ನಾ ದಿವಾಕರ
ಯಡಿಯೂರಪ್ಪ ತಮ್ಮ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ನಿಷ್ಠೆಯಿಂದ, ಪ್ರಾಮಾಣಿಕವಾಗಿ, ಅತ್ಯುತ್ತಮ ಪಾರದರ್ಶಕ ಆಡಳಿತ ನೀಡಿದ್ದಾರೆ(?) ಎಂದಾದರೆ ಅವರ ಪದಚ್ಯುತಿಗೆ ಕಾರಣವೇನು ?
ಲಿಂಗಾಯತರ ಮತಗಳು, ವೀರಶೈವ ಲಿಂಗಾಯತ ಮಠಗಳ ಬೆಂಬಲವೇ ಯಡಿಯೂರಪ್ಪ ಸರ್ಕಾರಕ್ಕೆ ಶ್ರೀರಕ್ಷೆಯಾಗಿದ್ದಲ್ಲಿ, ಸಮಸ್ತ ಮಠೋದ್ಯಮಿಗಳ ಬೆಂಬಲ ಇದ್ದರೂ ಅವರನ್ನು ಬದಲಿಸುವುದೇಕೆ ?
ಕೋವಿಡ್ ಸಾಂಕ್ರಾಮಿಕದ ಎರಡೂ ಅಲೆಗಳ ಸಂದರ್ಭದಲ್ಲಿ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ದಕ್ಷತೆಯಿಂದ ನಿರ್ವಹಿಸಿ, ಜನತೆಗೆ ಸಮರ್ಪಕ, ಸಮರ್ಥ ಸೇವೆಯನ್ನು ಒದಗಿಸಿ, ನೂರಾರು ಪ್ರಾಣಗಳನ್ನು ಕಾಪಾಡುವಂತೆ ಆಡಳಿತ ನಡೆಸಿದ್ದರೆ ಯಡಿಯೂರಪ್ಪ ಏಕೆ ಇಳಿಯಬೇಕಿತ್ತು? ಈ ನಿಟ್ಟಿನಲ್ಲಿ ವಿಫಲವಾಗಿದ್ದಾರೆ ಎಂದರೆ ಇಷ್ಟು ದಿನ ಏಕೆ ಕುರ್ಚಿಗೆ ಅಂಟಿಕೊಂಡಿರಬೇಕಿತ್ತು?
ತಮ್ಮದೇ ಪಕ್ಷದ, ಎಲ್ಲರೂ ಅಲ್ಲದಿದ್ದರೂ ಬಹುಸಂಖ್ಯೆಯ, ಶಾಸಕರ ವಿಶ್ವಾಸ ಗಳಿಸಿ, ವಿರೋಧ ಪಕ್ಷಗಳ ಕೆಲವು ಶಾಸಕರ ವಿಶ್ವಾಸ ಖರೀದಿಸಿ, ಆಪರೇಷನ್ ಕಮಲ ಮೂಲಕ ಶಾಸಕ ಮಾರುಕಟ್ಟೆಗೆ ಅಧಿಕೃತ ಮಾನ್ಯತೆ ನೀಡುವ ಮೂಲಕ, ಚುನಾವಣೆಯಲ್ಲಿ ಬಹುಮತ ಗಳಿಸದಿದ್ದರೂ ಸರ್ಕಾರ ರಚಿಸಿ ಎರಡು ವರ್ಷಗಳ “ಉತ್ತಮ (?)” ಆಡಳಿತ ನೀಡಿದ ಒಬ್ಬ ಮುಖ್ಯಮಂತ್ರಿ ಏಕೆ ರಾಜೀನಾಮೆ ಕೊಡಬೇಕಿತ್ತು ?
ಎಲ್ಲ ಜಾತಿ ಸಮುದಾಯಗಳಿಗೂ (ಸಮುದಾಯ=ಮಠ ಎಂದು ಓದಿಕೊಳ್ಳತಕ್ಕದ್ದು) ಅನುಕೂಲಗಳನ್ನು ಒದಗಿಸಿ ಎಲ್ಲ ಜಾತಿ ಬಾಂಧವರನ್ನೂ ಸಂತೃಪ್ತಿಪಡಿಸಿ, ಸರ್ವ ಜಾತಿ ಅಪೇಕ್ಷಿತ ನಾಯಕರಾಗಿ, ಧಾರ್ಮಿಕ, ಆಧ್ಯಾತ್ಮಿಕ ಸಂಸ್ಥೆಗಳಿಗೆ, ಕೋಟ್ಯಂತರ ರೂಗಳ ಅನುದಾನ ನೀಡುವ ಮೂಲಕ “ಜನ(ಮಠ)ಸೇವೆ” ಮಾಡಿದ ಒಬ್ಬ “ಜನ(ಮಠ)ಪ್ರಿಯ” ನಾಯಕನನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದೇಕೆ?
ರಾಜ್ಯದೆಲ್ಲೆಡೆ ಪ್ರವಾಹ ಭೀತಿ ಎದುರಾಗಿದ್ದು, ಅನೇಕ ಘಟ್ಟ ಪ್ರದೇಶಗಳಲ್ಲಿ ಭೂ ಕುಸಿತದಿಂದ ಮನೆಗಳು ನೆಲಸಮವಾಗಿದ್ದು, ನೆರೆ ಪ್ರವಾಹದಿಂದ ಜನರು ತಮ್ಮ ಸೂರು ಕಳೆದುಕೊಳ್ಳುತ್ತಿರುವ ಸಮಯದಲ್ಲಿ ತಮ್ಮ ಕಾರ್ಯದಕ್ಷತೆಯನ್ನು ತೋರಿ ಎಲ್ಲ ಸಂತ್ರಸ್ತರಿಗೂ ಪರಿಹಾರ ಒದಗಿಸುವುದರಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಲ್ಲಿ ಈ ಸಂಕಷ್ಟದ ಸಮಯದಲ್ಲೇ ಏಕೆ ರಾಜೀನಾಮೆ ನೀಡಬೇಕಿತ್ತು? ಈ ನಿಟ್ಟಿನಲ್ಲಿ ವಿಫಲರಾಗಿದ್ದಾರೆ ಎಂದರೆ ರಾಜೀನಾಮೆಗೆ ಮುನ್ನ ತಪ್ಪೊಪ್ಪಿಗೆ ಸಲ್ಲಿಸುವಷ್ಟು ಪ್ರಾಮಾಣಿಕತೆ ಅವರಲ್ಲಿ ಮತ್ತು ಪಕ್ಷದಲ್ಲಿ ಇದೆಯೇ ?
ಚುನಾಯಿತ ಮತ್ತು ಖರೀದಿಸಿ ಚುನಾಯಿಸಲ್ಪಟ್ಟ ಶಾಸಕರ ಮೂಲಕ ಆಯ್ಕೆಯಾಗಿರುವ ಒಬ್ಬ ಮುಖ್ಯಮಂತ್ರಿಯ ವಿರುದ್ಧ ಶಾಸನಸಭೆಯಲ್ಲಿ, ಶಾಸಕರ ಮೂಲಕ, ಯಾವುದೇ ಅವಿಶ್ವಾಸ ನಿರ್ಣಯ ಮಂಡನೆಯಾಗದಿದ್ದರೂ, ಪ್ರಾಮಾಣಿಕ-ದಕ್ಷ (?) ಮುಖ್ಯಮಂತ್ರಿಯನ್ನು ಏಕಾಏಕಿ ಪದಚ್ಯುತಗೊಳಿಸುವ ಅಸಾಂವಿಧಾನಿಕ ಕ್ರಮ ಉಚಿತವೇ ? ಇಲ್ಲ, ಅವರ ಆಡಳಿತ ಪ್ರಾಮಾಣಿಕವಾಗಿರಲಿಲ್ಲ ಎಂದರೆ, ಸಚಿವ ಸಂಪುಟ ಸುಮ್ಮನಿದ್ದುದೇಕೆ ?
ಯಡಿಯೂರಪ್ಪ ಉತ್ತಮ ಆಡಳಿತ ನಡೆಸಿದ್ದಲ್ಲಿ, ಜನತೆಯ ಆಯ್ಕೆಯಾಗಿ, ಅವರನ್ನೇ ಮುಂದುವರೆಸಬೇಕಿತ್ತು. ಒಂದು ವೇಳೆ ಯಡಿಯೂರಪ್ಪನವರ ಆಡಳಿತದಲ್ಲಿ ಲೋಪಗಳೇ ತುಂಬಿವೆ ಎಂದಾದರೆ, ಇಷ್ಟು ದಿನ ಈ ಕೆಟ್ಟ ಆಡಳಿತವನ್ನು ರಾಜ್ಯದ ಜನತೆ ಏಕೆ ಸಹಿಸಿಕೊಳ್ಳಬೇಕಿತ್ತು ? ಇವರ ಆಡಳಿತ ಕೆಟ್ಟದಾಗಿತ್ತು ಎಂದರೆ ಇಡೀ ಮಂತ್ರಿ ಮಂಡಲವೇ ಹೊಣೆ ಅಲ್ಲವೇ ? ಸಚಿವರೂ ರಾಜೀನಾಮೆ ನೀಡಬೇಕಲ್ಲವೇ ?
ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಹಕ್ಕು ಇರುವುದು ಚುನಾಯಿತ-ಖರೀದಿಸಲ್ಪಟ್ಟ ಶಾಸಕರಿಗೆ. ಶಾಸನಸಭೆಯಲ್ಲೇ ಇದು ನಿರ್ಧಾರವಾಗುವುದು ಸಾಂವಿಧಾನಿಕ ವಿಧಾನ. ಪಕ್ಷದ ಹೈಕಮಾಂಡ್ ಈ ವಿಚಾರದಲ್ಲಿ ನೇರ ಹಸ್ತಕ್ಷೇಪ ಮಾಡುವುದು, ಸಂವಿಧಾನಕ್ಕೆ ಅಪಚಾರ ಎಸಗಿದಂತೆ. ಈ ಹೈಕಮಾಂಡ್ ಸಂಸ್ಕೃತಿ ಕಾಂಗ್ರೆಸ್ ಪಕ್ಷದ ಬಳುವಳಿ. ಬಿಜೆಪಿ ಈ ಸಂಸ್ಕೃತಿಯನ್ನು ವಿರೋಧಿಸುತ್ತಲೇ ಬೆಳೆದ ಪಕ್ಷ. ಇಂದು ನಡೆದ ಪ್ರಹಸನವನ್ನು ಹೇಗೆ ಅರ್ಥೈಸಲು ಸಾಧ್ಯ ?
ಕೊನೆಯದಾಗಿ,
ಈ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಎದೆಮುಟ್ಟಿ ಉತ್ತರಿಸುವ ಬಿಜೆಪಿ ನಾಯಕರು ಇರಬಹುದೇ ?
ಇಲ್ಲವಾದಲ್ಲಿ ಈ ಅಕ್ರಮ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಅರ್ಹತೆ ಇದೆಯೇ ?