ಕೊರೋನಾ ಲಸಿಕೆಯನ್ನು ಇಡೀ ದೇಶದ ಜನರಿಗೆ ನೀಡುವುದಾಗಿ ಹೇಳಿಲ್ಲ; ಉಲ್ಟಾ ಹೊಡೆದ ಕೇಂದ್ರ  

  • ವೈಜ್ಞಾನಿಕ ವಿಚಾರಗಳನ್ನು ವಾಸ್ತವ ಮಾಹಿತಿಗಳನ್ನಾಧರಿಸಿ ಚರ್ಚಿಸಬೇಕೆ ಹೊರತು ಒಟ್ಟಾರೆಯಾಗಿ ಮಾತನಾಡಬಾರದು: ರಾಜೇಶ್​ ಭೂಷಣ್ 

ನವ ದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಬಿಜೆಪಿ ನಾಯಕರು ತಾವು ಗೆದ್ದರೆ ಇಡೀ ಬಿಹಾರಕ್ಕೆ ಉಚಿತ ಕೊರೋನಾ ಲಸಿಕೆ ನೀಡುವುದಾಗಿ ಘೋಷಣೆ ಮಾಡಿತ್ತು. ಘೋಷಣೆಗೆ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಿಗೆ ಮತ್ತೊಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕರು ಇಡೀ ದೇಶಕ್ಕೆ ಉಚಿತವಾಗಿ ಕೊರೋನಾ ಲಸಿಕೆ ನೀಡುವುದಾಗಿ ಭರವಸೆ ನೀಡಿದ್ದರು.

ಆದರೆ, ಇದೀಗ ಉಲ್ಟಾ ಹೊಡೆದಿರುವ ಕೇಂದ್ರ ಆರೋಗ್ಯ ಇಲಾಖೆ, ” ಕೊರೋನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಇಡೀ ದೇಶದ ಜನರಿಗೆ ಲಸಿಕೆ ಹಾಕುವ ಬಗ್ಗೆ ಸರ್ಕಾರ ಎಂದಿಗೂ ಮಾತನಾಡಿಯೇ ಇಲ್ಲಎಂದು ಹೇಳುವ ಮೂಲಕ ಜನರಿಗೆ ಉಚಿತ ಲಸಿಕೆ ನೀಡುವ ಭರವಸೆಗೆ ಉಲ್ಟಾ ಹೊಡೆದಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್​ ಭೂಷಣ್, “ಇಡೀ ದೇಶಕ್ಕೆ ಲಸಿಕೆ ಹಾಕುವ ಬಗ್ಗೆ ಸರ್ಕಾರ ಎಂದಿಗೂ ಮಾತನಾಡಲಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಅಂತಹ ವೈಜ್ಞಾನಿಕ ವಿಚಾರಗಳನ್ನು ವಾಸ್ತವ ಮಾಹಿತಿಗಳನ್ನಾಧರಿಸಿ ಚರ್ಚಿಸಬೇಕೆ ಹೊರತು ಒಟ್ಟಾರೆಯಾಗಿ ಮಾತನಾಡಬಾರದು” ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಿರ್ದೇಶಕ ಬಲರಾಮ್ ಭಾರ್ಗವ್ ಸಹ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, “ಇದು ಲಸಿಕೆಯ ಪರಿಣಾಮಕಾರಿತ್ವವನ್ನು ಅವಲಂಬಿಸಿರುತ್ತದೆ ಮತ್ತು ವೈರಸ್ ಹರಡುವ ಸರಪಳಿ ಮುರಿಯುವುದು ನಮ್ಮ ಉದ್ದೇಶ. ಸೋಂಕು ಹರಡುವುದನ್ನು ತಡೆಯುವುದು ಸಾಧ್ಯವಾದರೇ ನಾವು ಎಲ್ಲರಿಗೂ ಲಸಿಕೆ ನೀಡಬೇಕಾಗಿಲ್ಲ” ಎಂದಿದ್ದಾರೆ.

ಕೊರೋನಾ ವೈರಸ್ ಹರಡುವುದನ್ನು ತಡೆಯುವಲ್ಲಿ ಮಾಸ್ಕ್‌ಗಳ ಪಾತ್ರವು ಬಹಳ ಮುಖ್ಯವಾಗಿದೆ. ವ್ಯಾಕ್ಸಿನೇಷನ್ ನಂತರವೂ ಮಾಸ್ಕ್‌ಗಳ ಬಳಕೆ ಮುಂದುವರಿಯುತ್ತದೆ. ಸೋಂಕು ಹರಡುವುದನ್ನು ತಡೆಯುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಲರಾಮ್ ಭಾರ್ಗವ್ ತಿಳಿಸಿದ್ದಾರೆ.

ಆದರೆ ನವೆಂಬರ್ 24 ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಕೊರೋನಾ ಕುರಿತು ವಿಡಿಯೋ ಕಾನ್ಫರೆನ್ಸ್​ ಮೂಲಕ ಚರ್ಚೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, “ದೇಶದ ಪ್ರತಿಯೊಬ್ಬ ಪ್ರಜೆಗೂ ಸರ್ಕಾರ ಲಸಿಕೆಯನ್ನು ತಲುಪಲಿದೆ. ಅದಕ್ಕಾಗಿ ಎಲ್ಲಾ ವ್ಯವಸ್ಥೆ ನಡೆದಿದೆ” ಎಂದು ಭರವಸೆ ನೀಡಿದ್ದರು. ಅಲ್ಲದೆ, ಸ್ವತಃ ಪ್ರಧಾನಮಂತ್ರಿಗಳ ಕಚೇರಿಯಿಂದ ಬಂದ ಸರ್ಕಾರಿ ಪತ್ರಿಕಾ ಪ್ರಕಟಣೆ ಸಹ ಇದನ್ನು ಒತ್ತಿ ಹೇಳಿತ್ತು. ಆದರೆ ಸರ್ಕಾರ ಈಗ ತಾನು ನೀಡಿದ ಮಾತಿಗೆ ಉಲ್ಟಾ ಹೊಡೆಯುತ್ತಿದೆ.

ವ್ಯಾಕ್ಸೀನು ಎಲ್ಲರಿಗಿಲ್ಲ ಅಂದಮೇಲೆ, ಈ ತೆಗೆದಿರಿಸಲಾದ 50,000 ಕೋಟಿ ರೂ. ಮತ್ತು ಪ್ರೇರಕ ಪ್ಯಾಕೇಜ್ 900 ಕೋಟಿ ರೂ. ಗಳ ಕಥೆ ಏನು ಎಂಬುದು ಮಾತ್ರ ಮಿಲಿಯನ್ ಡಾಲರ್​ ಪ್ರಶ್ನೆಯಾಗಿದೆ.

Donate Janashakthi Media

Leave a Reply

Your email address will not be published. Required fields are marked *