ಸಂವಿಧಾನ ಬುಡಮೇಲು ಮಾಡುವ ಕಾರ್ಪೊರೇಟ್-ಹಿಂದುತ್ವದ ಆಳ್ವಿಕೆ

ಸಂವಿಧಾನ ಬುಡಮೇಲು ಮಾಡುವ ಕಾರ್ಪೊರೇಟ್-ಹಿಂದುತ್ವದ ಆಳ್ವಿಕೆಯ ವಿರುದ್ಧ ಸಂಯುಕ್ತ ಹೋರಾಟಕ್ಕೆ ‘ಜನ ಬದುಕಿನ ಸಮಾವೇಶ’ದ ನಿರ್ಧಾರ

ಟಿ.ಯಶವಂತ

ಜೂನ್ 25, 26ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಎರಡು ದಿನಗಳ ಕಾಲ “ರಾಷ್ಟ್ರೀಯ ಬಿಕ್ಕಟ್ಟು-ನಾಗರಿಕ ಸಮಾಜದ ಪಾತ್ರ” ದ ಕುರಿತು ದುಂಡು ಮೇಜಿನ ಸಭೆ ಹಾಗೂ “ಜನ ಬದುಕಿನ ಸಮಾವೇಶ” ನಡೆಯಿತು. ಜನ ಸಂಗ್ರಾಮ ಪರಿಷತ್-ಜನತಂತ್ರ ಪ್ರಯೋಗಶಾಲಾ ನೇತೃತ್ವದಲ್ಲಿ ಜನಾಂದೋಲನ ಮಹಾ ಮೈತ್ರಿ, ಸಿಟಿಜನ್ ಪಾರ್ ಡೆಮಾಕ್ರಸಿ, ಸೊಸೈಟಿ ಫಾರ್ ಕಮ್ಯುನಲ್ ಹಾರ್ಮನಿ, ಸಂಯುಕ್ತ ಹೋರಾಟ ಕರ್ನಾಟಕದ ಸಹಕಾರದೊಂದಿಗೆ ಇವನ್ನು ಸಂಘಟಿಸಲಾಗಿತ್ತು. ಈ ಮಹತ್ವದ ಸಭೆಯ ಕುರಿತು ಒಂದು ವರದಿ ಇಲ್ಲಿದೆ.

ಜನತಂತ್ರದ ಮೂಲಕ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಧರ್ಮನಿರಪೇಕ್ಷತೆ, ಒಕ್ಕೂಟ ವ್ಯವಸ್ಥೆ ಮುಂತಾದ ಸಂವಿಧಾನದ ಮೂಲಭೂತ ಆಧಾರಸ್ಥಂಭ ಗಳನ್ನು ಹಾಗೂ ಜನತೆಯ ಪರಮಾಧಿಕಾರವನ್ನು ಖಾತರಿಪಡಿಸುವ ಸ್ವತಂತ್ರ ನ್ಯಾಯಾಂಗ, ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಹಾಳುಗೆಡುವುತ್ತಿದೆ.  ಕಾನೂನು ಅಂಗೀಕರಿಸುವ ಸಂಸದೀಯ ಪರಮಾಧಿಕಾರವನ್ನು ಜನತೆಯ ಬದುಕನ್ನು ಬಲಿಗೊಡುವ ಕಾರ್ಪೊರೇಟ್ ಹಿತಗಳನ್ನು ನಗ್ನವಾಗಿ ಬೆಂಬಲಿಸುವ ಕಾಯ್ದೆಗಳನ್ನು ದೇಶದ ಮೇಲೆ ಹೇರಲು ಬಳಸುತ್ತಿದೆ. ಜನತೆಯ ಪ್ರತಿರೋಧವನ್ನು, ಭಿನ್ನಾಭಿಪ್ರಾಯದ ಸ್ವಾತಂತ್ರ್ಯ ವನ್ನು ಫ್ಯಾಸಿಸ್ಟ್ ಕ್ರಮಗಳ ಮೂಲಕ ದಮನಿಸಲಾಗುತ್ತಿದೆ.

ಹೀಗೆ ದೇಶದಲ್ಲಿ ರಾಷ್ಟ್ರೀಯ ಬಿಕ್ಕಟ್ಟು ಸೃಷ್ಟಿ ಯಾಗಿದೆ ಎಂದು 2022 ಜೂನ್ 25,26 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಎರಡು ದಿನಗಳ ಕಾಲ ” ರಾಷ್ಟ್ರೀಯ ಬಿಕ್ಕಟ್ಟು-ನಾಗರಿಕ ಸಮಾಜದ ಪಾತ್ರ” ಕುರಿತು ದುಂಡು ಮೇಜಿನ ಸಭೆ ಹಾಗೂ “ಜನ ಬದುಕಿನ ಸಮಾವೇಶ” ನಡೆಯಿತು.

ಜನ ಸಂಗ್ರಾಮ ಪರಿಷತ್-ಜನತಂತ್ರ ಪ್ರಯೋಗಶಾಲಾ ನೇತೃತ್ವದಲ್ಲಿ ಜನಾಂದೋಲನ ಮಹಾ ಮೈತ್ರಿ, ಸಿಟಿಜನ್ ಪಾರ್ ಡೆಮಾಕ್ರಸಿ, ಸೊಸೈಟಿ ಫಾರ್ ಕಮ್ಯುನಲ್ ಹಾರ್ಮನಿ, ಸಂಯುಕ್ತ ಹೋರಾಟ ಕರ್ನಾಟಕ ದ ಸಹಕಾರದೊಂದಿಗೆ ಸಂಘಟಿಸಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಸಂಘಟನೆಗಳ ಮುಖಂಡರು, ನಾಗರಿಕ ಹಕ್ಕುಗಳ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು , ಕಾರ್ಪೊರೇಟ್ ಹಿಂದುತ್ವದ ಆಳ್ವಿಕೆಯು ಸಂವಿಧಾನವನ್ನು ಬುಡಮೇಲು ಮಾಡುತ್ತಿದ್ದು, ದೇಶದಲ್ಲಿ ಒಂದು ವಿಶಿಷ್ಟ ಸನ್ನಿವೇಶ ವನ್ನು ಉಂಟು ಮಾಡಿದೆ. ಇಂದಿರಾಗಾಂಧಿ ಕಾಲದಲ್ಲಿ ಘೋಷಿತ ತುರ್ತು ಪರಿಸ್ಥಿತಿ ಇತ್ತು. ಆದರೆ ಈಗ ಅದಕ್ಕಿಂತಲೂ ಹೆಚ್ಚು ಕರಾಳವಾದ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ ಎಂದು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು.

ರಾಷ್ಟ್ರೀಯ ಬಿಕ್ಕಟ್ಟಿನ ಮೂಲ ಕೃಷಿ ಬಿಕ್ಕಟ್ಟಿನಲ್ಲಿದೆ : ಡಾ.ಅಶೋಕ್ ಧವಳೆ

“ಕೃಷಿ ಬಿಕ್ಕಟ್ಟು ಮತ್ತು ಮುಂದಿನ ದಾರಿ” ಎಂಬ ವಿಷಯದ ಕುರಿತು ಮಾತಾನಾಡಿದ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್‌) ರಾಷ್ಟ್ರೀಯ ಅಧ್ಯಕ್ಷ ಡಾ.ಅಶೋಕ್ ಧವಳೆ ರವರು ರಾಷ್ಟ್ರೀಯ ಬಿಕ್ಕಟ್ಟಿನ ಮೂಲ ಕೃಷಿ ಬಿಕ್ಕಟಿನಲ್ಲಿದೆ. ನವ ಉದಾರೀಕರಣ ಧೋರಣೆಗಳು ಜಾರಿಗೆ ಬಂದ ಮೇಲೆ ದೇಶದಲ್ಲಿ ಸುಮಾರು 4.5 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಅದಿವಾಸಿಗಳು ವಾಸ ಮಾಡುತ್ತಿರುವ ಪ್ರದೇಶದಲ್ಲಿ ಲಕ್ಷಾಂತರ ಮಕ್ಕಳು ಹಸಿವಿನಿಂದ ,ಅಪೌಷ್ಟಿಕತೆ ಯಿಂದ ಸಾವಿಗೀಡಾಗುತ್ತಿದ್ದಾರೆ . ರೈತರ ಆತ್ಮಹತ್ಯೆಗಳು ಸಮಾಜದ ಗಮನಕ್ಕೆ ಬಂದಿದೆ ಆದರೆ ಆದಿವಾಸಿಗಳ ಹಸಿವು ಸಮಾಜದ ಗಮನಕ್ಕೆ ಅಷ್ಟಾಗಿ ಬಂದಿಲ್ಲ ಎಂದು ವಿಷಾದಿಸಿದರು.

ಮುಂದುವರೆದು 1947 ರಿಂದ 1990 ಪ್ರಭುತ್ವ ಪ್ರಾಯೋಜಿತ ಬಂಡವಾಳಶಾಹಿ ಅಭಿವೃದ್ಧಿಯ ಹಂತವಾಗಿದ್ದು ನಂತರ 1991 ರಿಂದ ಈಗಲೂ ಮುಂದುವರೆಯುತ್ತಿರುವುದು ಬಂಡವಾಳಶಾಹಿ ಬೆಳವಣಿಗೆಯ ನವ ಉದಾರವಾದಿ ಹಂತ ಎಂದು ವಿಶ್ಲೇಷಿಸಿ 2014 ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಸ್ವಾತಂತ್ರ್ಯ ಚಳವಳಿ ಸಂದರ್ಭದ ‘ಉಳುವವನೇ ಭೂ ಒಡೆಯ’ ಎಂಬ ಘೋಷಣೆಯನ್ನು ‘ಕಾರ್ಪೊರೇಟ್ ಕಂಪನಿಗಳೇ ಭೂ ಒಡೆಯರು’ ಎಂದು ಬದಲಾಯಿಸಿದೆ. ಸ್ವಾತಂತ್ರ್ಯ ನಂತರದಿಂದ ದೇಶದ ಕೃಷಿ ನೀತಿ ಗಳ ಪ್ರಧಾನ ಫಲಾನುಭವಿಗಳು ಭೂ ಮಾಲೀಕರು, ಗ್ರಾಮೀಣ ಶ್ರೀಮಂತರೇ ಆಗಿದ್ದಾಗ್ಯೂ ಮಧ್ಯಮ, ಸಣ್ಣ ರೈತರು, ಕೃಷಿ ಕೂಲಿಕಾರರು ಮತ್ತಿತರರು ಕೂಡ ಕೆಲವೊಂದು ಪ್ರಯೋಜನ ಗಳನ್ನು  ಪಡೆದು ತಮ್ಮ ಜೀವನ ಸ್ಥಿತಿಯನ್ನು ಉತ್ತಮಪಡಿಸಿಕೊಂಡಿದ್ದರು. ಕೃಷಿ, ಗ್ರಾಮೀಣಾಭಿವೃದ್ಧಿಯಲ್ಲಿ ಸಾರ್ವಜನಿಕ ಹೂಡಿಕೆ, ನೀರಾವರಿ-ವಿದ್ಯುತ್ ವಿಸ್ತರಣೆ, ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಸಾರ್ವಜನಿಕ ಪಡಿತರ ವ್ಯವಸ್ಥೆ ಮುಂತಾದ ಈ ಎಲ್ಲಾ ಸಕಾರಾತ್ಮಕ ಕ್ರಮಗಳನ್ನು ನಾಶಪಡಿಸಿ ಭಾರತ ದೇಶವನ್ನು ಸಾಮೂಹಿಕ ವಲಸೆ, ಹಸಿವು, ನಿರುದ್ಯೋಗ-ಬಡತನ ದ ಸಾಮ್ರಾಜ್ಯವನ್ನಾಗಿ ರೂಪಾಂತರಿಸಲಾಗುತ್ತಿದೆ ಎಂದರು.

ಭೂ ಹೀನ ಕೃಷಿ ಕೂಲಿಕಾರರು ಮತ್ತು ಬಡ ರೈತರಿಗೆ ಭೂಮಿ ಹಂಚುವ ಕ್ರಾಂತಿಕಾರಿ ಭೂ ಸುಧಾರಣೆ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಯಲ್ಲಿ ಸಾರ್ವಜನಿಕ ಹೂಡಿಕೆ ಹೆಚ್ಚಳ, ವೈಜ್ಞಾನಿಕ ಬೆಂಬಲ ಬೆಲೆಯಲ್ಲಿ ಖಾತರಿ ಖರೀದಿ, ಸಾರ್ವಜನಿಕ ಆರೋಗ್ಯ-ಶಿಕ್ಷಣದ ಖಾತರಿ, ಸಹಕಾರಿ ವಲಯಗಳ ಬಲವರ್ಧನೆ ಮುಂತಾದವುಗಳು ಕೃಷಿ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡುವ ದಾರಿಗಳಾಗಿದ್ದು ಪರ್ಯಾಯ ಕೃಷಿ ಧೋರಣೆಗಳಿಗಾಗಿ ರೈತ ಚಳವಳಿಗಳನ್ನು ಬಲಪಡಿಸುವಂತೆ ಕರೆ ನೀಡಿದರು.

ಜನ ಸಂಸ್ಕೃತಿ ನಾಶವೇ ಕೋಮುವಾದಿಗಳ ಮುನ್ನಡೆಗೆ ಕಾರಣ  : ದತ್ತಾ ದೇಸಾಯಿ

“ಜನ ಸಂಸ್ಕೃತಿಯ ಮೇಲೆ ಕೋಮುವಾದದ ದಾಳಿ, ಪರಿಣಾಮ” ಎಂಬ ವಿಷಯದ ಮೇಲೆ ಮಾತಾನಾಡಿದ ಪುಣೆಯ ಆಕಾಡೆಮಿ ಆಪ್ ಪೊಲಿಟಿಕಲ್ ಅ್ಯಂಡ್ ಸೊಷಿಯಲ್ ಮುಖ್ಯಸ್ಥ ದತ್ತಾ ದೇಸಾಯಿರವರು  ಸ್ವಾತಂತ್ರ್ಯ ಪೂರ್ವದಿಂದಲೂ ಕೋಮುವಾದಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ರುವ ಸಂಘ ಪರಿವಾರಕ್ಕೆ ಜಾಗತೀಕರಣ ಕಾಲಘಟ್ಟದ ತನಕ ಜನ ಸಮೂಹದ ಸಾಮೂಹಿಕ ಪ್ರಜ್ಞೆ ಯಲ್ಲಿ ಸ್ಥಾನ ಗಳಿಸಲು ಆಗಿರಲಿಲ್ಲ. ಜನ ಸಂಸ್ಕೃತಿಯು ಹಿನ್ನೆಲೆ ಗೆ ಸರಿಯುತ್ತಿದ್ದಂತೆ ಕೋಮುವಾದಿ ಶಕ್ತಿಗಳು ಮುನ್ನಡೆ ಸಾಧಿಸುತ್ತಾ ಬಂದಿವೆ. ಸಮಾಜದಲ್ಲಿರುವ ಬಹುತ್ವ ಮತ್ತು ಸೌಹಾರ್ದ ಪರಂಪರೆಯನ್ನು ರಕ್ಷಿಸಿಕೊಳ್ಳುವ ಮೂಲಕ ಸಾಮರಸ್ಯದ ಹಂದರ ಹರಿಯದಂತೆ ನೋಡಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರವರು ತಮ್ಮ ಶಾಂತಿಯುತ ಸಮರಶೀಲ ಚಟುವಟಿಕೆಗಳ ಮೂಲಕ ಬ್ರಿಟಿಷರ ವಿರುದ್ಧ ವಿಶಾಲವಾದ ಪ್ರತಿರೋಧವನ್ನು ಪೋಷಿಸಿದಂತೆ ಫ್ಯಾಸಿಸ್ಟ್-ವಿರೋಧಿ ಕಾರ್ಯತಂತ್ರವನ್ನು ಎದುರಿಸಬೇಕು ಎಂದರು.

ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಮಾಜಿ ನಿರ್ದೇಶಕ ಸಿ ಬಸವಲಿಂಗಯ್ಯ ರವರು ರಾಮಾಯಣ, ಮಹಾಭಾರತ ದಂತಹ ಪುರಾಣಗಳ ಪಾತ್ರಗಳನ್ನು ಮತ್ತು ಚರಿತ್ರೆಯ ವೈಜ್ಞಾನಿಕ ನಿರೂಪಣೆಗಳನ್ನು ವ್ಯವಸ್ಥಿತವಾಗಿ ತಿರುಚಲಾಗುತ್ತಿದೆ. ಇಂತಹ ನಿರೂಪಣೆಗಳೇ ಶಾಲಾ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಸ್ಥಾನ ಪಡೆದಿವೆ. ತಾರತಮ್ಯದ ಅನಾಗರಿಕತೆಯಿಂದ ಕೂಡಿರುವ ಜಾತಿ ಪದ್ದತಿಯನ್ನು, ವರ್ಣಾಶ್ರಮ ಪದ್ದತಿಯನ್ನು ಶೂದ್ರರೇ ಸಮರ್ಥಿಸಿ ಮಾತನಾಡುವಂತಹ ವಾತಾವರಣವನ್ನು ಸಂಘ ಪರಿವಾರ ನಿರ್ಮಿಸಿದೆ.  ಸಂವಿಧಾನದ ಬೆಳಕಿನಲ್ಲಿ ಮನುವಾದವನ್ನು ಎದುರಿಸಬೇಕು ಎಂದು ಅಭಿಪ್ರಾಯ ಪಟ್ಟರು.

ಕೋಮುವಾದಿ ರಾಜಕೀಯ ಮುನ್ನಡೆಗೆ ಮೆಟ್ಟಿಲಾದ ಅಸ್ತಿತ್ವವಾದಿ ರಾಜಕೀಯ : ಎಸ್ ಆರ್ ದಾರಾಪುರಿ

ಜಾತಿ ಧರ್ಮ, ಭಾಷೆ, ಪ್ರದೇಶ ಆಧಾರಿತ ವಿವಿಧ ಅಸ್ತಿತ್ವವಾದಿ ರಾಜಕೀಯ ಚಿಂತನೆಗಳು ಹಾಗೂ ಪಕ್ಷಗಳು ಕೇವಲ ಅಧಿಕಾರದಲ್ಲಿ ಪಾಲು ಪಡೆಯುವುದಕ್ಕೆ ಸೀಮಿತವಾಗಿವೆಯೇ ಹೊರತು ಪ್ರಸ್ತುತ ಶೋಷಕ ವರ್ಗಗಳ ರಾಜಕೀಯ ಕ್ಕೆ ಪರ್ಯಾಯವಾಗಿ ಬಡ ಮುಸ್ಲಿಮರು, ಬಡ ದಲಿತರು, ಬಡ ಹಿಂದುಳಿದವರು, ಶ್ರಮಿಕರು, ಬಡ ರೈತರನ್ನು ರಕ್ಷಿಸುವ ಧೋರಣೆಗಳನ್ನು ಹೊಂದಿಲ್ಲ. ಬಹುಜನ ಸಮಾಜವಾದಿ ಪಕ್ಷದ ಕಾನ್ಸಿರಾಮ್ ರವರು ವ್ಯವಸ್ಥೆ ಬದಲಾಯಿಸುವುದಾಗಿ ಘೋಷಣೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಶ್ರೀ ಸಾಮಾನ್ಯರ ಜೀವನ ಸ್ಥಿತಿ ಉತ್ತಮ ಪಡಿಸುವ ಯಾವುದೇ ಕಾರ್ಯಸೂಚಿಯನ್ನು ಜಾರಿ ಮಾಡಲಿಲ್ಲ ಏಕೆಂದರೆ ಆಳುವ ವರ್ಗಗಳ ನವ ಉದಾರೀಕರಣ ಧೋರಣೆಗಳಿಗೆ ಪರ್ಯಾಯ ಧೋರಣೆ ಇರಲಿಲ್ಲ. ಇದೇ ರೀತಿ ಮಹಾರಾಷ್ಟ್ರದ ರಾಮದಾಸ್ ಅಠಾವಳೆ, ಬಿಹಾರದಲ್ಲಿ ರಾಮ್ ವಿಲಾಸ್ ಪಾಸ್ವಾನ್ ರವರು ಅಧಿಕಾರಕ್ಕಾಗಿ ಬಿಜೆಪಿ ಜೊತೆ ಮೈತ್ತಿಯಲ್ಲಿದ್ದಾರೆ.  ಜಾತಿ ಆಧಾರಿತ ರಾಜಕೀಯವು ಹಿಂದುತ್ವ ರಾಜಕೀಯವನ್ನು ಪೋಷಿಸುತ್ತಿದೆ. ಅದ್ದರಿಂದ ಉದ್ಯೋಗವನ್ನು ಮೂಲಭೂತ ಹಕ್ಕಾಗಿಸುವ, ಶಿಕ್ಷಣವನ್ನು ಸಾರ್ವತ್ರಿಕರಿಸುವ, ಖಾಸಗೀಕರಣ ಪ್ರಕ್ರಿಯೆ ನಿಲ್ಲಿಸಿ ಕೃಷಿಯನ್ನು ಲಾಭದಾಯಕಗೊಳಿಸುವ, ಆರೋಗ್ಯ ಸೇವೆಯನ್ನು ಉತ್ತಮಪಡಿಸುವ, ಕಾರ್ಪೊರೇಟ್ ಏಕಸ್ವಾಮ್ಯವನ್ನು ಕೊನೆಗಾಣಿಸಿ ಭೂ ಹೀನರಿಗೆ ಭೂಮಿ ನೀಡುವ, ಸಾರ್ವಜನಿಕ ಹಿತದ ರಾಜಕೀಯಕ್ಕೆ ದಲಿತರನ್ನು, ಹಿಂದುಳಿದವರನ್ನು, ಅಲ್ಪಸಂಖ್ಯಾತರನ್ನು ರೈತ-ಕಾರ್ಮಿಕರನ್ನು ಅಣಿ ನೆರೆಸಬೇಕು ಎಂದು ಅಭಿಪ್ರಾಯ ಪಟ್ಟರು.

ಸಂಯುಕ್ತ ಹೋರಾಟಕ್ಕೆ “ಜನ ಬದುಕಿನ ಸಮಾವೇಶ”ದ ತೀರ್ಮಾನ

ನಂತರ ನಡೆದ “ಜನ ಬದುಕಿನ ಸಮಾವೇಶ”ದಲ್ಲಿ, ಸರ್ಕಾರವೇ ಜಾತಿ, ಧರ್ಮ ಗಳ ಹೆಸರಿನಲ್ಲಿ ಹಿಂಸೆಯನ್ನು ಪ್ರಚೋದಿಸುತ್ತಿದೆ. ಪೌರತ್ವ ಮತ್ತು ರಾಷ್ಟ್ರೀಯತೆ ಯ ವಿಷಯದಲ್ಲಿ ಸುಳ್ಳು ಮಾಹಿತಿಗಳನ್ನು ಹರಿ ಬಿಡಲಾಗುತ್ತಿದೆ. ಅದ್ದರಿಂದ ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಜನರನ್ನು ಒಡೆದು ಆಳುವ ನೀತಿಯ ವಿರುದ್ಧ ರೈತ ,ಕಾರ್ಮಿಕರ, ದಲಿತ, ಹಿಂದುಳಿದ ವರ್ಗಗಳ, ಕಲೆ ಮತ್ತು ಸಾಂಸ್ಕೃತಿಕ ಸಂಘಟನೆಗಳು ಹಾಗೂ ಜನಪರ ರಾಜಕೀಯ ಪಕ್ಷಗಳು ಒಗ್ಗೂಡಿ ಹೋರಾಟ ನಡೆಸುವ ಅಗತ್ಯ ಕುರಿತು ನಿರ್ಣಯಿಸಲಾಯಿತು.

ಕೃಷಿ ಸಂಬಂದಿ ಮೂರು ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ಸು ಪಡೆದರೂ ಕರ್ನಾಟಕ ಸರ್ಕಾರ ತನ್ನ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆದಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಲ್ಲಿ ಶಿಕ್ಷಣವನ್ನು ಕೋಮುವಾದೀಕರಿಸುವ, ವಾಣೀಜ್ಯೀಕರಿಸುವ ಹಾಗೂ ರಾಜ್ಯಗಳ ಹಕ್ಕುಗಳನ್ನು ನಾಶಪಡಿಸುವ ಕೇಂದ್ರ ಸರ್ಕಾರದ ಪ್ರಯತ್ನ ಗಂಡಾಂತರಕಾರಿಯಾಗಿದೆ. ಈ ಬಗ್ಗೆ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಿ, ಸಂಯುಕ್ತ ಹೋರಾಟ ಕಟ್ಟಲು ಶ್ರಮಿಸುವುದಾಗಿ ಈ ಸಮಾವೇಶವು ತೀರ್ಮಾನಿಸಿತು.

ಸಿಟಿಜನ್ ಪಾರ್ ಡೆಮಾಕ್ರಸಿಯ ರಾಷ್ಟ್ರೀಯ ಅಧ್ಯಕ್ಷ ಎಸ್ ಆರ್ ಹಿರೇಮಠ್, ಸೊಸೈಟಿ ಪಾರ್ ಕಮ್ಯುನಲ್ ಹಾರ್ಮಾನಿಯ ಪ್ರೊ.ಆನಂದ್ ಕುಮಾರ್, ಜನ ಸಂಗ್ರಾಮ ಪರಿಷತ್ತಿನ ರಾಘವೇಂದ್ರ ಕುಷ್ಠಗಿ ಮುಂತಾದವರ ನೇತೃತ್ವದಲ್ಲಿ ಸಂಘಟಿಸಲ್ಪಟ್ಟಿದ್ದ ಈ ಎರಡು ದಿನದ ಕಾರ್ಯಕ್ರಮ ವನ್ನು ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ರವರು ಉದ್ಘಾಟಿಸಿದರು. ವಿವಿಧ ಗೋಷ್ಠಿಗಳಲ್ಲಿ ಪ್ರಸಿದ್ಧ ಆರ್ಥಿಕ ತಜ್ಞ ಟಿ ಆರ್ ಚಂದ್ರಶೇಖರ್, ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿಸಿ ಬಯ್ಯಾರೆಡ್ಡಿ, ಕಿಸಾನ್ ಸಭಾದ ಅಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ್, ಡಿಹೆಚ್ ಪೂಜಾರ್, ಕೆವಿ ಭಟ್ ,ಹೆಚ್ ವಿ ದಿವಾಕರ್, ಸುಗತ ಶ್ರೀನಿವಾಸ ರಾಜು, ಬಿ.ಆರ್.ಪಾಟೀಲ್, ಕೆ.ಉಮಾ, ದಸಂಸ ದ ವಿ ನಾಗರಾಜ್, ಎನ್ ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *