-ಪ್ರೊ.ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್
ರಷ್ಯಾದ ಕಝಾನ್‌ನಲ್ಲಿ ನಡೆದ ಬ್ರಿಕ್ಸ್ ದೇಶಗಳ 16ನೇ ಶೃಂಗಸಭೆ ಮಹತ್ವದ ಪ್ರಶ್ನೆಗಳನ್ನೆತ್ತಿದೆ. ಆದರೆ, ಜಾಗತಿಕ ದಕ್ಷಿಣದ ಸಮಸ್ಯೆಗಳ ಬಗ್ಗೆ ಅದು ಅಳವಡಿಸಿಕೊಂಡ ವಿಧಾನದ ಮೂಲಭೂತ ಮಿತಿಗಳನ್ನು ನಿರ್ಲಕ್ಷಿಸುವಂತಿಲ್ಲ. ಐಎಂಎಫ್-ವಿಶ್ವ ಬ್ಯಾಂಕ್- ಡಬ್ಲ್ಯುಟಿಒ ಈಗಿರುವ ಸ್ಥಿತಿಯಲ್ಲಿ ಕೆಲವು ನ್ಯೂನತೆಗಳಿಂದ ಕೂಡಿವೆ ಮತ್ತು ಅವು ಸಾಕಷ್ಟು ಪಾತಿನಿಧಿಕವಾಗಿಲ್ಲ ಎಂದು ಬ್ರಿಕ್ಸ್ ಘೋಷಣೆ ಹೇಳುತ್ತದೆ. ಐಎಂಎಫ್
ಈ ಸಂಸ್ಥೆಗಳೇ, ಅವುಗಳ ಮೂಲತತ್ವವೇ ದೋಷಪೂರಿತವಾಗಿರುವಾಗ ಅವನ್ನು ಹೆಚ್ಚು ಪ್ರಾತಿನಿಧಿಕಗೊಳಿಸಲು ಸಾಧ್ಯವೇ? ವಿಶ್ವ ಬಂಡವಾಳಶಾಹಿ ರೂಪಿಸಿರುವ ಈ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಸ್ವಲ್ಪಮಟ್ಟಿಗೆ ಹೆಚ್ಚು ಪ್ರಾತಿನಿಧಿಕವಾಗಿ ಮಾಡಿದರೂ ಸಹ, ಅವುಗಳಲ್ಲಿ ಅಂತರ್ಗತವಾಗಿರುವ ಅಪಾಯವನ್ನು ಕಡೆಗಣಿಸಲಾಗದು. ಸಾಮ್ರಾಜ್ಯಶಾಹಿ ಪ್ರಾಬಲ್ಯದಿಂದ ಜಾಗತಿಕ ದಕ್ಷಿಣಕ್ಕೆ ನಿಜವಾದ ಒಂದು ಪಾರು ಮಾರ್ಗವನ್ನು ಬ್ರಿಕ್ಸ್ ಒದಗಿಸಬೇಕಾದರೆ, ದಬ್ಬಾಳಿಕೆಯಿಲ್ಲದ ಏರ್ಪಾಟುಗಳನ್ನು ಅದು ರೂಪಿಸಬೇಕಾಗುತ್ತದೆ. ಐಎಂಎಫ್
ಬ್ರಿಕ್ಸ್ (ಬ್ರೆಝಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ-BRICS) ದೇಶಗಳ ಕಝಾನ್ ಶೃಂಗಸಭೆಯು ಹಲವಾರು ಕಾರಣಗಳಿಂದಾಗಿ ಒಂದು ಐತಿಹಾಸಿಕ ಮಹತ್ವವನ್ನು ಹೊಂದಿದೆ: ಮೊದಲನೆಯದಾಗಿ, ಬ್ರಿಕ್ಸ್ ಸಂಘಟನೆಯ ಪೂರ್ಣ ಸದಸ್ಯತ್ವ ಪಡೆಯುವ ಮೊದಲ ಹೆಜ್ಜೆಯಾಗಿ ಪಾಲುದಾರ” ದೇಶಗಳು ಎಂಬ ಹೊಸ ವರ್ಗವನ್ನು ಅದು ಸೃಷ್ಟಿಸಿದೆ ಮತ್ತು ಕ್ಯೂಬಾ ಮತ್ತು ಬೊಲಿವಿಯಾ ಸೇರಿದಂತೆ ಹದಿಮೂರು ಹೊಸ ಪಾಲುದಾರ ದೇಶಗಳನ್ನು ಸ್ವಾಗತಿಸಿದೆ. ಐಎಂಎಫ್
ಇದನ್ನೂ ಓದಿ: ನ್ಯೂಜಿಲ್ಯಾಂಡ್ ಸರ್ಕಾರದ ವಿರುದ್ದ ತಿರುಗಿ ಬಿದ್ದ ಮಾವೋರಿ ಜನಾಂಗ: ಸರ್ಕಾರದ ನೀತಿಗಳನ್ನು ವಿರೋಧಿಸಿ ಬೃಹತ್ ಪ್ರತಿಭಟನೆ
ಎರಡನೆಯದಾಗಿ, ಸಾಮ್ರಾಜ್ಯಶಾಹಿ ಪ್ರಾಬಲ್ಯದ ಎದುರು ತಮ್ಮ ಸ್ವಾತಂತ್ರ‍್ಯವನ್ನು ಪ್ರತಿಪಾದಿಸುವ ಧೈರ್ಯ ತೋರಿದ ದೇಶಗಳ ಮೇಲೆ ಯು.ಎಸ್ ನೇತೃತ್ವದ ಸಾಮ್ರಾಜ್ಯಶಾಹಿ ಶಕ್ತಿಗಳು ಹೇರುತ್ತಿರುವ ಏಕಪಕ್ಷೀಯ ಆರ್ಥಿಕ ನಿರ್ಬಂಧಗಳನ್ನು ವಿರೋಧಿಸಿದೆ. ಐಎಂಎಫ್
ಮೂರನೆಯದಾಗಿ, ಅಂತಾರಾಷ್ಟ್ರೀಯ ಹಣಕಾಸು ಮತ್ತು ವಿತ್ತೀಯ ವ್ಯವಸ್ಥೆಯ ಸುಧಾರಣೆಗಾಗಿ ಒಂದು ಕಾರ್ಯಕ್ರಮವನ್ನು ಸೂಚಿಸಿದೆ. ಡಾಲರ್‌ನ ಪ್ರಾಬಲ್ಯವನ್ನು ಮೀರುವ ಅಗತ್ಯವನ್ನು ಒತ್ತಿಹೇಳಿದ ಕಝಾನ್ ಘೋಷಣೆಯು ಸ್ವತಃ ಸಂಕ್ಷಿಪ್ತವಾಗಿತ್ತು. ಆದರೆ, ಕೈಗೊಳ್ಳಬಹುದಾದ ಕ್ರಮಗಳ ಒಂದು ಸವಿಸ್ತಾರ ವಿವರಣೆಯನ್ನು ರಷ್ಯಾದ ಸರ್ಕಾರಿ ಸಂಸ್ಥೆಗಳು ಒದಗಿಸಿದ ಹಿನ್ನೆಲೆಯ ದಾಖಲೆ- ಪತ್ರಗಳು ಕೊಡುತ್ತವೆ. ಐಎಂಎಫ್
ಇವು ಸ್ವಾಗತಿಸಬೇಕಾದ ಪ್ರಮುಖ ಬೆಳವಣಿಗೆಗಳು, ನಿಜ. ಆದರೆ, ಜಾಗತಿಕ ದಕ್ಷಿಣದ ಸಮಸ್ಯೆಗಳ ಬಗ್ಗೆ ಬ್ರಿಕ್ಸ್ ಅಳವಡಿಸಿಕೊಂಡ ವಿಧಾನದ ಮೂಲಭೂತ ಮಿತಿಗಳನ್ನು ನಿರ್ಲಕ್ಷಿಸುವಂತಿಲ್ಲ. ಈ ವಿಧಾನದ ಸಾರಭೂತ ಅಂಶವೆಂದರೆ, ಅಸ್ತಿತ್ವದಲ್ಲಿರುವ ವಿಶ್ವ ವ್ಯಾಪಾರ ಸಂಘಟನೆ ಮತ್ತು ಐಎಂಎಫ್-ವಿಶ್ವ ಬ್ಯಾಂಕ್ ಸಂಸ್ಥೆಗಳನ್ನು ಹೆಚ್ಚು ಪ್ರಾತಿನಿಧಿಕವಾಗುವಂತೆ ಬದಲಾಯಿಸುವುದು. ಖಚಿತವಾಗಿ ಹೇಳುವುದಾದರೆ, ಬ್ರಿಕ್ಸ್ ಎಂಬುದು ಒಂದು ಮಿಶ್ರರೂಪದ ಬಣ. ಇಂತಹ ಒಂದು ಸಂಸ್ಥೆಯನ್ನು ಅದು ಒಂದು ಆಮೂಲಾಗ್ರವಾದ ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗದು. ಆದರೆ, ನಾನು ಇಲ್ಲಿ ಪ್ರಸ್ತಾಪಿಸುತ್ತಿರುವ ಸಮಸ್ಯೆಯು ಒಂದು ಆಮೂಲಾಗ್ರವಾದ ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳುವುದು ಕಾರ್ಯಸಾಧುವೇ ಎಂಬುದಲ್ಲ; ಯಾವುದು ಒಂದು ಆಮೂಲಾಗ್ರವಾದ ಕಾರ್ಯಸೂಚಿಯಾಗುತ್ತದೆ ಎಂಬುದು.
ಮೂಲತತ್ವವೇ ದೋಷಪೂರಿತ
ಸಾಮ್ರಾಜ್ಯಶಾಹಿ ದೇಶಗಳ ಹಿಡಿತದಲ್ಲಿರುವ ಈ ಅಂತಾರಾಷ್ಟ್ರೀಯ ಸಂಸ್ಥೆಗಳು ಈಗಿರುವ ಸ್ಥಿತಿಯಲ್ಲಿ ಕೆಲವು ನ್ಯೂನತೆಗಳಿಂದ ಕೂಡಿವೆ ಮತ್ತು ಅವು ಸಾಕಷ್ಟು ಪಾತಿನಿಧಿಕವಾಗಿಲ್ಲ ಎಂದು ಬ್ರಿಕ್ಸ್ ಘೋಷಣೆ ಹೇಳುತ್ತದೆ. ಆದರೆ, ಅವುಗಳ ಆಡಳಿತ ಅಥವಾ ಅವುಗಳ ಕಾರ್ಯ-ಕ್ಷಮತೆಯು ಹೇಗೇ ಇರಲಿ, ಈ ಸಂಸ್ಥೆಗಳೇ ದೋಷಪೂರಿತ. ಏಕೆಂದರೆ, ಅವುಗಳ ಮೂಲತತ್ವವೇದೋಷಪೂರಿತವಾಗಿದೆ. ಒಂದು ಉಪಮೆಯನ್ನು ಬಳಸಿ ಹೇಳುವುದಾದರೆ, ಈಗಿರುವ ವ್ಯವಸ್ಥೆಯಲ್ಲಿ, ಹತೋಟಿ ಕೂಟಗಳು (cartels) ಮತ್ತು ಏಕಸ್ವಾಮ್ಯಗಳ ಕಾರಣದಿಂದಾಗಿ ಕಾರ್ಮಿಕರ ಶೋಷಣೆಯಾಗುತ್ತಿದೆ ಮತ್ತು ಒಂದು ವೇಳೆ ಮುಕ್ತ ಸ್ಪರ್ಧೆಯು ಅವುಗಳನ್ನು ಪಲ್ಲಟಗೊಳಿಸಿದರೆ ಶೋಷಣೆಯು ಕಣ್ಮರೆಯಾಗುತ್ತದೆ ಎಂಬ ನಿಲುವನ್ನು ಬ್ರಿಕ್ಸ್ ಹೊಂದಿದೆ ಎಂದಾಗುತ್ತದೆ.
ಉದಾಹರಣೆಗೆ, ವಿಶ್ವ ವ್ಯಾಪಾರ ಸಂಘಟನೆಯನ್ನೇ (WTO)ತೆಗೆದುಕೊಳ್ಳಿ. ಮುಂದುವರೆದ ದೇಶಗಳು ವಿಶ್ವ ವ್ಯಾಪಾರ ಸಂಘಟನೆಯ ಮೂಲ ಆಶಯದಿಂದ ದೂರ ಸರಿಯುತ್ತಿವೆ ಮತ್ತು ಒಂದು ರಕ್ಷಣಾತ್ಮಕ ವ್ಯಾಪಾರ ನೀತಿಯನ್ನು ಅನುಸರಿಸುತ್ತಿವೆ ಎಂದು ಕಝಾನ್ ಘೋಷಣೆ ಹೇಳುತ್ತದೆ. ಇದರಿಂದ ಜಾಗತಿಕ ದಕ್ಷಿಣಕ್ಕೆ ತಾರತಮ್ಯವಾಗುತ್ತಿದೆ ಮತ್ತು ಈ ತಾರತಮ್ಯವನ್ನು ವಿಶ್ವ ವ್ಯಾಪಾರ ಸಂಘಟನೆಯ ಆಡಳಿತದಲ್ಲಿ ದಕ್ಷಿಣದ ದೇಶಗಳಿಗೆ ಹೆಚ್ಚು ಪ್ರಾತಿನಿಧ್ಯ ಕಲ್ಪಿಸುವ ಮೂಲಕ ಸರಿಪಡಿಸಬಹುದು ಎಂದು ಕಝಾನ್ ಘೋಷಣೆ ಪ್ರತಿಪಾದಿಸುತ್ತದೆ.
ಆದರೆ, ಇಲ್ಲಿರುವ ಸಮಸ್ಯೆ ಯೆಂದರೆ, ವಿಶ್ವ ವ್ಯಾಪಾರ ಸಂಘಟನೆಯನ್ನು ಹುಟ್ಟಿಹಾಕಲು ಆಧರಿಸಿದ ಮುಕ್ತ ವ್ಯಾಪಾರ ವಾದವೇ ಸ್ವತಃ ದೋಷಪೂರಿತವಾಗಿದೆ. ಇದು ಸೇ ಅವರ ನಿಯಮವು ಕಾರ್ಯಸಾಧು ಎಂದು ಭಾವಿಸಿಕೊಂಡಿದೆ (ಜನಶಕ್ತಿ; ಸಂಚಿಕೆ 46ನ್ನು ನೋಡಿ). ಈ ನಿಯಮವು ಒಟ್ಟಾರೆ ಬೇಡಿಕೆಯಲ್ಲಿ ಕೊರತೆಯ ಸಮಸ್ಯೆಯೇ ಇರುವುದಿಲ್ಲ ಎಂದು ಹೇಳುತ್ತದೆ. ಆದ್ದರಿಂದ ಮಾರುಕಟ್ಟೆಗಳಿಗಾಗಿ ಹೋರಾಟವೇ ಇರುವುದಿಲ್ಲ: ಪ್ರತಿ ದೇಶವೂ ಮುಕ್ತ ವ್ಯಾಪಾರದಲ್ಲಿ ತೊಡಗುವ ಮೊದಲು ಮತ್ತು ನಂತರ ತನ್ನ ಎಲ್ಲ ಸಂಪನ್ಮೂಲಗಳನ್ನೂ ಪೂರ್ಣವಾಗಿ ಬಳಕೆ ಮಾಡಿಕೊಂಡಿರುತ್ತದೆ. ಒಂದೇ ಒಂದು ವ್ಯತ್ಯಾಸವೆಂದರೆ, ಮುಕ್ತ ವ್ಯಾಪಾರದಲ್ಲಿ ತೊಡಗಿದ ನಂತರ ಬೇರೆ ಬೇರೆ ಸರಕುಗಳನ್ನು ಉತ್ಪಾದಿಸುವ ಸಲುವಾಗಿ ಸಂಪನ್ಮೂಲಗಳನ್ನು ವಿಭಿನ್ನವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಈ ನಿಯಮ ಹೇಳುತ್ತದೆ.
ಇದು ಬಂಡವಾಳಶಾಹಿಯ ವಾಸ್ತವದಿಂದ ದೂರವಿರುವ ಮತ್ತು ಅಸಂಬದ್ಧವಾದ ಒಂದು ದಾವೆ. ಈ ಕಾರಣದಿಂದಾಗಿ ಜಾಗತಿಕ ದಕ್ಷಿಣದ ದೇಶಗಳನ್ನು ಮುಕ್ತ ವ್ಯಾಪಾರಕ್ಕೆ ಒಳಪಡಿಸುವುದು ಅವುಗಳನ್ನು ಡಾರ್ವಿನಿಯನ್ ಸ್ಪರ್ಧೆಗೆ (ಅಂದರೆ, ಬಲಶಾಲಿಗಳು ಮಾತ್ರ ಬದುಕುಳಿಯುವ ಸ್ಪರ್ಧೆಗೆ) ತಳ್ಳಿದಂತಾಗುತ್ತದೆ ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ದೇಶ ದೇಶಗಳ ನಡುವೆ ಯಾವುದೇ ರೀತಿಯ ಸಹಕಾರದ ಆಶಯವನ್ನು ತಲೆಕೆಳಗು ಮಾಡುತ್ತದೆ. ಅನುಷ್ಠಾನದಲ್ಲಿ ವಿಶ್ವ ವ್ಯಾಪಾರ ಸಂಘಟನೆಯ ತತ್ವವು ಜಾಗತಿಕ ದಕ್ಷಿಣದ ದೇಶಗಳನ್ನೂ ಒಳಗೊಂಡಂತೆ, ದೇಶ ದೇಶಗಳ ನಡುವೆ ಸಹಕಾರವನ್ನು ಖಾತ್ರಿಪಡಿಸುವುದರ ಬದಲು, ಅವುಗಳ ನಡುವೆ ಒಂದು ಘಾತುಕ ಸ್ಪರ್ಧೆಯನ್ನು ಖಚಿತಪಡಿಸುತ್ತದೆ.
ಅಂತೆಯೇ, ಒಂದು ದೇಶವು ತನ್ನ ರೈತರಿಗೆ ನೀಡುವ ಬೆಂಬಲ ಬೆಲೆಯು ಅದು ಒಂದು ನಿರ್ದಿಷ್ಟ ಉತ್ಪನ್ನಕ್ಕೆ ಕೊಡುವ ಸಬ್ಸಿಡಿಯ ಮೌಲ್ಯದ ಶೇ. 10ಕ್ಕಿಂತ ಹೆಚ್ಚು ಮೊತ್ತವನ್ನು ಹೊಂದಿರುವುದು ಸಾಧ್ಯವಿಲ್ಲ ಎಂಬ ವಿಶ್ವ ವ್ಯಾಪಾರ ಸಂಘಟನೆಯ ನಿಯಮವು, ಅತ್ಯಂತ ದೋಷಪೂರಿತವಾಗಿದೆ (ಭಾರತವು ಈ ನಿಯಮವನ್ನು ಉಲ್ಲಂಘಿಸುತ್ತದೆಯೇ ಅಥವಾ ಇಲ್ಲವೇ ಎಂಬುದು ಒಂದು ಬೇರೆಯೇ ಪ್ರಶ್ನೆ): ಈ ನಿಯಮವನ್ನು ಆಧರಿಸಿದ ಮಾರುಕಟ್ಟೆಯನ್ನು ವಿರೂಪಗೊಳಿಸುವ ಮತ್ತು ಮಾರುಕಟ್ಟೆಯನ್ನು ವಿರೂಪಗೊಳಿಸದ ಸಬ್ಸಿಡಿಗಳ ನಡುವಿನ ಆ ಒಂದು ವ್ಯತ್ಯಾಸವೇ ಮಾರುಕಟ್ಟೆಯು ಸದಾ ದಕ್ಷವಾಗಿಯೇ ಕಾರ್ಯನಿರ್ವಹಿಸುತ್ತದೆ ಎಂದು ಊಹಿಸಿಕೊಳ್ಳುತ್ತದೆ ಮತ್ತು ಅದು ನಮ್ಮನ್ನು ಕೀನ್ಸ್-ಪೂರ್ವದಲ್ಲಿ ಆಚರಣೆಯಲ್ಲಿದ್ದ ಅರ್ಥಶಾಸ್ತ್ರದ ಪರಿಸ್ಥಿತಿಗೆ ಕೊಂಡೊಯ್ಯುತ್ತದೆ. ಹಾಗಾಗಿ, ವಿಶ್ವ ವ್ಯಾಪಾರ ಸಂಘಟನೆಯ ಈ ವಾದವು ಅದು ತನ್ನ ಅಸಂಬದ್ಧ ಊಹೆಗಳ ಮೂಲಕ ತಾನೇ ಸೃಷ್ಟಿಕೊಂಡ ಕಾಲ್ಪನಿಕ ಪ್ರಪಂಚದ ಹೊರಗೆ ಯಾವ ಕಾರಣವನ್ನೂ ಅಥವಾ ಸಮರ್ಥನೆಯನ್ನೂ ಹೊಂದಿಲ್ಲ.
ಡಾಲರ್ ಪಾರಮ್ಯದ ಪ್ರಶ್ನೆ
ಬ್ರಿಕ್ಸ್ ಘೋಷಣೆಯು, ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಯುಎಸ್ ಡಾಲರ್ ಹೊಂದಿರುವ ಪಾರಮ್ಯವನ್ನು ಕೊನೆಗೊಳಿಸಿ ದೇಶಗಳು ತಮ್ಮ ಪರಸ್ಪರ ವ್ಯಾಪಾರ-ವಹಿವಾಟುಗಳನ್ನು ಹೆಚ್ಚು ಹೆಚ್ಚಾಗಿ ಒಂದು ನಿಗದಿತ ವಿನಿಮಯ ದರದಲ್ಲಿ ತಮ್ಮ ತಮ್ಮ ರಾಷ್ಟ್ರೀಯ ಕರೆನ್ಸಿಗಳ ಮೂಲಕ ಕೈಗೊಳ್ಳುವ ಅಂಶಕ್ಕೆ ಒತ್ತು ಕೊಟ್ಟಿದೆ. ಡಾಲರ್ ಪಾರಮ್ಯವನ್ನು ಕೊನೆಗೊಳಿಸುವುದು ನಿಸ್ಸಂದೇಹವಾಗಿಯೂ ಒಂದು ಶ್ಲಾಘನೀಯ ಉದ್ದೇಶವೇ. ಆದರೆ ಅದಷ್ಟೇ ಸಾಲದು. ಹಣಕಾಸು ಬಂಡವಾಳದ ಪಾರಮ್ಯವನ್ನು ತೊಡೆದುಹಾಕುವುದೂ ಸಹ ಅಗತ್ಯವೇ. ಈ ಉದ್ದೇಶಕ್ಕಾಗಿ, ಕನಿಷ್ಠ ಮೂರು ಷರತ್ತುಗಳು ಅಗತ್ಯವಾಗುತ್ತವೆ:
ಮೊದಲನೆಯದು, ಚಾಲ್ತಿ ಖಾತೆಯ ಅಸಮತೋಲನವನ್ನು ತೊಡೆದು ಹಾಕುವುದು. ಇದನ್ನು ಚಾಲ್ತಿ ಹೆಚ್ಚುವರಿಯನ್ನು ಹೊಂದಿರುವ ದೇಶಗಳು ಮಾಡಬೇಕೇ ಹೊರತು ಕೊರತೆಯನ್ನು ಹೊಂದಿರುವ ದೇಶಗಳಲ್ಲ.
ಎರಡನೆಯದು, ಚಾಲ್ತಿ ಖಾತೆಯ ಅಸಮತೋಲನವನ್ನು ತೊಡೆದುಹಾಕುವ ವರೆಗೂ, ಹೆಚ್ಚುವರಿ ವಿದೇಶಿ ವಿನಿಮಯವನ್ನು ಹೊಂದಿರುವ ದೇಶಗಳು ಕೊರತೆಯ ದೇಶಗಳು ತಮಗೆ ಬರೆದು ಕೊಟ್ಟ ಎಲ್ಲ ಸಾಲ ಪತ್ರಗಳನ್ನೂ (ಐಒಯು) ಸಾಧ್ಯವಾದಷ್ಟೂ ಹೆಚ್ಚು ಕಾಲ ಹಿಡಿದಿಟ್ಟುಕೊಂಡಿರಲು ಸಿದ್ಧರಾಗಿರಬೇಕು.
ಮೂರನೆಯದು, ವಿದೇಶಿ ವಿನಿಮಯ ಕೊರತೆಯ ದೇಶಗಳು ಬಾಕಿ ಸಾಲವನ್ನು ಇತ್ಯರ್ಥಗೊಳಿಸುವಲ್ಲಿ ಆಸ್ತಿ ವರ್ಗಾವಣೆಗಳು (ಅಪ-ರಾಷ್ಟ್ರೀಕರಣ) ಇರಬಾರದು.
ವಿದೇಶಿ ವಿನಿಮಯ ಕೊರತೆಯ ದೇಶಗಳಿಗಿಂತ ಮಿಗಿಲಾಗಿ ವಿನಿಮಯವನ್ನು ಅಧಿಕವಾಗಿ ಹೊಂದಿದ ದೇಶಗಳು ಹೊಂದಾಣಿಕೆ ಮಾಡುವುದು ಡಾಲರ್ ಪಾರಮ್ಯವನ್ನು ತೊಡೆದುಹಾಕುವ ದೃಷ್ಟಿಯಿಂದ ಮಾತ್ರವಲ್ಲ, ವಿಶ್ವದ ಉತ್ಪಾದನೆ ಮತ್ತು ಉದ್ಯೋಗದ ದೃಷ್ಟಿಯಿಂದಲೂ ಅಪೇಕ್ಷಣೀಯವೇ ಮತ್ತು ಅದು ವಿಶ್ವದ ದುಡಿಯುವ ಜನರ ಕಲ್ಯಾಣದಲ್ಲಿ ಪರಿಣಮಿಸುತ್ತದೆ. ಐಎಂಎಫ್
ವಿದೇಶಿ ವಿನಿಮಯವನ್ನು ಅಧಿಕವಾಗಿ ಹೊಂದಿದ ದೇಶವು ಹೊಂದಾಣಿಕೆ ಮಾಡಿಕೊಂಡರೆ ಅದು ಸರಕು ಮತ್ತು ಸೇವೆಗಳ ದೇಶೀಯ ಹೀರಿಕೆಯನ್ನು ವೃದ್ಧಿಸುತ್ತದೆ ಮತ್ತು ಆದರ ಉತ್ಪಾದನೆಯು ಪೂರ್ಣ ಸಾಮರ್ಥ್ಯವನ್ನು ತಲುಪುವುದರಿಂದ ಅದರ ರಫ್ತುಗಳನ್ನು ತಗ್ಗಿಸುತ್ತದೆ. ವಿನಿಮಯ ಕೊರತೆಯ ದೇಶದಲ್ಲಿ, ದೇಶೀಯ ಹೀರಿಕೆಯು ಮೊದಲಿನ ಅದೇ ಮಟ್ಟದಲ್ಲಿ ಇದ್ದರೂ ಸಹ, ಅದರ ಆಮದುಗಳು ಕುಸಿದಿರುವುದರಿಂದ, ಹೆಚ್ಚು ಉತ್ಪಾದನೆ ಮತ್ತು ಉದ್ಯೋಗಗಳನ್ನು ಹೊಂದಿರುತ್ತದೆ.
ಆದ್ದರಿಂದ, ಎರಡೂ ದೇಶಗಳನ್ನು ಒಟ್ಟಿಗೆ ತೆಗೆದುಕೊಂಡರೆ, ಒಟ್ಟಾರೆ ಬೇಡಿಕೆಯ ಹೆಚ್ಚಳವು ಹೆಚ್ಚಿನ ಮಟ್ಟದ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಪರಿಣಮಿಸುತ್ತದೆ. ಮತ್ತು ವಿನಿಮಯವನ್ನು ಅಧಿಕವಾಗಿ ಹೊಂದಿದ ದೇಶದ ಹೆಚ್ಚಿದ ಹೀರಿಕೆಯು ಅದರ ದುಡಿಯುವ ಜನರಿಂದ ಹೆಚ್ಚು ಬಳಕೆಯ ರೂಪವನ್ನು ಪಡೆದರೆ, ಎರಡೂ ದೇಶಗಳಲ್ಲಿನ ದುಡಿಯುವ ಜನರ ಪ್ರಯೋಜನವು ಇನ್ನೂ ಹೆಚ್ಚಿನದಾಗಿರುತ್ತದೆ: ವಿನಿಮಯ-ಅಧಿಕ ದೇಶದಲ್ಲಿ ಹೆಚ್ಚಿನ ಬಳಕೆಯ ಮೂಲಕ ಮತ್ತು ಕೊರತೆಯ ದೇಶದಲ್ಲಿ ಹೆಚ್ಚು ಉದ್ಯೋಗಗಳ ಮೂಲಕ. ಐಎಂಎಫ್
ಇದಕ್ಕೆ ವ್ಯತಿರಿಕ್ತವಾಗಿ, ಕೊರತೆಯ ದೇಶವು ಹೊಂದಾಣಿಕೆಯನ್ನು ಮಾಡಬೇಕಾದರೆ (ಇದು ಈಗ ರೂಢಿಯಲ್ಲಿರುವ ಪದ್ಧತಿ) ಆಗ ಅದರ ದೇಶೀಯ ಹೀರಿಕೆಯು ಇಳಿಕೆಯನ್ನು ಕಾಣಬೇಕಾಗುತ್ತದೆ. ಇದು ಆ ದೇಶದೊಳಗೆ ಒಂದು ಆರ್ಥಿಕ ಹಿಂಜರಿತವನ್ನು ಉಂಟುಮಾಡುತ್ತದೆ. ವಿಶ್ವದ ಒಟ್ಟು ಬೇಡಿಕೆಯ ಒಟ್ಟಾರೆ ಮಟ್ಟವು, ವಿಶ್ವದ ದುಡಿಯುವ ಜನರಿಗೆ ನಷ್ಟವನ್ನುಂಟುಮಾಡಿ, ವಿಶೇಷವಾಗಿ ಕೊರತೆಯ ದೇಶಕ್ಕೆ ನಷ್ಟವನ್ನುಂಟುಮಾಡಿ, ಇಳಿಕೆಯಾಗುತ್ತದೆ. ಹೀಗೆ ಕೊರತೆಯ ದೇಶಗಳ ಹೊಂದಾಣಿಕೆಯ ಮೂಲಕ ಚಾಲ್ತಿ ಖಾತೆಯ ಅಸಮತೋಲನವನ್ನು ತೊಡೆದು ಹಾಕುವ ಕ್ರಮವು ವಿನಿಮಯ-ಅಧಿಕ ದೇಶಗಳ ಹೊಂದಾಣಿಕೆಗಿಂತ ಕೀಳು
ಮಟ್ಟದ್ದಾಗಿರುತ್ತದೆ. ಆದರೂ ವಿನಿಮಯ-ಅಧಿಕ ದೇಶಗಳ ಹೊಂದಾಣಿಕೆಯನ್ನು ಜಾರಿಗೆ ತರುವುದು ಹೆಚ್ಚು ಕಷ್ಟಕರವಾಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
ಇದನ್ನೂ ನೋಡಿ: ವಿಕ್ರಂಗೌಡ ಶೂಟೌಟ್ ಪ್ರಕರಣ – ನ್ಯಾಯಾಂಗ ತನಿಖೆಗೆ ಒಪ್ಪಿಸಿ – ಮಾಜಿ ನಕ್ಸಲರ ಆಗ್ರಹJanashakthi Media
ಅದರ ಜೊತೆಗೆ, ವಿನಿಮಯವನ್ನು ಅಧಿಕವಾಗಿ ಹೊಂದಿದ ದೇಶಗಳನ್ನು ಹೊಂದಾಣಿಕೆ ಮಾಡಿಸುವ ಒಂದು ವ್ಯವಸ್ಥೆಯೇ ಇಲ್ಲದೆ ಡಾಲರ್ ಪ್ರಾಬಲ್ಯವನ್ನು ನಿರ್ಮೂಲನೆ ಮಾಡುವುದು ಕರೆನ್ಸಿಯ ಪ್ರಾಬಲ್ಯವನ್ನೇನೂ ಸಂಪೂರ್ಣವಾಗಿ ತೊಡೆದುಹಾಕುವುದಿಲ್ಲ, ಬದಲಾಗಿ ಬೇರೊಂದು ಕರೆನ್ಸಿಯ ಪ್ರಾಬಲ್ಯಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ, ಬ್ರಿಕ್ಸ್ ದೇಶಗಳು ತಮ್ಮ ನಡುವಿನ ವ್ಯಾಪಾರವನ್ನು ಅವುಗಳು ನಿಗದಿಪಡಿಸಿಕೊಂಡ ವಿನಿಮಯ ದರದಲ್ಲಿ (ಇಲ್ಲದಿದ್ದರೆ ಕರೆನ್ಸಿಯ ಯದ್ವಾ-ತದ್ವಾ ಏರಿಳಿತಗಳು ವ್ಯಾಪಾರ ವ್ಯವಸ್ಥೆಯನ್ನು ಅಸ್ಥಿರಗೊಳಿಸುತ್ತವೆ) ಮತ್ತು ತಮ್ಮ ರಾಷ್ಟ್ರೀಯ ಕರೆನ್ಸಿಗಳಲ್ಲಿ ಮಾತ್ರವೇ ವ್ಯಾಪಾರ ಮಾಡುತ್ತವೆ
ಎಂದು ಊಹಿಸಿಕೊಳ್ಳಿ. ಐಎಂಎಫ್
ಮತ್ತೊಂದು ದೇಶದೊಂದಿಗಿನ ಹೋಲಿಕೆಯಲ್ಲಿ ಒಂದು ದೇಶವು ತನ್ನ ಚಾಲ್ತಿ ಖಾತೆಯಲ್ಲಿ ಕೊರತೆಯನ್ನು ನಿರಂತರವಾಗಿ ಹೊಂದಿದ್ದರೆ, ಆಗ, ಒಂದೋ ಅದು ಈ ಕೊರತೆಯನ್ನು ನಿವಾರಿಸಿಕೊಳ್ಳಲು ಪ್ರಸ್ತುತ ರೂಢಿಯಲ್ಲಿರುವಂತೆ, ತನ್ನ ದೇಶೀಯ ಹೀರಿಕೆಯನ್ನು ಕಡಿಮೆ ಮಾಡುತ್ತದೆ, ಅಥವಾ ತನ್ನ ಕರೆನ್ಸಿಯ ವಿರುದ್ಧ ಒತ್ತಡ ಹೆಚ್ಚುವ ತನಕವೂ ವಿನಿಮಯವನ್ನು ಅಧಿಕವಾಗಿ ಹೊಂದಿದ ದೇಶಕ್ಕೆ ಸಾಲ ಪತ್ರಗಳನ್ನು ಕೊಡುತ್ತಾ ಹೋಗುತ್ತದೆ ಮತ್ತು ಇನ್ನು ಮುಂದೆ ಅದು ನಿಗದಿತ ವಿನಿಮಯ ದರದಲ್ಲಿ ವ್ಯವಹಾರ ಮುಂದುವರೆಸುವುದು ಸಾಧ್ಯವಾಗುವುದಿಲ್ಲ. ತನ್ನ ಕರೆನ್ಸಿಯ ಮೇಲೆ ಉಂಟಾದ ಒತ್ತಡದಿಂದಾಗಿ ನಿಗದಿತ ವಿನಿಮಯ ದರದಲ್ಲಿ ವ್ಯವಹರಿಸಲಾಗದ ದೇಶದ ಸಂದರ್ಭದಲ್ಲಿ, ವಿನಿಮಯವನ್ನು ಅಧಿಕವಾಗಿ ಹೊಂದಿದ ದೇಶಗಳ ಕರೆನ್ಸಿಗಳು ಪ್ರಾಬಲ್ಯವನ್ನು ಪಡೆದುಕೊಳ್ಳುತ್ತವೆ.
ಅಂತಾರಾಷ್ಟ್ರೀಯ ವ್ಯಾಪಾರದ ಕರೆನ್ಸಿಯಾಗಿ ಡಾಲರ್‌ಅನ್ನು ಪಲ್ಲಟಗೊಳಿಸುವುದು ನಿಸ್ಸಂದೇಹವಾಗಿಯೂ ಬಹಳ ಅಪೇಕ್ಷಣೀಯವೇ. ಆದರೆ, ಅದನ್ನು ಪಲ್ಲಟಗೊಳಿಸಿ ಬೇರೊಂದು ಕರೆನ್ಸಿಯು ಪ್ರಾಬಲ್ಯ ಪಡೆಯುವುದು ಕರೆನ್ಸಿ ಪ್ರಾಬಲ್ಯದ ನಿರ್ಮೂಲನೆಯಲ್ಲ. ಐಎಂಎಫ್
‘ಪ್ರಾತಿನಿಧಿಕ’ ಬ್ರೆಟನ್‌ವುಡ್ಸ್ ಅವಳಿ!
ಕಝಾನ್ ಘೋಷಣೆಯು ಬ್ರೆಟನ್ ವುಡ್ಸ್ ಅವಳಿ ಸಂಸ್ಥೆಗಳನ್ನು ಹೆಚ್ಚು ಪ್ರಾತಿನಿಧಿಕಗೊಳಿಸುವ ಮೂಲಕ ಅವುಗಳ ಆಡಳಿತ ವಿಧಾನವನ್ನು ಬದಲಿಸ ಬಯಸುತ್ತದೆ ಮತ್ತು ಆ ಮೂಲಕ ಜಾಗತಿಕ ದಕ್ಷಿಣದ ದೇಶಗಳಿಗೆ ಅತಿ ಅಗ್ಗವಾಗಿ ಮತ್ತು ಕಡಿಮೆ ಕಟ್ಟುನಿಟ್ಟಾದ ಷರತ್ತುಗಳೊಂದಿಗೆ ಹಣಕಾಸು ನೆರವು ಸಿಗುವಂತೆ ಮಾಡಬಯಸುತ್ತದೆ. ಈ ನಿಟ್ಟಿನಲ್ಲಿ ಬ್ರಿಕ್ಸ್ ಬ್ಯಾಂಕ್ ಕೂಡ ಕೈಜೋಡಿಸಬೇಕಿದೆ. ಇವೆಲ್ಲವೂ ಅತ್ಯಂತ ಶ್ಲಾಘನೀಯವಾಗಿದ್ದರೂ ಸಹ, ಅವು ಜಾಗತಿಕ ದಕ್ಷಿಣದ ದೇಶಗಳ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಹೆಚ್ಚು ಸುಲಭವಾಗಿ ಮತ್ತು ಹೆಚ್ಚು ಅಗ್ಗವಾಗಿ ಹಣಕಾಸು ಲಭಿಸಿದರೂ ಸಹ, ಅದು ಈ ದೇಶಗಳಿಗೆ ತಮ್ಮನ್ನು ತಾವು ನೇಣು ಬಿಗಿದುಕೊಳ್ಳಲು ಲಭಿಸುವ ಹಗ್ಗವನ್ನು ಮಾತ್ರ ಉದ್ದವಾಗಿಸುತ್ತದೆಯೇ ವಿನಃ ನೇಣು ಹಾಕಿಕೊಳ್ಳುವ ಅವರ ಹಣೆಬರಹವನ್ನು ಅಳಿಸಿಹಾಕುವುದಿಲ್ಲ. ಹಣಕಾಸು ನೆರವಿನ ಅಗತ್ಯವು ಸಂಪೂರ್ಣವಾಗಿ ಕಣ್ಮರೆಯಾದಾಗ ಮಾತ್ರ ಅವರ ಅದೃಷ್ಟ ಖುಲಾಯಿಸುತ್ತದೆ. ಐಎಂಎಫ್
ಹಣಕಾಸಿನ ನೆರವನ್ನುಒದಗಿಸುವ ಅಗತ್ಯವು ಸಂಪೂರ್ಣವಾಗಿ ಕಣ್ಮರೆಯಾಗಬೇಕೆಂದು ಬಯಸುವುದು ಯಾವ ರೀತಿಯಲ್ಲೂ ಕಲ್ಪನಾವಿಹಾರವೇನಲ್ಲ. ಸೋವಿಯತ್ ಒಕ್ಕೂಟದ ದಿನಗಳಲ್ಲಿ, ಭಾರತವೂ ಸೇರಿದಂತೆ ಹಲವಾರು ದೇಶಗಳು ಅದರೊಂದಿಗೆ ವಿನಿಮಯ ದರಗಳನ್ನು ನಿಗದಿಪಡಿಸಿದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದವು. ವ್ಯಾಪಾರದಿಂದ ಉಂಟಾದ ಹೆಚ್ಚುವರಿಗಳು ಮತ್ತು ಕೊರತೆಗಳನ್ನು ಒಂದು ಅವಧಿಯಿಂದ ಮುಂದಿನ ಅವಧಿಗೆ ಕೊಂಡೊಯ್ಯಲಾಗುತ್ತಿತ್ತು ಮತ್ತು ಪರಸ್ಪರ ಒಪ್ಪಿಗೆಯ ಸರಕು ಮತ್ತು ಸೇವೆಗಳ ವಿನಿಮಯದ ಮೂಲಕ ಇತ್ಯರ್ಥಗೊಳಿಸಲಾಗುತ್ತಿತ್ತು. ಐಎಂಎಫ್
ಹಣಕಾಸು ನೆರವು ಒದಗಿಸುವ ಮೂಲಕ ಅಥವಾ ಪ್ರಾಬಲ್ಯವನ್ನು ಚಲಾಯಿಸುವ ಮೂಲಕ ಅಥವಾ “ಮಿತವ್ಯಯ” ನೀತಿಗಳನ್ನು ಹೇರುವ ಮೂಲಕ ಕೊರತೆಯ
ದೇಶದ ಚಟುವಟಿಕೆಯ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳುವ ಯಾವುದೇ ನಿರ್ದಿಷ್ಟ ಅಗತ್ಯತೆಯ ಪ್ರಶ್ನೆಯೇ ಇರಲಿಲ್ಲ. ಖಚಿತವಾಗಿ ಹೇಳುವುದಾದರೆ, ಸೋವಿಯತ್ ಒಕ್ಕೂಟವು ಒಂದು ಯೋಜನಾಬದ್ಧ ಅರ್ಥವ್ಯವಸ್ಥೆಯಾಗಿತ್ತು. ಆದುದರಿಂದ ಅಂತಹ ಒಂದು ಏರ್ಪಾಟನ್ನು ಅದು ಕೈಗೊಳ್ಳಬಹುದಿತ್ತು. ಆದರೆ, ಸಾಮ್ರಾಜ್ಯಶಾಹಿ ಪ್ರಾಬಲ್ಯದಿಂದ ಜಾಗತಿಕ ದಕ್ಷಿಣಕ್ಕೆ ನಿಜವಾದ ಒಂದು ಪಾರು ಮಾರ್ಗವನ್ನು ಬ್ರಿಕ್ಸ್ ಒದಗಿಸಬೇಕಾದರೆ, ದಬ್ಬಾಳಿಕೆಯಿಲ್ಲದ ಏರ್ಪಾಟುಗಳನ್ನು ಅದು ರೂಪಿಸಬೇಕಾಗುತ್ತದೆ. ಶೃಂಗಸಭೆಯಲ್ಲಿ ಮಾಡಿದ ಬೊಲಿವಿಯನ್ ಅಧ್ಯಕ್ಷರ ಭಾಷಣವು ಅಂತಹ ಒಂದು ಆಶಯವನ್ನು ಹೊಂದಿತ್ತು.
ಅದೇನೇ ಇರಲಿ, ವಿಶ್ವ ಬಂಡವಾಳಶಾಹಿ ರೂಪಿಸಿರುವ ಈ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಸ್ವಲ್ಪಮಟ್ಟಿಗೆ ಹೆಚ್ಚು ಪ್ರಾತಿನಿಧಿಕವಾಗಿ ಮಾಡಿದರೂ ಸಹ, ಅವುಗಳಲ್ಲಿ ಅಂತರ್ಗತವಾಗಿರುವ ಅಪಾಯವನ್ನು ಕಡೆಗಣಿಸಲಾಗದು.
ಇದನ್ನೂ ಓದಿ: ತುಮಕೂರು | ದಲಿತ ಮಹಿಳೆ ಹತ್ಯೆ: 21 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ