ಕೊವೀಡ್ -19 ಎರಡನೇ ಅಲೆಗೆ ‘ಸರಕಾರದ ನಿದ್ದೆ’ ಕಾರಣವಾಯ್ತಾ?

ದೇಶದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿದ್ದು, ಕೋವಿಡ್​ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ ಹರಸಾಹಸ ನಡೆಸುತ್ತಿದೆ. ಲಸಿಕೆ ಕಂಡು ಹಿಡದ ಮೇಲೂ ಸೋಂಕಿತರ ಪ್ರಮಾಣ ಯಾಕೆ ಹೆಚ್ಚಾಗುತ್ತಿದೆ? ಕೊರೊನಾ ಎರಡನೇ ಅಲೆ ಹೆಚ್ಚಾಗಲು ಸರಕಾರದ ನಿದ್ಧೆ ಕಾರಣವಾಯ್ತಾ? ವೈಫಲ್ಯವನ್ನು ಮರೆಮಾಚುವುದಕ್ಕಾಗಿ ವ್ಯಾಕ್ಸಿನ್ ಉತ್ಸವ ಎಂಬ ಟೂಲ್‌ ಕಿಟ್ಟ ಅಸ್ತ್ರಕ್ಕೆ ಮುಂದಾದ್ರಾ ಪ್ರಧಾನಿ ಮೋದಿ?..

ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ದಾಖಲೆಯ ಏರಿಕೆ ಕಂಡಿದ್ದು, ಈ ತಿಂಗಳಲ್ಲಿ 4ನೇ ಬಾರಿ 1 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ಮೊದಲ ಅಲೆಗಿಂತ 2ನೇ ಅಲೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಳೆದ 24 ಗಂಟೆಗಳಲ್ಲಿ  1,31, 968  ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗಿನ ಗರಿಷ್ಠ ದಾಖಲೆಯಾಗಿದೆ. ಇಂದು ಮಧ್ಯಾಹ್ನದ ವರೆಗೆ ಲಭ್ಯವಾಗಿರುವ ಅಂಕಿಅಂಶದ ಪ್ರಕಾರ  ಕಳೆದ 24 ಘಂಟೆಯಲ್ಲಿ  780 ಮಂದಿ ದೇಶದಲ್ಲಿ ಸಾವನ್ನಪ್ಪಿದ್ದಾರೆ.

ಹೊಸದಾಗಿ ದಾಖಲಾಗಿರುವ ಸೋಂಕಿನೊಂದಿಗೆ ದೇಶದಲ್ಲಿ ಈವರೆಗೆ ಸೋಂಕಿತರ ಪ್ರಮಾಣ 1 ಕೋಟಿ, 30 ಲಕ್ಷದ, 60 ಸಾವಿರದ 542 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಇದುವರೆಗೆ 1 ಕೋಟಿ, 19 ಲಕ್ಷದ, 13 ಸಾವಿರದ 929  ಮಂದಿ ಗುಣಮುಖರಾಗಿದ್ದಾರೆ.  1 ಲಕ್ಷದ 67 ಸಾವಿರದ 642 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಛತ್ತೀಸ್ ಗಢ, ಚಂಡೀಘಡ, ಕೇರಳ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ತಾನ ಸೇರಿದಂತೆ, ವಿವಿಧ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಫೆಬ್ರವರಿಯಲ್ಲಿ ಸೋಂಕಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.  1, 25 ರಷ್ಟಿತ್ತು. ಎಪ್ರಿಲ್‌ ಮೊದಲ ವಾರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 7. 04ಕ್ಕೆ ಏರಿಕೆಯಾಗಿದೆ.

ಹೆಚ್ಚುತ್ತಿರುವು ಸೋಂಕಿನ ಪ್ರಕರಣಗಳನ್ನು ತಡೆಯುವುದು  ಏನ್‌ ಮಾಡಬೇಕು ಅಂತಾ ಪ್ರಧಾನಿ ಮೋದಿಯವರು ನಿನ್ನೆ ಸಂಜೆ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾಧವನ್ನು ನಡೆಸಿದರು. ಸುದೀರ್ಘವಾಗಿ ಚರ್ಚೆ ನಡೆಸಿದ ಪ್ರಧಾನಿಗಳು  ಏಪ್ರಿಲ್ 11ರಿಂದ 14ರವರೆಗೆ ದೇಶದಲ್ಲಿ ವ್ಯಾಕ್ಸಿನ್ ಉತ್ಸವಕ್ಕೆ ಕರೆ ನೀಡಿದ್ದಾರೆ. ವ್ಯಾಕ್ಸಿನ್ ಮೂಲಕ ಹೆಚ್ಚಿನ ಜನರಿಗೆ ಲಸಿಕೆ ಹಾಕಿಸಬೇಕು, 45ವರ್ಷಕ್ಕೂ ಮೇಲ್ಪಟ್ಟವರಿಗೆ ತ್ವರಿತಗತಿಯಲ್ಲಿ ವ್ಯವಸ್ಥೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಕೋವಿಡ್-19 ಪರೀಕ್ಷೆಯನ್ನು ಹೆಚ್ಚಿಸಬೇಕಾಗಿದೆ. ಶೇ.70 ರಷ್ಟು ಆರ್ ಟಿ- ಪಿಸಿಆರ್ ಪರೀಕ್ಷೆ ಮಾಡಬೇಕಾಗಿದೆ. ಪರೀಕ್ಷೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿದಾಗ ಪಾಸಿಟಿವ್ ಕೇಸ್ ಗಳು ಅಧಿಕ ಸಂಖ್ಯೆಯಲ್ಲಿ ಬರುತ್ತವೆ. ಸೂಕ್ತ ಮಾದರಿಗಳ ಸಂಗ್ರಹ ಅತ್ಯಂತ ಪ್ರಮುಖವಾಗಿದೆ. ಸೂಕ್ತ ಆಡಳಿತದ ಮೂಲಕ ಇದನ್ನು ಪರಿಶೀಲಿಸಬೇಕಾಗಿದೆ ಎಂದು ಮೋದಿಯವರು ತಿಳಿಸಿದ್ದಾರೆ.

ಇದನ್ನು ಓದಿ : ರಫೇಲ್‌ ಹಗರಣ : ಕೇಂದ್ರ ಸರಕಾರದ ಮೇಲೆ ತೂಗುಕತ್ತಿ

ಪ್ರಧಾನಿ ಮೋದಿ ಭಾಷಣದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಪತ್ರಿಕಾಗೋಷ್ಟಿಯನ್ನು ನಡೆಸಿ ಏಪ್ರಿಲ್ 10 ರಿಂದ 20 ರವರೆಗೆ ಕೆಲವು ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.  ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಾರ್, ಪಬ್, ರೆಸ್ಟೋರೆಂಟ್ ಗಳು ಬಂದ್ ಆಗಲಿವೆ. ರಾಜ್ಯದ ಕೆಲವು ಜಿಲ್ಲೆಗಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತದೆ. ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ., ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಕಲಬುರಗಿ, ಮೈಸೂರು, ತುಮಕೂರು, ಬಳ್ಳಾರಿ, ಜಿಲ್ಲೆಗಳಲ್ಲಿ ನಾಳೆಯಿಂದ  ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಸಾಮಾನ್ಯವಾಗಿ ಏನಾದರೂ ಅನಾಹುತಗಳು ಸಂಭವಿಸಿ, ನಂತರ  ಮುಂಜಾಗ್ರತೆಗೆ ಮುಂದಾದಾಗ ಕೆಟ್ಟ ಮೇಲೆ ಬುದ್ದಿ ಬಂತು ಎಂಬ ಗಾದೆ ಮಾತನ್ನು ಸಹಜಾವಾಗಿ ಆಡ್ತಾ ಇರುತ್ತೇವೆ. ಆದರೆ ಕೇಂದ್ರ  ಮತ್ತು ರಾಜ್ಯ ಸರಕಾರ ಸರಕಾರ ಕೆಟ್ಟ ಮೇಲೂ ಬುದ್ದಿ ಕಲಿತಂತೆ ಕಾಣುತ್ತಿಲ್ಲ, ಯಾಕೆ ಅಂತಾ ಪ್ರಶ್ನೆ ಮಾಡ್ತಾ ಇದ್ದೀರಾ ? ಕೊರೊನಾ ಮೊದಲ ಅಲೆಯಲ್ಲಿ ಸಂಬವಿಸಿದ ಸಂಕಷ್ಟಗಳಿಂದ ಕೇಂದ್ರ ಸರಕಾರಗಳು ಪಾಠ ಕಲಿತಂತೆ ಕಾಣುತ್ತಿಲ್ಲ, ಹಾಗಾಗಿ ಎರಡನೇ ಅಲೆಗೆ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಎರಡನೇ ಕೋವಿಡ್ ಅಲೆಗೆ ಮೋದಿ ಸರಕಾರ ಸಿದ್ಧವಾಗಿರಲಿಲ್ಲ ಎನ್ನುವುದಕ್ಕಿಂತ, ಪರಿಸ್ಥಿತಿ ಇನ್ನೇನೂ ಕೆಡುವುದಿಲ್ಲ , ಕೊರೊನಾ ನಿಯಂತ್ರಣಕ್ಕೆ ಬಂದಾಯ್ತು ಎಂದು ಕೇಂದ್ರ ಸರಕಾರ  ಜನವರಿ ತಿಂಗಳಿಂದ ಭಾವಿಸಿದಂತೆ ಕಾಣುತ್ತದೆ.  ಆರೋಗ್ಯ ಕ್ಷೇತ್ರದಲ್ಲೂ, ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲಿ ಜನರಿಗೆ ಪರಿಹಾರ ಒದಗಿಸುವಲ್ಲಿಯೂ  ಭಾರಿ ನಿರ್ಲಕ್ಷ್ಯವನ್ನು ತೋರಿದ್ದ ಮೋದಿ ಸರಕಾರ   2021-22 ನೇ ಸಾಲಿನ ಬಜೆಟ್‌ನಲ್ಲಿಯೂ  ನಿರ್ಲಕ್ಷ್ಯವನ್ನು ಮುಂದುವರೆಸಿತ್ತು.  ಲಸಿಕೆ ಅಭಿಯಾನ ನೀತಿ ಕೂಡ ವಿರೋಧಾಭಾಸ ಮತ್ತು ಗೊಂದಲದಿಂದ ಕೂಡಿದೆ ಅನೇಕ ಕಡೆಗಳಲ್ಲಿ ಲಸಿಕೆಯ ಕೊರತೆ ಎದ್ದು ಕಾಣುತ್ತಿದೆ.

‌ ಪ್ರಧಾನಿ ಮೋದಿ ಎಪ್ರಿಲ್‌ 11 ರಿಂದ 14 ರ ವರೆಗೆ ಲಸಿಕಾ ಉತ್ಸವವನ್ನು ನಡೆಸಲು ಮೋದಿ ಸರಕಾರ ಕರೆ ನೀಡಿದೆ. ಲಸಿಕೆಯ ಸುತ್ತ ಎದ್ದಿರುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗದಿರುವಾಗಲೇ ಮತ್ತೆ ವಿರೋಧಾಭಾಸದ ಕಡೆ ಮುಖ ಮಾಡಿದೆ.  ಲಸಿಕೆ ಅಭಿಯಾನ ನೀತಿ ರೂಪಿಸಿದ ಸರ್ಕಾರದ ವಿಧಾನ ಕೂಡ ವಿರೋಧಾಭಾಸ ಮತ್ತು ಗೊಂದಲದಿಂದ ಕೂಡಿದೆ. ಇದುವರೆಗೆ ಎರಡು ಲಸಿಕೆಗಳಿಗೆ ತುರ್ತು ಬಳಕೆಗಾಗಿ ಅನುಮೋದನೆ ನೀಡಲಾಗಿದೆ. ಒಂದು ಅಸ್ಟಾಜೆನೆಕಾದ ಕೋವಿಶೀಲ್ಡ್, ಇನ್ನೊಂದು ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್. ಎರಡನೇ ಲಸಿಕೆ ಕೊವ್ಯಾಕ್ಸಿನ್‌ ಅನ್ನು ಮೂರನೇ ಹಂತದ ಪರೀಕ್ಷೆಯ ಭಾಗವಾಗಿ ಬಳಕೆಗೆ ನೀಡಿರುವುದು ವಿವಾದಕ್ಕೆ ಕಾರಣವಾಯಿತು. ಇನ್ನೂ  ರಷ್ಯಾದ ಸ್ಪುಟ್ನಿಕ್-೫ ಲಸಿಕೆಗೆ  ದೇಶದ ಔಷಧ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಸೋಂಕು ಏರಿಕೆ ಅತಿ ಹೆಚ್ಚಾಗಿರುವ ರಾಜ್ಯಗಳಲ್ಲಿ ಲಸಿಕೆ ಸರಬರಾಜಿನಲ್ಲಿ ತ್ವರಿತವಾಗಿ ಕೊರತೆ ಕಾಡಲು ಆರಂಭವಾಗಿದೆ. ಏಪ್ರಿಲ್ 1 ರಿಂದ 45  ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಆರಂಭವಾಗಿರುವ ಸಮಯದಲ್ಲಿಯೇ ಈ ರೀತಿಯ ಕೊರತೆ  ಉಂಟಾಗಿದೆ. ದೊಡ್ಡ ಪ್ರಮಾಣದಲ್ಲಿ ಲಸಿಕೆ ಕಾರ್ಯಕ್ರಮ ಯೋಜಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಸರ್ಕಾರದ ವೈಫಲ್ಯ ಇದೆ ಎಂಬುದು ಇದರಿಂದಾಗಿ ಎದ್ದು ಕಾಣುತ್ತಿದೆ.

ಅತಿ ಹೆಚ್ಚು ಕೋವಿಡ್‌–19 ಪ್ರಕರಣಗಳು ಮಹಾರಾಷ್ಟ್ರ ರಾಜ್ಯದಲ್ಲಿ ವರದಿಯಾಗುತ್ತಿದೆ. ಇದು ದೇಶದಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾಗುತ್ತಿರುವ ರಾಜ್ಯವಾಗಿದೆ. ಇಲ್ಲಿ ಕೋವಿಡ್‌ ಲಸಿಕೆ ಮತ್ತು ಔಷಧಗಳ ಕೊರತೆಯಾಗಿದೆ. ಸಾರ್ವಜನಿಕ ಆರೋಗ್ಯದಲ್ಲಿ ಗಂಭೀರ ಪರಿಣಾಮ ಬೀರಲಾರಂಭಿಸಿದೆ. ರಾಜ್ಯದಲ್ಲಿ ಕೇವಲ ಎರಡು ದಿನಗಳಿಗೆ ಮಾತ್ರ ಸಾಕಾಗುವಷ್ಟು ಮಾತ್ರ ಲಸಿಕೆಗಳ ಲಭ್ಯವಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ ಟೋಪೆ ಹೇಳಿದ್ದಾರೆ.

ಮಹಾರಾಷ್ಟ್ರ ಜನಸಂಖ್ಯೆ 12 ಕೋಟಿಯಷ್ಟಿದೆ ಆದರೆ ಅಲ್ಲಿ ಇಲ್ಲಿಯವರೆಗೆ ಲಸಿಕೆ ಕೇವಲ 7 ಲಕ್ಷ ಜನರಿಗೆ ಮಾತ್ರ ಲಸಿಕೆಯನ್ನು ವಿತರಿಸಲಾಗಿದೆ. ತಿಂಗಳಿಗೆ ಸರಿಸುಮಾರು 1.6 ಕೋಟಿ ಲಸಿಕೆ ಡೋಸ್‌ಗಳು ಮತ್ತು ವಾರಕ್ಕೆ ಕನಿಷ್ಠ 40 ಲಕ್ಷ ಡೋಸ್‌ಗಳು ಅಗತ್ಯವಿದೆ. ಇತರೆ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ಬದಲು, ನಮ್ಮದೇ ಸ್ವಂತ ರಾಜ್ಯಗಳಿಗೆ ಪೂರೈಕೆ ಮಾಡಲಿ. ಕೇಂದ್ರ ಸರ್ಕಾರವು ನಮಗೆ ಸಹಕಾರ ನೀಡುತ್ತಿದೆ, ಆದರೆ ಮಾಡಬೇಕಾದಷ್ಟು ಸಹಾಯವನ್ನು ಮಾಡುತ್ತಿಲ್ಲ’ ಎಂದು ರಾಜೇಶ್‌ ಟಪಾಲ್‌ ಆರೋಪಿಸಿದ್ದಾರೆ.

ಇದು ಕೇವಲ ಮಹಾರಾಷ್ಟ್ರದ ಕಥೆಯಲ್ಲ, ಬಹುತೇಕ ರಾಜ್ಯಗಳ ಕಥೆ ಇದೇರೀತಿಯಾಗಿದೆ, ಲಸಕೆಯ ಕೊರತೆ ಎದ್ದು ಕಾಣುತ್ತಿದೆ. ಲಸಿಕೆಯನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡಿದ ಕೇಂದ್ರ ಸರಕಾರಕ್ಕೆ ದೇಶದ ಜನರ ಆರೋಗ್ಯ ಕಾಣಿಸಲಿಲ್ಲವಾ? ಅಥವಾ ಜಾಗತಿಕವಾಗಿ ಮೋದಿ ತಮ್ಮ ವರ್ಚಸ್ಸನ್ನು ಹೆಚ್ಚಿಸಕೊಳ್ಳುವುದಕ್ಕಾ ಈ ರೀತಿಯ ನೀತಿಗಳನ್ನು ಅನುಸರಿಸುತ್ತಿದ್ದಾರಾ ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ.

ಮೊದಲ ಅಲೆಯಿಂದ ಸರಿಯಾದ ಪಾಠವನ್ನು ಕಲಿತಿದ್ದರೆ, ಎರಡನೆ ಅಲೆ ಇಷ್ಟೊಂದು ವ್ಯಾಪಕವಾಗಿ ಹಬ್ಬಿಕೊಳ್ಳುತ್ತಿರಲಿಲ್ಲ, ಕುಂಟುನೆಪಗಳನ್ನು ಹೇಳುತ್ತಲೇ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಕಾಲ ಹರಣ ಮಾಡೀತು, ಚುನಾವಣೆಗಳಲ್ಲಿ ಗೆಲ್ಲುವುದಕ್ಕಾಗಿ ನಡೆಸಿದ ತಂತ್ರಗಳು, ಅದಕ್ಕಾಗಿ ವ್ಯಯಿಸಿದ ಸಮಯದ ಕಾಲು ಭಾಗ ಕೋವಿಡ್‌ ನಿಯಂತ್ರಣಕ್ಕೆ ವಯಿಸಿದ್ದರೆ ಇವತ್ತು ಇಂತಹ ಸ್ಥಿತಿ ನಿರ್ಮಾಣವಾಗುತ್ತಿಲ್ಲ. ಸಂಪೂರ್ಣವಾಗಿ ರಾಜ್ಯಗಳ ಮೇಲೆ ಹೋಣೆಗಾರಿಕೆ ನೀಡಿ, ಕೊರೊನಾ ಜೊತೆ ಬದುಕುವುದನ್ನು ಕಲಿಯಿರಿ ಎಂಬ ಪ್ರಧಾನಿಗಳ ಮಾತಿಗೆ ದೇಶದ ಜನ ಭಾರೀ ಬೆಲೆ ತೆರಬೇಕಾಗಿದೆ.

ಇನ್ನೂ ಕರ್ನಾಟಕದಲ್ಲೂ ಕೊರೊನಾ ನಿಯಂತ್ರಣಕ್ಕೆ ಸರಿಯಾದ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ದಿನವೊಂದಕ್ಕೆ ಸರಾಸರಿ 5000 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಸತತ ಒಂದುವಾರದಿಂದ ಹೆಚ್ಚಾಗುತ್ತಿವೆ. ಕರ್ನಾಟಕದಲ್ಲಿ ನಿನ್ನೆ 6, 570 ಕೇಸುಗಳು ಪತ್ತೆಯಾಗಿವೆ, ಆ ಮೂಲಕ ಸೋಂಕಿತರ ಪ್ರಮಾಣ, 10 ಲಕ್ಷದ 40 ಸಾವಿರದ 130 ಕ್ಕೆ ಏರಿಕೆಯಾಗಿದೆ. 9 ಲಕ್ಷದ 73 ಸಾವಿರದ 949 ಜನ ಸೋಂಕಿನಿಂದ ಗುಣ ಮುಖರಾಗಿದ್ದಾರೆ. 12 ಸಾವಿರದ 767 ಜನ ಸೋಂಕಿನಿಂದ ಮೃತ ಪಟ್ಟಿದ್ದಾರೆ.

ಮೊದಲ ಅಲೆಯಿಂದ ರಾಜ್ಯ ಸರಕಾರವೂ ಪಾಠ ಕಲೆಯಲಿಲ್ಲ, ನಿದ್ರೆಯಲ್ಲಿದ್ದ ಸರಕಾರಕ್ಕೆ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ಕಂಡು ಇನ್ನೇನು ಕೊರೊನಾ ಕಥೆ ಮುಗಿದೆಹೋಯಿತು ಎಂದು ನಿರ್ಲಕ್ಷ್ಯ ತೋರಿದ್ದೆ ಇದಕ್ಕೆ ಕಾರಣವಾಗಿದೆ.  ವಿಶೇಷವಾಗಿ ಈಗ ಆಸ್ಪತ್ರೆಗಳ ಕೊರತೆ ರಾಜ್ಯದಲ್ಲಿ ಎದ್ದು ಕಾಣುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮತ್ತೆ ಬೆಡೆ ಕೊರತೆ ಹೆಚ್ಚಾಗುವ ಸಾಧ್ಯತೆ ಇದ್ದು ಇಲ್ಲಿವರೆಗೆ ರಾಜ್ಯ ಸರಕಾರ ಬೆಡ್‌ ಹೆಚ್ಚಿಸುವ ಕುರಿತು ಯೋಚನೆಯನ್ನು ಮಾಡಿಲ್ಲ.

ಮೊದಲ ಕೊರೊನಾ ಅಲೆ ಸಂದರ್ಭದಲ್ಲೂ ರಾಜ್ಯ ಸರಕಾರ ಆಸ್ಪತ್ರೆಗಳ ಬೆಡ್‌ ವಿಚಾರಕ್ಕೆ ನಿರ್ಲಕ್ಷ್ಯ ತೋರಿತ್ತು,  ವಿಪಕ್ಷಗಳ ಒತ್ತಡಕ್ಕೆ ಮಣಿದು ಬೆಂಗಳೂರಿನಲ್ಲಿ 73 ಆಸ್ಪತ್ರೆಗಳಿಂದ 5 ಸಾವಿರಕ್ಕೂ ಅಧಿಕ ಹಾಸಿಗೆಗಳನ್ನು ಗುರುತಿಸಲಾಗಿತ್ತು. ಪ್ರಕರಣಗಳ ಸಂಖ್ಯೆ ವರ್ಷಾಂತ್ಯಕ್ಕೆ ಇಳಿಕೆ ಕಂಡಿದ್ದರಿಂದ ಖಾಸಗಿ ಆಸ್ಪತ್ರೆಗಳಿಗೆ ಸೋಂಕಿತರನ್ನು ಶಿಫಾರಸು ಮಾಡುವುದನ್ನು ಕೈಬಿಡಲಾಗಿದೆ. ಇದರಿಂದಾಗಿ ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಪುನಃ ಹಾಸಿಗೆಗಳ ಸಮಸ್ಯೆ ತಲೆದೋರಿದೆ. ಬಿಬಿಎಂಪಿಯು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಶೇ 10ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಎಂದು ಈಗಾಗಲೇ ಸೂಚಿಸಿದೆ. ಆದರೆ, ಶಿಫಾರಸು ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಇದರಿಂದಾಗಿ ಚಿಕಿತ್ಸೆಗಾಗಿ ರೋಗಿಗಳು ಆಸ್ಪತ್ರೆಗಳನ್ನು ವಿಚಾರಿಸಲಾರಂಭಿಸಿದ್ದಾರೆ.

ಬೆಂಗಳೂರಿನಲ್ಲಿ  ಕೋವಿಡ್ ಪ್ರಕರಣಗಳು ಏರುಗತಿ ‍ಪಡೆದಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 38, 946 ಕ್ಕೆ ತಲುಪಿದೆ. ಇವರಲ್ಲಿ 250 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ. ಸೋಂಕಿತರಲ್ಲಿ ಬಹುತೇಕರು ಮನೆ ಆರೈಕೆಯನ್ನು ಬಹಸಿ ಹೋಮ್‌ ಐಸುಲೇಷನ್‌ ಗೆ ಒಳಗಾದರೂ ಶೇ 19ರಷ್ಟು ಮಂದಿಯು ಸಮಸ್ಯೆ ಉಲ್ಬಣಗೊಂಡ ಕಾರಣ ಆಸ್ಪತ್ರೆಗಳ ಕಡೆಗೆ ಮುಖ ಮಾಡಲಾರಂಭಿಸಿದ್ದಾರೆ. ಸದ್ಯ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕೆ.ಸಿ. ಜನರಲ್, ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ 14 ಅಸ್ಪತ್ರೆಗಳಲ್ಲಿ 825 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿರಿಸಲಾಗಿದೆ. ಅವುಗಳಲ್ಲಿ 689 ಹಾಸಿಗೆಗಳು ಭರ್ತಿಯಾಗಿದ್ದು, ಕೇವಲ 136  ಹಾಸಿಗೆಗಳು ಮಾತ್ರ  ಖಾಲಿಯಿವೆ.

ವೈದ್ಯಕೀಯ ಶಿಕ್ಷಣ ಇಲಾಖೆಯಡಿ ವಿಕ್ಟೋರಿಯಾ ಮತ್ತು ಬೌರಿಂಗ್ ಆಸ್ಪತ್ರೆಯನ್ನು ಗುರುತಿಸಲಾಗಿದೆ. ಈ ಆಸ್ಪತ್ರೆಗಳಿಂದ ಒಟ್ಟು 325 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಅವುಗಳಲ್ಲಿ 48 ಹಾಸಿಗೆಗಳು ಮಾತ್ರ ಖಾಲಿಯಿವೆ. ಅದೇ ರೀತಿ, ಹಜ್ ಭವನ ಮತ್ತು ಎಚ್‌ಎಎಲ್‌ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 378 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದ್ದು, 170 ಹಾಸಿಗೆಗಳು ಖಾಲಿಯಿವೆ. ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಸಾರಿ ಕೇಂದ್ರ (ತೀವ್ರ ಉಸಿರಾಟದ ಸಮಸ್ಯೆ) ನಿರ್ಮಿಸಿ, 150 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಅಲ್ಲಿ ಒಂದು ವಾರದಿಂದ ಪ್ರತಿನಿತ್ಯ ಸರಾಸರಿ 30ರಿಂದ 40 ಮಂದಿಯನ್ನು ದಾಖಲಿಸಿಕೊಳ್ಳಲಾಗುತ್ತಿದೆ.  ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸೋಂಕಿನ ಸಂಖ್ಯೆಯನ್ನು ಗಮನಿಸಿದರೆ ಇನ್ನೂ 5000 ಹಾಸಿಗೆಗಳ ಅಗತ್ಯ ಇದೆ.

ಇನ್ನೂ ಕೊರೊನಾ ನಿಯಂತ್ರಣಕ್ಕೆ ಬಂದಿತೆಂದು ಭಾವಿಸಿ ಕೊರೊನಾ  ಸೇವೆಯಲ್ಲಿದ್ದ ಅನೇಕ ವೈಧ್ಯರನ್ನು, ನರ್ಸ್‌ ಗಳನ್ನು ಈ ಸೇವೆಯಿಂದ ಬಿಡುಗಡೆಗೊಳಿಸಿದರು. ಟೆಸ್ಟ್‌ ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಯಿತು,  ಅಲೆ ಹೆಚ್ಚಾಗುತ್ತಿದ್ದಂತೆ ಟೆಸ್ಟಿಂಗ್‌ ಪ್ರಮಾಣ ಹೆಚ್ಚಿಸಲಾಯಿತು ಹಾಗಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಯಿತು.  ರಾಜ್ಯದಲ್ಲೂ ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಆಧ್ಯತೆ ನೀಡುವ ಬದಲಾಗಿ, ಸರಕಾರ, ಖುರ್ಚಿಯನ್ನು ಉಳಿಸಿಕೊಳ್ಳುವ, ಚುನಾವಣೆಗಳಿಗೆ ಹೆಚ್ಚು ಗಮನ ನೀಡುವ ಕೆಲಸಗಳಾದವೆ ಹೊರತು ಮೊದಲ ಅಲೆಯಿಂದ ಉಂಟಾದ ಸಂಕಷ್ಟಗಳ ಕಡೆ ಸರಿಯಾದ ಗಮನ ನೀಡದ ಪರಿಣಾಮ ಈಗ ಮತ್ತೆ ಸಂಕಷ್ಟ ಎದಿರಿಸುವಂತಾಗಿದೆ.

ಇದೀಗ ಸೋಂಕು ಹೆಚ್ಚಳದೊಂದಿಗೆ ರಾತ್ರಿ ಕರ್ಫ್ಯೂ, ವಾರಾಂತ್ಯ ಲಾಕ್‌ಡೌನ್ ಮತ್ತು ಓಡಾಟದ ಮೇಲೆ ನಿರ್ಬಂಧ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿರುವುದರಿಂದ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಕುಗ್ಗಿ ಹೋಗುತ್ತವೆ. ಗಿ ಆಕಾರದ ಆರ್ಥಿಕ ಚೇತರಿಕೆ ಆಗುತ್ತಿದೆ ಎಂಬ ಸರ್ಕಾರ ಮುಂದಿಟ್ಟ ಸುಂದರ ಚಿತ್ರಣಕ್ಕೆ ತದ್ವಿರುದ್ಧವಾಗಿ ಆರ್ಥಿಕ ಬೆಳವಣಿಗೆಯಲ್ಲಿ ತಡೆಯುಂಟಾಗುತ್ತಿದೆ, ಎಂಟು ವಲಯಗಳನ್ನು ಒಳಗೊಂಡ ಪ್ರಮುಖ ಕ್ಷೇತ್ರವು (ಕೋರ್ ಸೆಕ್ಟರ್) ಆರು ತಿಂಗಳಲ್ಲಿ ಅತ್ಯಂತ ತೀವ್ರವಾಗಿ ಕುಗ್ಗಿದೆ. ತಯಾರಿಕಾ ಕ್ಷೇತ್ರದ ಉತ್ಪನ್ನದಲ್ಲಿ ಎರಡನೇ ಅಲೆ ಅರಂಭವಾಗುವುದಕ್ಕೂ ಮೊದಲೇ ಏಳು ತಿಂಗಳಲ್ಲೇ ಅತಿ ತೀವ್ರವಾದ  ಕುಸಿತ ಕಂಡಿದೆ ಎಂಬುದನ್ನು ಸರಕಾರಗಳು ಮರೆಯಬಾರದು.

ಹಾಗಾದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಏನು ಮಾಡಬೇಕು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ, ನಮ್ಮ ಕಣ್ಮುಂದೆ ಕೇರಳದ ಮಾದರಿ ಇದೆ. ಎರಡು ಮಹತ್ವದ ಕ್ಷೇತ್ರಗಳಲ್ಲಿ ಕೇರಳ ಸರ್ಕಾರ ಮಾಡಿದ್ದನ್ನು ಇಡೀ ದೇಶಕ್ಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗುವುದು ಒಳ್ಳೆಯದು. ಅದು ಏನು ಅಂದ್ರೆ  ಕೇರಳದಲ್ಲಿ ಕೊವಿಡ್ ಸೋಂಕಿತರಲ್ಲಿ ೯೫ ಶೇಕಡದಷ್ಟು ಜನರಿಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದೆ. ಅಲ್ಲದೆ ಎಲ್‌ಡಿಎಫ್ ಸರ್ಕಾರ, ಮಹಾಸೋಂಕಿನ ಅವಧಿಯುದ್ದಕ್ಕೂ 88 ಲಕ್ಷ ಕುಟುಂಬಗಳಿಗೆ ಉಚಿತ ಆಹಾರದ ಕಿಟ್‌ಗಳನ್ನು ಪೂರೈಸಿದೆ. ಕಿಟ್‌ನಲ್ಲಿ ಆಹಾರ ಧಾನ್ಯ ಮಾತ್ರವಲ್ಲದೆ, ಬೇಳೆ, ಖಾದ್ಯ ತೈಲ ಮತ್ತು ಮಸಾಲೆ ಪದಾರ್ಥಗಳನ್ನು ನೀಡಲಾಗಿತ್ತು.

ಮೋದಿ ಸರ್ಕಾರ, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಗಮನ ಕೇಂದ್ರೀಕರಿಸುವ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಜನರನ್ನು ರಕ್ಷಿಸಲು ಅಗತ್ಯ ಆರ್ಥಿಕ ಕ್ರಮಗಳನ್ನು ಕೈಗೊಳ್ಳುವ ಬದಲು ಈ ಬಿಕ್ಕಟ್ಟನ್ನು ಬಳಸಿಕೊಂಡು  ನವ-ಉದಾರವಾದಿ ನೀತಿಯನ್ನು ಮೇಲೆಕ್ಕೆತ್ತಿ  ಕೆಲವೇ ಕಾರ್ಪೊರೇಟ್ ಮತ್ತು ಹಣಕಾಸು ಮಹಾಕುಳಗಳ ಹಿತಗಳನ್ನು ಈಡೇರಿಸುವ ಕೆಲಸವನ್ನು ಮಾಡಿದರು. ಇನ್ನಾದರೂ ಮುಂಬರುವ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕ ಆರೋಗ್ಯಕ್ಷೇತ್ರವನ್ನು ಬಲಪಡಿಸಲು ಕೇಂದ್ರ ಮತ್ತು ರಾಜ್ಯಸರಕಾರಗಳು ಮುಂದೆ ಬರಬೇಕಿದೆ.

ಕೊವೀಡ್ -19 ಎರಡನೇ ಅಲೆಗೆ ‘ಸರಕಾರದ ನಿದ್ದೆ’ ಕಾರಣವಾಯ್ತಾ?

 

Donate Janashakthi Media

Leave a Reply

Your email address will not be published. Required fields are marked *