ಬೆಂಗಳೂರು : ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಬಗ್ಗೆ ಯಾವುದೇ ರೀತಿಯ ಮಾನಹಾನಿಕಾರಕ ಸುದ್ದಿಗಳು ಪ್ರಸಾರವಾಗದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದ ಸಚಿವರಿಗೆ ಸೋಮವಾರ ಮೇಲ್ಮನೆಯಲ್ಲೂ ಪ್ರತಿಪಕ್ಷ ಸದಸ್ಯರು ಪ್ರಶ್ನೆಕೇಳಲು ನಿರಾಕರಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಎಸ್ ಟಿ ಸೋಮಶೇಖರ್ ಗೆ ಪ್ರಶ್ನೆ ಕೇಳಲು ಕಾಂಗ್ರೆಸ್ ಸದಸ್ಯರ ನಕಾರವೆತ್ತಿದರು. ಸೋಮಶೇಖರ್ ಉತ್ತರ ನೀಡಲು ಹೋದಾಗ, ಕೋರ್ಟ್ ಗೆ ಹೋದ ಸಚಿವರಿಂದ ನಮಗೆ ಉತ್ತರ ಬೇಕಾಗಿಲ್ಲ, ನಾವು ನಿಮ್ಮ ಉತ್ತರವನ್ನು ಬಹಿಷ್ಕಾರ ಮಾಡುತ್ತೇನೆ ಎಂದು ಪಟ್ಟು ಹಿಡಿದರು. ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ವಾಗ್ವಾದ ಶುರುವಾಯಿತು.
ಇನ್ನು ಪ್ರತಿಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ, ಪ್ರಶ್ನೋತ್ತರ ವೇಳೆಯಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಚುಕ್ಕೆಗುರುತಿನ ಪ್ರಶ್ನೆಗೆ ಸಚಿವ ಸುಧಾಕರ್ ಲಿಖಿತ ಉತ್ತರ ನೀಡಿದ್ದರಾದರೂ ಪ್ರಶ್ನೆ ಕೇಳಲು ನಿರಾಕರಿಸಿದರು. ಅಲ್ಲದೆ, ‘ಇಂತಹ ಸಚಿವರುಗಳಿಗೆ ನಾನು ಪ್ರಶ್ನೆ ಕೇಳುವುದಿಲ್ಲ, ಉತ್ತರವನ್ನೂ ಬಯಸುವುದಿಲ್ಲ ಎಂದಾಗ ಸಚಿವರಾದ ಡಾ.ಕೆ. ಸುಧಾಕರ್, ನಾರಾಯಣಗೌಡ, ಬಿ.ಸಿ. ಪಾಟೀಲ್, ‘ನಿಮ್ಮ ಪಕ್ಷದವರು ಈ ಹಿಂದೆ ಯಾರೂ ನಿರೀಕ್ಷಣಾ ಜಾಮೀನು ಪಡೆದೇ ಇಲ್ಲವೇ? ಪದೇ ಪದೇ ಅನಗತ್ಯವಾಗಿ ಟೀಕಿಸುವುದು ಸರಿ ಅಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.