ರಾಜ್ಯದಲ್ಲಿ 34 ಕೊರೊನಾ JN.1 ಪ್ರಕರಣ ವರದಿ – ಮತ್ತಷ್ಟು ಹೆಚ್ಚಳ ನಿರೀಕ್ಷೆ

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಸೋಮವಾರ ಮೂವರು ಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ತೀವ್ರ ಉಸಿರಾಟದ ಸೋಂಕು ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದವರು ಎಂದು ವರದಿಗಳು ಉಲ್ಲೇಖಿಸಿವೆ. ಈ ಮಧ್ಯೆ ರಾಜ್ಯದಲ್ಲಿ ಸೋಮವಾರ ಕೊರೊನಾದ ಹೊಸ ರೂಪಾಂತರದ ಜೆಎನ್.1ನ 34 ಪ್ರಕರಣಗಳು ವರದಿಯಾಗಿವೆ. ಕೊರೊನ ಕುರಿತ ಸಂಪುಟ ಉಪಸಮಿತಿ ಮಂಗಳವಾರ ಸಭೆ ಸೇರಲಿದ್ದು, ವೈರಸ್ ಹರಡುವುದನ್ನು ತಡೆಯಲು ಯಾವುದೇ ನಿರ್ಬಂಧಗಳನ್ನು ವಿಧಿಸುವ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಆರೋಗ್ಯ ಇಲಾಖೆಯು JN.1 ರೂಪಾಂತರದ ದೃಢೀಕರಣಕ್ಕಾಗಿ ಸಂಪೂರ್ಣ ಜೀನೋಮಿಕ್ ಸರ್ವೆಲೆನ್ಸ್ (WGS) ಪತ್ತೆಗಾಗಿ 192 ಕೊರೊನಾ ಪಾಸಿಟಿವ್ ಮಾದರಿಗಳನ್ನು ಕಳುಹಿಸಿದೆ. ಅವುಗಳಲ್ಲಿ 60 ಮಾದರಿಗಳ ಫಲಿತಾಂಶಗಳು ಸೋಮವಾರ ಬಿಡುಗಡೆಯಾಗಿದ್ದು, ಅದರಲ್ಲಿ 34 ಜೆಎನ್.1 ಪಾಸಿಟಿವ್ ಎಂದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ ಸಾವನ್ನಪ್ಪಿದ ಮೂವರಲ್ಲಿ ಹೊಸ ರೂಪಾಂತರ ಕಂಡುಬಂದಿದ್ದವು.

ಇದನ್ನೂ ಓದಿ: ಡಬ್ಲ್ಯುಎಫ್‌ಐ ಅಮಾನತು ಹಿಂಪಡೆಯುವಂತೆ ಕೋರಿ ಕ್ರೀಡಾ ಸಚಿವರನ್ನು ಭೇಟಿಯಾಗಲಿರುವ ಸಂಜಯ್ ಸಿಂಗ್!

ಕೊರೊನಾ ವಿಚಾರದ ಬಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಗುಂಡೂ ರಾವ್, “ವಿದೇಶದಲ್ಲಿ ಕೊರೊನದ ಜೆಎನ್.1 ರೂಪಾಂತರದ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ  ಕರ್ನಾಟಕದಲ್ಲಿ ಕೂಡಾ ವರದಿಯಾಗಬಹುದು ಎಂದು ನಾವು ನಿರೀಕ್ಷಿಸಿದ್ದೇವೆ. ಕೊರೊನಾ ಕುರಿತು ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ನಮಗೆ ವರದಿ ನೀಡಿದೆ. ಸಾಂಕ್ರಮಿಕದ ನಿರ್ವಹಣೆಯ ಕ್ರಮಗಳನ್ನು ಕ್ಯಾಬಿನೆಟ್ ಉಪಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು. ಪ್ರಸ್ತುತ ರಾಜ್ಯದಲ್ಲಿ 34 ಪ್ರಕರಣಗಳನ್ನು ದೃಢಪಡಿಸಲಾಗಿದ್ದು, ಅದರ ಸಂಖ್ಯೆಗಳು ಹೆಚ್ಚಾಗುವ ನಿರೀಕ್ಷೆಯಿದೆ” ಎಂದು ಹೇಳಿದ್ದಾರೆ.

ಉಳಿದ ಮಾದರಿಗಳ WGS ಫಲಿತಾಂಶಗಳು ಬುಧವಾರ ಹೊರಬರುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದ್ದಾರೆ. ರಾಜ್ಯದಲ್ಲಿ 34 ಜೆಎನ್.1 ಪ್ರಕರಣಗಳಲ್ಲಿ 20 ಬೆಂಗಳೂರಿನಿಂದ, ನಾಲ್ಕು ಮೈಸೂರಿನಿಂದ, ಮೂರು ಮಂಡ್ಯದಿಂದ ಮತ್ತು ರಾಮನಗರ, ಬೆಂಗಳೂರು ಗ್ರಾಮಾಂತರ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಿಂದ ತಲಾ ಒಂದು ಪ್ರಕರಣಗಳು ವರದಿಯಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಅವಹೇಳನ | ಹೋರಾಟಗಾರ್ತಿ ನಜ್ಮಾ ನಜೀರ್ ದೂರು; ಕಲ್ಲಡ್ಕ ಭಟ್ ವಿರುದ್ಧ ಎಫ್‌ಐಆರ್

ನಿರ್ಬಂಧಗಳನ್ನು ಹೇರುವ ಅಗತ್ಯವಿಲ್ಲ: ಗುಂಡೂ ರಾವ್

ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಕೇಂದ್ರ ಆರೋಗ್ಯ ಸಚಿವಾಲಯವು JN.1 ಅನ್ನು ‘ವೇರಿಯೆಂಟ್ ಆಫ್ ಇಂಟರೆಸ್ಟ್‌’ (VoI) ಎಂದು ವರ್ಗೀಕರಿಸಿದ್ದು, ‘ಕಳವಳದ ರೂಪಾಂತರ’ (VoC) ಎಂದು ಹೇಳಿಲ್ಲ. ಹೀಗಾಗಿ ನಿರ್ಬಂಧ ಹೇರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸತತ ಮೂರನೇ ದಿನವೂ ರಾಜ್ಯದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 100ರ ಗಡಿ ದಾಟಿ 125ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಸೋಮವಾರ 436ಕ್ಕೆ ತಲುಪಿದೆ.

ವಿಡಿಯೊ ನೋಡಿ: ಗಾಜಾ ಹತ್ಯಾಕಾಂಡ | ಯೇಸುಕ್ರಿಸ್ತ ಹುಟ್ಟಿದ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಇಲ್ಲ! Janashakthi Media

Donate Janashakthi Media

Leave a Reply

Your email address will not be published. Required fields are marked *