ನವದೆಹಲಿ(ಪಿಟಿಐ): ದೇಶದಲ್ಲಿ ಒಂದೇ ದಿನ ಕೋವಿಡ್‌ನ 7,830 ಹೊಸ ಪ್ರಕರಣಗಳು ದಾಖಲಾಗಿವೆ. ಇವು ಕಳೆದ 223 ದಿನಗಳಲ್ಲಿ ದಾಖಲಾದ ದಿನವೊಂದರ ಅಧಿಕ ಪ್ರಕರಣಗಳಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 40,215ಕ್ಕೆ ಏರಿಕೆಯಾಗಿದೆ. ಹೊಸದಾಗಿ 16 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದು ಒಟ್ಟು ಸಾವಿನ ಸಂಖ್ಯೆ 5,31,016ಕ್ಕೆ ಏರಿಕೆಯಾಗಿದೆ. ದೆಹಲಿ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ಗುಜರಾತ್, ಹರಿಯಾಣ, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ತಲಾ ಒಬ್ಬರು ಮತ್ತು ಕೇರಳದಲ್ಲಿ ಐವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ : ಕೋವಿಡ್ ಸಂಬಂಧ ಆಸ್ಪತ್ರೆಗಳಲ್ಲಿ ಸನ್ನದ್ಧತೆ ಪರಿಶೀಲನೆಗೆ ಇಂದು ಮತ್ತು ನಾಳೆ ದೇಶವ್ಯಾಪಿ ಅಣಕು ಕಾರ್ಯಾಚರಣೆ
ಕಳೆದ ವರ್ಷ ಸೆಪ್ಟೆಂಬರ್ 1ರಂದು 7,946 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ ಅತ್ಯಂತ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಕೋವಿಡ್ ಲಸಿಕಾ ಅಭಿಯಾನದ ಅಡಿ ಇದುವರೆಗೆ 220.66 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.