ಕೊವಿಡ್ 19 ಮತ್ತು ಲಾಕ್ ಡೌನ್ ನ ಪರಿಣಾಮಗಳು ಬಡವರು ವಂಚಿತರ ಮೇಲೆ ಹೆಚ್ಚು

ಮಹಾ ಸಾಂಕ್ರಾಮಿಕಗಳು ಒಂದರ್ಥದಲ್ಲಿ ಅಸಮಾನತೆಯ ಸಮಾಜದಲ್ಲಿ ಸಮಾನತೆಯನ್ನು ತರುವಂತವು, ಏಕೆಂದರೆ ಅವು ಜಾತಿ, ವರ್ಗ, ಧರ್ಮಗಳ  ಬೇಧಭಾವವಿಲ್ಲದೆ ಎರಗುತ್ತದೆ ಎಂದು ಹೇಳುವವರಿದ್ದಾರೆ. ಆದರೆ ವಾಸ್ತವತೆ ತದ್ವಿರುದ್ಧವೇ ಆಗಿದೆ ಎನ್ನುತ್ತಾರೆ ಇಬ್ಬರು ಸಂಶೋಧಕರುಗಳಾದ ಪ್ರೊ.ಅಶ್ವಿನಿ ದೇಶಪಾಂಡೆ, ಅಶೋಕ ವಿಶ್ವವಿದ್ಯಾಲಯ ಮತ್ತು ಪ್ರೊ.ರಾಜೇಶ ರಾಮಚಂದ್ರನ್‍, ಹೈಡೆಲ್‍ಬರ್ಗ್ ವಿಶ್ವವಿದ್ಯಾಲಯ (Differntial impact of COVID-19 and the lockdown, The Hindu,  ಆಗಸ್ಟ್ 22).ಇವರ ವಿಶ್ಲೇಷಣೆಯ ಪ್ರಕಾರ ವಾಸ್ತವವಾಗಿ ಕೊವಿಡ್‍-19 ಮತ್ತು ಅದರ ಪರಿಣಾಮವಾದ ಲಾಕ್‍ಡೌನ್ ನಮ್ಮ ಸಮಾಜದಲ್ಲಿ ಈಗಾಗಲೇ ಇರುವ ಅನಾನುಕೂಲಗಳನ್ನು ಮತ್ತಷ್ಟು ಉಲ್ಬಣಗೊಳಿಸಿವೆ.

ಸಂಗ್ರಹಾನುವಾದ: ಶೃ. ಶಂ. ನಾ.

“ಪಿಡುಗು, ಯುದ್ಧ, ಕ್ರಾಂತಿ ಮತ್ತು ಪ್ರಭುತ್ವದ ಕುಸಿತ  ಈ ನಾಲ್ಕು ದುರಂತಗಳು ಮಾನವ ಇತಿಹಾಸದುದ್ದಕ್ಕೂ ಹೆಚ್ಚಿನ ಆರ್ಥಿಕ ಸಮಾನತೆ ಸೃಷ್ಟಿಸಿವೆ” ಎಂದು ಆಸ್ಟ್ರೀಯ ದ ಆರ್ಥಿಕ ಇತಿಹಾಸ ತಜ್ಞ ವಾಲ್ಟರ್ ಶೀಡೆಲ್ ತನ್ನ ಪುಸ್ತಕ ” The Great Leveller ” (ಮಹಾ ಸಮಕಾರಿ)ನಲ್ಲಿ ವಾದಿಸುತ್ತಾರೆ.  ಪ್ರಸ್ತುತ ವಿಶ್ವವು ಬೃಹತ್ ಕೋವಿಡ್ 19 ಪಿಡುಗನ್ನು ಎದುರಿಸುತ್ತಿದೆ. ಶೀಡೆಲ್ ನ ವಿಶ್ಲೇಷಣೆಯ ಅನುಸಾರ ಹೆಚ್ಚಾದ ಮರಣ ಪ್ರಮಾಣ ದಿಂದ ದುಡಿಮೆಯ ದರ ಹೆಚ್ಚುವ ಮೂಲಕ ಅಸಮಾನತೆ ಇಳಿಯುತ್ತದೆ.  ಪ್ರಸ್ತುತ ಪಿಡುಗಿ ಗೆ ಇವರ ವಿಶ್ಲೇಷಣೆ ಎಷ್ಟು ಸರಿ ಹೋಗುತ್ತದೆ ಎನ್ನುವುದು ಗೊತ್ತಾಗುವುದು ಈ ಪಿಡುಗು ನಿರ್ಮೂಲನೆ ಆದ ಮೇಲೆಯೇ.  ಆದರೆ,   ಈ ರೋಗ ಯಾರ ಮೇಲೆ ಬೇಕಾದರೂ ದಾಳಿ ಮಾಡುವುದರಿಂದ ಮತ್ತು ಇದರಿಂದಾದ ಲಾಕ್ ಡೌನ್ ನಿಂದಾಗಿ ಎಲ್ಲಾ ಆದಾಯಗಳ ಮತ್ತು ವೃತ್ತೀಯ ವಿಭಾಗಗಳಲ್ಲಿಯೂ ಅಪಾರ ಪ್ರಮಾಣ ದ ಕೆಲಸದ ಖೋತಾ ಆಗಿರುವುದು  ಮತ್ತು ಆರ್ಥಿಕ ಸಂಕಷ್ಟ ಹೆಚ್ಚುತ್ತಿರುವುದರಿಂದ  ಸರಳವಾಗಿ ಈ ಪಿಡುಗನ್ನು ಒಂದು ಸಮಕಾರಿ ಎಂದು ಕರೆಯುತ್ತಾರೆ.

ವಂಚಿತರು ಹೆಚ್ಚಿನ ಅಪಾಯದಲ್ಲಿ :

ಈ ಸರಳ ವಿವರಣೆಯನ್ನು ಕೇಂದ್ರೀಕರಿಸಿಕೊಂಡರೆ, ಪ್ರಾಥಮಿಕ ಅಂಕಿಅಂಶಗಳು ಮತ್ತು ವಿಶ್ವದ ವಿವಿಧ ಭಾಗಗಳಿಂದ ಬಂದಿರುವ ಅಪ್ರತ್ಯಕ್ಷ ಪುರಾವೆಗಳು ಈ ರೋಗದ ಪ್ರಸಂಗಗಳು ವರ್ಗ -ತಟಸ್ಥವಾಗೇನಿಲ್ಲ ಎಂದು ಸೂಚಿಸುತ್ತಿವೆ : ಬಡವರು ಮತ್ತು ಆರ್ಥಿಕವಾಗಿ ದುರ್ಬಲರಾದ ಜನತೆ ವೈರಾಣು ಸೋಂಕಿಗೆ ಸಿಲುಕುವ ಮತ್ತು ಸಾವನ್ನಪ್ಪುವ ಸಾಧ್ಯತೆ ಬಲವಾಗಿದೆ. ಎಷ್ಟರ ಮಟ್ಟಿಗೆಂದರೆ ಆರ್ಥಿಕ ವರ್ಗ ಮತ್ತು ಸಾಮಾಜಿಕ ಅಸ್ಮಿತೆ (ಉದಾ : ಬುಡಕಟ್ಟು ಜನಾಂಗೀಯ ಅಥವಾ ಜಾತಿ )ಗಳು ಒಂದಕ್ಕೊಂದು ಜೊತೆಯಾಗಿಬಿಡುತ್ತವೆ ಮತ್ತು ಇದು ಕೋವಿಡ್ 19 ರಿಂದಾಗಿ ಸಾಮಾಜಿಕವಾಗಿ ವಂಚಿತರಾದ ಗುಂಪುಗಳ ಮರಣ ಪ್ರಮಾಣ ಸಾಧ್ಯತೆ ಜಾಸ್ತಿ ಇದೆ ಎನ್ನುವುದನ್ನು ಸೂಚಿಸುತ್ತಿದೆ.

ಬುಡಕಟ್ಟುಗಳು ಮತ್ತು ಜನಾಂಗೀಯ ಅಲ್ಪಸಂಖ್ಯಾತರನ್ನು ಹೆಚ್ಚು ಪ್ರತಿನಿಧಿಸುವ ಕಾರ್ಮಿಕ ಶಕ್ತಿಗಳು ಕಡಿಮೆ ಕೂಲಿ ಪಡೆಯುವವರು ಮತ್ತು ಕಡಿಮೆ ಓದಿದ ಕೆಲಸಗಾರರ ಮೇಲೆ ಮರಣ ಪ್ರಮಾಣವನ್ನು ಮೀರಿದ ಆರ್ಥಿಕ ಪರಿಣಾಮಗಳು ಇಂದಿನ ಪಿಡುಗಿನಿಂದಾಗಿ ಹೆಚ್ಚಿನದಾಗಿ ಬೀರುವ ಸಾಧ್ಯತೆ ಇದೆ. ಯುನೈಟೆಡ್ ಕಿಂಗ್ಡಮ್ ಮತ್ತು ಅಮೇರಿಕಾ ದೇಶಗಳ ಪ್ರಾಥಮಿಕ ಪುರಾವೆಗಳು ಬುಡಕಟ್ಟುಗಳು ಮತ್ತು ಜನಾಂಗೀಯ ಅಲ್ಪಸಂಖ್ಯಾತರು ನಿರುದ್ಯೋಗದ ಸಮಸ್ಯೆ ಎದುರಿಸುವ ಅಪಾಯ ಹೆಚ್ಚು ಎಂದು ತಿಳಿಸುತ್ತಿವೆ.

ಭಾರತಕ್ಕೆ ಸಂಬಂಧಿಸಿದಂತೆ ಕೋವಿಡ್ 19 ನಿದರ್ಶನಗಳ ಮತ್ತು ಮರಣ ಪ್ರಮಾಣಗಳು ಸರಾಸರಿ ಅಂಕಿಅಂಶ ಲಭ್ಯವಿಲ್ಲದಿರುವುದರಿಂದ ಈ ವೈರಾಣುವಿನಿಂದಾಗಿ ಕೆಲವು ಜಾತಿ ಗುಂಪುಗಳು ಹೆಚ್ಚು ದಾಳಿಗೊಳಗಾಗಿದ್ದಾರೆಯೇ ಎಂಬುದರ ಬಗ್ಗೆ ವಿಮರ್ಶಿಸಲು ಸಾಧ್ಯವಿಲ್ಲ.

ಭಾರತದ ಲಾಕ್ಡೌನ್ :

ಎಲ್ಲೆಡೆ ಈ ಪಿಡುಗು ನಿಯಂತ್ರಣ ಮಾಡಲು ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಮುಚ್ಚುವುದು ಮತ್ತು ವಿವಿಧ ಹಂತಗಳ ಕಠಿಣತೆಯ ಮೂಲಕ ಸಾಮಾಜಿಕ ಅಂತರ ವಿಧಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತದಲ್ಲಿ ಮಾರ್ಚ್ 2020ರ ಕೊನೆಯಲ್ಲಿ ಘೋಷಿಸಲಾದ ಲಾಕ್ಡೌನ್ ಅತ್ಯಂತ ಕಠಿಣವಾಗಿತ್ತು. ಈ ಕಠಿಣ ಲಾಕ್ಡೌನ್  ನ ಮೊದಲ ತಿಂಗಳಾಂತ್ಯಕ್ಕೆ ಅಂದರೆ ಏಪ್ರಿಲ್ 2020ರಲ್ಲಿ ನಿರುದ್ಯೋಗ ಪ್ರಮಾಣ ತೀವ್ರವಾಗಿ ಹೆಚ್ಚಳ ಕಂಡಿತು. ಈ ಡಿಢೀರ್  ನಿರುದ್ಯೋಗವು ಜಾತಿ ಕುರುಡಾಗಿದ್ದರೂ, ಜಾತಿ ತಟಸ್ಥವಾಗಿದೆಯೇ?

ಭಾರತದ ಆರ್ಥಿಕತೆ ನಿಗಾ ಕೇಂದ್ರ (CMIE) ದ ಗ್ರಾಹಕ ಪಿರಾಮಿಡ್  ಗೃಹ ಸಮೀಕ್ಷಾ (CPHS)ಅಂಕಿಅಂಶಗಳ ಆಧಾರದಲ್ಲಿ ನಾವು ಉದ್ಯೋಗ ಮತ್ತು ನಿರುದ್ಯೋಗ ಪ್ರಮಾಣಗಳ ಬದಲಾವಣೆಯನ್ನು ಪರಿಶೀಲಿಸಿದೆವು. ಇವು 1, 74, 405 ಕುಟುಂಬಗಳಲ್ಲಿ ನಡೆಸಿದ ಅಂಕಿ ಅಂಶಗಳ ಗುಂಪು. ವರ್ಷದಲ್ಲಿ ಮೂರು ಬಾರಿ ಈ ಕುಟುಂಬಗಳನ್ನು ಸಂಪರ್ಕಿಸಲಾಗಿದೆ. CPHS ನ ಆರು ಹಂತಗಳ ಮೂಲ ಅಂಕಿಅಂಶಗಳನ್ನು ನಾವು ಬಳಸಿದ್ದೇವೆ.

ಮೇಲ್ಜಾತಿಗಳ ಉದ್ಯೋಗಿಗಳ ಪ್ರಮಾಣ ಡಿಸೆಂಬರ್ 2019ರಿಂದ ಏಪ್ರಿಲ್ 2020ರ ಅವಧಿಯಲ್ಲಿ ಶೇ. 39 ರಿಂದ ಶೇ. 32ಕ್ಕೆ ಇಳಿದಿದ್ದರೆ, ಇದೇ ಅವಧಿಯಲ್ಲಿ ಎಸ್. ಸಿ  ಗಳ ಪ್ರಮಾಣ ಶೇ. 44 ರಿಂದ ಶೇ. 24(ಶೇ. 20 ರಷ್ಟು ), ಇಂಟರ್ ಮೀಡಿಯೆಟ್ ಜಾತಿಗಳ ಈ ಪ್ರಮಾಣ ಶೇ. 42ರಿಂದ ಶೇ. 34ಕ್ಕೆ, ಒಬಿಸಿ ಗಳಲ್ಲಿ  ಶೇ. 40 ರಿಂದ ಶೇ. 26ಕ್ಕೆ ಮತ್ತು ಎಸ್. ಟಿ. ಗಳಲ್ಲಿ ಶೇ. 48ರಿಂದ ಶೇ. 33ಕ್ಕೆ ಉದ್ಯೋಗ ಪ್ರಮಾಣ ಇಳಿದಿರುವುದನ್ನು ನಾವು ಗಮನಿಸಿದೆವು. ಇದರಿಂದ ಉದ್ಯೋಗ ಕುಸಿತವು ಮೇಲ್ಜಾತಿಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಎಸ್. ಸಿ ಮತ್ತು ಎಸ್. ಟಿ ಗಳ ನಡುವೆ ಜಾಸ್ತಿ ಇದೆ ಎಂದು ತಿಳಿಯುತ್ತಿದೆ.

ಶಿಕ್ಷಣದ ಅಂಶ

ಕಡಿಮೆ ಮಟ್ಟದ ಶಿಕ್ಷಣ ಪಡೆದ ವ್ಯಕ್ತಿಗಳು ಮತ್ತು ಯಾವುದೇ ನಿಗದಿತ ಅವಧಿ ಅಥವಾ ಭದ್ರತೆ ಇಲ್ಲದ ದುರ್ಬಲ ಕೆಲಸ ಪಡೆದಿರುವವರ ನಡುವೆ ಕೋವಿಡ್ 19 ರಿಂದ ಉಂಟಾಗಿರುವ ಉದ್ಯೋಗ ಕಡಿತ ಹೆಚ್ಚು ಕೇಂದ್ರೀಕೃತವಾಗಿದೆ ಎನ್ನುವುದನ್ನು ಜಾಗತಿಕ ಪುರಾವೆಗಳು ಸೂಚಿಸುತ್ತಿವೆ. ಸ್ವಲ್ಪ ಹೆಚ್ಚಿನ ಕೆಲಸದ ಭದ್ರತೆ ಇರುವ ವ್ಯಕ್ತಿಗಳು, ಅಂದರೆ ದಿನಗೂಲಿ ಅಲ್ಲದವರು ಮತ್ತು 12ವರ್ಷಗಳಿಗೂ ಹೆಚ್ಚು ಶಿಕ್ಷಣ ಪಡೆದವರು ಏಪ್ರಿಲ್ 2020ರಲ್ಲಿ ನಿರುದ್ಯೋಗಿಗಳಾಗದೇ ಇರಬಹುದು ಎಂದು ನಾವು ನೋಡಿದ್ದೇವೆ. ಹೀಗಾಗಿ ಲಾಕ್ಡೌನ್ ನಂತರದ ತಕ್ಷಣದಲ್ಲಿ ಕೆಲಸ ಕಡಿತವಾಗಿರುವ ಮೊದಲ ಹಂತದಲ್ಲಿ ಶಿಕ್ಷಣ ಒಂದು ರಕ್ಷಣಾ ಕವಚವಾಗಿದೆ.

ನಮ್ಮ ಹಿಂದಿನ ಅಧ್ಯಯನದ ಪ್ರಕಾರ ಉನ್ನತ ಮಟ್ಟದ ಶಿಕ್ಷಣದಲ್ಲಿ ಇದ್ದ ಜಾತಿ ಅಂತರಗಳು ಕಳೆದ ಮೂರು ದಶಕಗಳಲ್ಲಿ ಹಾಗೇ ಇವೆ ಅಥವಾ ಇನ್ನಷ್ಟು ವಿಸ್ತಾರವಾಗಿದೆ.

ಪ್ರಸ್ತುತದ ಪಿಡುಗು ಈ ಶೈಕ್ಷಣಿಕ ವ್ಯತ್ಯಾಸಗಳನ್ನು  ಉಲ್ಬಣಗೊಳಿಸುವ ಸಾಧ್ಯತೆ ಇದೆ. 2011-12ರ ಸಾಲಿನ ಭಾರತ ಮಾನವ ಅಭಿವೃದ್ಧಿ ಸಮೀಕ್ಷೆ ಪ್ರಕಾರ ಶೇ. 51 ಎಸ್. ಸಿ. ಕುಟುಂಬಗಳಲ್ಲಿ ಅಕ್ಷರ ಕಲಿಯದ ಹಿರಿಯ ಮಹಿಳೆಯರಿದ್ದಾರೆ ಮತ್ತು ಶೇ. 27 ಕುಟುಂಬಗಳಲ್ಲಿ ಅಕ್ಷರ ಕಲಿಯದ ಹಿರಿಯ ಪುರುಷ ಸದಸ್ಯರಿದ್ದಾರೆ. ಇದೇ ಅಂಕಿಅಂಶಗಳು  ಮೇಲ್ಜಾತಿ ಕುಟುಂಬಗಳಲ್ಲಿ ಕ್ರಮವಾಗಿ ಶೇ. 11 ಮತ್ತು ಶೇ. 24 ಇದೆ. ಹೀಗಾಗಿ ಶಾಲೆ ಮುಚ್ಚಿರುವ ಈ ದಿನಗಳಲ್ಲಿ ಮೇಲ್ಜಾತಿ ಮಕ್ಕಳಿಗೆ ಹೋಲಿಸಿದಲ್ಲಿ ಎಸ್. ಸಿ. ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ವಿಧದ ಮನೆ ಕಲಿಕೆಯಲ್ಲಿ ಸಹಾಯ ಮಾಡಲು ಸಮರ್ಥರಾಗಿರುವುದಿಲ್ಲ. ಪೋಷಕರ ಶಿಕ್ಷಣದ ವ್ಯತ್ಯಾಸಗಳು ಒಂದೆಡೆಯಾದರೆ, ಜೀವನ ಮಟ್ಟದ ಸಾಮರ್ಥ್ಯವು ಇನ್ನೊಂದೆಡೆ ಇದಕ್ಕೆ ಕಾರಣವಾಗಿದೆ.

ತಂತ್ರಜ್ಞಾನದ ವಿಷಯ

ದಲಿತ ಮತ್ತು ಆದಿವಾಸಿ ಕುಟುಂಬಗಳಿಗೆ online ಶಿಕ್ಷಣವನ್ನು ಹೊಂದಿಸಿಕೊಳ್ಳುವ ಸಾಮರ್ಥ್ಯಕ್ಕೆ ಧಕ್ಕೆ ತರುವ ಹಲವು ಆಯಾಮಗಳಿವೆ. ಉದಾ :ಇಂಟರ್ನೆಟ್ ಸೌಲಭ್ಯ ಪಡೆಯುವ ಕುಟುಂಬಗಳ ಪ್ರಮಾಣ ಮೇಲ್ಜಾತಿಗಳಲ್ಲಿ ಶೇ. 20ರಷ್ಟಿದ್ದರೆ ಎಸ್. ಸಿ. ಕುಟುಂಬಗಳಲ್ಲಿ ಶೇ. 10 ರಷ್ಟಿದೆ. ಶೇ. 49 ಎಸ್. ಸಿ. ಗಳು ಮಾತ್ರ  ಬ್ಯಾಂಕ್ ಉಳಿತಾಯ ಹೊಂದಿದ್ದರೆ,  ಮೇಲ್ಜಾತಿ ಕುಟುಂಬಗಳಲ್ಲಿ ಈ ಪ್ರಮಾಣ ಶೇ. 62ರಷ್ಟಿದೆ. ಹೀಗಾಗಿ ಈ ಪಿಡುಗು ಶಾಲೆಗಳನ್ನು ಇನ್ನಷ್ಟು ದಿವಸಗಳ ಕಾಲ ಮುಚ್ಚುವಂತಹ ಒತ್ತಡ ನಿರ್ಮಾಣ ಮಾಡಿದರೆ online ಶಿಕ್ಷಣ ದೊರಕಿಸಿಕೊಳ್ಳುವ ಪ್ರಕ್ರಿಯೆಯಲ್ಲಿ  ಈ ಅಂತರಗಳು ಪ್ರಮುಖ ಪಾತ್ರ ವಹಿಸುತ್ತವೆ.

ಸಾಮಾಜಿಕ ಅಸ್ಮಿತೆಯ ಆಧಾರದಲ್ಲಿ ಈ ಹಿಂದೆ ಇದ್ದ ಆರ್ಥಿಕ ಸಂಕಷ್ಟವನ್ನು ಈ ಪಿಡುಗು ಪ್ರೇರಿತ ಲಾಕ್ಡೌನ್ ಇನ್ನಷ್ಟು ಉಲ್ಬಣಗೊಳಿಸುತ್ತಿದೆ ಎಂದು ಪ್ರಾಥಮಿಕ ಪರಿಣಾಮಗಳು ತೋರಿಸುತ್ತಿವೆ. ಈ ಸಂದರ್ಭದಲ್ಲಿ ಮುಂಬರುವ ಆಘಾತಗಳನ್ನು ಎದುರಿಸಲು ಸಾಮಾಜಿಕ ಅಂತರಗಳನ್ನು ಮುಚ್ಚುವ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಪ್ರಭುತ್ವ ಹೂಡಿಕೆ ಮಾಡುವುದು  ಅತ್ಯಗತ್ಯವಾಗಿದೆ.

ಬಾಲ್ಕನಿಯಿಂದ ಮೋಂಬತ್ತಿ ಪ್ರದರ್ಶನವಲ್ಲ

ಮನೆ ಕಡೆಗೆ ರಾತ್ರಿ-ಹಗಲ ನಡಿಗೆ   

ವ್ಯಂಗ್ಯಚಿತ್ರ: ಸುಭಾನಿ, ಡೆಕ್ಕನ್ ಕ್ರಾನಿಕಲ್

                                                                     

 

 

 

 

 

Donate Janashakthi Media

Leave a Reply

Your email address will not be published. Required fields are marked *