ಕೋಲಾರ : ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಪೊರೇಟ್ ಸಂಸ್ಥೆಗಳ ಪರವಾದ ನೀತಿಗಳನ್ನು ಜಾರಿಗೆ ತರಲಾಗಿದ್ದು ಕ್ವಿಟ್ ಇಂಡಿಯಾ ಚಳುವಳಿಯ ಮಾದರಿಯಲ್ಲಿ ಕಾರ್ಪೊರೇಟ್ ಸಂಸ್ಥೆಗಳೇ ದೇಶ ಬಿಟ್ಟು ತೊಲಗಲಿ ಎಂದು ನಗರದ ಗಾಂಧಿವನದಲ್ಲಿ ಶುಕ್ರವಾರ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಿದರು.
ಬ್ರಿಟೀಷರಂತೆ ದೇಶದ ಕಾರ್ಪೊರೇಟ್ ಕಂಪನಿಗಳು ದೇಶದ ಸಂಪತ್ತು ಲೂಟಿ ಮಾಡಿದ್ದಾರೆ ೧೯೪೨ರಲ್ಲಿ ನಡೆದ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿಯ ಮಾದರಿಯಲ್ಲಿ ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ದೇಶದ ರೈತರು ಕಾರ್ಮಿಕರು ಬಡವರನ್ನು ರಕ್ಷಣೆ ಮಾಡಬೇಕಾದ ಸಂದರ್ಭ ಬಂದಿದೆ ಎಂದು ಕೆ.ಪಿ.ಆರ್.ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್ ಸೂರ್ಯನಾರಾಯಣ ತಿಳಿಸಿದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರವು ಪ್ರತಿ ಹೆಜ್ಜೆಯಲ್ಲಿಯೂ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶದ ಆರ್ಥಿಕತೆಯನ್ನು ಸರ್ವನಾಶ ಮಾಡುತ್ತಿದೆ. ಜನತೆಯ ಹಿತ ಕಾಪಾಡುವ ಬದಲು ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿ ಕಾಪಾಡುತ್ತಿದೆ. ಆ ಮೂಲಕ ದೇಶದ ಅಮೂಲ್ಯ ಸಂಪತ್ತುಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ಧಾರೆ ಎರೆದು ಕೊಡುತ್ತಿದೆ.ರೈತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರವು ದೇಶದ ಕೃಷಿರಂಗವನ್ನೇ ಬುಡಮೇಲುಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ : ಬಿಜೆಪಿ- ಜೆಡಿಎಸ್ ವಿರುದ್ಧ ಕಾನೂನು ಹೋರಾಟ: ಸಿಎಂ ಸಿದ್ದರಾಮಯ್ಯ ಘೋಷಣೆ
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ ಬ್ರಿಟೀಷರ ಒಡೆದಾಳುವ ನೀತಿಯನ್ನೇ ಇಂದಿನ ರಾಜಕಾರಣಿಗಳು ಮಾಡುತ್ತಿದ್ದಾರೆ ದಿನ ನಿತ್ಯದ ಬೆಲೆ ಏರಿಕೆ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಕೃಷಿಕರು, ಶ್ರಮಿಕರು ಹಾಗೂ ದಲಿತರು ಬದುಕುವುದು ದುಸ್ತರವಾಗಿದೆ ರೈತ ವಿರೋಧಿಯಾದ ಕೇಂದ್ರ ಸರಕಾರದ ಕೃಷಿ ಹಾಗೂ ಕೈಗಾರಿಕಾಭಿವೃದ್ಧಿಯ ವಿರೋಧಿ ಮತ್ತು ಸಾರ್ವಜನಿಕ ರಂಗದ ಉದ್ಯಮಗಳ ವಿರೋಧಿ ನೀತಿಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.
ರೈತರು ಮತ್ತು ರೈತ ಕಾರ್ಮಿಕರ ಪರವಾದ ಹೋರಾಟಗಳು ಮತ್ತು ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರೊಂದಿಗೆ ಜಂಟಿ ಹೋರಾಟಗಳನ್ನು ತೀವ್ರಗೊಳಿಸುವುದು ಈ ಸಮಯದಲ್ಲಿ ಅಗತ್ಯವಾಗಿದೆ. ತೀವ್ರ ಸಂಕಷ್ಟಗಳು ಸೃಷ್ಟಿಯಾಗಿದೆ ನಿರುದ್ಯೋಗ ಮತ್ತು ಬೆಲೆ ಏರಿಕೆಯನ್ನು ಎದುರಿಸುತ್ತಿರುವ ಜನರಿಗೆ ಪರಿಹಾರವನ್ನು ತರಲು ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ದೇಶಾದ್ಯಂತ ಉಗ್ರವಾದ ಹೋರಾಟಕ್ಕೆ ಮುಂದಾಗಲಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ.ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ಮುಖಂಡರಾದ ಗಂಗಮ್ಮ, ಟಿ.ಶ್ರೀನಿವಾಸ್, ಅಲಹಳ್ಳಿ ವೆಂಕಟೇಶಪ್ಪ, ನಾರಾಯಣರೆಡ್ಡಿ, ವೆಂಕಟಪ್ಪ, ನಾರಾಯಣಪ್ಪ, ಸೈಯದ್ ಫಾರೂಕ್, ನಮ್ಮ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ ಗೌಡ, ವೆಂಕಟರಾಮಪ್ಪ, ಸಿಐಟಿಯು ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಎಂ.ವಿಜಯಕೃಷ್ಣ ಭಾಗವಹಿಸಿದ್ದರು. ಚಿತ್ರ : ಕಾರ್ಪೋರೆಟ್ ಸಂಸ್ಥೆಗಳು ಭಾರತ ಬಿಟ್ಟು ತೊಲಗಲು ಒತ್ತಾಯಿಸಿ ಕೋಲಾರದಲ್ಲಿ ಸಂಯುಕ್ತ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು,
ಇದನ್ನು ನೋಡಿ : Broadcasting ಸೇವೆಗಳ(ನಿಯಂತ್ರಣ) ಮಸೂದೆ 2024 ಎನ್ನುವ ಮತ್ತೊಂದು ಕರಾಳ ಮಸೂದೆಯ ವಿವರಗಳು ಗೊತ್ತೇ? Janashakthi