ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ 13 ರವರೆಗೆ ಇಡಿ ಕಸ್ಟಡಿಗೆ

ನವದೆಹಲಿ : ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಇಡಿ ಕಸ್ಟಡಿ ಅಂತ್ಯವಾಗಿದ್ದರಿಂದ ಇಂದು (ಜೂನ್‌ 9), ದೆಹಲಿಯ ರೋಸ್ ಅವೆನ್ಯೂ ಜಿಲ್ಲಾ ನ್ಯಾಯಾಲಯದೆದುರು ಅವರನ್ನು ಹಾಜರುಪಡಿಸಲಾಗಿತ್ತು. ಆದರೆ ಈಗ ಅವರನ್ನು ಜೂನ್ 13ರವರೆಗೆ ಇಡಿ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ.

ನಾಲ್ಕು ಗಂಟೆಗಳ ವಿಚಾರಣೆಯ ನಂತರ ಮೇ 30 ರಂದು ಜೈನ್ ಅವರನ್ನು ಇಡಿ ಬಂಧಿಸಿತ್ತು. ಫೆಬ್ರವರಿ 2015 ರಿಂದ 2017ರ ನಡುವೆ ಸತ್ಯೇಂದ್ರ ಜೈನ್ ಹಾಗೂ ಅವರ ಪತ್ನಿ ತಮ್ಮ ಆದಾಯಕ್ಕಿಂತ ಹೆಚ್ಚು ರೂ. 1.47 ಕೋಟಿಯಷ್ಟು ಅಕ್ರಮ ಆಸ್ತಿ ಸಂಪಾದನೆಯ ಆರೋಪವಿದ್ದಿದ್ದರಿಂದ, ಜೂನ್ 7 ರಂದು ಇಡಿ ಅಧಿಕಾರಿಗಳು ಸತ್ಯೇಂದ್ರ ಜೈನ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಸತ್ಯೇಂದ್ರ ಜೈನ್ ಅವರ ನಿವಾಸ ಸೇರಿ ಒಟ್ಟು 7 ಕಡೆಗಳಲ್ಲಿ ದಾಳಿ ನಡೆಸಿತ್ತು. ಜೈನ್ ದೆಹಲಿಯಲ್ಲಿ ಹಲವಾರು ಶೆಲ್ ಕಂಪನಿಗಳನ್ನು ಖರೀದಿಸಿದ್ದಾರೆ ಮತ್ತು ಅವುಗಳ ಮೂಲಕ 16.39 ಕೋಟಿ ರೂ. ಮೌಲ್ಯದ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಿದ್ದಾರೆ .ಇದರಿಂದಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದಾಗ  ಎರಡು ಕೋಟಿಗೂ ಹೆಚ್ಚು ನಗದು ಮತ್ತು 1.8 ಕೆಜಿ ತೂಕದ 133 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಕೋಲ್ಕತ್ತಾ ಮೂಲದ ಕಂಪನಿಯೊಂದಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಈ ವರ್ಷ ಏಪ್ರಿಲ್‌ನಲ್ಲಿ 4.81 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಂಡ ನಂತರ ಇಡಿ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿತ್ತು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸತ್ಯೇಂದ್ರ ಜೈನ್ ವಿರುದ್ಧದ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಇದೊಂದು  ಸಂಪೂರ್ಣ ಸುಳ್ಳು ಪ್ರಕರಣ ಎಂದು ಹೇಳಿದ್ದಾರೆ. ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಚಿವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿತ್ತು.

Donate Janashakthi Media

Leave a Reply

Your email address will not be published. Required fields are marked *