ಬೆಂಗಳೂರು: ಕೊರೊನಾ ವೈರೆಸ್‌ನ ಉಪ ರೂಪಾಂತರ JN.1 ಪ್ರಕರಣಗಳು ಹೆಚ್ಚುತ್ತಿದ್ದು, ಭಾರತದಲ್ಲಿ ಮಂಗಳವಾರ 142 ಹೊಸ ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,970ಕ್ಕೆ ಏರಿಕೆಯಾಗಿದೆ. ಈ ನಡುವೆ ವೈರಸ್‍ಗೆ ಕರ್ನಾಟಕದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ರಾಜ್ಯದಲ್ಲಿ 79 ಸಕ್ರಿಯ ಪ್ರಕರಣಗಳಿವೆ ಎಂದು ವರದಿಗಳು ಉಲ್ಲೇಖಿಸಿದೆ.
ದೇಶದಾದ್ಯಂತ ಸೋಮವಾರ ಹೊಸ ಕೊರೊನಾ ವೈರಸ್‍ಗೆ 6 ಸಾವುಗಳು ವರದಿಯಾಗಿತ್ತು. ಈ ಫೈಕಿ ಕೇರಳದಲ್ಲಿ 5 ಮತ್ತು ಉತ್ತರ ಪ್ರದೇಶದಲ್ಲಿ 1 ಸಂಭವಿಸಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಮಾಹಿತಿ ನೀಡಿವೆ. ರಾಜ್ಯದಲ್ಲಿ ಮಂಗಳವಾರ ಒಂದು ಸಾವು ವರದಿಯಾದ ನಂತರ ಸಾವಿನ ಸಂಖ್ಯೆ ಈಗ 7ಕ್ಕೆ ಏರಿಕೆಯಾಗಿದೆ. ಅಲ್ಲದೆ ನೆರೆಯ ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮಂಗಳವಾರ ಕೋವಿಡ್ ಸಲಹೆಯನ್ನು ನೀಡಿದೆ.
ಇದನ್ನೂ ಓದಿ: ಬೆಂಗಳೂರು | 2 ದಿನಗಳ ಕಾಲ ವಿದ್ಯುತ್ ಕಡಿತ; ಪಟ್ಟಿ ಇಲ್ಲಿದೆ…
“60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಹೊರಗೆ ಹೋಗುವಾಗ ಮಾಸ್ಕ್ ಧರಿಸಬೇಕು. ಮುಚ್ಚಿದ, ಕಡಿಮೆ ಗಾಳಿಯಾಡುವ ಸ್ಥಳಗಳು ಮತ್ತು ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು. ಉಸಿರಾಟದ ತೊಂದರೆ, ಜ್ವರ, ಕೆಮ್ಮು, ನೆಗಡಿ ಮತ್ತು ಮೂಗು ಸೋರುವ ಲಕ್ಷಣಗಳು ಇರುವವರು ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಬೇಕು” ಎಂದು ಆರೋಗ್ಯ ಇಲಾಖೆ ಹೇಳಿದೆ.
ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ (ಟಿಎಸಿ) ಶಿಫಾರಸುಗಳ ಆಧಾರದ ಮೇಲೆ ಈ ಸಲಹೆಯನ್ನು ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದ್ದು, ಜನರು ಆಗಾಗ್ಗೆ ಕೈ ತೊಳೆಯುವುದು ಸೇರಿದಂತೆ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕೇಳಿಕೊಂಡಿದೆ. ಅಸ್ವಸ್ಥರಾದವರು ಮನೆಯಲ್ಲಿಯೇ ಇರಬೇಕು ಮತ್ತು ಇತರರನ್ನು, ವಿಶೇಷವಾಗಿ ವಯಸ್ಸಾದವರನ್ನು ಭೇಟಿಯಾಗುವುದನ್ನು ತಪ್ಪಿಸಬೇಕು. ವಿದೇಶಗಳಿಗೆ ಪ್ರಯಾಣಿಸುವ ಜನರು ಜಾಗರೂಕರಾಗಿರಬೇಕು ಮತ್ತು ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವಂತಹ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಎಂದು ಅದು ತಿಳಿಸಿದೆ. ಕೊರೊನಾ
ಇದನ್ನೂ ಓದಿ: ಮತ್ತೆ ಇಬ್ಬರು ಸಂಸದರು ಅಮಾನತು; ಸಂಖ್ಯೆ 143ಕ್ಕೆ ಏರಿಕೆ!
ಆರೋಗ್ಯ ಆಯುಕ್ತ ರಂದೀಪ್ ಅವರು ಆರೋಗ್ಯ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದು, ಕೇಂದ್ರದ ಮಾರ್ಗಸೂಚಿಗಳ ಪ್ರಕಾರ, ಕೇರಳ ಮತ್ತು ತಮಿಳುನಾಡು ಗಡಿಗಳಲ್ಲಿ ನಿರ್ಬಂಧಗಳನ್ನು ಹೇರುವ ಮೂಲಕ ಗಡಿಯಾಚೆಗಿನ ಕಣ್ಗಾವಲು ಹೆಚ್ಚಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಆದಾಗ್ಯೂ, ಅಧಿಕಾರಿಗಳು ಜಾಗರೂಕರಾಗಿರಬೇಕು ಮತ್ತು ಕೋವಿಡ್ ಪ್ರಕರಣಗಳ ಸಮರ್ಪಕ ಪರೀಕ್ಷೆ ಮತ್ತು ಸಕಾಲಿಕ ವರದಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಅಣಕು ಡ್ರಿಲ್ಗಳನ್ನು ನಡೆಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಉನ್ನತ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಈ ವಾರಾಂತ್ಯದ ವೇಳೆಗೆ ದೈನಂದಿನ ಪರೀಕ್ಷೆಯನ್ನು 5,000 ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಅವರು ಬುಧವಾರ ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ವಿಡಿಯೊ ನೋಡಿ: ಜನಸಾಮಾನ್ಯರ ನಡಿಗೆ ಅಭಿವೃದ್ಧಿಯ ಕಡೆಗೆ : ತುಳುನಾಡಿನ ದುಸ್ಥಿತಿಗೆ 3 ದಶಕಗಳ ಬಿಜೆಪಿಯ ದುರಾಡಳಿತವೇ ಕಾರಣ