ನವದೆಹಲಿ : ಕಳೆದ ಕೆಲದಿನಗಳಿಂದ ಏರುಗತಿಯಲ್ಲಿ ದಾಖಲಾಗುತ್ತಿರುವ ಕೊರೊನಾ ಸಾಂಕ್ರಾಮಿಕ ರೋಗ ಪರಿಣಾಮವಾಗಿ ದೇಶದ ರಾಜಧಾನಿ ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳನ್ನು ಹರಡದಂತೆ ಅತ್ಯಂತ ಪರಿಣಾಮಕಾರಿಯಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ದೆಹಲಿಯಲ್ಲಿ ವಾಹನಗಳಲ್ಲಿ ಒಬ್ಬರೇ ಪ್ರಯಾಣ ಮಾಡುತ್ತಿದ್ದರೂ ಸಹ ಅವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಪ್ರಯಾಣಿಸಬೇಕೆಂದು ದೆಹಲಿ ಹೈಕೋರ್ಟ್ ನೆನ್ನೆ ಹೇಳಿದೆ.
ಇದನ್ನು ಓದಿ : ಕೋವಿಡ್ -19 : ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳ
ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ಅವರು ʻಮಾಸ್ಕ್ ಧರಿಸುವುದರಿಂದ ಕೊರೊನಾ ಸೋಂಕ ಹರಡದಂತೆ ತಡೆಯಬಹುದಾಗಿದ್ದು, ಮಾಸ್ಕ್ ಧರಿಸುವ ಮೂಲಕ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಹೇಳಿದ್ದಾರೆ.
ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸಿದವರಿಗೆ ದಂಡ ವಿಧಿಸುವ ದೆಹಲಿ ಸರಕಾರದ ಕ್ರಮದ ಬಗ್ಗೆ ನ್ಯಾಯಾಲಯ ಮಧ್ಯಪ್ರವೇಶ ಮಾಡಲು ನಿರಾಕರಿಸಿತು.
ಖಾಸಗಿ ವಾಹನದಲ್ಲಿ ಒಬ್ಬರೇ ಪ್ರಯಾಣ ಮಾಡಿದರೂ ಸಹ ಅದನ್ನು ಸಾರ್ವಜನಿಕ ಸ್ಥಳವೆಂದೇ ಪರಿಗಣಿಸಬೇಕಾಗಿದೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅಭಿಪ್ರಾಯಪಟ್ಟರು.
ಖಾಸಗಿ ವಾಹನದಲ್ಲಿ ಒಬ್ಬರೇ ಪ್ರಯಾಣಿಸುವ ನೆಪವೊಡ್ಡಿ ಮಾಸ್ಕ್ ಧರಿಸದೇ ಇರುವವರಿಗೆ ದಂಡ ವಿಧಿಸುವ ದೆಹಲಿ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿ ಮಧ್ಯಪ್ರವೇಶಿಸಲು ಅವರು ನಿರಾಕರಿಸಿದರು.
- ಪಂಜಾಬ್: ಏ.30ರವರೆಗೆ ರಾತ್ರಿ ಕರ್ಫ್ಯೂ, ಸಭೆಗಳಿಗೆ ನಿಷೇಧ
ಪಂಜಾಬ್‌ನಲ್ಲಿಯೂ ಕೋವಿಡ್-19 ಪ್ರಸರಣಗೊಳ್ಳದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿರುವ ಪಂಜಾಬ್ ಸರಕಾರವು ಇಂದು ವಿವರಣೆ ನೀಡಿತು.
ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಂಜಾಬ್ ಸರ್ಕಾರ ಹಲವು ಕ್ರಮಗಳನ್ನು ಪ್ರಕಟಿಸಿದೆ.
ಜಾರಿಯಲ್ಲಿರುವ ರಾತ್ರಿ ಕರ್ಫ್ಯೂವನ್ನು ಏಪ್ರಿಲ್ 30ರ ವರೆಗೂ ವಿಸ್ತರಣೆ ಮಾಡುವುದು. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5ರ ವರೆಗೂ ನಿರ್ಬಂಧ ಜಾರಿಗೊಳಿಸಲಾಗಿದೆ. ಜೊತೆಯಲ್ಲಿ ರಾಜಕೀಯ ಸಭೆಗಳನ್ನು ಹಮ್ಮಿಕೊಳ್ಳದಂತೆ ನಿಷೇಧ ಹೇರಿದೆ.
ಇದನ್ನು ಓದಿ : ಸಾರಿಗೆ ನೌಕರರ ಮುಷ್ಕರ : ಸಾರ್ವಜನಿಕ ಸಾರಿಗೆ ಸ್ತಬ್ಧ
ರಾಜ್ಯದ 12 ಜಿಲ್ಲೆಗಳಿಗೆ ಮಾತ್ರ ವಿಧಿಸಲಾಗಿದ್ದ ರಾತ್ರಿ ಕರ್ಫ್ಯೂ, ಈಗ ರಾಜ್ಯದಾದ್ಯಂತ ವಿಸ್ತರಿಸಲಾಗಿದೆ. ರಾಜಕೀಯ ಸಭೆಗಳನ್ನೂ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘನೆಯಾದರೆ, ರಾಜಕೀಯ ಮುಖಂಡರನ್ನೂ ಒಳಗೊಂಡಂತೆ ‘ವಿಪತ್ತು ನಿರ್ವಹಣಾ ಕಾಯ್ದೆ’ ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿ ಸರ್ಕಾರ ಹೇಳಿದೆ.
ಅಂತ್ಯ ಸಂಸ್ಕಾರ, ಮದುವೆ ಹಾಗೂ ಇತರೆ ಸಮಾರಂಭಗಳಿಗೆ ಒಳಾಂಗಣದಲ್ಲಿ 50 ಜನರ ಮಿತಿ ಹಾಗೂ ಹೊರಾಂಗಣದಲ್ಲಿ 100 ಜನರಿಗೆ ಭಾಗಿಯಾಗಲು ಅವಕಾಶ ನೀಡಿದೆ. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಏಪ್ರಿಲ್ 30ರ ವರೆಗೂ ಶಾಲೆ, ಕಾಲೇಜುಗಳಿಗೆ ತೆರೆಯದಂತೆ ಆದೇಶಿಸಲಾಗಿದೆ. ಚಿತ್ರಮಂದಿರಗಳು ಶೇ 50ರಷ್ಟು ಸೀಟು ಭರ್ತಿಯೊಂದಿಗೆ ಕಾರ್ಯಾಚರಿಸಲಿವೆ ಎಂದಿದ್ದಾರೆ.
ರಾಜ್ಯದಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ ಶೇ 85ರಷ್ಟು ಪ್ರಕರಣಗಳಲ್ಲಿ ಬ್ರಿಟನ್ ಮಾದರಿಯ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವುದು ಕಳವಳ ತಂದಿದೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.