10 ಲಕ್ಷ ಸರಕಾರೀ ನೇಮಕಾತಿ, 45 ಸಾವಿರ ಅಗ್ನಿವೀರರ ನೇಮಕಾತಿ – ಆದರೂ ‘ಥ್ಯಾಂಕ್ಯು ಮೋದೀಜೀ’ ಬದಲು ‘ಬೆಂಕಿ-ಬೆಂಕಿ’

ವೇದರಾಜ ಎನ್.ಕೆ.

ಬುಲ್‍ಡೋಜರ್ ರಾಜಕೀಯ ಮತ್ತು ಆಳುವ ಪಕ್ಷದ ವಕ್ತಾರದ್ವಯ ‘ಫ್ರಿಂಜ್ ಎಲಿಮೆಂಟು’ಗಳ ಅಮಾನತು/ಉಚ್ಛಾಟನೆ ಭಾರೀ ಟೀಕೆ-ಟಿಪ್ಪಣಿಗಳ ವಿಷಯಗಳಾಗುತ್ತಿರುವಾಗಲೇ ಸ್ವತಃ ಪ್ರಧಾನ ಮಂತ್ರಿಗಳು ಮತ್ತು ರಕ್ಷಣಾಮಂತ್ರಿಗಳಿಂದಲೇ  ಯುವಜನರಿಗೆ ಒಂದಾದ ಮೇಲೊಂದರಂತೆ ಎರಡು ಉದ್ಯೋಗ ಯೋಜನೆಗಳ ಪ್ರಕಟಣೆಗಳಾದವು. ಆದರೆ ಇದಕ್ಕೆ, ವಿಶೇಷವಾಗಿ ‘ಅಗ್ನಿಪಥ’ಕ್ಕೆ, ನಿರೀಕ್ಷಿತ ವ್ಹಾ-ವ್ಹಾಗಳ ಬದಲು ಕೇಂದ್ರದ ಆಳುವ ಪಕ್ಷಗಳ ಆಳ್ವಿಕೆಯ ರಾಜ್ಯಗಳಿಂದಲೇ ಆರಂಭಿಸಿ ದೇಶಾದ್ಯಂತ ಪ್ರತಿಭಟನೆಯ ಬೆಂಕಿ ಹರಡಿದೆ. ಬುಲ್‍ಡೋಜರು ಮತ್ತು ‘ಫ್ರಿಂಜ್ ಎಲಿಮೆಂಟುಗಳ ನಂತರ ದೇಶದ ವ್ಯಂಗ್ಯಚಿತ್ರಕಾರರು ಈ ಅಗ್ನಿಪಥಕ್ಕೆ ಹೇಗೆ ಸ್ಪಂದಿಸಿದ್ದಾರೆ- ಒಂದು ಸಂಗ್ರಹ ಇಲ್ಲಿದೆ:

“ಸಿಹಿತಿಂಡಿ!? ನೌಕರಿ ಸಿಕ್ತಾ?”
“ಇಲ್ಲ, ಬಹಳ ದಿನಗಳ ನಂತರ ನೌಕರಿ ಮತ್ತು ಕೆಲಸದ ಮಾತು ಕೇಳಬಂದಿದೆ”
(ಕೀರ್ತಿಶ್, ಬಿಬಿಸಿ ನ್ಯೂಸ್‍ ಹಿಂದಿ)

ಹೌದು, 56 ಅಂಗುಲ ರಾಷ್ಟ್ರಭಕ್ತಿ, ಧರ್ಮರಕ್ಷಣೆ, ಸಾಂಸ್ಕೃತಿಕ ರಾಷ್ಟ್ರವಾದ, ಆತ್ಮನಿರ್ಭರತಾ ಮುಂತಾದವುಗಳ ನಡುವೆ ಉದ್ಯೋಗದ ಮಾತು ಎತ್ತಿದಾಗಲೆಲ್ಲ  ಸ್ವ-ಉದ್ಯೋಗ, ಪಕೋಡಾಗಳ ಉಪದೇಶಗಳನ್ನು ಕೇಳಬೇಕಾಗಿ ಬಂದಿರುವವರು

ಹೆಚ್ಚೆಂದರೆ… ಕೆಲಸ ಖಾಲಿಯಿದೆ- ಜಿಸಿಬಿ ಆಪರೇಟರುಗಳ, ಕಲ್ಲು ತೂರುವ ಕೆಲಸದ ಸಾಮೂಹಿಕ ನೇಮಕಾತಿ ನಡೆಯಬಹುದಷ್ಟೇ ಎಂದು ಯೋಚಿಸುತ್ತಿದ್ದಾಗ,

ಕ್ರಿ.ಶ.2014ರಷ್ಟು ಹಿಂದಿನ  ಉದ್ಯೋಗದ  ಆಶ್ವಾಸನೆಯ ಧೂಳು ಜಾಡಿಸುವ ಸಮಯ ಬಂದಿರುವಂತೆ ಕಾಣುತ್ತಿದೆಯಾದರೆ, ಅದು ಸಂತೋಷದ ಸಂಗತಿಯೇ ತಾನೇ? ಅದು ಯಾವ ಹಿನ್ನೆಲೆಯಲ್ಲೇ ಬರುತ್ತಿರಲಿ..

(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್ )

***

ಹೌದು, ಈಗ ಕೊನೆಗೂ  ನೌಕರಿಯ, ಅದರಲ್ಲೂ ಸರಕಾರೀ ನೇಮಕಾತಿಗಳ ಮಾತು ಕೇಳಬಂದಿದೆ.
ಆದರೂ..8 ವರ್ಷಗಳ , ಅದರಲ್ಲೂ ಅಧಿಕೃತ ‘ಜುಮ್ಲಾ’(ಬೊಗಳೆ) ಗಳ, ಅನುಭವಗಳ ಹಿನ್ನೆಲೆಯಲ್ಲಿ ಸಂದೇಹ ಸಹಜವೇ ತಾನೇ!

“ದಯವಿಟ್ಟು ಇದು  ಜುಮ್ಲಾವೇ ಅಥವ ಅಲ್ಲವೇ ಈಗಲೇ ಹೇಳಿಬಿಡಿ..”
(ಅಲೋಕ್ ನಿರಂತರ್, ಫೇಸ್‍ಬುಕ್)

***

ಇದು ಬೊಗಳೆ  ಅಲ್ಲ ಎನ್ನುತ್ತಿದ್ದಾರೆ ಭಕ್ತಗಣ..

“ಸರಕಾರ 1.5 ವರ್ಷದಲ್ಲಿ 10 ಲಕ್ಷ ಉದ್ಯೋಗಗಳನ್ನು ನಿರ್ಮಿಸುವ ಚಾರಿತ್ರಿಕ ನಿರ್ಧಾರ ಕೈಗೊಂಡಿದೆ”

ಆದರೆ “ನನಗೆ ಇನ್ನೊಂದು ಚಾರಿತ್ರಿಕ ಆಶ್ವಾಸನೆಯ ನೆನಪಾಗುತ್ತಿದೆಯಲ್ಲಾ- 2 ಕೋಟಿ ಉದ್ಯೋಗಗಳದ್ದು?”
“ಅದ್ಯಾಕೀಗ!! ಆ ಅಧ್ಯಾಯವನ್ನು ಪಠ್ಯದಿಂದ ತೆಗೆದು ಹಾಕಲಾಗಿದೆ”
(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

***

ಇತ್ತ ಪಕೋಡಾ ಮಾರುವ ಸಲಹೆಯನ್ನು ಶಿರಸಾವಹಿಸಿ ಪಾಲಿಸಿದ್ದವರಿಗೆ ತಮ್ಮ ಡಿಗ್ರಿ ಸರ್ಟಿಫಿಕೇಟ್‍ ನೆನಪು ..

“ನನ್ನ ಡಿಗ್ರಿ ಸರ್ಟಿಫಿಕೇಟ್‍ ಎಲ್ಲಿಟ್ಟಿದ್ದೇನೆ ಎಂದು
ಮರೆತೇ ಹೋಗಿದೆ… ಎಂಟು ವರ್ಷಗಳಾಯ್ತಲ್ಲಾ!”
(ಸುಭಾನಿ, ಡೆಕ್ಕನ್‍ ಕ್ರಾನಿಕಲ್)

***

10 ಲಕ್ಷ ಕೇಂದ್ರ ಸರಕಾರೀ ನೇಮಕಾತಿಗಳು, ಅದೂ ಒಂದೂವರೆ ವರ್ಷದೊಳಗೇ, ಎಂದು ಪ್ರಕಟಣೆಯಾಗುತ್ತಿದ್ದಂತೆ ರಕ್ಷಣಾ ಮಂತ್ರಿಗಳು ಮೂರೂ ಸೇನಾ ವಿಭಾಗಗಳ ಮುಖ್ಯಸ್ಥರ ಸಮ್ಮುಖದಲ್ಲಿ ‘ಅಗ್ನಿಪಥ’ ಯೋಜನೆಯ ಪ್ರಕಟಣೆ ಮಾಡಿದರು. ಇದೂ ಒಂದು ಚಾರಿತ್ರಿಕ ನಿರ್ಧಾರ ಎಂದು ಹೇಳಲಾಗಿದೆ.

ಸರಿ, ಆದರೆ ಸೇನಾ ನೇಮಕಾತಿಗೆ ಈಗಿರುವ ವ್ಯವಸ್ಥೆಯಲ್ಲಿ ಸಮಸ್ಯೆಯೇನಿತ್ತು ?

“ಇದೊಂದು ಸುಗಮ ದಾರಿ. ಅವರು ಯಾಕೆ ಇದನ್ನು ಅಗ್ನಿಪಥ ಎಂದು ಕರೆಯುತ್ತಾರೆ?”

“ಬಹುಶಃ ಅಗ್ನಿಪಥ ನಾಲ್ಕು ವರ್ಷಗಳ ನಂತರ ಆರಂಭವಾಗುತ್ತದೆ”
(ಮಂಜುಲ್, ನ್ಯೂಸ್‍9ಲೈವ್‍.ಕಾಂ)

ಇಲ್ಲ, ಇದು ಈ ತಿಂಗಳಿಂದಲೇ ಆರಂಭವಾಗುತ್ತಿದೆ. ಮತ್ತು ಈಗ ಆಯ್ಕೆಯಾದವರು ನಾಲ್ಕು ವರ್ಷಗಳ ನಂತರ  ಹೊರ ಹೋಗಬೇಕು. ಇದರಿಂದಾಗಿಯೇ ಇದಕ್ಕೆ ಅಗ್ನಿಪಥ ಎಂದು ಕರೆದಿರಬಹುದೇ?

***

“ಅಗ್ನಿಪಥ್ ಯೋಜನೆಯ ಮೂಲಕ, ದೇಶಪ್ರೇಮಿ, ಆಸಕ್ತ ಯುವಜನರಿಗೆ ಅಗ್ನಿವೀರರಾಗಿ ಸಶಸ್ತ್ರ ಪಡೆಗಳಲ್ಲಿ ಸ್ವಲ್ಪ ಕಾಲ ಸೇವೆ ಸಲ್ಲಿಸಲು ಅವಕಾಶ ಒದಗಿಸಲಾಗುತ್ತದೆ” ಎಂದು ರಕ್ಷಣಾ ಮಂತ್ರಿಗಳು  ಹೇಳಿದರು. ಈ ಯೋಜನೆಯು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಮತ್ತು ಯುವಕರು ತಮ್ಮ ಮಿಲಿಟರಿ ಸೇವೆಯ ಸಮಯದಲ್ಲಿ ಗಳಿಸಿದ ಕೌಶಲ್ಯಗಳನ್ನು ತರುವಾಯ ವಿವಿಧ ಕ್ಷೇತ್ರಗಳಲ್ಲಿ ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.

***

ಆದರೆ ‘ಅಗ್ನಿಪಥ’ದ ಪ್ರಕಟಣೆ ನಡೆದ ಮರುದಿನವೇ ಬಿಹಾರದ, ನಂತರ ಉತ್ತರಪ್ರದೇಶದ  ಯುವಜನರು ಬೀದಿಗಿಳಿದು ಪ್ರದರ್ಶಿಸಿದ್ದಾರೆ. ರಕ್ಷಣಾ ಮಂತ್ರಿಗಳು ಈ ‘ಚಾರಿತ್ರಿಕ’ ನಿರ್ಧಾರದ ಬಗ್ಗೆ ಹೇಳಿದ್ದನ್ನು ಅವರು ಸಂಪೂರ್ಣವಾಗಿ ತಿರಸ್ಕರಿಸಿದಂತೆ ಕಾಣುತ್ತದೆ.

ಪ್ರತಿಭಟನೆಯ ಜ್ವಾಲೆ ಈಗ  ದೇಶಾದ್ಯಂತ ಹರಡುತ್ತಿದೆ, ಕರ್ನಾಟಕದ ಉತ್ತರ ಭಾಗದಲ್ಲೂ ಪ್ರಕಟಗೊಳ್ಳುತ್ತಿದೆ

“ಇದು ಅಗ್ನಿಪಥ , ಎಲ್ಲೆಲ್ಲೂ ಸರ್!!”
(ಮಂಜುಲ್, ನ್ಯೂಸ್‍9ಲೈವ್‍.ಕಾಂ)

***

ಈಗಾಗಲೇ ಸೇನಾಪಡೆಗಳಲ್ಲಿ  ‘ಶಾರ್ಟ್ ಸರ್ವಿಸ್ ಕಮಿಷನ್’ ಎಂಬ ಸ್ಕೀಮ್ ಇದೆ. ಇದರ ಅಡಿಯಲ್ಲಿ ಯುವಜನರನ್ನು 10 ವರ್ಷಗಳಿಗೆ ನೇಮಿಸಿಕೊಳ್ಳಲಾಗುತ್ತದೆ, ಈ ಅವಧಿಯನ್ನು ಇನ್ನೂ ನಾಲ್ಕು ವರ್ಷಗಳವರೆಗೆ ವಿಸ್ತರಿಸಬಹುದು. ಇವರು ಪೆನ್ಶನ್‍ ಮತ್ತು ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ. ಇವರೂ ಕೂಢ ತಮ್ಮ ಮಿಲಿಟರಿ ಸೇವೆಯ ಸಮಯದಲ್ಲಿ ಗಳಿಸಿದ ಕೌಶಲ್ಯಗಳನ್ನು ತರುವಾಯ ವಿವಿಧ ಕ್ಷೇತ್ರಗಳಲ್ಲಿ ಬಳಸಿಕೊಳ್ಳಬಹುದು .

ಹಾಗಿದ್ದರೆ, ಸರಕಾರ ಈ ‘ಚಾರಿತ್ರಿಕ’  ಅಗ್ನಿಪಥಕ್ಕೆ ಇಳಿದಿದ್ದಾದರೂ ಏಕೆ?

ಕೇಂದ್ರ ಸರಕಾರ  ‘ಉದ್ಯೋಗ ಬಿಕ್ಕಟ್ಟನ್ನು ಚಾಪೆಯ ಅಡಿಗೆ ಸಾರಿಸುವ ತರಾತುರಿಯಲ್ಲಿದೆಯೇ-2024ರೊಳಗೆ? ಇರಬಹುದೇನೋ.

“ಬೇಗ, ಬೇಗ ಮಾಡಿ, ಸಾರ್!”                                                         “ಓಹ್, ಅದು 2024ಕ್ಕೆ ಹೋಗುವ ರೈಲು”

             (ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)                                                  (ಮಿಕ ಅಜೀಜ್, ಫೇಸ್ ಬುಕ್)

***

ಅದೇನೇ ಇರಲಿ, ಶಾರ್ಟ್‍ ಸರ್ವಿಸ್‍ ಕಮಿಷನ್’ ಎಂಬ ವ್ಯವಸ್ಥೆ ಇರುವಾಗ ಇದನ್ನು ತಂದಿರುವುದಾದರೂ ಏಕೆ? ಇದರ ವೈಶಿಷ್ಟ್ತಗಳಾದರೂ ಏನು?

‘ವೈಶಿಷ್ಟ್ಯ’ ಎಂದು ಹೇಳಬಹುದಾದರೆ- ಮುಖ್ಯವಾಗಿ, ನಾಲ್ಕು ವರ್ಷಗಳ ನಂತರ ಹೊರಹೋಗಬೇಕು, ಆಗ ಪಿಂಚಣಿ ಇಲ್ಲ, ಗ್ರಾಚ್ಯುಟಿ ಇಲ್ಲ, 25% ಮಂದಿಗೆ ಸೇನಾಪಡೆಗಳಲ್ಲಿ ನಿಯಮಿತ ಉದ್ಯೋಗಗಳು ಸಿಗಬಹುದು. ಇತರರು…?

ಅಲ್ಲದೆ ಇನ್ನು ಮುಂದೆ ಸೇನಾಪಡೆಗಳಿಗೆ ನೇಮಕಾತಿಗೆ ಇದೊಂದೇ ವಿಧಾನ ಎಂದೂ ಹೇಳಲಾಗಿದೆ.

“ನಾಲ್ಕು ವರ್ಷಗಳ ನಂತರ ಏನು?”  “ಭಾರೀ ಅವಕಾಶಗಳಿವೆ”

“ಹೌದು , ನಾವು ಅವರನ್ನು ನೇಮಿಸಿಕೊಳ್ಳುತ್ತೇವೆ”
(ಅಲೋಕ್‍ ನಿರಂತರ್, ಫೇಸ್‍ಬುಕ್)

ಆಳುವ ಪಕ್ಷದ ಐಟಿ ಸೆಲ್ ಸರಕಾರದ ಟೀಕಾಕಾರರನ್ನು ಟ್ರೋಲ್’ ಮಾಡುವ ಕೆಲಸ ಕೊಡಬಹುದು?

***

“25% ಟ್ರೈನೀಗಳನ್ನು ಸೇನೆ ಉಳಿಸಿಕೊಳ್ಳುತ್ತದೆ”
“.. ಮತ್ತು ಉಳಿದ 75% ನ್ನು ನಾವು ಬುಲ್‍ಡೋಜರ್ ನಿರ್ವಾಹಕರಾಗಿ ನೇಮಿಸಿಕೊಳ್ಳುತ್ತೇವೆ”
(ಸುಭಾನಿ, ಡೆಕ್ಕನ್‍ ಕ್ರಾನಿಕಲ್)

ಅಥವ  ನಾಲ್ಕು ವರ್ಷಗಳ ನಂತರ….“ಮೈ ಭೀ ಚೌಕೀದಾರ್”…

                  (ಸತೀಶ ಆಚಾರ್ಯ, ಫೇಸ್‍ ಬುಕ್)                                             (ಪಂಜು ಗಂಗೊಳ್ಳಿ, ಕನ್ನಡ ಒನ್‍ ನ್ಯೂಸ್)

ಇದು ಕೇವಲ ತಮಾಷೆಯಲ್ಲ, ಅಮೃತ ಕಾಲದಲ್ಲಿ ವಾಸ್ತವವು ಕಾರ್ಟೂನಿಗಿಂತಲೂ ಕಟುವಾಗಿದೆ  ಎಂಬುದನ್ನು ಆಳುವ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಗಳಲ್ಲಿ ಒಬ್ಬರ ಬಾಯಿಂದ ಬಂದ ಮಾತುಗಳು ಮತ್ತೊಮ್ಮೆ ಸಾಬೀತುಪಡಿಸುತ್ತಿವೆ.

ಅವರು, ಪಕ್ಷದ ಕಚೇರಿಗೆ ವೃತ್ತಿಪರ ಭದ್ರತಾ ಗಾರ್ಡ್‍ಗಳನ್ನು ನೇಮಿಸಿಕೊಳ್ಳುವುದಾದರೆ ತಾನು ಈ ‘ಅಗ್ನಿವೀರ’ರಿಗೇ ಆದ್ಯತೆ ಕೊಡುತ್ತೇನೆ ಎಂದಿರುವುದಾಗಿ ವರದಿಯಾಗಿದೆ. ನಿಜ, ಎಂದಿನಂತೆ, ತನ್ನ ಮಾತನ್ನು ತಿರುಚಲಾಗಿದೆ ಎಂಬ ಹೇಳಿಕೆಯೂ ಬಂದಿದೆ….ಇರಬಹುದೇನೋ.

***

ಆದರೂ ಈ ಅಗ್ನಿವೀರರು ನಾಲ್ಕು ವರ್ಷಗಳ ನಂತರ ಏನು ಮಾಡಬೇಕು ಎಂಬ ಪ್ರಶ್ನೆ ಉಳಿದೇ ಉಳಿಯುತ್ತದೆ.

“ಪಕೋಡಾ ಸ್ಕೀಮಂತೂ ಇದ್ದೇ ಇದೆಯಲ್ಲಾ! ಹಹ್ಹಹ್ಹಾ!!!”

(ರೆಮಿಕ್ಸ್ ಕಾಮಿಕ್ಸ್, ಫೇಸ್‍ಬುಕ್)

***

ಬಹುಶಃ ಈ ಪ್ರಶ್ನೆಯಿಂದಾಗಿಯೇ ಇದಕ್ಕೆ ಹಲವೆಡೆಗಳಿಂದ ವಿರೋಧ ವ್ಯಕ್ತವಾಗುತ್ತಿರುವುದು.

ಕೆಲವು ಅನುಭವಿಗಳು  ಮತ್ತು ನಿವೃತ್ತ ಸೇನಾಧಿಕಾರಿಗಳು ಕೂಡ ಈ ಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ನವ-ಉದಾರವಾದಿ ಧಣಿಗಳನ್ನು ತುಷ್ಟೀಕರಿಸಲು ಇತರ ಕ್ಷೇತ್ರಗಳಂತೆ ಸೇನಾ ಪಡೆಗಳಲ್ಲೂ ಇದುವರೆಗೆ ಕೆಲವರಿಗಾದರೂ ಇರುವ ಯಾವ ಸೌಲಭ್ಯಗಳೂ ಇಲ್ಲದ “ನಿಗದಿತ ಅವಧಿಯ ಉದ್ಯೋಗ’ ದ ಪರಿಕಲ್ಪನೆಯನ್ನು ಹೀಗೆ ತುರುಕಿಸ ಲಾಗುತ್ತಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಕೇವಲ ಪಿಂಚಣಿ ಮತ್ತು ಗ್ರಾಚ್ಯುಟಿ ವೆಚ್ಚಗಳನ್ನು ಕಡಿತ ಮಾಡುವುದಕ್ಕಾಗಿ ದೇಶದ ಭದ್ರತೆಯೊಂದಿಗೆ ಮತ್ತು ಸೇನಾಪಡೆಗಳಲ್ಲಿ ಒಂದು ಗೌರವಮಯ ಭವಿಷ್ಯದ ನಿರೀಕ್ಷೆಯಲ್ಲಿರುವ, ವಿಶೇಷವಾಗಿ ಕೆಳವರ್ಗಗಳ ಯುವಜನರ ಬದುಕುನೊಂದಿಗೆ ಆಟವಾಡುವುದು ಸರಿಯಲ್ಲ ಎಂದು ಅವರು ಹೇಳುತ್ತಿದ್ದಾರೆ.

***

ಇದಲ್ಲದೆ, ನಾಲ್ಕು ವರ್ಷಗಳ ನಂತರ ಯೋಗ್ಯ ಉದ್ಯೋಗ ಸಿಗದವರು ತಮ್ಮ ಮಿಲಿಟರಿ ತರಬೇತಿಯ ದುರುಪಯೋಗ ಮಾಡುವ ಭಯ, ಸಮಾಜದ ಮಿಲಿಟರೀಕರಣದ ಭಯವೂ ಹಲವರನ್ನು ಕಾಡಲಾರಂಬಿಸಿದೆ.. ಬಹುಶ: ಆಳುವ ಪಕ್ಷದ ರಾಜಕಾರಣಿಗಳನ್ನೂ…

“ಇದರಲ್ಲಿ ಬಹಳ ರಿಸ್ಕ್ ಇದೆ. ನಾಲ್ಕು ವರ್ಷಗಳ ನಂತರ ಉಳಿದು ಬಿಡುವವರು
ತಲೆಯ ಮೇಲೆ ಬಂದೂಕು ಇಟ್ಟು ಕೆಲಸ ಕೊಡಿ ಎನ್ನಬಹುದು”
(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

***

ಆದರೂ ಈ ಸ್ಕೀಮನ್ನು ಹಿಂತೆಗೆದುಕೊಳ್ಳಬೇಕು, ಸೇನಾಪಡೆಗಳಿಗೆ ನೇಮಕಾತಿ ಮೊದಲಿನಂತೆಯೇ ನಡೆಯಬೇಕು ಎಂಬ ಆಗ್ರಹಗಳಿಗೆ ಸರಕಾರ ಕಿವಿಗೊಡುತ್ತಿಲ್ಲ ಎಂಬ ಖೇದವನ್ನೂ ಹಲವು ವ್ಯಂಗ್ಯಚಿತ್ರಕಾರರು ಚಿತ್ರಿಸಿದ್ದಾರೆ.

(ಇರ್ಫಾನ್, ನ್ಯೂಸ್‍ ಕ್ಲಿಕ್)

ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಈ ಸ್ಕೀಮಿನ ಪ್ರಕ್ರಿಯೆ ಸದ್ಯಕ್ಕೇ ಆರಂಭವಾಗಲಿದೆ, ನವಂಬರ್‍/ಡಿಸೆಂಬರಿನಲ್ಲಿ ಮೊದಲ ‘ಅಗ್ನಿವೀರ’ರ ತಂಡದ ತರಬೇತಿ ಆರಂಭವಾಗುತ್ತದೆ ಎಂದು ಅವು ಪ್ರಕಟಿಸಿವೆ. ಈ ಸ್ಕೀಮನ್ನು ಹಿಂದಕ್ಕೆ ತಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಭೂಸೇನಾ ವಿಭಾಗ ಹೇಳಿದೆ. ಅಲ್ಲದೆ ಹಲವೆಡೆ ಹಿಂಸಾತ್ಮಕವಾಗಿಯೂ ಪ್ರತಿಭಟಿಸುತ್ತಿರುವ ಯುವಜನರಿಗೆ ಪರೋಕ್ಷ ಎಚ್ಚರಿಕೆಯನ್ನೂ ಕೊಡಲಾಗಿದೆ- ಸೇನಾ ನೇಮಕಾತಿಗೆ ಅಭ್ಯರ್ಥಿಯ ಹಿನ್ನೆಲೆಯ ಕಟ್ಟುನಿಟ್ಟಾದ ತಪಾಸಣೆ ನಡೆಸಲಾಗುತ್ತದೆ, ‘ಅಗ್ನಿಪಥ’ ಸ್ಕೀಮಿನ ಅಡಿಯಲ್ಲಿ ಅರ್ಜಿ ಹಾಕುವವರು ಇಂತಹ ಪ್ರತಿಭಟನೆಗಳಲ್ಲಿ ತಾವು ಭಾಗವಹಿಸಿಲ್ಲ ಎಂದು ಪ್ರತಿಜ್ಞೆ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯೂ ಪ್ರಕಟವಾಗಿದೆ.

***

ಇತ್ತ, ಮೊದಲಿಗೆ, ಈ ‘ಅಗ್ನಿವೀರ’ರಿಗೆ 4 ವರ್ಷಗಳ ನಂತರ ಹಲವು ದಾರಿಗಳು ತೆರೆಯುತ್ತವೆ ಎಂದು ಅಸ್ಪಷ್ಟವಾಗಿ ಹೇಳಿದ್ದ ಸರಕಾರ ಪ್ರಬಲ ವಿರೋಧಗಳಿಂದಾಗಿ, ನೇಮಕಾತಿ ಅರ್ಹತೆಯ ವಯೋಮಿತಿಯಲ್ಲಿ ಎರಡು ವರ್ಷಗಳ ಏರಿಕೆ, ನಂತರ ರಕ್ಷಣಾ ಇಲಾಖೆಯಲ್ಲಿ ಮಾತ್ರವಲ್ಲ, ಗೃಹ ಇಲಾಖೆಯಲ್ಲಿಯೂ, ಇತರ ಅರೆ ಸೇನಾ ಪಡೆಗಳಲ್ಲೂ , ಕೊನೆಗೆ ಸಾರ್ವಜನಿಕ ವಲಯದ ಉದ್ದಿಮೆಗಳ ನೇಮಕಾತಿಗಳಲ್ಲಿಯೂ 10% ದ ವರೆಗೆ ಮೀಸಲಾತಿ ನೀಡಲಾಗುವುದು ಮುಂತಾದ ‘ರಿಯಾಯ್ತಿ’ಗಳನ್ನು ಒಂದೊಂದಾಗಿ ಪ್ರಕಟಿಸಿದೆ.

ನಿರುದ್ಯೋಗದ ಬೆಂಕಿ ಆರಿಸಲು ಕೊನೆಗೂ ಸಾರ್ವಜನಿಕ ವಲಯದ ಉದ್ದಿಮೆಗಳೇ ನೆನಪಾಗಿವೆ!

(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

ಆದರೆ ಖಾಸಗೀಕರಣದ ಧಾವಂತಕ್ಕೆ ಒಳಪಡಿಸಿರುವ ಸಾರ್ವಜನಿಕ ವಲಯದ ಉದ್ದಿಮೆ ಎಷ್ಟು ನೆರವಿಗೆ ಬರಲು ಸಾಧ್ಯ?

ಅಲ್ಲದೆ, ಈಗಾಗಲೇ ಇರುವ ಮಾಜೀ ಸೈನಿಕರಿಗೆ ಮೀಸಲಾತಿಯ ಅನುಭವವೂ ಏನೂ ಆಶಾದಾಯಕವಾಗಿಲ್ಲ.

ಕೇಂದ್ರೀಯ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಮಾಜೀ ಸೈನಿಕರಿಗೆ ಗ್ರುಪ್‍ ಸಿ ಹುದ್ದೆಗಳಲ್ಲಿ 14.4% ಮತ್ತು ಗ್ರುಪ್‍ ಡಿ ಹುದ್ದೆಗಳಲ್ಲಿ 24.5% ಮೀಸಲಾತಿ ವಿಧಿಸಲಾಗಿದೆ. ಆದರೆ ವಾಸ್ತವವಾಗಿ ಈ ಹುದ್ದೆಗಳಲ್ಲಿ ಈಗ ಕೆಲಸ ಮಾಡುತ್ತಿರುವ ಮಾಜೀ ಸೈನಿಕರ ಪ್ರಮಾಣ ಅನುಕ್ರಮವಾಗಿ 1.15% ಮತ್ತು 0.3% ಮಾತ್ರ ಎಂದು ವರದಿಯಾಗಿದೆ (ಇಂಡಿಯನ್‍ ಎಕ್ಸ್ ಪ್ರೆಸ್, ಜೂನ್‍20)!

***

ಒಟ್ಟಿನಲ್ಲಿ,  ಸರಕಾರ ಮೂರು  ಕೃಷಿ ಕಾಯ್ದೆಗಳ ಬಲವಂತದ ಜಾರಿಗೆ ಇಳಿದು ಅನುಭವಿಸಿದ ವಿಫಲತೆಯಿಂದ ಪಾಟ ಕಲಿತಂತಿಲ್ಲ ಎಂದೂ ವ್ಯಂಗ್ಯಚಿತ್ರಕಾರರಿಗೆ ಅನಿಸುತ್ತಿದೆ.

***

ಇತ್ತ ಸೈನಿಕರಾಗ ಬಯಸುವ ಯುವ ಪ್ರತಿಭಟನಾಕಾರರೂ ರೈತರ ದೀರ್ಘ ಹೋರಾಟದಿಂದ ಪಾಟ ಕಲಿಯಬೇಕಾಗಿದೆ ಎಂದು ಈ ವ್ಯಂಗ್ಯಚಿತ್ರ ಹೇಳುತ್ತಿದೆ:

“ರೈತರ ಹೋರಾಟಕ್ಕೆ ಫಲ ನೀಡಿದ್ದು ಒಳಗಿನ ಬೆಂಕಿ..ಸೈನಿಕರ ವಿಷಯದಲ್ಲಿ ಇದು ಭಿನ್ನವಾಗಿರಲು ಸಾಧ್ಯವೇ?
(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

***

ಆದರೆ, “ ಹಿಂಸೆ ಮಾಡಬೇಡಿ ಎಂದು ಯುವಜನರನ್ನು ಉತ್ತೇಜಿಸುವುದು ಸುಲಭ,  ಇದನ್ನು ತಮ್ಮ ಎಲ್ಲಕ್ಕಿಂತ  ದೊಡ್ಡ ಕನಸು ಇದ್ದಕ್ಕಿದ್ದಂತೆ ಕಿತ್ತುಕೊಳ್ಳಲ್ಪಟ್ಟಿರುವ  ಹದಿನೆಂಟು, ಹತ್ತೊಂಬತ್ತು ಅಥವಾ ಇಪ್ಪತ್ತು ವರ್ಷಗಳ ಕೆಳ ಮಧ್ಯಮ ವರ್ಗದ ಯುವಜನರ ದೃಷ್ಟಿಕೋನದಿಂದ ನೋಡಿ” ಎನ್ನುತ್ತಾರೆ ಇನ್ನೊಬ್ಬ ವ್ಯಂಗ್ಯಚಿತ್ರಕಾರ ರಾಜೇಂದ್ರ ಧೋಡಪ್‍ಕರ್.

ಈ ಬಾರಿ ಯಾವುದೇ ವ್ಯಂಗ್ಯಚಿತ್ರ ಮಾಡದೆ ಅವರು ಹೇಳುತ್ತಾರೆ: “ಅನೇಕ ಸಣ್ಣ ರೈತರ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಬಾಲ್ಯದಿಂದಲೂ ಸೈನ್ಯಕ್ಕೆ ಸೇರುವ ಕನಸು ಕಾಣುತ್ತಾರೆ. ಅನೇಕ ಹಳ್ಳಿಗಳಲ್ಲಿ ಇದು ಬಹುತೇಕ ಸಂಪ್ರದಾಯದಂತೆ ಇದೆ. ಆ ಯುವಕರಿಗೆ ಇದು ಒಂದು ಉತ್ತಮ ಜೀವನದ ಕನಸು. ಈ ಕನಸನ್ನು ಮುರಿಯುವುದರ ಅರ್ಥವನ್ನು ದಂಡಿಯಾಗಿ ತಿನ್ನಲು , ಉಣ್ಣಲು ಇರುವ ಸಮೃದ್ಧ ಜನ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಈಗ ಕಳೆದ ಕೆಲವು ವರ್ಷಗಳಲ್ಲಿ ಬಡವರು, ಕಾರ್ಮಿಕರು, ರೈತರ ಬಗೆಗಿನ ಕ್ರೌರ್ಯ ಮತ್ತು ಸಂವೇದನಾಹೀನತೆ ಸಾಂಕ್ರಾಮಿಕದ ಮಟ್ಟಕ್ಕೆ ತಲುಪಿದೆ”

***

ಕೊನೆಟಿಪ್ಪಣಿ: ಈ ನಡುವೆ, ನೂಪುರ್‍ ಶರ್ಮಾರನ್ನು ಬಂಧಿಸಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಆರೋಪಕ್ಕೆ ಒಳಗಾದವರು ಎನ್ನಲಾದವರ  ಮನೆಗಳನ್ನು ಅಕ್ರಮವಾಗಿ ನೆಲಸಮಗೊಳಿಸುವ ಉತ್ತರ ಪ್ರದೇಶದ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ಕಟ್ಟಡ ನೆಲಸಮಗೊಳಿಸುವ ಕ್ರಮವು ಕಾನೂನಿನ ಪ್ರಕಾರವೇ ಇರಬೇಕು’ಎಂದು ತಾಕೀತು ಮಾಡಿರುವುದಾಗಿ  ವರದಿಯಾಗಿದೆ. “ಎಲ್ಲವೂ ನ್ಯಾಯಯುತವಾಗಿರಬೇಕು” ಮತ್ತು ಅಧಿಕಾರಿಗಳು ಕಾನೂನಿನಡಿ ಸರಿಯಾದ ಕಾರ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ

ಉತ್ತರ ಪ್ರದೇಶ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್, ಕಾನೂನು ಪ್ರಕ್ರಿಯೆಯನ್ನು ಅನುಸರಿಸಲಾಗಿದೆ. 2020 ರ ಆಗಸ್ಟ್‌ ತಿಂಗಳಿನಲ್ಲಿ ನೀಡಿದ ಆದೇಶ ಪತ್ರದ ಆಧಾರದ ಮೇಲೆ ನೆಲಸಮ ಮಾಡಲಾಗಿದೆ ಎಂದು ಹೇಳಿದರಂತೆ.

“ಯುವರ್ ಆನರ್, ನಮ್ಮ ಬುಲ್‍ಡೋಜರ್ ಗಳು ಅಕ್ರಮ ಕಟ್ಟಡಗಳನ್ನು
ಅಲ್ಲಿ ವಾಸಿಸುತ್ತಿರುವವರು ಧರಿಸಿದ ಬಟ್ಟೆಗಳಿಂದ ಗುರುತಿಸಬಲ್ಲವು”
(ಆರ್.ಪ್ರಸಾದ್, ಇಲನಾಮಿಕ್‍ ಟೈಮ್ಸ್)

2019 ರಲ್ಲಿ, ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ “(ಆಸ್ತಿಗೆ) ಬೆಂಕಿ ಹಚ್ಚುವ ಜನರನ್ನು ಟಿವಿಯಲ್ಲಿ ನೋಡಬಹುದು. ಅವರು ಧರಿಸಿರುವ ಬಟ್ಟೆಯಿಂದ ಅವರನ್ನು ಗುರುತಿಸಬಹುದು.”  ಎಂದು ಹೇಳಿರುವುದನ್ನು ಇಲ್ಲಿ ವ್ಯಂಗ್ಯಚಿತ್ರಕಾರರು ನೆನಪಿಸುತ್ತಾರೆ.

Donate Janashakthi Media

Leave a Reply

Your email address will not be published. Required fields are marked *