ಶ್ರೀನಗರ: ‘ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನಿಂದ ತುಂಬಾ ನಿರಾಸೆಯಾಗಿದೆ. ಹಿಜಾಬ್ ಬಗ್ಗೆ ನ್ಯಾಯಾಲಯ ಯೋಜಿಸುತ್ತಿರುವುದು ಕೇವಲ ಬಟ್ಟೆಯ ಬಗ್ಗೆ ಅಲ್ಲ. ಬದಲಿಗೆ ಅದು ಮಹಿಳೆಗೆ ತಾನು ಏನನ್ನು ಧರಿಸಬೇಕೆಂದು ಆಯ್ಕೆ ಮಾಡುವ ಹಕ್ಕಿನ ಕುರಿತದ್ದಾಗಿದೆ. ‘ಈ ಮೂಲಭೂತ ಹಕ್ಕನ್ನು ನ್ಯಾಯಾಲಯ ಎತ್ತಿಹಿಡಿಯದಿರುವುದು ಅಪಹಾಸ್ಯ’ ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ, ವಿದ್ಯಾರ್ಥಿನಿಯರು ಹಿಜಾಬ್ ಕುರಿತಾದ ಕರ್ನಾಟಕ ಹೈಕೋರ್ಟ್ ತೀರ್ಪು ‘ನಿರಾಶಾದಾಯಕ’ ಎಂದು ಕರೆದಿದ್ದಾರೆ.
ಮೆಹಬೂಬಾ ಕೂಡ ಟ್ವೀಟ್ ಮಾಡಿದ್ದು, ‘ಒಂದು ಕಡೆ ನಾವು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತೇವೆ. ಆದರೆ, ನಾವು ಒಂದು ಸರಳ ಆಯ್ಕೆಯ ಹಕ್ಕನ್ನು ಅವರಿಗೆ ನಿರಾಕರಿಸುತ್ತಿದ್ದೇವೆ. ಇದು ಕೇವಲ ಧರ್ಮದ ವಿಚಾರ ಅಲ್ಲ. ಬದಲಿಗೆ ಅದು ಅವರ ಆಯ್ಕೆ ಮಾಡುವ ಸ್ವಾತಂತ್ರ್ಯದ ವಿಚಾರ’ ಎಂದಿದ್ದಾರೆ.
ಹಿಜಾಬ್ ಕುರಿತಾದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಜೈಬುನ್ನೀಸಾ ಮೊಹಿಯುದ್ದೀನ್ ಖಾಜಿ ಅವರನ್ನು ಒಳಗೊಂಡ ವಿಸ್ತೃತ ನ್ಯಾಯಪೀಠ ಇಂದು(ಮಾ.15) ಬೆಳಗ್ಗೆ 10.35ಕ್ಕೆ ಪ್ರಕಟಿಸಿತು.