ಕೊರೋನಾ ನಂತರದ ಅಂತರಗಳ ಬಗ್ಗೆ ಯೋಚಿಸುತ್ತಾ …

ಒಂದು ರೀತಿಯಲ್ಲಿ ಅಂತರಕ್ಕೊಂದು ಪರ್ಯಾಯ ಪದವೋ ಎಂಬಂತೆ ಎರಗಿದ ಕೊರೋನಾ ಬಿಟ್ಟು ಹೋಗುತ್ತಿರುವುದು ವಿವಿಧ ರೀತಿಯ ಅಂತರಗಳನ್ನೇಮನುಷ್ಯಮನುಷ್ಯ ಮನುಷ್ಯರ ನಡುವೆ ಅಂತರ ಹೆಚ್ಚುವುದು ಒಂದು ಕಡೆ, ಮನುಷ್ಯ ಮತ್ತು ಪ್ರಕೃತಿಯ ನಡುವೆ ಅಂತರ ಹೆಚ್ಚುವುದು ಇನ್ನೊಂದು ಕಡೆ. ತಂತ್ರಜ್ಞಾನ ಸಾಧ್ಯವಾಗಿಸಿದ ಹೊಸ ಪಲ್ಲಟಗಳಿಂದಾಗಿ ಎಲ್ಲಾ ವರ್ಗದ, ಎಲ್ಲಾ ಹಿನ್ನೆಲೆಯ ಜನರೆಲ್ಲಾ ಒಂದೆಡೆ ಕಲೆತುಬೆರೆತು ಪರಸ್ಪರ ಅರ್ಥ ಮಾಡಿಕೊಳ್ಳುವ, ಜಾತಿಮತಗಳನ್ನು ಮೀರಿ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವ ಅವಕಾಶಗಳೆಲ್ಲಾ ಮರೆಯಾಗಲಿವೆ. ಮನುಷ್ಯ ಮನುಷ್ಯನನ್ನು ಅರ್ಥಮಾಡಿಕೊಳ್ಳದೆ ಇದ್ದದ್ದು ಕೊರೋನಾಕ್ಕಿಂತ ಹೆಚ್ಚಿನ ಸಂಕಷ್ಟಗಳನ್ನು ಮಾನವ ಸಮಾಜಕ್ಕೆ ತಂದೊಡ್ಡಿದ್ದು ಎನ್ನುವ ಸತ್ಯ ನಮ್ಮ ಮುಂದಿರುತ್ತಾ ಅಂತರ ಕಾಯ್ದುಕೊಂಡು ಮನುಷ್ಯ ಮನುಷ್ಯನನ್ನು ಅರ್ಥ ಮಾಡಿಕೊಳ್ಳಬೇಕಾದ ದಿನಗಳನ್ನು ಊಹಿಸಿಕೊಳ್ಳಬಹುದು.

– ಎ. ನಾರಾಯಣ

ಕೊರೋನಾ ಸಾಂಕ್ರಾಮಿಕ ಯಾವುದೇ ಭೇದವಿಲ್ಲದೆ ಎಲ್ಲರನ್ನೂ ಕಾಡಿತು ಅಂತ ಅಂದುಕೊಂಡಿದ್ದು ಅರ್ಧ ಸತ್ಯ. ಸಾಂಕ್ರಾಮಿಕದ ಭಯ ಎಲ್ಲರನ್ನೂ ಒಂದೇ ಪರಿಯಲ್ಲಿ ಕಾಡಿರಬಹುದು. ಆದರೆ  ಸಾಂಕ್ರಾಮಿಕದ ಪರಿಣಾಮ ಎಲ್ಲರ  ಮೇಲೂ ಒಂದೇ ರೀತಿ  ಅಂದುಕೊಂಡರೆ ತಪ್ಪು.  ಪ್ರಪಂಚದ ಚರಿತ್ರೆಯಲ್ಲಿ ಸಾಂಕ್ರಾಮಿಕ ಬಂದು ಹೋದಾಗಲೆಲ್ಲಾ ಅಸಮಾನತೆ ಹೆಚ್ಚಾಗಿದೆ ಎನ್ನುತ್ತವೆ ಅಧ್ಯಯನಗಳು. ಕೊರೋನಾ ನಂತರವೂ ಇದು ಆಗಲಿದೆ ಎಂದು ಅರ್ಥ ಶಾಸ್ತ್ರಜ್ಞರು ಲೆಕ್ಕ ಹಾಕುತ್ತಿದ್ದಾರೆ. ಕೊರೋನಾ ಬರುವ ಕಾಲಕ್ಕೇನೇ ವಿವಿಧ ರೀತಿಯ ಅಸಮಾನತೆಗಳಿಂದ, ವಿಶೇಷವಾಗಿ ಆರ್ಥಿಕ ಅಸಮಾನತೆಯಿಂದ, ಬಸವಳಿದು ಹೋಗಿದ್ದ ಭಾರತೀಯ ಸಮಾಜ ಈಗ ಅಸಮಾನತೆಯ ಇನ್ನೊಂದು ಅಧ್ಯಾಯದ ಹೊಸ್ತಿಲಲ್ಲಿ ಬಂದು ನಿಂತಂತೆ ತೋರುತ್ತದೆ. ಅಸಮಾನತೆ ಎಂದರೆ ಅಂತರ. ಒಂದು ರೀತಿಯಲ್ಲಿ ಅಂತರಕ್ಕೊಂದು ಪರ್ಯಾಯ ಪದವೋ ಎಂಬಂತೆ ಎರಗಿದ ಕೊರೋನಾ ಬಿಟ್ಟು ಹೋಗುತ್ತಿರುವುದು ವಿವಿಧ ರೀತಿಯ ಅಂತರಗಳನ್ನೇ.

ಸಾಂಕ್ರಾಮಿಕದ ತೀವ್ರತೆ ಗಾಢವಾಗಿದ್ದಾಗ, ಪ್ರಪಂಚದ ದೇಶಗಳೆಲ್ಲಾ ಹೆಚ್ಚು ಕಡಿಮೆ ಸ್ಥಬ್ದ ಸ್ಥಿತಿಯಲ್ಲಿದ್ದಾಗ ಭವಿಷ್ಯದ ಬಗ್ಗೆ ಒಂದು ಹೊಸ ಆಶಾವಾದ ಸಣ್ಣಗೆ ಹುಟ್ಟಿಕೊಂಡಿತ್ತು. ಅದು ಒಂದು ರೀತಿಯಲ್ಲಿ ಅಸಮಾನತೆಯನ್ನೂ ಅಲ್ಪಸ್ವಲ್ಪ ತಗ್ಗಿಸುವ ಭರವಸೆಯನ್ನೂ ಹುಟ್ಟಿಸಿತ್ತು. ಅದು ಕೊರೋನಾ ನಂತರದ ಜಗತ್ತು ಕಡಿಮೆ ಕೊಳ್ಳುಬಾಕತನದ ಹೊಸ ಅನುಭೋಗ ಸಂಸ್ಕೃತಿಯನ್ನು ಒಪ್ಪಿಕೊಳ್ಳಬಹುದು ಎನ್ನುವ ಆಶಾವಾದವಾಗಿತ್ತು. ಕೊರೋನಾದ ಆ ಸಂಕಷ್ಟ ದಿನಗಳಲ್ಲಿ ಎಲ್ಲರೂ ಕಡಿಮೆ ವಸ್ತುಗಳನ್ನು ಬಳಸಿಕೊಂಡು, ಪ್ರಕೃತಿಯ ಮೇಲೆ ಕಡಿಮೆ ಹೊರೆಯಾಗಿ, ಇದ್ದದ್ದನ್ನು ಹಂಚಿಕೊಂಡು ಬದುಕಿದಂತೆ ಬದುಕುವ ಹೊಸ ಜೀವನ ಶೈಲಿಯೊಂದರ ಪ್ರಾರಂಭ ಆಗಬಹುದು ಎನ್ನುವ ಲೆಕ್ಕಾಚಾರಗಳು ಕೇಳಿಬಂದಿದ್ದವು. ಈಗ ಅವೆಲ್ಲಾ ಹುಸಿಯಾಗಿವೆ. ಯಾವತ್ತು ಕೊರೋನಾ ಸಂಬಂಧಿತ ನಿರ್ಬಂಧಗಳೆಲ್ಲಾ ಕಡಿಮೆಯಾದವೋ ಅಂದಿನಿಂದ ಮತ್ತೆ ಯಾವತ್ತಿನಂತೆ ಅಪರಿಮಿತ ಉಪಭೋಗದ ಬದುಕು ಪ್ರಾರಂಭವಾಗಿದೆ. ಮತ್ತೆ ಮಾಲ್ ಗಳೆಲ್ಲಾ ಫುಲ್, ಮತ್ತೆ ಪ್ರವಾಸಿತಾಣಗಳಲ್ಲೆಲ್ಲಾ ಜನಸಂದಣಿಯೋ ಜನಸಂದಣಿ, ಮತ್ತೆ ದೇವಸ್ಥಾನಗಳ ಮುಂದೆ ಕೊನೆಯೇ ಇಲ್ಲದ ಸಾಲುಗಳು, ಮತ್ತೆ ‘ಹೋಂಸ್ಟೇ’ ಗಳೆಲ್ಲ ಪೂರ್ತಿ ಭರ್ತಿ. ಕೊರೋನಾ ಕಾಲದಲ್ಲಿ ಕಡಿಮೆಯಾಗಿದ್ದ ತಲಾ ಕಾರ್ಬನ್ ಫೂಟ್-ಪ್ರಿಂಟ್ ಮತ್ತೆ ಪುಟಿದೇಳುತ್ತಿದೆ.

ಇತ್ತೀಚಿಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಈ ಕುರಿತು ಬಂದ ಲೇಖನವೊಂದರ ಶೀರ್ಷಿಕೆ ಎಲ್ಲವನ್ನೂ ಹೇಳುತ್ತದೆ –  A Revenge Return of Consumption After Covid. ಅಂದರೆ ಕೋವಿಡ್ ಮುಗಿದ ಕೂಡಲೇ ತಿಂಗಳಾನುಗಟ್ಟಲೆ ಎಲ್ಲವನ್ನೂ ಕಡಿಮೆ ಬಳಸಿ ನಡೆಸಿದ ನಿಯಂತ್ರಣದ ಬದುಕಿನ ವಿರುದ್ಧ ಸೇಡು ತೀರಿಸಿಕೊಳ್ಳಲೋ ಎಂಬಂತೆ ಹೊಸ ಅನುಭೋಗದ ಅಲೆಯೊಂದು ಪ್ರಾರಂಭವಾಗಿದೆ. ಹಳೆಯ ಅತೀ ಅನುಭೋಗದ ಸಂಸ್ಕೃತಿ ಹೋಗಿ ಹೊಸದೇನೂ ಸೃಷ್ಟಿಯಾಗುತ್ತದೆ ಎನ್ನುವ ಸಾಧ್ಯತೆಗಳೇನೂ ಕಾಣಿಸುತ್ತಿಲ್ಲ. ಮತ್ತೆ ಅದೇ ಹಳೆಯ ರೀತಿಯಲ್ಲಿ ಹೊಸ ಹೊಸ ಬಯಕೆಗಳನ್ನೆಲ್ಲಾ ಸೃಷ್ಟಿಸುತ್ತಾ, ಅವುಗಳನ್ನು ತೀರಿಸಲು ಹೊಸ ಹೊಸ ವಸ್ತುಗಳನ್ನು ಸೃಷ್ಟಿಸಿ ಪೇರಿಸುತ್ತಾ, ಹೊಸ ಹೊಸ ರೀತಿಯಲ್ಲಿ ಪ್ರಕೃತಿಯ ವಿರುಧ್ಧ ದಾಳಿ ಮಾಡುತ್ತಾ ಬದುಕುವ ಹಳೆಯ ಅರ್ಥ ಸಂಸ್ಕೃತಿಯ ಹೊಸ ಚಿಗುರುಗಳು ಕಾಣಿಸಿಕೊಳ್ಳುತ್ತಿವೆ. ಆರ್ಥಿಕತೆ ಸೊರಗಿ ಮಲಗಿರುವ ಇಂದಿನ ಸ್ಥಿತಿಯಲ್ಲಿ, ಜನ ಉದ್ಯೋಗಾವಕಾಶಗಳಿಗಾಗಿ ಎದುರು ನೋಡುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಬೇಡಿಕೆ-ಪೂರೈಕೆ ಸರಪಳಿ ಬಲಿತುಕೊಳ್ಳುತ್ತಿರುವುದು ಅಪ್ಯಾಯಮಾನವಾಗಿ ಕಾಣಿಸಬಹುದು. ಆದರೆ ಇಂತಹ ಅಳತೆಮೀರಿದ ಅನುಭೋಗದ ಸಂಸ್ಕೃತಿಯೇ ಸಾಂಕ್ರಾಮಿಕವನ್ನು ಹೊತ್ತು ತಂದಿರುವುದು ಎನ್ನುವ ಸತ್ಯ ಹೆಚ್ಚು ಕಡಿಮೆ ಮರೆತೇ ಹೋಗಿದೆ. ಮನುಷ್ಯ-ಮನುಷ್ಯ ಮನುಷ್ಯರ ನಡುವೆ ಅಂತರ ಹೆಚ್ಚುವುದು ಒಂದು ಕಡೆ, ಮನುಷ್ಯ ಮತ್ತು ಪ್ರಕೃತಿಯ ನಡುವೆ ಅಂತರ ಹೆಚ್ಚುವುದು ಇನ್ನೊಂದು ಕಡೆ..

ಅದೇ ವೇಳೆಗೆ ಬಹುರಾಷ್ಟ್ರೀಯ ವ್ಯವಹಾರ  ಸಲಹಾ ಸಂಸ್ಥೆ ಕೆಪಿಎಂಜಿ ನಡೆಸಿದ ಅಧ್ಯಯನವೊಂದು ಹೊರಗೆಡಹಿರುವ ಕೆಲ ಮಾಹಿತಿಗಳು ಕುತೂಹಲಕಾರಿಯಾಗಿವೆ. ಈ ವರದಿಯ ಪ್ರಕಾರ ಭಾರತದ ಆನ್-ಲೈನ್ ಶಿಕ್ಷಣ ವ್ಯವಹಾರ 2021ರ  ಅಂತ್ಯದೊಳಗೆ ಈಗ ಇರುವುದಕ್ಕಿಂತ ಹಲವು ಪಟ್ಟು ಹೆಚ್ಚಾಗಿ ಸುಮಾರು 196 ಕೋಟಿ ಡಾಲರ್ ಗಳಷ್ಟಾಗಲಿದೆ. ಈ ವ್ಯವಹಾರದ ಈಗಿನ ವಾರ್ಷಿಕ ಗಾತ್ರ ಕೇವಲ 24 ಕೋಟಿ ಡಾಲರ್ ಗಳಷ್ಟು.  ಅಂದರೆ ಕೊರೋನಾ ಕಾಲದಲ್ಲಿ ಆನ್-ಲೈನ್ ಮೂಲಕವೇ ನಡೆದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಒಂದು ದೊಡ್ಡ ಪಾಲು ಕೊರೋನಾ ನಂತರವೂ ಆನ್-ಲೈನ್ ಮೂಲಕವೇ ನಡೆಯಲಿದೆ. ತಂತ್ರಜ್ಞಾನ ಶಿಕ್ಷಣ  ಕ್ಷೇತ್ರದ ಸ್ವರೂಪವನ್ನೇ ಬದಲಿಸಲಿವೆ. ತರಗತಿಗಳಲ್ಲಿ ಸಹಪಾಠಿಗಳೆಲ್ಲಾ ಸೇರುವುದು, ಅವರ ಮುಂದೆ ಶಿಕ್ಷಕರು ನಿಂತು ಮುಖಾಮುಖಿ ವಿಚಾರ ವಿನಿಮಯ ನಡೆಸುವುದು ಇತ್ಯಾದಿಗಳೆಲ್ಲಾ ನಿಧಾನವಾಗಿ  ಯಾಂತ್ರೀಕರಣಗೊಳ್ಳಲಿರುವ ಮುನ್ಸೂಚನೆ ಇದು. ಹಾಗೆಯೇ ಹಲವು ರೀತಿಯ ಬಿಳಿಕಾಲರ್ ಉದ್ಯೋಗಗಳಿಗೆಲ್ಲಾ ಇನ್ನು ಮುಂದೆ ಕಚೇರಿಗೆ ಹೋಗುವ ಪ್ರಮೇಯವಿಲ್ಲ. ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಈಗಾಗಲೇ ತಮ್ಮ ನೌಕರರಿಗೆ ಇನ್ನು ಮುಂದೆ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಿ ಅಂತ ತಿಳಿಸಿವೆ. ಹಳೆಯ ಬಹುಮಹಡಿ ಕಟ್ಟಡಗಳ ಕಚೇರಿಗಳನ್ನು ಖಾಲಿ ಮಾಡಿವೆ. ಆರ್ಥಿಕವಾಗಿ ಇವೆಲ್ಲವುಗಳ ಒಳಿತು ಕೆಡುಕುಗಳ ಬಗ್ಗೆ ಪರ-ವಿರೋಧ ಚರ್ಚೆ ನಡೆಸಬಹುದು.

“ಈ ಯೂಟ್ಯೂಬ್ ವಿಡಿಯೊದಲ್ಲಿ ನೀವು ಒಂಟಿಯಾಗಿ ಹೇಗೆ ಇರಬಹುದು ಎಂದು ಕಲಿಸುತ್ತೇನೆ !”

ಸಾಮಾಜಿಕವಾಗಿ ಯೋಚಿಸಿದರೆ ಒಂದು ವಿಚಾರವಂತೂ ಸತ್ಯ. ತಂತ್ರಜ್ಞಾನ ಸಾಧ್ಯವಾಗಿಸಿದ ಈ ಹೊಸ ಪಲ್ಲಟಗಳಿಂದಾಗಿ ಎಲ್ಲಾ ವರ್ಗದ, ಎಲ್ಲಾ ಹಿನ್ನೆಲೆಯ ಜನರೆಲ್ಲಾ ಒಂದೆಡೆ ಕಲೆತು-ಬೆರೆತು ಪರಸ್ಪರ ಅರ್ಥ ಮಾಡಿಕೊಳ್ಳುವ, ಜಾತಿ-ಮತಗಳನ್ನು ಮೀರಿ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವ ಅವಕಾಶಗಳೆಲ್ಲಾ ಮರೆಯಾಗಲಿವೆ. ತಂತ್ರಜ್ಞಾನದಿಂದ ಮಾನವ ಕಳಚಿಕೊಳ್ಳಬೇಕಾದ ಸಮಯದಲ್ಲಿ ಕೊರೋನಾ ವೈರಾಣು ಮಾನವನನ್ನು ಇನ್ನಷ್ಟೂ ತಂತ್ರಜ್ಞಾನದ ದಾಸ್ಯಕ್ಕೆ ದೂಡಿದೆ. ಈಗ ಯಾರು ಯಾರನ್ನು ಸಂಧಿಸಬೇಕಿಲ್ಲ. ಯಾರು ಯಾರ ಹತ್ತಿರಾನೂ ಹೋಗಬೇಕಿಲ್ಲ – ಮಾನವ-ಮಾನವ ನಡುವಣ ಸಂಪರ್ಕ ಏನಿದ್ದರೂ ಯಂತ್ರ ಮಾಧ್ಯಮಗಳ ಮೂಲಕ. ಅಂತರ, ಅಂತರ – ಅಂತರದಿಂದಲೇ ಎಲ್ಲವನ್ನೂ ಮಾಡಲು ಹೊಸ ಡಿಜಿಟಲ್ ಪ್ಲಾಟ್ಫಾರ್ಮ್ ಗಳು ಸಿದ್ಧವಾಗಿವೆ. ಝೂಮ್ ಅಂತೆ, ಸ್ಕೈಪ್ ಅಂತೆ, ಗೂಗಲ್ ಮೀಟಿಂಗ್ ಅಂತೆ – ದೇಶಾಂತರದಿಂದ, ಖಂಡಾಂತರದಿಂದ ಎಲ್ಲರನ್ನೂ, ಎಲ್ಲವನ್ನೂ ಸಂಧಿಸಬಹುದು.  ತರಗತಿಗಳು ತಂತ್ರಜ್ಞಾನದ ಮೂಲಕ, ವೈದ್ಯ ಮತ್ತು ರೋಗಿಯ ಭೇಟಿ ತಂತ್ರಜ್ಞಾನದ ಮೂಲಕ, ಸ್ನೇಹಿತರ, ಸಂಬಂಧಿಕರ, ಅಷ್ಟೇ ಯಾಕೆ ಕುಟುಂಬ ಸದಸ್ಯರ ಭೇಟಿ ನಡೆಯುವುದು ಡಿಜಿಟಲ್ ಮಧ್ಯಸ್ತಿಕೆಯ ಮೂಲಕ.  ಈಗಾಗಲೇ ಅಸ್ತಿತ್ವದಲ್ಲಿದ್ದ ಈ ಸಾಧ್ಯತೆಗಳಿಗೆಲ್ಲಾ ಕೊರೋನಾ ದಾಳಿಯಿಂದಾಗಿ ವಿಶೇಷ ಪ್ರಾಮುಖ್ಯತೆ ಪ್ರಾಪ್ತವಾಗಿಬಿಟ್ಟಿದೆ. ಮನುಷ್ಯರನ್ನು ಹೆಚ್ಚು ಹೆಚ್ಚು ವ್ಯಕ್ತಿ-ಗತಗೊಳಿಸುವ, ಸಮಾಜವಿಮುಖಿಗಳಾಗಿಸುವ ಈ ಬೆಳವಣಿಗೆಗಳಿಂದಾಗಿ ಭಾರತದಂತಹ ಬಹು ಸಂಸ್ಕೃತಿಯ, ಬಹು-ವರ್ಗ ಸಮಾಜದ ಹೊಸ ಸಾಮಾಜೀಕರಣ ಪ್ರಕ್ರಿಯೆ ಹೇಗೆ ಬದಲಾಗಲಿದೆ ಎನ್ನುವುದನ್ನು ಈಗಲೇ ಊಹಿಸಲಾಗದು. ಒಮ್ಮೆ ಯಂತ್ರದ ಮಧ್ಯಸ್ತಿಕೆಯ ಅಂತರಕ್ಕೆ ಒಗ್ಗಿಕೊಂಡರೆ ಅಥವಾ ಈ ಮಧ್ಯಸ್ಥಿಕೆ ಅನಿವಾರ್ಯವಾದರೆ ಮಾನವ ಸಂಬಂಧಗಳು ಯಾವ ರೀತಿ ರೂಪುಗೊಳ್ಳಬಹುದು?  ತೀರಾ ಹತ್ತಿರವಾಗಿದ್ದಾಗಲೇ ಪರಸ್ಪರ ಅರ್ಥಮಾಡಿಕೊಳ್ಳದೆ ಇದ್ದ ಮನುಷ್ಯ ಇನ್ನು ತಂತ್ರಜ್ಞಾನ ಮಾಧ್ಯಮದ ಮೂಲಕ ವ್ಯವಹರಿಸುತ್ತಾ ಎಷ್ಟು ಅರ್ಥಮಾಡಿಕೊಳ್ಳಲು ಸಾಧ್ಯ? ಮನುಷ್ಯ ಮನುಷ್ಯನನ್ನು ಅರ್ಥಮಾಡಿಕೊಳ್ಳದೆ ಇದ್ದದ್ದು ಕೊರೋನಾಕ್ಕಿಂತ ಹೆಚ್ಚಿನ ಸಂಕಷ್ಟಗಳನ್ನು ಮಾನವ ಸಮಾಜಕ್ಕೆ ತಂದೊಡ್ಡಿದ್ದು ಎನ್ನುವ ಸತ್ಯ ನಮ್ಮ ಮುಂದಿರುತ್ತಾ ಅಂತರ ಕಾಯ್ದುಕೊಂಡು ಮನುಷ್ಯ ಮನುಷ್ಯನನ್ನು ಅರ್ಥ ಮಾಡಿಕೊಳ್ಳಬೇಕಾದ ದಿನಗಳನ್ನು ಊಹಿಸಿಕೊಳ್ಳಬಹುದು.

ಇಷ್ಟೇ ಅಲ್ಲ. ಇಂತಹದ್ದೊಂದು ಮಹಾದುರಂತಕ್ಕೆ ಕಾಯುತ್ತಿತ್ತೊ ಏನೋ ಎನ್ನುವ ಹಾಗೆ  ಭಾರತದಲ್ಲಿ ಸರಕಾರಗಳು – ಕೇಂದ್ರ ಹಾಗೂ ವಿವಿಧ ರಾಜ್ಯ ಸರಕಾರಗಳು – ಇನ್ನಿಲ್ಲ ಎಂಬಂತೆ ಅರ್ಥವ್ಯವಸ್ಥೆಯ ಖಾಸಗೀಕರಣಕ್ಕೆ ಮುಂದಾಗಿವೆ. ಇದ್ದ ಬದ್ದ ಸಾಮಾಜಿಕ ಭಧ್ರತೆಯ ವ್ಯವಸ್ಥೆಯನ್ನೂ ಕಿತ್ತೆಸೆಯುತ್ತಿವೆ. ಏನಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಲೂ ಆಗದಷ್ಟು ವೇಗದಲ್ಲಿ ಎಲ್ಲವೂ ನಡೆದುಹೊಗುತ್ತಿವೆ. ಕಾನೂನುಗಳ ಅನುಮೋದನೆ ಆಗುವುದು  ಮಧ್ಯರಾತ್ರಿಯ ಕಾಲದಲ್ಲಿ.  ಅಧಿಕಾರಸ್ಥರ ಮತ್ತು ಜನರ ನಡುವಣ ಅಂತರ ಕಡಿಮೆ ಮಾಡುವ ಪ್ರಜಾತಂತ್ರ ಮತ್ತದರ ಮೌಲ್ಯಗಳೆಲ್ಲಾ ಕೆಲಸಕ್ಕೆ ಬರುವುದಿಲ್ಲ; ಮೊದಲು ಸಂಕಷ್ಟ ನಿವಾರಣೆ, ಬದುಕಿ ಉಳಿದರೆ ಆ ನಂತರ ಪ್ರಜಾತಂತ್ರ ಎನ್ನುವ ಸೂತ್ರವೊಂದನ್ನು ಮೌನವಾಗಿ ತೇಲಿಬಿಡಲಾಗಿದೆ. ಕೊರೋನಾ ಬಂದೆರಗಿದ ದಿನದಿಂದೀಚೆಗೆ  ಸರಕಾರ, ಪಾರ್ಲಿಮೆಂಟ್, ವಿಧಾನ ಸಭೆ, ಕಾನೂನು, ಕಟ್ಟಳೆ ಮುಂತಾದ ಪಾರಿಭಾಷಿಕ ಪದಗಳನ್ನೇ ಜಗತ್ತು ಮರೆತಿದೆ.  ಅದೇನೋ ಪರಿಹಾರ ಪ್ಯಾಕೇಜ್ ಗಳ ಘೋಷಣೆ ಆದಾಗ ಕಾಣಿಸುವುದು  ಓದಲೂ ಆಗದ ನೆನಪಿಡಲೂ ಆಗದ ಅಂಕೆ-ಸಂಖ್ಯೆಗಳ ಜಾಲ. ಎಂದಿನಂತೆ ಮತ್ತೆ ಸುಳ್ಳುಗಳು, ಅರ್ಧ ಸತ್ಯಗಳು, ಬುದ್ಧಿ ಮಂಕುಮಾಡುವಂತ ಯಾವುದೋ ಕಟ್ಟುಕತೆ, ಯಾವುದೋ ವೇಷ. ಯಾವುದೋ ಬಣ್ಣ. ಏನೇನೋ ವಿನ್ಯಾಸ. ವಿಧವಿಧದ ಪದಪುಂಜಗಳು. ನಮ್ಮ ಸುತ್ತ ಆವರಿಸಿಕೊಳ್ಳುತ್ತಿರುವುದು ಕೇವಲ ಸತ್ಯೋತ್ತರ ಸ್ಥಿತಿಯಲ್ಲ. ಇದೊಂದು ಅಸಂಗತವಾದ ಮಾದಕ ಸ್ಥಿತಿ. ಯೋಚಿಸಬೇಕು ಎಂದುಕೊಳ್ಳುವವರು ಕೂಡಾ ಯೋಚಿಸಲಾರಂಭಿಸಿದರೆ ಹುಚ್ಚು ಹಿಡಿದು ಹೋದೀತು ಎಂಬ ಭಯದಿಂದ ಯೋಚಿಸುವುದನ್ನೇ ಮರೆತು ಬಿಡುತ್ತಿರುವ ಈ ಸ್ಥಿತಿ. ಮಿದುಳುಗಳು ಬಂಧಿಯಾಗಿವೆ. ಮಿದುಳುಗಳು ಒತ್ತೆ ಇರಿಸಲ್ಪಟ್ಟಿವೆ. ಮಿದುಳುಗಳು ಮಾರಾಟವಾಗಿವೆ.  ಸಾಂಕ್ರಾಮಿಕ ಹೊಸತಲ್ಲ.  ಲಸಿಕೆ ಹೊಸತಲ್ಲ. ಆರ್ಥಿಕ ಕುಸಿತ-ಹಿಂಜರಿತ ಹೊಸತಲ್ಲ. ಲಸಿಕೆ ಬಂದ ನಂತರ ಸಾಂಕ್ರಾಮಿಕ ತೊಲಗೀತು. ಸಾಂಕ್ರಾಮಿಕ  ನಂತರ ಆರ್ಥಿಕತೆ ಸಾವರಿಸಿಕೊಂಡು ಎದ್ದು ನಿಂತೀತು.  ಆದರೆ ಒತ್ತೆಯಾಗಿರುವ ಮಿದುಳುಗಳನ್ನು, ಬಂಧಿಯಾಗಿರುವ ಮಿದುಳುಗಳನ್ನು ಮತ್ತು ಮಾರಾಟವಾಗಿರುವ ಮಿದುಳುಗಳನ್ನು ಬಂಧವಿಮೋಚನೆಗೊಳಿಸುವುದು ಹೇಗೆ? ಎಲ್ಲಿದೆ ಲಸಿಕೆ?

 

Donate Janashakthi Media

Leave a Reply

Your email address will not be published. Required fields are marked *