ಬೆಳ್ತಂಗಡಿ: ಸೌಜನ್ಯ ಪ್ರಕರಣದ ತನಿಖೆಗಾಗಿ ದಕ್ಷ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ನೇಮಿಸಬೇಕು ಹಾಗೂ ಉಜಿರೆ ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವುಗಳನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಜನಪರ ಸಂಘಟನ ಒಕ್ಕೂಟ ರಾಜ್ಯ ಸರಕಾರಕ್ಕೆ ಒತ್ತಾಯಿಸಿದೆ.
ಗುರುನಾರಾಯಣ ಸಭಾ ಭವನದಲ್ಲಿಮಾಜಿ ಶಾಸಕ ವಸಂತ ಬಂಗೇರ ಚಲೋ ಬೆಳ್ತಂಗಡಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ‘ಸಿಬಿಐ ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಿರುವ ಅಂಶಗಳು ಸೌಜನ್ಯ ಅತ್ಯಾಚಾರ, ಕೊಲೆ ಪುಕರಣ ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆದಿರುವ ಅನುಮಾನಗಳನ್ನು ಬಲಗೊಳಿಸಿದೆ. ತನಿಖೆಯ ಸಂದರ್ಭ ಸಿಬಿಐ ಪ್ರಭಾವಕ್ಕೊಳಗಾಗಿ ಸಂತೋಷ್ ರಾವ್ ಮೇಲೆ ಆರೋಪ ಪಟ್ಟಿ ಹೊರಿಸಿರುವ ಸಾಧ್ಯತೆಯನ್ನು ಎತ್ತಿತೋರಿಸಿದೆ. ಈ ಹಿನ್ನಲೆಯಲ್ಲಿ ಜನಾಕ್ರೋಶ ಭುಗಿಲೆದ್ದಿದ್ದು, ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ಸೌಜನ್ಯ ಪುಕರಣದ ತನಿಖೆಗಾಗಿ ದಕ್ಷ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಹಾಗೂ ಧರ್ಮಸ್ಥಳ, ಉಜಿರೆ ಭಾಗಗಳಲ್ಲಿ ನಡೆದಿರುವ ಅಸಹಜ ಸಾವುಗಳನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
ಇದನ್ನೂ ಓದಿ:ಸೌಜನ್ಯ ಪ್ರಕರಣವನ್ನು ಎಸ್.ಐ.ಟಿ ತನಿಖೆಗೆ ವಹಿಸಿ : ಮುಖ್ಯಮಂತ್ರಿಗೆ ನಿಯೋಗ ಮನವಿ
ಸೌಜನ್ಯ ಪ್ರಕರಣದಲ್ಲಿ ಯಾರೂ ಯಾವತ್ತು ರಾಜಕೀಯ ಮಾಡಬಾರದು. ಮುಗ್ಧ ಬಡ ಹೆಣ್ಣು ಮಗಳು ಸೌಜನ್ಯಳಿಗೆ ನ್ಯಾಯ ಸಿಗಬೇಕು.ಬೆಳ್ತಗಂಡಿ ಚಲೋ ಮಹಾಧರಣಿಗೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ದೊಡ್ಡ ಪ್ರಮಾಣದಲ್ಲಿ ಬರುವ ನಿರೀಕ್ಷೆ ಇದೆ ಎಂದರು.
ಕಾರ್ಯಕ್ರಮದ ಸಂಚಾಲಕ, ಕಾರ್ಮಿಕ ಮುಖಂಡ ಬಿ.ಎಂ. ಭಟ್ ಮಾತನಾಡಿ, ‘ ಧರಣಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನಪರ ಸಂಘಟನೆಗಳು ಹಾಗೂ ರಾಜ್ಯದ ಹಲವಾರು ಸಮಾನ ಮನಸ್ಕ ಸಂಘಟನೆಗಳು ಭಾಗವಹಿಸಲಿವೆ. ನಿಜವಾದ ಆರೋಪಿ ಯಾರು ಎಂದು ಪತ್ತೆಯಾಗಬೇಕು ಎಂಬುದೇ ನಮ್ಮ ಹೋರಾಟದ ಉದ್ದೇಶವಾಗಿದೆ ಎಂದರು.
ಡಿ.ವೈ.ಎಫ್. ಐ. ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಕಾಂಗ್ರೆಸ್ ಮುಖಂಡ ಜಯವಿಕ್ರಮ್, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮೈಸೂರು ಸಂಘಟನಾ ಸಂಚಾಲಕ ವಸಂತ ಬಿ.ಕೆ., ದಲಿತ ಮುಖಂಡ ರಮೇಶ್ ಆರ್ ಇದ್ದರು.