ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂನಾಗರಾಜ್
ಹಣದುಬ್ಬರದ ಯಾವುದೇ ರೀತಿಯದಿರಲಿ, ಅದನ್ನು ತಡೆಗಟ್ಟಲು ಬಂಡವಾಳಶಾಹಿಯು ಕಂಡುಕೊಂಡಿರುವ ಪರಿಹಾರವೆಂದರೆ, ಬೆಲೆ ಏರಿಕೆಗೆ ಸಮನಾಗಿ ದುಡಿಮೆಗಾರರ ವೇತನವನ್ನು ಹೆಚ್ಚಿಸದಿರುವುದು. ವೇತನದ ಪಾಲಿನ ಸೂಕ್ತ ಇಳಿಕೆಯನ್ನೇ “ಹಣದುಬ್ಬರ-ವಿರೋಧಿ ನೀತಿ” ಎಂದು ಕರೆಯಲಾಗಿದೆ. ಆದರೆ ದುಡಿಯುವ ವರ್ಗವನ್ನು ತೊಂದರೆಗಳಿಗೆ ಒಳಪಡಿಸುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವ ಪ್ರಕ್ರಿಯೆಯು ಬಂಡವಾಳಶಾಹಿಗೆ ಹೆಚ್ಚು ಕಷ್ಟಕರ ಎಂದು ಸಾಬೀತಾಗುತ್ತಿದೆ. ಯುರೋಪಿನಲ್ಲಿ ಈಗ ದಶಕಗಳಲ್ಲಿ ಕಂಡಿರದ ರೀತಿಯಲ್ಲಿ ವ್ಯಾಪಕವಾಗಿರುವ ಕಾರ್ಮಿಕರ ಮುಷ್ಕರವೇ ಇದಕ್ಕೆ ಸಾಕ್ಷಿ.
ಅದೇ ರೀತಿಯಲ್ಲಿ, ಬಹುತೇಕವಾಗಿ ಮೂರನೇ ಜಗತ್ತಿನಲ್ಲಿ ನೆಲೆಗೊಂಡಿರುವ ಮೂಲ ಸರಕು ಉತ್ಪಾದಕರ ಪಾಲನ್ನು ಹಿಂಡುವುದು ಹಣದುಬ್ಬರ-ನಿಯಂತ್ರಣಕ್ಕಾಗಿ ಮುಂದುವರೆದ ದೇಶಗಳು ಸಾಮಾನ್ಯವಾಗಿ ಬಳಸುವ ವಿಧಾನವೂ ಹೌದು. ಆದರೆ, ಇದು ಮುಂದುವರೆದ ಬಂಡವಾಳಶಾಹಿ ದೇಶಗಳನ್ನು ಇನ್ನೂ ಹೆಚ್ಚಿನ ತೊಂದರೆಗಳಿಗೆ ತಳ್ಳುತ್ತದಷ್ಟೇ.
ಎರಡು ಬಗೆಯ ಹಣದುಬ್ಬರವನ್ನು ಅರ್ಥಶಾಸ್ತ್ರಜ್ಞರು ಗುರುತಿಸುತ್ತಾರೆ: “ಬೇಡಿಕೆ-ಎಳೆತ”ದ ಹಣದುಬ್ಬರ ಮತ್ತು “ವೆಚ್ಚ-ತಳ್ಳಿಕೆ”ಯ ಹಣದುಬ್ಬರ. ಒಂದು ಅಥವಾ ಹೆಚ್ಚು ನಿರ್ಣಾಯಕ ವಲಯಗಳಲ್ಲಿ ಪೂರ್ಣ ಸಾಮರ್ಥ್ಯದ ಉತ್ಪಾದನೆ ಇದ್ದೂ, ಪೂರೈಕೆಯನ್ನು ಹೆಚ್ಚಿಸಲಾಗದ ಪರಿಸ್ಥಿತಿಯಲ್ಲಿ ಬೇಡಿಕೆ ಹೆಚ್ಚಿದಾಗ, ಬೇಡಿಕೆ-ಎಳೆತದ ಹಣದುಬ್ಬರ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಬೇಡಿಕೆ-ಎಳೆತದ ಅತ್ಯುತ್ತಮ ಉದಾಹರಣೆ ಎಂದರೆ, ಯುದ್ಧ-ಸಮಯದ ಹಣದುಬ್ಬರ. ಭಾರತದಲ್ಲಿ, ನಿಯಂತ್ರಣ ನೀತಿಗಳ ಕಾಲದಲ್ಲಿ (ಅಂದರೆ, 1991ಕ್ಕೂ ಮೊದಲು) ಬೆಳೆ ವೈಫಲ್ಯಗಳಿಂದಾಗಿ, ಆಹಾರ ಧಾನ್ಯಗಳ ಉತ್ಪಾದನೆಯು ಬೇಡಿಕೆಗೆ ಹೋಲಿಸಿದರೆ ಅಸಮರ್ಪಕವಾಗಿದ್ದ ಪರಿಸ್ಥಿತಿಯಲ್ಲಿ ಉಂಟಾಗುತ್ತಿದ್ದ ಹಣದುಬ್ಬರವು ಬೇಡಿಕೆ-ಎಳೆತದ ರೀತಿಯದ್ದು.
ಇನ್ನೊಂದು ಕಡೆಯಲ್ಲಿ, ಅರ್ಥವ್ಯವಸ್ಥೆಯ ಪ್ರಮುಖ ವಲಯಗಳ ಉತ್ಪಾದನೆಯು ಪೂರ್ಣ ಸಾಮರ್ಥ್ಯವನ್ನು ತಲುಪುವುದು ಇನ್ನೂ ದೂರವಿದ್ದು, ಪೂರೈಕೆಗಳನ್ನು ಹೆಚ್ಚಿಸಬಹುದಾದರೂ ಸಹ, ಉತ್ಪಾದಕರ ಒಂದು ವರ್ಗವು ತಾನು ಒದಗಿಸುವ ಲಾಗುವಾಡುಗಳಿಗೆ ಹೆಚ್ಚಿನ ಬೆಲೆಯನ್ನು ಕೇಳುವ ಮೂಲಕ ತನ್ನ ಪಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿರುವ ಸಮಯದಲ್ಲೇ ಉಳಿದ ವರ್ಗಗಳು ತಮ್ಮ ಪಾಲಿನ ಉತ್ಪಾದನೆಯನ್ನು ಇಳಿಕೆ ಮಾಡದ ಪರಿಸ್ಥಿತಿಯಲ್ಲಿ ಈ ಎರಡು ವರ್ಗಗಳ ನಡುವಿನ ಜಟಾಪಟಿಯಿಂದಾಗಿ ವೆಚ್ಚ-ತಳ್ಳಿಕೆಯ ಹಣದುಬ್ಬರ ಸಂಭವಿಸುತ್ತದೆ.
ಅದು ಯಾವ ಬಗೆಯ ಹಣದುಬ್ಬರವೇ ಇರಲಿ, ದುಡಿಯುವ ವರ್ಗವನ್ನು ತೊಂದರೆಗಳಿಗೆ ಒಳಪಡಿಸುವ ಮೂಲಕ ಅದನ್ನು ನಿಯಂತ್ರಿಸಬಹುದು. ಮತ್ತು, ಅದಕ್ಕಿಂತಲೂ ವಿಶೇಷವಾದ ಸಂಗತಿ ಎಂದರೆ, ಅದೊಂದು ಬದಲಾಯಿಸಲಾಗದ ನಿಯಮವೋ ಎಂಬಂತೆ, ಬಂಡವಾಳಶಾಹಿಯ ಅಡಿಯಲ್ಲಿ, ಎಲ್ಲ ಕಾಲದಲ್ಲೂ, ದುಡಿಯುವ ವರ್ಗವನ್ನು ತೊಂದರೆಗಳಿಗೆ ಒಳಪಡಿಸುವ ಮೂಲಕವೇ ಹಣದುಬ್ಬರವನ್ನು ನಿಯಂತ್ರಿಸಲಾಗಿದೆ. ಒಂದು ವೇಳೆ ಅದು ಬೇಡಿಕೆ-ಎಳೆತದ ಹಣದುಬ್ಬರವಾಗಿದ್ದರೆ, ಪೂರೈಕೆಗಳನ್ನು ಹೆಚ್ಚಿಸಲು ಸಾಧ್ಯವಾಗದಿದ್ದಾಗ ಹೆಚ್ಚುವರಿ ಬೇಡಿಕೆಯನ್ನು ಕಾರ್ಮಿಕ ವರ್ಗದ ಬಳಕೆ-ಬೇಡಿಕೆಯನ್ನು ಹಿಂಡುವ ಮೂಲಕ, ಅಂದರೆ, ಹಣ-ವೇತನಗಳು ಬೆಲೆ ಏರಿಕೆಯ ದರದಲ್ಲೇ ಹೆಚ್ಚದಂತೆ ನೋಡಿಕೊಳ್ಳುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸಲಾಗುತ್ತದೆ. ಒಂದು ವೇಳೆ ಅದು ವೆಚ್ಚ-ತಳ್ಳಿಕೆಯ ಹಣದುಬ್ಬರವಾಗಿದ್ದರೆ, ಕಾರ್ಮಿಕರ ಚೌಕಾಶಿಯ ಶಕ್ತಿಯನ್ನು ಕಡಿಮೆ ಮಾಡುವ ಮೂಲಕ ಕೂಲಿಯ ಪಾಲನ್ನು ಕಡಿಮೆ ಮಾಡಿ ತಳ್ಳಾಟವನ್ನು ಕೊನೆಗೊಳಿಸಲಾಗುತ್ತದೆ. ಈ ರೀತಿಯಲ್ಲಿ, ಯಾವುದೇ ರೀತಿಯ ಹಣದುಬ್ಬರದ ಏರಿಕೆಯನ್ನು ತಡೆಗಟ್ಟಲು ಬಂಡವಾಳಶಾಹಿಯು ಕಂಡುಕೊಂಡಿರುವ ಪರಿಹಾರವೆಂದರೆ, ಬೆಲೆ ಏರಿಕೆಗೆ ಸಮನಾಗಿ ದುಡಿಮೆಗಾರರ ವೇತನವನ್ನು ಹೆಚ್ಚಿಸದಿರುವುದು.
ಬಂಡವಾಳಶಾಹಿಯ ಹಣದುಬ್ಬರ-ವಿರೋಧಿ ನೀತಿಯೆಂದರೆ…
ಖಚಿತವಾಗಿ ಹೇಳಬೇಕೆಂದರೆ, ನಿಖರವಾಗಿ ಅದೇ ರೀತಿಯಲ್ಲಿ, ಬಹುತೇಕವಾಗಿ ಮೂರನೇ ಜಗತ್ತಿನಲ್ಲಿ ನೆಲೆಗೊಂಡಿರುವ ಮೂಲ ಸರಕು ಉತ್ಪಾದಕರ ಪಾಲನ್ನು ಹಿಂಡುವ ಮೂಲಕವೂ ಹಣದುಬ್ಬರವನ್ನು ನಿಯಂತ್ರಿಸಬಹುದು. ಚಾರಿತ್ರಿಕವಾಗಿ ಇದು ಹಣದುಬ್ಬರ-ನಿಯಂತ್ರಣಕ್ಕಾಗಿ ಮುಂದುವರೆದ ದೇಶಗಳು ಸಾಮಾನ್ಯವಾಗಿ ಬಳಸುವ ವಿಧಾನವೂ ಹೌದು. ಆದರೆ, ಈ ವಿಧಾನವನ್ನು ಅವ್ಯಾಹತವಾಗಿ ಬಳಸಿರುವ ಕಾರಣದಿಂದಾಗಿ, ಜಾಗತಿಕ ಉತ್ಪತ್ತಿಯ ಒಟ್ಟು ಮೌಲ್ಯದಲ್ಲಿ ಮೂಲ ಸರಕು ಉತ್ಪಾದಕರ ಪಾಲು ಈಗಾಗಲೇ ಎಷ್ಟು ಕೆಳ ಮಟ್ಟಕ್ಕೆ ಇಳಿದಿದೆ (ಮೂಲ ಸರಕುಗಳ ಪ್ರಾಮುಖ್ಯತೆ ಕಡಿಮೆಯಾಗಿದೆ ಎಂದಲ್ಲ) ಎಂದರೆ, ಅದು ಮತ್ತಷ್ಟು ಕೆಳಗಿಳಿದರೆ ಹಣದುಬ್ಬರವನ್ನು ನಿಯಂತ್ರಿಸಲಾಗುವುದಿಲ್ಲ. ಆದ್ದರಿಂದ, ಬಲಿತ ಬಂಡವಾಳಶಾಹಿಯ ಅಡಿಯಲ್ಲಿ, ದುಡಿಯುವ ವರ್ಗವನ್ನು ತೊಂದರೆಗಳಿಗೆ ಒಳಪಡಿಸದ ಹೊರತು (ಮತ್ತು ಮೂಲ ಸರಕು ಉತ್ಪಾದಕರನ್ನು ಹಿಂಡದ ಹೊರತು) ಹಣದುಬ್ಬರವನ್ನು ನಿಯಂತ್ರಿಸಲಾಗದು.
ದುಡಿಯುವ ವರ್ಗದ ಪಾಲನ್ನು ಹಿಂಡುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸಲಾಗಿದೆ ಎಂದಾಗ ಹಣದುಬ್ಬರದ ಪ್ರಕ್ರಿಯೆಯನ್ನು ಕಾರ್ಮಿಕ ವರ್ಗ ಆರಂಭಿಸಿತು ಎಂದೇನೂ ಅರ್ಥವಲ್ಲ. ವಾಸ್ತವವಾಗಿ ಈ ಎರಡು ವಿದ್ಯಮಾನಗಳು ಒಂದರೊಡನೊಂದು ಸಂಬಂಧ ಹೊಂದಿಲ್ಲ. ಅಮೆರಿಕಾದ ಪ್ರಸ್ತುತ ವೆಚ್ಚ-ತಳ್ಳಿಕೆಯ ಹಣದುಬ್ಬರವು ಬಂಡವಾಳಿಗರ ಲಾಭಾಂಶಗಳು ಸ್ವಾಯತ್ತವಾಗಿ ಹೆಚ್ಚುವುದರೊಂದಿಗೆ ಆರಂಭಗೊಂಡಾಗ, ಈ ಪ್ರಕ್ರಿಯೆಯನ್ನು ವೇತನಗಳ ಪಾಲನ್ನು ಹಿಂಡುವ ಮೂಲಕ, ಅಂದರೆ ಬೆಲೆ ಏರಿಕೆಗೆ ಸಮನಾಗಿ ದುಡಿಮೆಗಾರರ ವೇತನವು ಹೆಚ್ಚದಂತೆ ನೋಡಿಕೊಳ್ಳುವ ಮೂಲಕ ಹಣದುಬ್ಬರವನ್ನು ಕೊನೆಗೊಳಿಸಲಾಗಿದೆ. ಹಣದುಬ್ಬರದಿಂದಾಗಿ ವೇತನದ ಪಾಲು ಅಮೆರಿಕದಲ್ಲಿ ಸ್ಪಷ್ಟವಾಗಿ ಕುಸಿದಿದೆ. ಲಾಭಾಂಶ-ತಳ್ಳಿಕೆಯಿಂದಾಗಿ ಅಲ್ಲಿ ಹಣದುಬ್ಬರ ಉಂಟಾಗಿದ್ದರೂ ಸಹ, ಫೆಡರಲ್ ರಿಸರ್ವ್ ಬೋರ್ಡ್ನಿಂದ ಹಿಡಿದು ಉದಾರವಾದಿ ಅರ್ಥಶಾಸ್ತ್ರಜ್ಞರ ವರೆಗೆ ಪ್ರತಿಯೊಬ್ಬರೂ, ವೇತನದ ಪಾಲಿನಲ್ಲಿ ಮತ್ತಷ್ಟು ಹಿಂಡುವುದೇ ಹಣದುಬ್ಬರಕ್ಕೆ ಪರಿಹಾರ ಎನ್ನುತ್ತಾರೆ.
ಬಂಡವಾಳಶಾಹಿಯ ಅಡಿಯಲ್ಲಿ ವೇತನದ ಪಾಲಿನ ಸೂಕ್ತ ಇಳಿಕೆಯನ್ನೇ “ಹಣದುಬ್ಬರ-ವಿರೋಧಿ ನೀತಿ” ಎಂದು ಕರೆಯಲಾಗಿದೆ. ಉದಾಹರಣೆಗೆ ಬಡ್ಡಿ ದರಗಳ ಏರಿಕೆಯನ್ನೇ ತೆಗೆದುಕೊಳ್ಳೋಣ. ಬಡ್ಡಿ ದರದ ಏರಿಕೆಯು ಬ್ಯಾಂಕುಗಳಿಂದ ಸಾಲ ಪಡೆಯುವುದನ್ನು ನಿರುತ್ಸಾಹಗೊಳಿಸುವ ಮೂಲಕ ಬೇಡಿಕೆಯು ಹೆಚ್ಚದಂತೆ ನೋಡಿಕೊಳ್ಳುತ್ತದೆ ಎಂದು ಭಾವಿಸಲಾಗಿದೆ. ಆದರೆ, ಅದರ ಪರಿಣಾಮಗಳು ಬೇಡಿಕೆ ಅತಿಯಾಗದಂತೆ ನೋಡಿಕೊಳ್ಳುವುದಕ್ಕೆ ಮಾತ್ರ ಸೀಮಿತಗೊಳ್ಳದೆ ಉತ್ಪಾದನಾ ಸಾಮರ್ಥ್ಯದ ಬಳಕೆಯನ್ನು ಮತ್ತು ಉದ್ಯೋಗ ಪರಿಸ್ಥಿತಿಯನ್ನು ಕಡಿಮೆ ಮಾಡುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ರಷ್ಯಾದ ವಿರುದ್ಧ ನಿರ್ಬಂಧಗಳಿರುವ ಕಾರಣದಿಂದಾಗಿ ಕೊರತೆಯ ಪರಿಸ್ಥಿತಿ ಈಗಿದೆಯಾದರೂ, ಕೊರತೆಗಳಿಲ್ಲದಿರುವಾಗ ಮತ್ತು ವೆಚ್ಚ-ತಳ್ಳಿಕೆಯು ಹಣದುಬ್ಬರಕ್ಕೆ ಕಾರಣವಾಗುತ್ತಿರುವಾಗ, ಬಡ್ಡಿ ದರಗಳ ಏರಿಕೆಯು ಹೆಚ್ಚಿನ ನಿರುದ್ಯೋಗವನ್ನು ಉಂಟುಮಾಡುವ ಮೂಲಕವಾಗಿ ಕಾರ್ಮಿಕರ ಚೌಕಾಶಿ ಶಕ್ತಿಯನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ಹಣದುಬ್ಬರ-ವಿರೋಧಿ ಪರಿಣಾಮವನ್ನು ಉಂಟುಮಾಡುತ್ತದೆ. ಅಂದರೆ, ಬಡ್ಡಿ ದರಗಳ ಏರಿಕೆಯು ನಿರುದ್ಯೋಗವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಹಿಂಜರಿತಕ್ಕೂ ಕಾರಣವಾಗುತ್ತದೆ.
ನಿರುದ್ಯೋಗ ಹೆಚ್ಚುತ್ತಿದ್ದಂತೆಯೇ ಕಾರ್ಮಿಕರ ವೇತನಗಳೂ ಇಳಿಯುತ್ತವೆ. ನಿರುದ್ಯೋಗವು ಬೀರಿದ ಪ್ರತಿಕೂಲ ಪರಿಣಾಮಗಳಿಂದ ಕಾರ್ಮಿಕರು ಚೇತರಿಸಿಕೊಳ್ಳುವುದು ಕಷ್ಟ, ನಿಜ. ಆದರೆ, ಚೇತರಿಕೆಯು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಅಂದರೆ, ಮಿಗುತಾಯದಲ್ಲಿ ತಮ್ಮ ಪಾಲಿನ ಕಡಿತದ ಬಗ್ಗೆ ಕಾರ್ಮಿಕರ ಪ್ರತಿರೋಧವು ನಿರುದ್ಯೋಗ ಹೆಚ್ಚಿದರೂ ಸಹ ಮುಂದುವರಿಯಬಹುದು. ಅದೇನೇ ಇರಲಿ, ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಹಣದುಬ್ಬರವು ಕಾರ್ಮಿಕ ವರ್ಗದ ಸಮರಧೀರತೆಯನ್ನು ಹೆಚ್ಚಿಸುತ್ತದೆ ಮತ್ತು ಅವರು ಹೋರಾಟಗಳಲ್ಲಿ ತೊಡಗುವಂತೆ ಮಾಡುತ್ತದೆ.
ಯುರೋಪಿನಲ್ಲಿ ಕಾರ್ಮಿಕರ ಪ್ರತಿರೋಧ
ಈ ವಿದ್ಯಮಾನವನ್ನು ಅನೇಕ ಮುಂದುವರಿದ ಬಂಡವಾಳಶಾಹಿ ದೇಶಗಳಲ್ಲಿ, ವಿಶೇಷವಾಗಿ ಯೂರೋಪಿನಲ್ಲಿ ಇಂದು ಗಮನಿಸಬಹುದು. ಈ ಅಂಶದ ಬಗ್ಗೆ ಬ್ರಿಟನ್ ನಿಜಕ್ಕೂ ಅತ್ಯುತ್ತಮ ಉದಾಹರಣೆ. ಹಿಂದಿನ ವರ್ಷದ ಜುಲೈಗೆ ಹೋಲಿಸಿದರೆ ಈ ಜುಲೈ ತಿಂಗಳಲ್ಲಿ ಶೇ. 10.1ರ ಮಟ್ಟ ತಲುಪಿರುವ ಹಣದುಬ್ಬರ ದರವು ಬ್ರಿಟನ್ನಲ್ಲಿ ಕಳೆದ 40 ವರ್ಷಗಳಲ್ಲಿ ತಲುಪಿದ ಗರಿಷ್ಠ ಮಟ್ಟವಾಗಿದೆ. ಹಣದುಬ್ಬರದ ಕಾರಣದಿಂದಾಗಿ ಸವಕಳಿಯಾಗಿರುವ ಕೊಳ್ಳುವ ಶಕ್ತಿಯನ್ನು ಸರಿದೂಗಿಸಿಕೊಳ್ಳಲು ಹೆಚ್ಚಿನ ವೇತನಕ್ಕಾಗಿ ಒತ್ತಾಯಿಸಿ ಬ್ರಿಟನ್ನಿನ ರೈಲ್ವೆ ಕಾರ್ಮಿಕರು, ಅಂಚೆ ನೌಕರರು ಮತ್ತು ಹಡಗುಕಟ್ಟೆ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಹಣದುಬ್ಬರ ಏರುತ್ತಿರುವುದರಿಂದ ವಕೀಲರು ಮತ್ತು ಶಿಕ್ಷಕರೂ ಸಹ ತಮಗೆ ಹೆಚ್ಚಿನ ವೇತನವನ್ನು ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಹಣದುಬ್ಬರವು ಶೇ.೧೩ರ ಮಟ್ಟ ತಲುಪಬಹುದೆಂದು ಅಂದಾಜು ಮಾಡಲಾಗಿದೆ.
ಅದೇ ರೀತಿಯಲ್ಲಿ ಯುರೋ ವಲಯದಲ್ಲಿ ಜುಲೈನಲ್ಲಿ ಶೇ. 8.9ರ ಮಟ್ಟ ತಲುಪಿದ್ದ ಹಣದುಬ್ಬರವು ಉಂಟುಮಾಡಿದ ನಷ್ಟವನ್ನು ಸರಿದೂಗಿಸಿಕೊಳ್ಳಲು ಸ್ಪೇನ್, ಗ್ರೀಸ್ ಮತ್ತು ಬೆಲ್ಜಿಯಂ ದೇಶಗಳಲ್ಲಿ ಕಾರ್ಮಿಕರು ಹೆಚ್ಚಿನ ವೇತನವನ್ನು ಕೇಳುತ್ತಿದ್ದಾರೆ. ಇತರ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ಈ ಹಿಂದೆ ಮುಷ್ಕರಗಳಿಂದ ಕಡಿಮೆ ಪೀಡಿತವಾಗಿದ್ದ ಜರ್ಮನಿಯಲ್ಲಿ ಕೂಡ ಹೆಚ್ಚಿನ ವೇತನಕ್ಕಾಗಿ ಒತ್ತಾಯಿಸಿ ಮುಷ್ಕರಗಳು ನಡೆಯುತ್ತಿವೆ. ನೆದರ್ಲ್ಯಾಂಡ್ಸ್ನಲ್ಲಿ ಮತ್ತು ಜರ್ಮನಿಯಲ್ಲಿ ಸಾರಿಗೆ ವಲಯದ ಕಾರ್ಮಿಕರು ಮುಷ್ಕರದಲ್ಲಿ ತೊಡಗಿದ್ದಾರೆ. ನೆದರ್ಲ್ಯಾಂಡ್ಸ್ನಲ್ಲಿ ರೈಲ್ವೆ ನೌಕರರು ಮತ್ತು ಜರ್ಮನಿಯಲ್ಲಿ ವಿಮಾನಯಾನ ಸಂಸ್ಥೆಗಳ ನೌಕರರು ಮುಷ್ಕರದಲ್ಲಿ ತೊಡಗಿದ್ದಾರೆ. ಚಳಿಗಾಲ ಸಮೀಪಿಸುತ್ತಿದ್ದಂತೆಯೇ ಈ ದೇಶಗಳ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ತನ್ನ ವಿರುದ್ಧ ಹೇರಿದ ನಿರ್ಬಂಧಗಳಿಂದಾಗಿ ಯುರೋಪಿಗೆ ತೈಲ ಮತ್ತು ನೈಸರ್ಗಿಕ ಅನಿಲದ ಹರಿವನ್ನು ರಷ್ಯಾ ಕಡಿತಗೊಳಿಸಿದಾಗ ಅದರ ಪರಿಣಾಮಗಳು ಅತ್ಯಂತ ವಿನಾಶಕಾರಿಯಾಗಿ ಪರಿಣಮಿಸಲಿವೆ.
ಕಾರ್ಮಿಕರ ಮುಷ್ಕರಗಳು, ವಿವಿಧ ಸರಕುಗಳು ಮತ್ತು ಸೇವೆಗಳ ಪೂರೈಕೆಯ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ಹಣದುಬ್ಬರವು ಮೂಲತಃ ಪೂರೈಕೆಯ ಕೊರತೆಯಿಂದ ಉದ್ಭವವಾಗದಿದ್ದರೂ ಸಹ, ಮುಷ್ಕರಗಳ ಪರಿಣಾಮವಾಗಿ ಸರಕು-ಸೇವೆಗಳ ಕೊರತೆಗಳು ಅನಿವಾರ್ಯವಾಗಿ ಕಾಣಿಸಿಕೊಳ್ಳುತ್ತವೆ ಮತ್ತು ಹಣದುಬ್ಬರವನ್ನು ಚುರುಕುಗೊಳಿಸುತ್ತವೆ.
ಈ ಪ್ರಮಾಣದ ಮುಷ್ಕರಗಳು ಮುಂದುವರಿದ ಬಂಡವಾಳಶಾಹಿ ಜಗತ್ತಿನಲ್ಲಿ ದಶಕಗಳಿಂದ ಕಾಣಿಸಿಕೊಂಡಿರಲಿಲ್ಲ. ನವ-ಉದಾರವಾದದ ಜಾಗತಿಕ ಅಳವಡಿಕೆಯೊಂದಿಗೆ ಬಂಡವಾಳವು ಅತ್ಯಂತ ಪ್ರಭಾವಶಾಲಿಯಾಗಿ ಬೆಳೆದಿದೆ. ನವ-ಉದಾರದ ಅವಧಿಯಲ್ಲಿ ಹೆಚ್ಚಿನ ದೇಶಗಳಲ್ಲಿ ವೇತನದ ಪಾಲು ಇಳಿಕೆಯಾಗುತ್ತಿದೆಯಾದರೂ ಸಹ, ಜಾಗತಿಕ ಬಂಡವಾಳದ ಮುಕ್ತ ಚಲನೆಯು ಒಟ್ಟಾರೆಯಾಗಿ ಕೆಲಸಗಾರರ ನಡುವೆ ಸ್ಪರ್ಧೆಯನ್ನು ಹೆಚ್ಚಿಸಿದ ಕಾರಣದಿಂದಾಗಿ ಅವರ ಪ್ರತಿರೋಧವು ಕ್ಷೀಣಿಸುತ್ತಾ ಹೋಯಿತು. ಯೂರೋಪಿನ ಕಾರ್ಮಿಕರು ಹೆಚ್ಚಿನ ವೇತನವನ್ನು ಆಗ್ರಹಿಸಿ ಒಂದು ವೇಳೆ ಮುಷ್ಕರ ನಡೆಸಿದರೆ, ಆಗ, ಕಡಿಮೆ ವೇತನದ ಏಷ್ಯಾದ ದೇಶಗಳಿಗೆ ಅದಾಗಲೇ ಸ್ಥಳಾಂತರಗೊಂಡಿದ್ದ ಬಂಡವಾಳವು ಈ ಪ್ರಕ್ರಿಯೆಯನ್ನು ಮತ್ತಷ್ಟು ತ್ವರಿತಗೊಳಿಸುತ್ತದೆ. ಈ ವಿದ್ಯಮಾನವು ಮುಂದುವರೆದ ದೇಶಗಳಲ್ಲಿ ವೇತನದ ಬೇಡಿಕೆಗಳನ್ನು ಚಿವುಟಿಹಾಕಿತು.
2008ರ ಆರ್ಥಿಕ ಬಿಕ್ಕಟ್ಟಿನ ನಂತರ, ಮುಂದುವರಿದ ಬಂಡವಾಳಶಾಹಿ ದೇಶಗಳಲ್ಲಿ, ವಿಶೇಷವಾಗಿ ಯೂರೋಪಿನಲ್ಲಿ, ಚೇತರಿಕೆಯು ನಿಧಾನವೂ ಮತ್ತು ಬಹುತೇಕ ಆಂಶಿಕವೂ ಆಗಿದ್ದರಿಂದ, ಕಾರ್ಮಿಕರ ಸಮರಧೀರತೆಯು ಒಂದು ರೀತಿಯ ಇತಿ ಮಿತಿಗಳಿಗೆ ಒಳಪಟ್ಟಿತು. ಅಂದರೆ, ನಿರುದ್ಯೋಗ ಪರಿಸ್ಥಿತಿಯು ಕಾರ್ಮಿಕರ ಚೌಕಾಶಿಯ ಸಾಮರ್ಥ್ಯವನ್ನು ಬಹಳವಾಗಿ ಮೊಟುಕುಗೊಳಿಸಿತು. ಅಂತೆಯೇ, ಪೂರ್ವ ಯುರೋಪಿನ ದೇಶಗಳಲ್ಲಿ ಸಮಾಜವಾದಿ ವ್ಯವಸ್ಥೆಯ ಪತನಾನಂತರ, ಪೂರ್ವದಿಂದ ಪಶ್ಚಿಮದ ದೇಶಗಳಿಗೆ ಕಾರ್ಮಿಕರು ವಲಸೆ ಬಂದಿದ್ದರಿಂದ, ಪಶ್ಚಿಮ ಯುರೋಪಿನ ದೇಶಗಳಿಗೆ ಅಗ್ಗದ ಕಾರ್ಮಿಕರು ಲಭ್ಯವಾದರು. ಇದು ಕಾರ್ಮಿಕರ ನಡುವಿನ ಸ್ಪರ್ಧೆಗೆ ಮತ್ತಷ್ಟು ಇಂಬು ಕೊಟ್ಟಿತು. ಪರಿಣಾಮವಾಗಿ, ಯುರೋಪಿಯನ್ ಒಕ್ಕೂಟದಲ್ಲಿ ವೇತನಗಳು ತಗ್ಗಿದವು.
ಆದ್ದರಿಂದ, ಪ್ರಸ್ತುತ ಹಣದುಬ್ಬರವು ಈ ಸನ್ನಿವೇಶದಲ್ಲಿ ಆಗಿರುವ ಒಂದು ಅನಿರೀಕ್ಷಿತ ಬದಲಾವಣೆಯನ್ನು ಸೂಚಿಸುತ್ತದೆ. ಈ ಹಣದುಬ್ಬರವು ಪೂರ್ವದ ಅಥವಾ ಪಶ್ಚಿಮದ, ಖಾಯಂ ಉದ್ಯೋಗಗಳನ್ನು ಹೊಂದಿರುವವರು ಅಥವಾ ಭಾಗಶಃ ಉದ್ಯೋಗದಲ್ಲಿರುವವರು, ಸಕ್ರಿಯ ಕಾರ್ಮಿಕ ಪಡೆಗೆ ಸೇರಿದವರಾಗಿರಲಿ ಅಥವಾ ಮೀಸಲು ಪಡೆಗೆ ಸೇರಿದವರಾಗಿರಲಿ, ಎಲ್ಲಾ ಕಾರ್ಮಿಕರ ಮೇಲೂ ಪರಿಣಾಮ ಬೀರುವುದರಿಂದ, ಅದು ಈ ಹಿಂದೆ ವಿವಿಧ ವರ್ಗಗಳ ಕಾರ್ಮಿಕರ ನಡುವೆ ವ್ಯಕ್ತಗೊಳ್ಳುತ್ತಿದ್ದ ವೈರುಧ್ಯಗಳನ್ನು ಮಸಕುಗೊಳಿಸುತ್ತದೆ ಮತ್ತು ಅದರಿಂದಾಗಿ ಅವರ ನಡುವೆ ನಡೆಯುತ್ತಿದ್ದ ಸ್ಪರ್ಧೆಯನ್ನೂ ಮಸಕುಗೊಳಿಸುತ್ತದೆ. ಹೆಚ್ಚುತ್ತಿರುವ ಜೀವನ ನಿರ್ವಹಣೆಯ ವೆಚ್ಚಗಳಿಂದ ಉಂಟಾಗುವ ಹತಾಶೆಯು ಕಾರ್ಮಿಕರಲ್ಲಿ ಸಮರಧೀರತೆಯನ್ನು ಹೆಚ್ಚಿಸುತ್ತದೆ. ಈ ಸಮರಧೀರತೆಯ ಅಭಿವ್ಯಕ್ತಿಯನ್ನು ಯುರೋಪಿನಲ್ಲಿ ಈಗ ಗಮನಿಸಬಹುದು. ಆದ್ದರಿಂದ ದುಡಿಯುವ ವರ್ಗವನ್ನು ತೊಂದರೆಗಳಿಗೆ ಒಳಪಡಿಸುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವ ಪ್ರಕ್ರಿಯೆಯು ಬಂಡವಾಳಶಾಹಿಗೆ ಹೆಚ್ಚು ಕಷ್ಟಕರ ಎಂದು ಸಾಬೀತಾಗುತ್ತಿದೆ.
ಈಗಿನ ಪರಿಸ್ಥಿತಿಯ ವಿಪರ್ಯಾಸವೆಂದರೆ, ಹಣದುಬ್ಬರವು ಪಡೆದುಕೊಂಡ ವೇಗೋತ್ಕರ್ಷದಲ್ಲಿನ ಬಹುಪಾಲು ಉಕ್ರೇನ್ ಯುದ್ಧದಿಂದಾಗಿ ಸಂಭವಿಸಿದೆ. ಈ ಮೊದಲು ಹಣದುಬ್ಬರ ಇರಲಿಲ್ಲವೆಂದಲ್ಲ ಅಥವಾ ವೇಗ ಪಡೆಯುತ್ತಿರಲಿಲ್ಲ ಎಂದಲ್ಲ. ಅದರ ಈ ವೇಗೋತ್ಕರ್ಷವು ಯುದ್ಧದಿಂದ ಬಲವಾದ ಉತ್ತೇಜನ ಪಡೆದುಕೊಂಡಿತು. ಯುರೋಪಿಯನ್ ಒಕ್ಕೂಟದಲ್ಲಿ ಮಾಸಿಕ ಹಣದುಬ್ಬರ ದರವು (ಇದನ್ನು ಒಂದು ವರ್ಷದ ಹಿಂದಿನ ಇದೇ ತಿಂಗಳ ಬೆಲೆ-ಮಟ್ಟದೊಂದಿಗೆ ಹೋಲಿಕೆಯ ಮೂಲಕ ಪಡೆಯಲಾಗಿದೆ) 2021ರ ಆಗಸ್ಟ್ನ ಶೇ. 3.2ರಿಂದ 2022ರ ಜನವರಿಯಲ್ಲಿ ಶೇ. 5.6ಕ್ಕೆ ಏರಿದ್ದು, ಜುಲೈ 2022ರಲ್ಲಿ ಶೇ. 9.8ರ ಮಟ್ಟವನ್ನು ತಲುಪಿದೆ. ಉಕ್ರೇನ್ ಯುದ್ಧವು ಎರಡು ನೆರೆಯ ದೇಶಗಳ ನಡುವಿನ ಸಂಘರ್ಷ ಮಾತ್ರವಲ್ಲ. ಅದು, ಸಾಮ್ರಾಜ್ಯಶಾಹಿಯ ಆಧಿಪತ್ಯದ ಅವನತಿಯ ಹಿನ್ನೆಲೆಯಲ್ಲಿ ಉಂಟಾದ ಅದರ ಹತಾಶೆಯ ಪರಿಣಾಮವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಾಮ್ರಾಜ್ಯಶಾಹಿಯು ಮುಂದುವರೆದ ದೇಶಗಳ ದುಡಿಯುವ ವರ್ಗವನ್ನು ಹಿಂಡುವ ಮೂಲಕ ತನ್ನ ಪ್ರಾಬಲ್ಯವನ್ನು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ, ಇದು ಮುಂದುವರೆದ ಬಂಡವಾಳಶಾಹಿ ದೇಶಗಳನ್ನು ಇನ್ನೂ ಹೆಚ್ಚಿನ ತೊಂದರೆಗಳಿಗೆ ತಳ್ಳುತ್ತದಷ್ಟೇ.