‘ಅಮೃತ ಕಾಲ’ದ ಬ್ಲೂಪ್ರಿಂಟ್ ಮತ್ತು ಕಲಿಕಾಲದ ಬಜೆಟ್

ವೇದರಾಜ ಎನ್.ಕೆ.

ಕೇಂದ್ರ ಬಜೆಟ್ ಈ ಬಾರಿ ಎರಡನೇ ಮತ್ತು ಮೂರನೇ ಕೊವಿಡ್‍ ಅಲೆಗಳು ಜನಸಾಮಾನ್ಯರ ಬದುಕಿನ ಮೇಲೆ ಬೀರಿದ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಮಾತ್ರವಲ್ಲ, ಉತ್ತರಪ್ರದೇಶದಂತಹ ದೊಡ್ಡ ಮತ್ತು ಮಹತ್ವದ ರಾಜ್ಯವೂ ಸೇರಿದಂತೆ ಐದು ರಾಜ್ಯವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಬಂದಿರುವುದರಿಂದ ಬಹಳಷ್ಟು ವೀಕ್ಷಕರು ಒಂದು ‘ಜನಪ್ರಿಯ’ ಅಥವ ಜನಮರುಳು ಬಜೆಟನ್ನು ನಿರೀಕ್ಷಿಸಿದ್ದರು. ಆದರೆ ಜನಸಾಮಾನ್ಯರಿಗೆ ಅದರಲ್ಲಿ ಕಂಡಿರುವುದು ಮುಂದಿನ 25 ವರ್ಷಗಳ’ ‘ಅಮೃತಕಾಲ’ದ ‘ನೀಲನಕ್ಷೆ’ಯಷ್ಟೇ.

“ಈ ಒಕ್ಕೂಟ ಬಜೆಟ್ 75ವರ್ಷ ಪೂರೈಸುತ್ತಿರುವ ಭಾರತದಿಂದ 100ವರ್ಷಗಳನ್ನು ಪೂರೈಸುವ ಭಾರತದ ವರೆಗಿನ ಮುಂದಿನ 25 ವರ್ಷಗಳ ಅಮೃತಕಾಲದ   ಅರ್ಥವ್ಯವಸ್ಥೆಯ ಬುನಾದಿಯನ್ನು ಹಾಕುತ್ತದೆ ಮತ್ತು ನೀಲನಕ್ಷೆಯನ್ನು ಕೊಡುತ್ತದೆ” ಎಂದು ಕೇಂದ್ರ ಹಣಕಾಸು ಮಂತ್ರಿಗಳು ಸಂಸತ್ತಿನಲ್ಲಿ ಬಜೆಟ್‍ ಮಂಡಿಸುತ್ತ ಹೇಳಿರುವುದನ್ನು ವ್ಯಂಗ್ಯಚಿತ್ರಕಾರರು ಹೇಗೆ ಕಂಡಿದ್ದಾರೆ ನೋಡೋಣ:.

ಬಜೆಟ್‍ ಅಮೃತ ಕಾಲದ ನೀಲನಕ್ಷೆಯನ್ನು ಹೊಂದಿದೆಯೇ..?!!”

ಅಮೃತ ಕಾಲವೆಂದರೆ ಹೆಚ್ಚಿನ ಆನಂದದ ದ್ವಾರಗಳು
ತೆರೆಯುವ ಶುಭಸಮಯ ಎಂದು ವೇದಗಳು ಹೇಳುತ್ತವೆ”

(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

ಆದರೆ ಆ ನೀಲನಕ್ಷೆಯಲ್ಲಿ ಕೊವಿಡ್‍ನಿಂದ ಮತ್ತು ಅದರಿಂದಾದ ಲಾಕ್‍ಡೌನ್‍ ಗಳಿಂದಾಗಿ ಆದ ಜೀವನೋಪಾಯಗಳ ಮತ್ತು ಆದಾಯಗಳ ಭಾರೀ ನಷ್ವವನ್ನು ಎದುರಿಸಬೇಕಾದ ತಕ್ಷಣದ ಸಮಯಕ್ಕೆ ಏನಿದೆ ಎಂದು ಹೇಳಲು ‘ಭಕ್ತ’ರಿಗೂ ಸಾಧ್ಯವಿಲ್ಲವಂತೆ.

ಮಧ್ಯಮ ವರ್ಗದವರಾದರೂ ಆದಾಯ ತೆರಿಗೆ ಮಿತಿಗಳನ್ನು ಏರಿಸಿದ್ದರೆ ಚಪ್ಪಾಳೆ ತಟ್ಟುತ್ತಿದ್ದರೇನೋ. ಅದೂ ಇಲ್ಲವಾಗಿದೆ. ಕಾರ್ಪೊರೇಟ್‍ಗಳಿಗೆ, ಸ್ಟಾರ್ಟ್‍ ಅಪ್‍ಗಳಿಗೆ, ಕ್ರಿಪ್ಟೊ ಕರೆನ್ಸಿಯವರಿಗೆ ಮಾತ್ರ  ಬಹಳಷ್ಟು ಇವೆ,

“ಆದಾಯ ತೆರಿಗೆಯಲ್ಲಿ ಏನೂ ಬದಲಾವಣೆ ಇಲ್ಲ”

ನಮಗೂ ಸ್ವಲ್ಪ ಅಮೃತ ಸಿಕ್ಕಿದ್ದರೆ!”

(ಇರ್ಫಾನ್‍, ನ್ಯೂಸ್‍ ಕ್ಲಿಕ್)

ವಾಸ್ತವವಾಗಿ ಮಧ್ಯಮ ವರ್ಗಗಳವರಿಗೆ ಮಾತ್ರವಲ್ಲ, ರೈತರಿಗೆ, ಕಾರ್ಮಿಕರಿಗೆ, ಕೃಷಿ ಕೂಲಿಕಾರರಿಗೆ, ಮಹಿಳೆಯರಿಗೆ, ಯುವಜನರಿಗೂ ಈ ನೀಲನಕ್ಷೆಯಲ್ಲಿ ಏನೂ ಇಲ್ಲ, ಬದಲಿಗೆ ಕಡಿತಗಳು ಸಾಕಷ್ಟಿವೆ ಎಂಬ ಟೀಕೆ ವ್ಯಾಪಕವಾಗಿದೆ.

#2021-22ರ ಪರಿಷ್ಕೃತ ಅಂದಾಜುಗಳಲ್ಲಿ ಕೃಷಿಗೆ ಒಟ್ಟು ಹಂಚಿಕೆ ರೂ.474750.47 ಕೋಟಿಗಳಷ್ಟಿತ್ತು .

ಈಗ ಅದು ರೂ.3,70,303 ಕೋಟಿಗಳಿಗೆ ಕುಸಿದಿದೆ; ಅಂದರೆ 1 ಲಕ್ಷ ಕೋಟಿಗೂ ಹೆಚ್ಚು ಕುಸಿತ.

#ಗ್ರಾಮೀಣಾಭಿವೃದ್ಧಿಯ ಪಾಲು ಕೂಡ ಶೇ.5.59ರಿಂದಶೇ.5.23ಕ್ಕೆ ಕುಸಿದಿದೆ.

#ಎಲ್‌ಪಿಜಿ ಸಬ್ಸಿಡಿಯಲ್ಲಿ ಕಳೆದ ವರ್ಷದ 60% ಕಡಿತದ ನಂತರ ಮತ್ತೆ 2022-23ರಲ್ಲಿ 60% ಕಡಿತವಾಗಲಿದೆ.

ಪರಿಣಿತರು, ಇವೆಲ್ಲ ಬಜೆಟ್ 2022-23ರ ಅಧಿಕೃತ ಅಂಕಿ-ಅಂಶಗಳು, ಇವೇ ಎಲ್ಲವನ್ನೂ ಹೇಳುತ್ತವೆ ಎನ್ನುತ್ತಾರೆ.

ಪಿ.ಮಹಮ್ಮದ್, ಫೇಸ್‍ ಬುಕ್

ಉದ್ಯೋಗ ಸೃಷ್ಟಿ ಮತ್ತು ಆಂತರಿಕ ಬೇಡಿಕೆಯನ್ನು ಹೆಚ್ಚಿಸುವತ್ತ ಈ ಬ್ಲೂಪ್ರಿಂಟ್‍ ನಲ್ಲಿ ಒಂದು ದೊಡ್ಡ ಒತ್ತು ನೀಡುವ ಬದಲು ಮನರೇಗ ಸ್ಕೀಮಿಗೆ 25,000 ಕೋಟಿ ರೂ.ಗಳ ಕಡಿತ ಮಾಡಲಾಗಿದೆ ಎಂಬ ಭಾರೀ ಟೀಕೆ ಬಂದಿದೆ.

ನಿನಗೆ ಉದ್ಯೋಗ ಸಿಗುತ್ತದೆ”
ಯಾವಾಗ?”
“2050ರಲ್ಲಿ….”

“ಭವಿಷ್ಯದ ಬಜೆಟ್”

(ಅಲಂಕಾರ್ ಗೋಸ್ವಾಮಿ, ಫೇಸ್‍ಬುಕ್)

ನೇರ, ಪರೋಕ್ಷ ತೆರಿಗೆಗಳಿಂದ ಆದಾಯಗಳನ್ನು ಹೆಚ್ಚಿಸಿಕೊಂಡರೂ, ಸಾರ್ವಜನಿಕ ವೆಚ್ಚಗಳನ್ನು ಅದಕ್ಕೆ ಅನುಗುಣವಾಗಿಯಾದರೂ ಹೆಚ್ಚಿಸುವ ಬದಲು ಜಿಡಿಪಿ ಯ ಶೇಕಡಾವಾರಾಗಿ ಒಟ್ಟು ಬಜೆಟ್ ವೆಚ್ಚವು 2020-21 ರಲ್ಲಿ 17.8 ಶೇಕಡಾ ಇದ್ದದ್ದು 2022-23 ರ ಬಜೆಟ್ ಅಂದಾಜಿನಲ್ಲಿ ಶೇಕಡಾ 15.3 ಕ್ಕೆ ಇಳಿದಿದೆ.

ಇದನ್ನು ನೋಡಿದಾಗ ಈ ವ್ಯಂಗ್ಯಚಿತ್ರಕಾರರಿಗೆ ನೇತಾಜಿಯವರ 125ನೇ ಜನ್ಮ ದಿನಾಚರಣೆಯ ವರ್ಷದಲ್ಲಿ ಆಝಾದ್ ಹಿಂದ್‍ ಸೇನೆ(ಐಎನ್‍ಎ)ಯ “ನೀನು ನನಗೆ ನೆತ್ತರು ಕೊಡು, ನಾನು ನಿನಗೆ ಸ್ವಾತಂತ್ರ್ಯ ಕೊಡಿಸುತ್ತೇನೆ” ಎಂಬುದರ ಅಣಕು ಕಂಡಿದೆ:

“ದಾಖಲೆ ತೆರಿಗೆ ಸಂಗ್ರಹ”

ನೀನು ನನಗೆ ತೆರಿಗೆ ಕೊಡು; ನಾನು ನಿನಗೆ ಥ್ಯಾಂಕ್ಯು ಕೊಡುತ್ತೇನೆ”

( ಮಂಜುಲ್, ನ್ಯೂಸ್‍9ಲೈವ್)

ರಾಜ್ಯ ಸರಕಾರಗಳಿಗೆ ವರ್ಗಾವಣೆಗಳಲ್ಲೂ ಕಡಿತ:  2021-22 ರ ಪರಿಷ್ಕೃತ ಅಂದಾಜಿನಲ್ಲಿ ಜಿಡಿಪಿಯ 6.91% ಇದ್ದರೆ, 2022-23 ರ ಬಜೆಟಿನಲ್ಲಿ 6.25%ಕ್ಕೆ ಇಳಿಯುತ್ತವೆ.

ಸುಭಾನಿ, ಡೆಕ್ಕನ್‍ ಕ್ರಾನಿಕಲ್                                                         ಪಿ.ಮಹಮ್ಮದ್, ಫೇಸ್ ಬುಕ್

ಕೋವಿಡ್-19ರಿಂದ ಉದ್ಭವಿಸಿದ ಬಿಕ್ಕಟ್ಟನ್ನು ಪರಿಹರಿಸಲು ವಿಶೇಷ ಅಥವಾ ಹೆಚ್ಚುವರಿ ಖರ್ಚುವೆಚ್ಚಗಳು ಇನ್ನು ಮುಂದೆ ಅಗತ್ಯವಿಲ್ಲ ಎಂದು ಸರ್ಕಾರ ನಿರ್ಧರಿಸಿದಂತೆ ತೋರುತ್ತದೆ. ತೊಂದರೆಗೀಡಾದ ಬಹುಸಂಖ್ಯಾತ ನಾಗರಿಕರ ನೆರವಿಗೆ ಹಣಕಾಸು ಮಧ್ಯಪ್ರವೇಶದ ಕ್ರಮಗಳು ನಿರ್ಣಾಯಕವಾಗುತ್ತವೆ ಎಂಬುದು ಈ ಸರಕಾರಕ್ಕೆ ಬೇಕಿಲ್ಲ ಎಂದು ಒಬ್ಬ ಅರ್ಥಶಾಸ್ತ್ರಜ್ಞರು ಈ ‘ಅಮೃತಕಾಲ’ದ ತರ್ಕವನ್ನು ವಿಶ್ಲೇಷಿಸಿದ್ದಾರೆ.

“ಅಮೃತ ಕಾಲ’ಕ್ಕೆ ಕಾಯಿರಿ!”

ನೀರು! ನೀರು!”

(ಸತೀಶ ಆಚಾರ್ಯ, ಫೇಸ್‍ಬುಕ್)

ಹಣಕಾಸು ಮಂತ್ರಿಗಳು ಮತ್ತು ಅವರ ಸಚಿವಾಲಯ ಭಾರತದ ಅರ್ಥವ್ಯವಸ್ಥೆಯ ಬಗ್ಗೆಯಾಗಲಿ ಅಥವಾ ಇಂದಿನ ಭಾರತದ ಬಹಳಷ್ಟು ಮಂದಿ ಎಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂಬುದರ ಬಗ್ಗೆಯಾಗಲಿ ತಮಗೆ ತಿಳುವಳಿಕೆ ಇಲ್ಲವೆಂಬುದನ್ನು ಮತ್ತೊಮ್ಮೆ ಜಾಹೀರುಪಡಿಸಿದ್ದಾರೆ. ಅತ್ಯಂತ ವಿಕೃತ ಪ್ರಜಾಪ್ರಭುತ್ವಗಳನ್ನು ಬಿಟ್ಟರೆ, ಹಠಕ್ಕೆ ಬಿದ್ದು ಮುಂದುವರಿಯುವ ಇಂತಹ ಒಂದು ವಿತ್ತೀಯ ಕಾರ್ಯತಂತ್ರವು ಯಾವುದೇ ಪ್ರಜಾಪ್ರಭುತ್ವವಾದಿ ದೇಶದಲ್ಲಿ ಇರಲುಂಟು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಮಧ್ಯಮಾವಧಿಯಲ್ಲಿ ಇಂತಹ ಒಂದು ಲಜ್ಜೆಗೆಟ್ಟ ಅಸಮಾನ ವಿತ್ತ ನೀತಿಯು ಎಷ್ಟರಮಟ್ಟಿಗೆ ಕಾರ್ಯಸಾಧ್ಯ ಎಂಬುದನ್ನು ನೋಡಬೇಕಾಗಿದೆ ಎಂದು ಇನ್ನೊಬ್ಬ ಅರ್ಥಶಾಸ್ತ್ರಜ್ಞರು ಖೇದ ವ್ಯಕ್ತಪಡಿಸಿದ್ದಾರೆ.

ಅಚ್ಛೇ ದಿನ್ ಗಳಿಗೆ ಕಾದು ಸಾಕಾಯ್ತು, ಈಗ ಅಮೃತ ಕಾಲದ ಸದ್ದು!-25ವರ್ಷ?!

ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್                                                 ಪಿ.ಮಹಮ್ಮದ್, ವಾರ್ತಾಭಾರತಿ

2019 ರೊಳಗೆ  “ಅಚ್ಛೇ ದಿನ್‍ ಆನೇವಾಲೇ ಹೈಂ”  2022ರ ವರೆಗೆ  ‘ನ್ಯೂ ಇಂಡಿಯಾ”  ಇನ್ನು 25್ಷಗಳ ಬ್ಲೂಪ್ರಿಂಟ್!

ಸತೀಶ ಆಚಾರ್ಯ, ಫೇಸ್‍ ಬುಕ್

ಹಾಗಿದ್ದರೆ 2014 ರ ಅಚ್ಛೇ ದಿನ್‍ಗಳನ್ನು ಮರೆತೇ ಬಿಡಬೇಕೇ? ಇಲ್ಲ,  ಎರಡು ವರ್ಷಗಳ ಹಿಂದೆ ಗೃಹಮಂತ್ರಿಗಳು ಪೌರತ್ವ ತಿದ್ದುಪಡಿ ಕಾಯ್ದೆಗೆ ಪ್ರತಿಭಟನೆಯ ಸಂದರ್ಭದಲ್ಲಿ ಕಲಿಸಿದ ಕ್ರೋನೋಲೊಜಿ ಅಂದರೆ ಕಾಲಾನುಕ್ರಮಣಿಕೆಯ ಪಾಟವನ್ನು ಈಗ ನೆನಪಿಸಿಕೊಳ್ಳಬೇಕಷ್ಟೇ.

ಅಚ್ಛೇ ದಿನ್‍ ಗಳು ಬರಲಿವೆ, ಆದರೆ ಅಮೃತ ಕಾಲದ ನಂತರವೇ, ಇದು ಬರುವುದು
ಈಗಿರುವ ಕಲಿಕಾಲದ ನಂತರ. ಈ ಕ್ರೋನೋಲೊಜಿಯನ್ನು ಸರಿಯಾಗಿ ತಿಳ್ಕೋ!

ಅದುವರೆಗೆ, ಕಲಿಕಾಲದಲ್ಲಿ   ಈ ಬ್ಲೂಪ್ರಿಂಟ್‍ ಮತ್ತು ‘ಆತ್ಮನಿರ್ಭರತೆ’ಯೇ ಗತಿ

“25 ವರ್ಷಗಳ ಆರ್ಥಿಕ ಬೆಳವಣಿಗೆಯ ನೀಲನಕ್ಷೆ”                                      “ ನಿಮ್ಮ ಪಾಡು ನಿಮಗೆ”

           “25 ವರ್ಷಗಳ ನಂತರ ಇವೆಲ್ಲಾ ನಿಮ್ಮದೇ”                                                          “ಆತ್ಮಾವಲಂಬಿಗಳಾಗಿ”

           (ಸುಭಾನಿ, ಡೆಕ್ಕನ್‍ ಕ್ರಾನಿಕಲ್)                                                                  (ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

ಆದರೂ, ಮತ್ತೊಬ್ಬ ಅರ್ಥಶಾಸ್ತ್ರಜ್ಞರು ಹೇಳಿರುವಂತೆ, ಬೆರಳೆಣಿಕೆಯ ಮೇಲ್ವರ್ಗಗಳವರಿಗೆ ಅನುಕೂಲಗಳು ಮತ್ತು ಸಂಪತ್ತು-ವರಮಾನಗಳ ಅಸಮತೆಗಳ ಸೃಷ್ಟಿಯಿಂದಾಗಿ ಹದಗೆಡುತ್ತಿರುವ ಆರ್ಥಿಕ ಸಂಕಷ್ಟಗಳ ಬಗ್ಗೆ ನಿರ್ದಯ ನಿರ್ಲಕ್ಷ್ಯದಿಂದಾಗಿ ಜನರಲ್ಲಿ ಉಂಟಾಗುವ ಭಾವನೆಗಳ ಪರಿಣಾಮವನ್ನು ತಟಸ್ಥಗೊಳಿಸಲು ಒಂದು ಧ್ರುವೀಕರಣದ ಅಜೆಂಡಾ ಮಾತ್ರವೇ ಸಾಕಾಗುತ್ತದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ಮಂಜುಲ್, ನ್ಯೂಸ್‍9 ಲೈವ್                                                   ಸತೀಶ ಆಚಾರ್ಯ, ಫೇಸ್‍ ಬುಕ್

ಕೊನೆಯದಾಗಿ, ಸ್ವತಂತ್ರ ಭಾರತದ ಅಮೃತ ಮಹೋತ್ಸವದ ವರ್ಷದಲ್ಲಿ  ಹಕ್ಕುಗಳು ಮತ್ತು ಕರ್ತವ್ಯಗಳ ಮೇಲೆ ಪ್ರಧಾನಿಗಳ ಪ್ರವಚನದ ಬಗ್ಗೆ. ಬ್ರಹ್ಮಕುಮಾರಿಯರ ಸಂಘಟನೆ ಏರ್ಪಡಿಸಿದ್ದ “ಆಝಾದೀ ಕೇಅಮೃತ ಮಹೋತ್ಸವ್‍ ಸೇ ಸ್ವರ್ಣಿಮ್ ಭಾರತ ಕೀ ಓರ್ ” ಎಂಬ ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡುತ್ತ, ಕಳೆದ 75 ವರ್ಷಗಳಲ್ಲಿ ನಾವು ಹಕ್ಕುಗಳ ಬಗ್ಗೆ ಮಾತಾಡುತ್ತ, ಹಕ್ಕುಗಳಿಗಾಗಿ ಹೋರಾಡುತ್ತ ನಮ್ಮ ಸಮಯವನ್ನು ವ್ಯರ್ಥಗೊಳಿಸಿದ್ದೇವೆ ಎಂದು ಪ್ರಧಾನಿಗಳು ಉದ್ಗರಿಸಿರುವುದಾಗಿ ವರದಿಯಾಗಿದೆ. ಇದರಿಂದಾಗಿ ಉಂಟಾಗಿರುವ ಕಂದರವನ್ನು ಮುಂದಿನ 25 ವರ್ಷಗಳಲ್ಲಿ ತುಂಬಬೇಕಾಗಿದೆ ಎಂದು ಅವರು ತಾಕೀತು ಮಾಡಿದರಂತೆ.

ಅಣ್ಣಾವ್ರೆ, ನಾವು ದ್ವೇಷ ಹರಡಿಸುತ್ತಿದ್ದೇವಲ್ಲಾ,
ಇದು ನಮ್ಮ ಹಕ್ಕೋ ಅಥವ ಕರ್ತವ್ಯವೋ?

ರಾಜೇಂದ್ರ ಧೋಡಪ್‍ ಕರ್, ಫೇಸ್‍ಬುಕ್

ಇದರೊಂದಿಗೆ, ಹಣಕಾಸು ಮಂತ್ರಿಗಳು ಮಂಡಿಸಿರುವ ಅಮೃತಕಾಲದ 25 ವರ್ಷಗಳ ಬ್ಲೂಪ್ರಿಂಟ್ ಕೂಡ ಪ್ರಧಾನಿಗಳು ತಾಕೀತು ಮಾಡಿರುವ ಕಂದರ ತುಂಬುವ ಕೆಲಸದ ಭಾಗವಿರಬಹುದೇ?

ಆದರೆ, ಇದನ್ನು 47 ವರ್ಷಗಳ ಹಿಂದೆ ಆಗಿನ ಪ್ರಧಾನ ಮಂತ್ರಿಗಳೂ ನೆನಪಿಸಿದ್ದರು- ತುರ್ತು ಪರಿಸ್ಥಿತಿಯ ಪ್ರವಚನದಲ್ಲಿ ಎಂಬುದು ಗಮನಾರ್ಹ! ನಂತರ ಸಂವಿಧಾನದಲ್ಲಿ ಹತ್ತು ಕರ್ತವ್ಯಗಳನ್ನೂ ಸೇರಿಸಲಾಯಿತು,  ನಂತರ ಮತ್ತೊಬ್ಬ ಪ್ರಧಾನಿಗಳು ಇನ್ನೊಂದು ಕರ್ತವ್ಯವನ್ನೂ ಸೇರಿಸಿದರು.. ಪ್ರಸಕ್ತ ಪ್ರಧಾನಿಗಳಿಗೂ ಅವರ ಸರಕಾರಕ್ಕೂ ಕೂಡ ಈ ಕರ್ತವ್ಯಗಳನ್ನು ನಿಭಾಯಿಸುವ ಕರ್ತವ್ಯ ಇದೆಯಲ್ಲವೇ ಎಂದೊಬ್ಬ ವೀಕ್ಷಕರು ಪ್ರಶ್ನಿಸಿದ್ದಾರೆ. (Narendra Modi Says Focus on Duties and Forget Rights, But He’s Let India Down on All 11 Duties-The Wire, ಜನವರಿ 21).

Donate Janashakthi Media

Leave a Reply

Your email address will not be published. Required fields are marked *