ಕೋಲ್ಕತ್ತಾ: ಕಳೆದ ವರ್ಷ ಆಗಸ್ಟ್ 9 ರಂದು ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದಲ್ಲಿ ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ ನೀಡಿ ನ್ಯಾಯಾಲಯ ಆದೇಶ ಪ್ರಕಟಿಸಿದೆ.
ಆರ್‌ಜಿ.ಕರ್ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಶ್ಚಿಮ ಬಂಗಾಳದ ಸೀಲ್ಡಾ ನ್ಯಾಯಾಲಯ, 50,000 ರೂಪಾಯಿ ದಂಡವನ್ನೂ ವಿಧಿಸಿದೆ.
ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಪ್ರಕರಣದಲ್ಲಿ ರಾಯ್ ತಪ್ಪಿತಸ್ಥ ಎಂದು ಸೀಲ್ಡಾದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಕಳೆದ ಶನಿವಾರ ಘೋಷಿಸಿದ್ದರು.
ಇದನ್ನೂ ಓದಿ: ಬಿಡಿಎ ಒತ್ತುವರಿ ತೆರವು ಕಾರ್ಯಾಚರಣೆ : ಹಲವು ಅಂಗಡಿ-ಮುಂಗಟ್ಟು ಮಾಲೀಕರು ಬೀದಿಗೆ
ಈ ಕೃತ್ಯವು ದೇಶಾದ್ಯಂತ ಭಾರೀ ಪ್ರತಿಭಟನೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಕಳೆದ ವರ್ಷ ಆಗಸ್ಟ್ 9ರಂದು 31 ವರ್ಷದ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಕೋಣೆಯಲ್ಲಿ ಪತ್ತೆಯಾದ ನಂತರ ಆಗಸ್ಟ್ 10 ರಂದು ಕೋಲ್ಕತ್ತಾ ಪೊಲೀಸರ ಮಾಜಿ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ನನ್ನು ಬಂಧಿಸಲಾಗಿತ್ತು.
ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕತ್ತು ಹಿಸುಕಿ ಕೊಂದು ಹಾಕಿದ ಆರೋಪದಲ್ಲಿ ರಾಯ್ ತಪ್ಪಿತಸ್ಥನೆಂದು ಕಂಡುಬಂದಿದ್ದು, ನ್ಯಾಯಾಧೀಶರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸೆಕ್ಷನ್ 64, 66 ಮತ್ತು 103(1) ರ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದ್ದಾರೆ.
ಸಂಜಯ್ ರಾಯ್ ಜೀವಾವಧಿ ಶಿಕ್ಷೆಗೆ ಗುರಿಯಾದ ನಂತರ, ಸಾವಿಗೀಡಾದ ವೈದ್ಯೆ ಕುಟುಂಬಕ್ಕೆ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ 17 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಕೂಡ ನ್ಯಾಯಾಲಯ ಆದೇಶಿಸಿದೆ.
ಇದನ್ನೂ ನೋಡಿ: ಮಹಿಳೆಯರಿಗಾಗಿ ಕಾನೂನು ಸರಣಿ ಕಾರ್ಯಕ್ರಮ -01 | POSH ಕಾಯ್ದೆ- ಬಂದಿದ್ದು ಹೇಗೆ- ಬಳಕೆಯ ವ್ಯಾಪ್ತಿ