೋಂಕಿನಿಂದ ಪಾರಾಗುವ ಬಗೆ ಹೇಗೆ?

  1. 1. ಈ ಕಾಯಿಲೆಯನ್ನು ಗುಣಪಡಿಸಲು ಸಮರ್ಥವಾಗಿರುವ ಔಷಧದ ಬಳಕೆಯಿಂದ ಇದು ಸಾಧ್ಯ. ಆದರೆ ಈ ತನಕ ಇಂತಹ ಔಷಧದ ಅವಿಷ್ಕಾರವಾಗಿಲ್ಲ. ಮಾತ್ರವಲ್ಲ ಶೀಘ್ರದಲ್ಲಿ ಅವಿಷ್ಕಾರವಾಗುವ ಲಕ್ಷಣಗಳು ಕಾಣುತ್ತಿಲ್ಲ.
  2. 2. ಕಾಯಿಲೆ ಬಾರದಂತೆ ತಡೆಗಟ್ಟುವ ಕ್ರಮಗಳ ಉಪಯೋಗ.

ಮಾಸ್ಕ್ ಧಾರಣೆ, ದೈಹಿಕ ಅಂತರ ಕಾಪಾಡುವಿಕೆ, ಪದೇ ಪದೇ ಸಾಬೂನಿಂದ ಕೈತೊಳೆಯುವುದು ಈ ಮಹಾಸೋಂಕು ಹಬ್ಬುವುದನ್ನು ತಡೆಗಟ್ಟುವಲ್ಲಿ ಅತ್ಯಂತ ಫಲಕಾರಿಯಾದ ವಿಧಾನಗಳು. ಸಲಹೆ ನೀಡುವಾಗ ಅತೀ ಸುಲಭ, ಸರಳ ಎನ್ನಿಸುವ ಇವುಗಳನ್ನು ಕಾರ್ಯರೂಪಕ್ಕೆ ತರುವುದು ಎಷ್ಟು ಕಠಿಣವೆಂದು ಈಗಾಗಲೇ ಸಾಬೀತಾಗಿದೆ.

ಈ ಮಹಾಸೋಂಕಿನಿಂದ ಪಾರಾಗಲು ಉಳಿದ ಮಾರ್ಗವೆಂದರೆ ವೈರಸ್‌ನ ಸೋಂಕು ತಡೆಗಟ್ಟಲು ಪ್ರಬಲವಾದ ಲಸಿಕೆಯ ಬಳಕೆ.

ದೇಹ ರಕ್ಷಣಾವ್ಯೂಹ

 

ಲಸಿಕೆ (ವ್ಯಾಕ್ಸಿನ್) ಎಂದರೆ ಏನು? ಇದು ಸೋಂಕನ್ನು ತಡೆಗಟ್ಟಲು ಹೇಗೆ ಕಾರ್ಯಪ್ರವೃತ್ತವಾಗುತ್ತದೆ ಎಂದು ತಿಳಿಯಲು ದೇಹಕ್ಕೆ ಪ್ರಕೃತಿ ನೀಡಿದ ಪ್ರಬಲವಾದ, ಅತ್ಯದ್ಭುತವಾಗಿ ಕಾರ್ಯ ನಿರ್ವಹಿಸುವ ದೇಹ ರಕ್ಷಣಾವ್ಯೂದ ಸಂಕ್ಷಿಪ್ತ ಪರಿಚಯ ಸೂಕ್ತ.

ನಮ್ಮ ದೇಹದ ಮೂಳೆಯೊಳಗಿರುವ ಅಸ್ಥಿಮಜ್ಜೆಯಲ್ಲಿ ಉತ್ಪತ್ತಿಯಾಗುವ ವಿವಿಧ ಜಾತಿಯ ರಕ್ತಕಣಗಳಲ್ಲಿ ಒಂದಾದ ಲಿಂಫ್ ಬಿಳಿ ರಕ್ತ ಕಣಗಳು ಈ ರಕ್ಷಣೆಯಲ್ಲಿ ದಹಿಸುವ ಪಾತ್ರ ಅತ್ಯಂತ ಮಹತ್ವಪೂರ್ಣವಾದದ್ದು.

ಈ ಪ್ರಪಂಚದಲ್ಲಿರುವ ಎಲ್ಲಾ ಸಜೀವ, ನಿರ್ಜೀವ ಕಣಗಳು ತಮ್ಮ ಜಾತಿಗೆ ವಿಶಿಷ್ಟವಾದ, ನಿಖರವಾದ, ಗುರುತು ಚಿಹ್ನೆಯನ್ನು ಹೊಂದಿರುತ್ತವೆ. ಇದನ್ನು ‘ಆಂಟಿಜನ್ ಎಂದು ಕರೆಯಲಾಗುತ್ತದೆ. ಉದಾರಣೆಗೆ ಪ್ರತೀ ಮಾನವ ಶರೀರದ ಎಲ್ಲಾ ಕಣಗಳು ಆ ದೇಹಕ್ಕೆ ವಿಶಿಷ್ಟವಾದ ‘ಆಂಟಿಜೆನ್ನ್ನು ಹೊಂದಿರುತ್ತದೆ.

ಯಾವುದೇ ಪರಕಣ ದೇಹವೊಂದನ್ನು ಪ್ರವೇಶಿಸಿದಾಗ ಅದು ಸ್ನೇಹಿತ, ನಿರುಪದ್ರವಿ ಅಥವಾ ವೈರಿ ಕಣವೇ ಎನ್ನುವುದನ್ನು ಅವುಗಳ ‘ಆಂಟಿಜನ್ಗು’ ರುತಿಸುವುದರಿಂದಾಗಿ ಪತ್ತೆ ಹಚ್ಚುವ ತರಬೇತಿಯನ್ನು ದೇಹ ತನ್ನಲ್ಲಿ ಉತ್ಪತ್ತಿಯಾಗುವ ಎಲ್ಲಾ ಲಿಂಫ್‌ಕಣಗಳಿಗೂ ನೀಡಿರುತ್ತದೆ. ಶತ್ರುಕಣ ಒಳ ಪ್ರವೇಶಿಸಿದೆ ಎಂದು ತಿಳಿದಾಗ, ವಿಶೇಷ ತರಬೇತಿ ಪಡೆದ ‘ಟಿ ಲಿಂಫ್‌ಕಣಗಳು ಶತ್ರು ಕಣವನ್ನು ಕರಾರುವಾಕ್ಕಾಗಿ ಗುರುತಿಸಿ, ವಿಭಜನೆಗೊಳ್ಳುತ್ತಾ ಹೆಚ್ಚಳಗೊಂಡು ಕಾರ್ಯ ಪ್ರವೃತ್ತವಾಗುತ್ತವೆ. ಈ ವಿಶಿಷ್ಟ ‘ಆಂಟಿಜನ್ಗಳಿರುವ ಶತ್ರುಕಣಗಳ ನಾಶಕ್ಕೆ ಸೂಕ್ತವಾದ ‘ಆಂಟಿಬೋಡಿ ಗಳನ್ನು ತಯಾರಿಸುವ ವಿಶೇಷ ತರಬೇತಿ ಪಡೆದ ‘ಬಿ ಲಿಂಫ್‌ಕಣಗಳನ್ನು ಹುಡುಕಿ ಕೂಡಲೇ ಕಾರ್ಯಪ್ರವೃತ್ತವಾಗುವಂತೆ ಆದೇಶ ನೀಡುತ್ತವೆ. ಆದೇಶ ಪಡೆದ ‘ಬಿ ಲಿಂಫ್‌ಕಣಗಳ ಗುಂಪು ಶೀಘ್ರವಾಗಿ ವೃದ್ಧಿಗೊಳುತ್ತವೆ. ಹೀಗೆ ವೃದ್ಧಿಗೊಂಡ ‘ಟಿ ಮತ್ತು ‘ಬಿ ಕಣಗಳನ್ನು ‘ಎಫೆಕ್ಟರ್ ಕಣಗಳೆಂದು ಕರೆಯುತ್ತಾರೆ. ತಮ್ಮ ಸಂಖ್ಯೆಯಲ್ಲಿ ಅಭಿವೃದ್ಧಿಗೊಳ್ಳುತ್ತಾ  ಇವು ‘ಆಂಟಿಬೊಡಿಗಳ ತಯಾರಿಕೆಯಲ್ಲಿ ತೊಡಗುತ್ತವೆ. ಹಾಗೂ ಶತ್ರು ಕಣಗಳು ನಾಶಗೊಂಡಾಗ ಈ ‘ಬಿ ಮತ್ತು ‘ಟಿ ಎಫೆಕ್ಟರ್ ಕಣದ ಗುಂಪಿನಲ್ಲಿ ಅಲ್ಪ ಪ್ರಮಾಣದ ಕಣಗಳು ಉಳಿದು, ಇತರೆಲ್ಲಾ ಕಣಗಳು ನಾಶಹೊಂದುತ್ತವೆ. ಹೀಗೆ ಉಳಿದ ‘ಟಿ ಮತ್ತು ಬಿ ಎಫೆಕ್ಟರ್ ಕಣಗಳೇ ನೆನಪಿನ ಕಣಗಳು. ಮತ್ತು ಈ ಕ್ರಿಯೆಗೆ ದೇಹದ ಮೊದಲ ಸುತ್ತಿನ ರಕ್ಷಣಾ ಕ್ರಿಯೆ ಎಂದು ಕರೆಯಲಾಗುತ್ತದೆ. ಆದರೆ ಈ ಕ್ರಿಯೆಗೆ ಬೇಕಾಗುವ ಸಮಯಾವಕಾಶ ಹೆಚ್ಚಾಗಿರುವುದರಿಂದ ‘ಆಂಟಿಬೋಡಿಯ ಪ್ರಮಾಣ ಗರಿಷ್ಠ ಮುಟ್ಟಲು ಹೆಚ್ಚಿನ ಸಮಯದ ಅವಶ್ಯಕತೆ ಇದೆ. ಆ ಸಾಂದ್ರತೆಯ ಮಟ್ಟ ರಕ್ತದಲ್ಲಿ ಉಳಿಯುವ ಕಾಲಾವಕಾಶ ಕೂಡ ಕಡಿಮೆ ಹಾಗೂ ಈ ಮಟ್ಟ ಕುಸಿಯುವುದೂ ಶೀಘ್ರವಾದರೂ ಹಲವು ಕಾಯಿಲೆಗಳಲ್ಲಿ ಇದು ಸಂಪೂರ್ಣ ಮಾಯವಾಗದು. ಮತ್ತು ಈ ಕ್ರಿಯೆಯ ಗುಣಮಟ್ಟ ವೈರಿಕಣದಲ್ಲಿರುವ ಆಂಟಿಜನ್‌ನ ಗುಣಲಕ್ಷಣ ಮತ್ತು ದಾಳಿಗೊಳಗಾದ ದೇಹದ ರಕ್ಷಣ ವ್ಯವಸ್ಥೆಯ ಸಾಮರ್ಥ್ಯವನ್ನು ಹೊಂದಿಕೊಂಡಿದೆ. ದೇಹದ ಎರಡನೆಯ ಸುತ್ತಿನ ರಕ್ಷಣಾ ಪ್ರಕ್ರಿಯೆ ಹೇಗೆ?

ಮುಂದೊಮ್ಮೆ ಅದೇ ಶತ್ರು ಕಣ ಅದೇ ದೇಹದ ಮೇಲೆ ದಾಳಿ ಮಾಡಿದರೆ ಮೊದಲಿನ ದಾಳಿಯಲ್ಲಿ ಉತ್ಪತ್ತಿಯಾಗಿ ಕಾದಿಟ್ಟ ನೆನಪಿನ ‘ಬಿ ಮತ್ತು ‘ಟಿ ಕಣಗಳು ಈ ದಾಳಿಯನ್ನು ಹಿಮ್ಮೆಟ್ಟಿಸಲು ಕೂಡಲೇ ಕಾರ್ಯಪ್ರವೃತ್ತವಾಗುತ್ತವೆ. ಪ್ರಥಮ ದಾಳಿಯಲ್ಲಿ ಉತ್ಪತ್ತಿಯಾಗಿ ಉಳಿದ ‘ಆಂಟಿ ಬೋಡಿಗಳು ಈ ಕಾರ್ಯದಲ್ಲಿ ಸಹಾಯಕಾರಿಯಾಗಿರುತ್ತವೆ. ಇಲ್ಲಿ ‘ಆಂಟಿ ಬೋಡಿಗಳು ಅತೀ ಶೀಘ್ರವಾಗಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗಿ, ಶೀಘ್ರದಲ್ಲಿ ಗರಿಷ್ಠಮಟ್ಟ ತಲಪಿ, ಹೆಚ್ಚು ಕಾಲ ಆ ಮಟ್ಟದಲ್ಲಿ ಉಳಿಯುವುದರಿಂದ ದಾಳಿಗೊಳಗಾದ ದೇಹದಲ್ಲಿ ರೋಗವನ್ನುಂಟು ಮಾಡಲು ರೋಗಾಣು ವಿಫಲವಾಗುವುದು. ಹಾಗೂ ಇಲ್ಲಿ ‘ನೆನಪಿನ ಕಣಗಳು ಹೆಚ್ಚು ಸಮರ್ಥವಾಗಿರುವವು.

ಹೀಗೆ ‘ಆಂಟಿ ಬೋಡಿ’ಗಳನ್ನು ತಯಾರಿಸಿ ದೇಹ ರಕ್ಷಿಸುವ ಪ್ರಕ್ರಿಯೆಗೆ ‘ಹ್ಯೂಮರಲ್ ಪ್ರಕ್ರಿಯೆ ಎನ್ನುತ್ತಾರೆ. ಕೆಲವು ವಿಶಿಷ್ಟ ವೈರಿ ಕಣಗಳೊಂದಿಗೆ ನೇರ ಹೋರಾಟಕ್ಕಿಳಿದು ಅವುಗಳನ್ನು ನಾಶಗೊಳಿಸುವ ತರಬೇತಿ ಪಡೆದ ‘ಟಿಸಿ ಹಾಗೂ ‘ಎನ್.ಕೆ. ಕಣಗಳು ಭಾಗವಹಿಸುವ ಪ್ರಕ್ರಿಯೆಗೆ ಕಣ ರಕ್ಷಣಾ ಪ್ರಕ್ರಿಯೆ ಎನ್ನುತ್ತಾರೆ. ಈ ಕ್ರಿಯೆಯಲ್ಲಿ ವಿಭಜನೆಗೊಂಡು ‘ಎಫೆಕ್ಟರ್ ಕಣಗಳಾಗಿ ಮಾಡಲ್ಪಟ್ಟ ಕಣಗಳಲ್ಲಿ ಕೆಲವು ತಮ್ಮ ಕಾರ್ಯ ಮುಗಿದ ನಂತರ ‘ನೆನಪಿನ ಕಣಗಳಾಗಿ ಉಳಿಯುತ್ತವೆ.

ಲಸಿಕೆ ಎಂದರೇನು? ಹೇಗೆ ಕೆಲಸ ಮಾಡುತ್ತದೆ ?

 

ದೇಹರಕ್ಷಣಾ ವ್ಯೂಹ ಕಾರಾಣಾಂತರದಿಂದ ನಿಶ್ಶಕ್ತವಾಗಿದ್ದರೆ ಅಥವಾ ರೋಗಾಣು ಬಲಿಷ್ಠವಾಗಿದ್ದು, ಅತ್ಯಧಿಕ ಸಂಖ್ಯೆಯಲ್ಲಿ ದೇಹದ ಮೇಲೆ ದಾಳಿ ಇಟ್ಟರೆ, ಅಥವಾ ಅತ್ಯಂತ ಹೊಸದಾಗಿದ್ದರೆ ಆಗ ದೇಹ

ಲಸಿಕೆ ಹೇಗೆ ಕೆಲಸ ಮಾಡುತ್ತದೆ ?

ರೋಗಾಣುಗಳ ವಿರುದ್ಧದ ಹೋರಾಟದಲ್ಲಿ ಸೋಲಬಹುದು. ಇದು ದೇಹಕ್ಕೆ ಅಪಾರ ಯಾತನೆಯನ್ನುಂಟು ಮಾಡಬಹುದು. ಹಲವು ಬಾರಿ ಸಾವು ಸಂಭವಿಸಬಹುದು. ಇದರಿಂದ ದೇಹವನ್ನು ರಕ್ಷಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಎದ್ದಿತ್ತು. ಆಗ ವಿಜ್ಞಾನಿಗಳು ಕಂಡುಕೊಂಡ ಉತ್ತರ ‘ಲಸಿಕೆಯ ಉಪಯೋಗ.

ಅತ್ಯಂತ ನಿಶ್ಶಕ್ತಗೊಳಿಸಿದ ಹಾಗೂ ಕೊಂದ ರೋಗಾಣುಗಳನ್ನು, ರೋಗಾಣುವಿನ ಜಾತಿಯ ಬೇರೆ ತಳಿಗೆ ಸೇರಿದ ಆದರೆ ರೋಗಾಣುವಿನದ್ದೇ ಆಂಟಿಜನ್ ಹೊಂದಿದ ಆದರೆ ಮಾನವರಿಗೆ ನಿರುಪದ್ರವಿಯಾದ ಅಥವಾ ಕನಿಷ್ಠ ಅಪಾಯಕಾರಿಯಾದ ಸೂಕ್ಷ್ಮಾಣುಗಳನ್ನು ಹಾಗೂ ರೋಗಿಯ ಶರೀರದಿಂದ ಪ್ರತ್ಯೇಕಿಸಿ ವಿಷಮುಕ್ತಗೊಳಿಸಿದ ರೋಗಾಣುವಿನ ವಿಷಪೂರಿತ ರಾಸಾಯನಿಕವನ್ನು ಲಸಿಕೆಯಲ್ಲಿ ತಯಾರಿಕೆಯ ಉಪಯೋಗಿಸುತ್ತಾರೆ. ಈ ನಿರುಪದ್ರವಿ ಲಸಿಕೆಯನ್ನು ನಿರ್ದಿಷ್ಟ ಪ್ರಮಾಣದಲ್ಲಿ, ದೇಹಕ್ಕೆ ನೀಡಿದಾಗ, ದೇಹರಕ್ಷಣಾ ವ್ಯೂಹ ಇವುಗಳ ಆಂಟಿಜನ್ ಗುರುತಿಸುವ ಮೂಲಕ ಇವು ಶತ್ರು ಕಣಗಳೆಂದು ತಿಳಿದು, ದೇಹರಕ್ಷಣೆಗಾಗಿ ಹೋರಾಟ ನಡೆಸುವುವು. ಈ ಪ್ರಕ್ರಿಯೆಯಲ್ಲಿ ತಯಾರಾದ ನೆನಪಿನ ಕಣಗಳು, ಆಂಟಿಬೋಡಿಗಳು ಮುಂದೊಮ್ಮೆ ಅದೇ ಆಂಟಿಜನ್‌ಗಳನ್ನು ಹೊಂದಿದ ರೋಗಾಣುಗಳಿಂದ ದೇಹ ಪ್ರಬಲ ದಾಳಿಗೊಳಗಾದ ದೇಹವನ್ನು ಕಾಯಿಲೆಯಿಂದ ಕ್ಷಿಪ್ರಗತಿಯಲ್ಲಿ ರಕ್ಷಿಸುವಲ್ಲಿ ಸಫಲವಾಗುವುವು.

ಕೋವಿಡ್-19 ಲಸಿಕಾ ಕಾರ್ಯಕ್ರಮದ ಸಮಸ್ಯೆಗಳು

ಭಾರತದಲ್ಲಿ ಕೋವಿಡ್-19 ತಡೆಗಟ್ಟುವ ಲಸಿಕಾ ಕಾರ್ಯಕ್ರಮ ಹಾಗೂ ಅದರ ಅನುಷ್ಟಾನದಲ್ಲಿ ಎದುರಿಸಬೇಕಾದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಷಯಗಳು.

  • ಲಭ್ಯತೆ: ಕೊವಿಡ್-19 ಕಾಯಿಲೆ ತಡೆಗಟ್ಟುವ ಸಾಮರ್ಥ್ಯ ಪ್ರತಿಶತ ೫೦ಕ್ಕೂ ಹೆಚ್ಚಿರುವ ಲಸಿಕೆಯ ಅಗತ್ಯದ ಪ್ರಮಾಣದಲ್ಲಿ ಪೂರೈಕೆ.
  • ಹೀಗೆ ದೊರೆತ ಲಸಿಕೆಯನ್ನು ಹಾಳಾಗದಂತೆ ಕಾಪಾಡುತ್ತಾ ದೇಶದ ವಿವಿಧೆಡೆಗೆ ಸಾಗಿಸುವ ಸೌಲಭ್ಯ.
  • ಲಸಿಕೆ ಹಾಳಾಗದಂತೆ ಕಾದಿಡುವ ಕೇಂದ್ರಗಳ ಸೌಕರ್ಯ.
  • ಲಸಿಕೆ ಜನಸಾಮಾನ್ಯರೆಲ್ಲರಿಗೂ ತಲುಪಿಸುವ ಕಾರ್ಯ.
  • ಈ ಎಲ್ಲಾ ಕಾರ್ಯಕ್ಕೆ ಬೇಕಾದ ತರಬೇತಿ ಪಡೆದ ಸಿಬ್ಬಂದಿಗಳ ಪಡೆ.
  • ಹಾಗೂ ಈ ಎಲ್ಲಾ ಕಾರ್ಯಕ್ಕೆ ಬೇಕಿದ ಸರ್ವಸಲಕರಣೆಗಳು.

ಯಾವುದೇ ರೋಗವನ್ನು ತಡೆಗಟ್ಟುವ ಲಸಿಕೆಯ ಅವಿಷ್ಕಾರವಾದಾಗ ಅದನ್ನು ತಯಾರಿಸಿ, ಅದರ ಅಗತ್ಯವಿರುವ ಜನರಿಗೆ ಒದಗಿಸಲು ಸಾಮಾನ್ಯವಾಗಿ 5ರಿಂದ 10 ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಏಕೆಂದರೆ ಇದರ ರೋಗ ತಡೆಗಟ್ಟುವ ಸಾಮರ್ಥ್ಯದ ಪ್ರಮಾಣವನ್ನು ಹಲವು ಹಂತಗಳಲ್ಲಿ ಕೂಲಂಕುಷವಾಗಿ ಪರೀಕ್ಷಿಸುವುದು ಅಗತ್ಯ. ಪ್ರತ್ಯಕ್ಷವಾದ ಅಲ್ಪ ಕಾಲದಲ್ಲೇ ಪ್ರಪಂಚವನ್ನೆಲ್ಲಾ ಆವರಿಸಿ, ಜನರಿಗೆ ವೈಯುಕ್ತಿಕ, ಸಾಮಾಜಿಕ, ಆರ್ಥಿಕ ಸಂಕಷ್ಟವನ್ನೊಡ್ಡಿ, ದೇಶ ದೇಶಗಳ ಆರ್ಥಿಕ ಬುನಾದಿಯನ್ನೇ ಅಲುಗಾಡಿಸುತ್ತಿರುವ ಕೋವಿಡ್-19 ತಡೆಗಟ್ಟುವ ಲಸಿಕೆಗಾಗಿ ಅಷ್ಟು ದೀರ್ಘ ಕಾಲ ಕಾಯುವುದು ದುಸ್ತರವಾಗಿತ್ತು. ಹೀಗಾಗಿ ಹತ್ತು ಹಲವು ದೇಶಗಳಲ್ಲಿ ಹಲವಾರು ಔಷಧಿಯ ಕಂಪೆನಿಗಳು, ಈ ಕ್ಷೇತ್ರದಲ್ಲಿ ಪರಿಣತಿ ಇರುವ ವಿಜ್ಞಾನಿಗಳ ಸಹಕಾರದೊಂದಿಗೆ ಹೊಸ ಹೊಸ ತಂತ್ರಜ್ಞಾನವನ್ನು ಉಪಯೋಗಿಸುತ್ತಾ ಸಮರೋಪಾದಿಯಲ್ಲಿ ಲಸಿಕೆಯ ತಯಾರಿಕೆಗೆ ತೊಡಗಿದವು.

 

 

 

Donate Janashakthi Media

Leave a Reply

Your email address will not be published. Required fields are marked *