ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಕ್ಷಣಗಣನೆ: ಎಷ್ಟು ಬಸ್‌ಗಳಲ್ಲಿ ಓಡಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ನಾಳೆ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಐದು ಗ್ಯಾರಂಟಿಗಳಲ್ಲೊಂದಾದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ಸಿಗಲಿದೆ.‌ ವಿಧಾನಸೌಧದ ಮುಂಭಾಗ ಭಾನುವಾರ ಬೆಳಗ್ಗೆ 12 ಗಂಟೆಗೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ಧೂರಿಯಾಗಿ ಚಾಲನೆ ನೀಡಲಿದ್ದಾರೆ.

ಹೌದು, ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಶಕ್ತಿ ಯೋಜನೆಗೆ ಭಾನುವಾರ (ಜೂ. 11) ಚಾಲನೆ ಸಿಗಲಿದೆ. ಐದು ಗ್ಯಾರಂಟಿಗಳ ಪೈಕಿ ಮೊದಲನೆಯದಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಆ ಮೂಲಕ ನಾಳೆ ಮಧ್ಯಾಹ್ನದಿಂದ ರಾಜ್ಯದ ಮಹಿಳೆಯರು ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ವಿಧಾನಸೌಧ ಮುಂಭಾಗದ ಗ್ರಾಂಡ್ ಸ್ಟೆಪ್ ಮುಂದೆ ಶಕ್ತಿ ಯೋಜನೆಗೆ ಅದ್ಧೂರಿಯಾಗಿ ಚಾಲನೆ ಸಿಗಲಿದೆ.

ಈ ಸಂಬಂಧ ವಿಧಾನಸೌಧದ ಮುಂದೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಮಧ್ಯಪ್ರದೇಶದಿಂದ ಆಗಮಿಸಿ ಮಧ್ಯಾಹ್ನ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

 

ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ರಾಜ್ಯದ ಮಹಿಳೆಯರು ಸಾಮಾನ್ಯ ಸರ್ಕಾರಿ ಬಸ್​​ಗಳಲ್ಲಿ ಉಚಿತವಾಗಿ ಓಡಾಡಬಹುದು. ಅಂದಾಜಿನ ಪ್ರಕಾರ ಉಚಿತ ಫಲಾನುಭವಿಗಳ ಸಂಖ್ಯೆ ತಿಂಗಳಿಗೆ ಒಂದು ಕೋಟಿ ದಾಟಲಿದೆ. ಈ ನಾಲ್ಕು ನಿಗಮಗಳ ಸಂಪೂರ್ಣ ಉಚಿತ ಪ್ರಯಾಣದ ಬಸ್​ಗಳ ವಿವರ ಇಲ್ಲಿದೆ.

ಕೆಎಸ್​ಆರ್​ಟಿಸಿ
ಕೆಎಸ್​ಆರ್​ಟಿಸಿ ನಿಗಮದಲ್ಲಿ ಚಲಾವಣೆಯಲ್ಲಿರುವ ಒಟ್ಟು ಬಸ್‌ಗಳ ಸಂಖ್ಯೆ- 7482
• ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾದ ಬಸ್‌ಗಳ ಸಂಖ್ಯೆ- 6239

ಬಿಎಂಟಿಸಿ
ಬಿಎಂಟಿಸಿ ನಿಗಮದಲ್ಲಿ ಚಲಾವಣೆಯಲ್ಲಿರುವ ಒಟ್ಟು ಬಸ್‌ಗಳ ಸಂಖ್ಯೆ- 5547
• ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾದ ಬಸ್‌ಗಳ ಸಂಖ್ಯೆ- 5102

NWKRTC
• ನಿಗಮದಲ್ಲಿ ಚಲಾವಣೆಯಲ್ಲಿರುವ ಒಟ್ಟು ಬಸ್‌ಗಳ ಸಂಖ್ಯೆ- 4542
• ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾದ ಬಸ್‌ಗಳ ಸಂಖ್ಯೆ- 3986

KKRTC
• ನಿಗಮದಲ್ಲಿ ಚಲಾವಣೆಯಲ್ಲಿರುವ ಒಟ್ಟು ಬಸ್‌ಗಳ ಸಂಖ್ಯೆ- 4106
• ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾದ ಬಸ್‌ಗಳ ಸಂಖ್ಯೆ-3376

ಇನ್ನು, ನಾಲ್ಕು ನಿಗಮಗಳಲ್ಲಿ ಮಹಿಳೆಯರು ಪ್ರಯಾಣಿಸಬಹುದಾದ ಒಟ್ಟು ಬಸ್‌ಗಳ ಸಂಖ್ಯೆ 18,703 ಆಗಿದ್ದು, ಬಿಎಂಟಿಸಿ ಹೊರತುಪಡಿಸಿ ಉಳಿದ ನಿಗಮಗಳ ಬಸ್‌ಗಳಲ್ಲಿ ಪುರುಷರಿಗೆ 50%ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಪ್ರತಿನಿತ್ಯ 3,44,025 ಮಹಿಳಾ ಪ್ರಯಾಣಿಕರಂತೆ ಪ್ರತಿ ತಿಂಗಳು ಸುಮಾರು 1,02,00,750 ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ನಿರೀಕ್ಷೆಯಿದೆ.

ಬಸ್ ನಿಲ್ಲಿಸದೇ ಹೋದ್ರೆ ಕ್ರಮ:ಇತ್ತ ಸರ್ಕಾರಿ ಬಸ್ ನಿಲ್ಲಿಸದೇ ಹೋದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೆಎಸ್ಆರ್ ಟಿಸಿ ಎಂಡಿ ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ. ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ದರವನ್ನು ಸರ್ಕಾರ ಭರಿಸಲಿದೆ. ಹೀಗಾಗಿ ಮಹಿಳೆಯರಿಗೆ ಬಸ್ಸು ಚಾಲಕರು, ನಿರ್ವಾಹಕರು ಗೌರವ ಕೊಡಬೇಕು. ಮಹಿಳೆಯರಿಗೆ ಉಚಿತ ಅಂತ ಬಸ್​ ನಿಲ್ಲಿಸದೇ ಹೋದ್ರೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ಚಾಲಕರು ಹಾಗೂ ಅಧಿಕಾರಿಗಳಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಎಸಿ, ನಾನ್ ಎಸಿ ಬಿಟ್ಟು ಎಲ್ಲ ಜನರಲ್ ಬಸ್​ಗಳಲ್ಲೂ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಮಹಿಳೆಯರು ಯಾವುದಾದರೂ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಓಡಾಡಬಹುದು. ನಾಳೆಯಿಂದ ಯೋಜನೆ ಸಂಬಂಧ ಸೇವಾ ಸಿಂಧು ಪೋರ್ಟಲ್ ಪ್ರಕ್ರಿಯೆ ಶುರುವಾಗಲಿದೆ.

ಶಕ್ತಿ ಯೋಜನೆಯ ಷರತ್ತುಗಳೇನು?

 ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್‌ ಪಡೆಯಬೇಕು. ಅದು ಸಿಗುವವರೆಗೆ ಕೇಂದ್ರ–ರಾಜ್ಯ ಸರ್ಕಾರ ನೀಡಿದ ಯಾವುದಾದರೂ ಗುರುತಿನ ಚೀಟಿ ಬಳಸಬಹುದು.

  1. ಶಕ್ತಿ ಸ್ಮಾರ್ಟ್‌ ಕಾರ್ಡ್‌ ವಿತರಿಸುವವರೆಗೂ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಇಲಾಖೆ, ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಿಳಾಸವಿರುವ ಗುರುತಿನ ಚೀಟಿಗಳನ್ನು ಪರಿಗಣಿಸಿ ಶೂನ್ಯ ಟಿಕೆಟ್‌ ನೀಡಲಾಗುವುದು.
  2. ರಾಜ್ಯದ ಒಳಗಿನ ಪ್ರಯಾಣಕ್ಕೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಎಲ್ಲ ಅಂತಾರಾಜ್ಯ ಸಾರಿಗೆ ಟ್ರಿಪ್‌ಗಳು ಯೋಜನೆಯಿಂದ ಹೊರಕ್ಕೆ
  3. ಕರ್ನಾಟಕದ ಮಹಿಳೆಯರು ಮಾತ್ರ ಉಚಿತ ಬಸ್ ಪ್ರಯಾಣದ ಲಾಭ ಪಡೆಯಬಹುದು
  4. ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ
  5. ರಾಜಹಂಸ, ನಾನ್‌ ಎ ಸಿ– ಸ್ಲೀಪರ್‌, ವಜ್ರ, ವಾಯು ವಜ್ರ, ಐರಾವತ, ಐರಾವತ ಕ್ಲಬ್‌ ಕ್ಲಾಸ್‌, ಐರಾವತ ಗೋಲ್ಡ್‌ ಕ್ಲಾಸ್‌, ಅಂಬಾರಿ, ಅಂಬಾರಿ ಡ್ರೀಮ್‌ ಕ್ಲಾಸ್‌, ಅಂಬಾರಿ ಉತ್ಸವ್‌, ಫ್ಲೈ ಬಸ್‌, ಇವಿ ಪವರ್‌ ಪ್ಲಸ್‌ಗಳಲ್ಲಿ ಶಕ್ತಿ ಯೋಜನೆ ಅನ್ವಯವಾಗುವುದಿಲ್ಲ
  6. ಬಿಎಂಟಿಸಿ ಹೊರತುಪಡಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಎಲ್ಲ ಬಸ್‌ಗಳಲ್ಲಿ (ಅಂತಾರಾಜ್ಯ, ಹವಾ ನಿಯಂತ್ರಿತ ಮತ್ತು ಐಷಾರಾಮಿ ಹೊರತುಪಡಿಸಿ) ಶೇ. 50ರಷ್ಟು ಆಸನಗಳನ್ನು ಪುರುಷರಿಗೆ ಮೀಸಲಿಡಲಾಗುವುದು.
  7. ಲಿಂಗತ್ವ ಅಲ್ಪಸಂಖ್ಯಾತರಿಗೂ ಯೋಜನೆಯಡಿ ಉಚಿತ ಬಸ್ ಪ್ರಯಾಣ ಅನ್ವಯವಾಗಲಿದೆ.
  8. ಲಗೇಜ್‌ ಕಂಡಿಷನ್ ಅನ್ವಯ, ಲಗೇಜ್ ಮಿತಿ ಮೀರಿದರೆ ಮಹಿಳೆಯರು ಲಗೇಜ್ ದರ ನೀಡಬೇ

ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳೋದು ಹೇಗೆ

  1. ಯಾವುದಾದರೂ ಹತ್ತಿರದ ಬೆಂಗಳೂರು ಒನ್, ಸೈಬರ್ ಸೆಂಟರ್​​​ಗೆ ಭೇಟಿ ನೀಡಿ
  2. ಸೇವಾ ಸಿಂಧೂ ಪೋರ್ಟಲ್ ಮೂಲಕ ನೋಂದಣಿಗೆ ಅವಕಾಶ
  3. ಆಧಾರ್ ಕಾರ್ಡ್ ಅಥವಾ ಅಡ್ರೆಸ್ ಫ್ರೂಪ್ ನೀಡಿದ್ರೆ ಸ್ಮಾರ್ಟ್ ಕಾರ್ಡ್ ಮಾಡಿಕೊಡಲಾಗುವುದು
  4. ಸ್ಮಾರ್ಟ್ ಕಾರ್ಡಿಗೆ ಆಗುವ ಖರ್ಚನ್ನು ಸರ್ಕಾರವೇ ಭರಿಸಲಿದೆ
Donate Janashakthi Media

Leave a Reply

Your email address will not be published. Required fields are marked *