ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈದ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ವಿಡಿಯೋಗಳನ್ನು ಜನತೆ ವೀಕ್ಷಿಸುತ್ತಿದ್ದಾರೆ. ಕೊರೊನಾ ಬಗ್ಗೆ ವೈದ್ಯರಲ್ಲೇ ಭಿನ್ನ ಹೇಳಿಕೆಗಳಿರುವುದನ್ನು ಗಮನಿಸಿದ್ದಾರೆ. ಇದೀಗ ಕೊರೊನಾ ಬಗ್ಗೆ ಮಾತನಾಡುವ ವೈದ್ಯರ ಬಾಯಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.
ಕೊರೊನಾ ಬಗ್ಗೆ ಇನ್ನು ಮುಂದೆ ಸರ್ಕಾರ ಸೂಚಿಸಿದವರು ಮಾತ್ರ ಮಾತನಾಡಬೇಕೆಂಬ ಆದೇಶ ಹೊರಡಿಸಲು ನಿರ್ಧಾರ ಮಾಡಿದೆ.
ಈ ಬಗ್ಗೆ ಆರೋಗ್ಯ ಸಚಿವ ಕೆ. ಸುಧಾಕರ್ ಮಾತನಾಡಿ ʻʻವೈದ್ಯರಿಂದ ನಾವಿದನ್ನು ನಿರೀಕ್ಷೆ ಮಾಡಿರಲಿಲ್ಲ. ಮೊದಲ ಎರಡು ಅಲೆಗಳಲ್ಲಿಯೂ ವೈದ್ಯರು ಕೊರೊನಾ ಬಗ್ಗೆ ಭಿನ್ನ ಹೇಳಿಕೆಗಳನ್ನು ನೀಡಿದ್ದರು. ಆದರೆ, ಆ ರೀತಿ ಮಾತನಾಡಬಾರದು. ಹೀಗಾಗಿ ಈ ಅಂಶವನ್ನು ಸರ್ಕಾರ ಗಮನಿಸಿದ್ದು, ಕೊರೊನಾ ವಿಚಾರವಾಗಿ ಸರ್ಕಾರ ನೇಮಿಸಿದ ಅಧಿಕೃತ ಮಾನವ ಸಂಪನ್ಮೂಲ ಅಧಿಕಾರಿ ಅಥವಾ ವೈದ್ಯರು ಮಾತ್ರ ಮಾತನಾಡಬೇಕೆಂಬ ಆದೇಶವುಳ್ಳ ಕಡತಕ್ಕೆ ಈಗಾಗಲೇ ಸಹಿ ಕೂಡ ಹಾಕಲಾಗಿದೆʼʼ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುಮಾರು 14 ರಿಂದ 15 ವೈದ್ಯರು ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ಅಧಿಕೃತವಾಗಿ ನೇಮಕ ಮಾಡಿರುವವರು ಕೊಡುವ ಮಾಹಿತಿ ಮಾತ್ರ ಪರಿಗಣಿಸಬೇಕಾಗಿದೆ. ಅವರು ಮಾತ್ರ ಕೊರೊನಾ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಬೇರೆಯವರಿಗೆ ಕೊರೊನಾ ಬಗ್ಗೆ ಗೊತ್ತಿಲ್ಲ ಅಂತಾ ಹೇಳುತ್ತಿಲ್ಲ. ಆದರೆ, ಭಿನ್ನ ಹೇಳಿಕೆಗಳಿಂದ ಜನರಲ್ಲಿ ಗೊಂದಲ ಉಂಟಾಗಬಾರದು ಅನ್ನುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.
ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ರೋಶ
ಕೊರೊನಾ ಬಗ್ಗೆ ಸರ್ಕಾರ ಸೂಚಿಸಿದವರು ಮಾತ್ರ ಮಾತನಾಡಬೇಕೆಂಬ ನಿರ್ಧಾರಕ್ಕೆ ಪ್ರತಿಪಕ್ಷಗಳ ನಾಯಕರು ಮತ್ತು ವೈದ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಾಕ್ ಸ್ವಾತಂತ್ರವನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದು ಸರ್ಕಾರದ ಸರ್ವಾಧಿಕಾರಿ ಧೋರಣೆ ಎಂಬ ಟೀಕೆಗಳು ವ್ಯಕ್ತವಾಗುತ್ತಿದೆ. ಅಲ್ಲದೆ, ಇದರಲ್ಲಿ ವೈದ್ಯರನ್ನು ಕಟ್ಟಿಹಾಕುವ ಹುನ್ನಾರವಿದೆ ಎಂಬ ಆರೋಪ ಕೇಳಿ ಬರುತ್ತಿವೆ.