ಬೆಂಗಳೂರು : ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕಾರ್ಮಿಕ ಇಲಾಖೆಯಿಂದ ಶ್ರಮಿಕರಿಗೆ ಶ್ರಮಿಕ ನಿವಾಸ್ ವಸತಿ ಯೋಜನೆ ಜಾರಿಗೆ ಬರಲಿದೆ ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿನ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಶ್ರಮಿಕ ವರ್ಗದ ಪಾತ್ರ ಮಹತ್ವದ್ದಾಗಿದೆ. ಹೀಗೆ ನಾನಾ ಕಡೆ ಕಾರ್ಯ ನಿರ್ವಹಿಸಲು ಆಗಮಿಸುವ ಕಾರ್ಮಿಕ ವರ್ಗ ರಸ್ತೆ ಬದಿ ಮತ್ತು ಅನೈರ್ಮಲ್ಯಯುತ ಪ್ರದೇಶಗಳಲ್ಲಿ ಗುಡಿಸಲು ಹಾಕಿಕೊಂಡು ವಾಸವಿರುತ್ತಾರೆ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಸಾಮಾನ್ಯವಾಗಿದೆ. ಹೀಗಾಗಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಯೋಜನೆ ?
ರಾಜ್ಯದಲ್ಲಿನ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಶ್ರಮಿಕ ವರ್ಗದ ಪಾತ್ರ ಮಹತ್ವದ್ದಾಗಿದೆ. ಹೀಗೆ ವಿವಿಧೆಡೆ ಕಾರ್ಯ ನಿರ್ವಹಿಸಲು ಆಗಮಿಸುವ ಕಾರ್ಮಿಕ ವರ್ಗ ರಸ್ತೆ ಬದಿ ಮತ್ತು ನೈರ್ಮಲ್ಯಯುತ ಪ್ರದೇಶಗಳಲ್ಲಿ ಗುಡಿಸಲು ಹಾಕಿಕೊಂಡು ಕಾರ್ಯ ನಿರ್ವಹಿಸುವ ಪರಿಸ್ಥಿತಿ ಸರ್ವೇ ಸಾಮಾನ್ಯವಾಗಿದೆ. ಇಂತಹ ಸ್ಥಳಗಳಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ಬದುಕು ಸಾಗಿಸುವುದರಿಂದ ಅವರಿಗೆ ಮೂಲಭೂತ ಸೌಕರ್ಯದ ಕೊರತೆ ಜೊತೆಗೆ ಅನಾರೋಗ್ಯ ಸಮಸ್ಯೆ ಕೂಡಾ ಕಾಡುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡ ಕಾರ್ಮಿಕ ಇಲಾಖೆ ಶ್ರಮಿಕ ವರ್ಗಕ್ಕೆ ವಸತಿ ಸೌಲಭ್ಯ ಒದಗಿಸುವ ಸಂಕಲ್ಪದೊಂದಿಗೆ ಶ್ರಮಿಕ್ ನಿವಾಸ್ ಯೋಜನೆ ಜಾರಿಗೆ ಸಜ್ಜಾಗಿದೆ ಎಂದು ತಿಳಿದು ಬಂದಿದೆ.
ಕೈಗಾರಿಕಾ ಪ್ರದೇಶಗಳು ಸೇರಿದಂತೆ ಬೃಹತ್ ನಿರ್ಮಾಣ ವಲಯಗಳ ಆಸುಪಾಸಿನಲ್ಲಿ ಶ್ರಮಿಕ್ ನಿವಾಸ್ ಯೋಜನೆಯಡಿ ಶ್ರಮಿಕ ವರ್ಗಕ್ಕೆ ವಸತಿ ನೀಡುವ ಸಲುವಾಗಿ ವಸತಿ ಸಮುಚ್ಚಯ ಹಾಗೂ ಬಿಡಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದೆ.
ಈ ಯೋಜನೆಯ ಮೊದಲ ಹಂತವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ “ಶ್ರಮಿಕ್ ನಿವಾಸ್- ಬೃಹತ್ ವಸತಿ ಸಮುಚ್ಚಯ’ ಉದ್ಘಾಟನೆಗೆ ಸಜ್ಜಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಕೈಗಾರಿಕಾ ವಲಯದ ಬದನಹಳ್ಳಿಯಲ್ಲಿ ಬೃಹತ್ ಏಕ ವಸತಿ ಮತ್ತು ಕುಟುಂಬ ವಸತಿಯ ಸಮುಚ್ಚಯ ನಿರ್ಮಾಣವಾಗಿದೆ. ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ವಸತಿ ವ್ಯವಸ್ಥೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಏಕ ವ್ಯಕ್ತಿ ಸಮುಚ್ಚಯದಲ್ಲಿ ಸಾಮೂಹಿಕ ವಸತಿಗೆ ಅವಕಾಶವಿದೆ. ಏಕ ಹಾಸಿಗೆ ವ್ಯವಸ್ಥೆಯಡಿ 96 ಕಾರ್ಮಿಕರು ಮತ್ತು ದ್ವಿ ಹಾಸಿಗೆ ವ್ಯವಸ್ಥೆಯಡಿ 196 ಕಾರ್ಮಿಕರಿಗೆ ವಸತಿ ಅನುಕೂಲ ಲಭಿಸಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇನ್ನು ಕುಟುಂಬದೊಂದಿಗೆ ಉಳಿದುಕೊಳ್ಳಲು ಬಯಸುವ ಕಾರ್ಮಿಕರಿಗೆ ಪ್ರತ್ಯೇಕ ಮನೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ, ಒಂದು ಕುಟುಂಬದಲ್ಲಿ ನಾಲ್ಕು ಮಂದಿ ಎಂಬಂತೆ 48 ಕಾರ್ಮಿಕ ಕುಟುಂಬಗಳಿಗೆ ಮೊದಲ ಹಂತದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಇಲಾಖೆ ಮುಂದಾಗಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಜಾರಿ ಮಾಡಲಾಗುತ್ತಿರುವ “ಶ್ರಮಿಕ್ ನಿವಾಸ್” ಯೋಜನೆಯಡಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗಕ್ಕೆ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಕ್ಕೂ ಆದ್ಯತೆ ನೀಡಲಾಗಿದೆ. ಈ ವಸತಿ ಸಮುಚ್ಚಯಗಳನ್ನು ಇಲಾಖೆಯೇ ನಿರ್ವಹಿಸಲಿದ್ದು, ಕಾರ್ಮಿಕ ಮಂಡಳಿ ಗುರುತಿನ ಚೀಟಿ ಹೊಂದಿರುವ ಕಾರ್ಮಿಕರಿಗೆ ಈ ವಸತಿ ಸೌಲಭ್ಯ ದೊರೆಯಲಿದೆ. ರಾಜ್ಯ ಕಾರ್ಮಿಕ ಇಲಾಖೆ ಜಾರಿ ಮಾಡಿರುವ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಶ್ರಮಿಕ ವರ್ಗದ, ಅದರಲ್ಲೂ ವಲಸೆ ಕಾರ್ಮಿಕರ, ಬಹು ದಿನಗಳ ವಸತಿ ಸಮಸ್ಯೆ ನಿವಾರಣೆ ಆಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ.