ಬೆಳಗಾವಿ: ಕಲುಷಿತ ನೀರು ಸೇವನೆಯಿಂದ ಸುಮಾರು 94 ಮಂದಿ ಅಸ್ಥವ್ಯಸ್ಥಗೊಂಡು, ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆದಿದೆ. ಮೃತ ಪಟ್ಟವರು ಶಿವಪ್ಪ (70) ಎಂದು ಗುರುತಿಸಲಾಗಿದೆ.
ಮುದೇನೂರು ಗ್ರಾಮದ ಕುಡಿಯುವ ನೀರಿನ ಪೈಪ್ ಒಡೆದು ಚರಂಡಿ ನೀರು ಸೇರಿ ಕಲುಷಿತಗೊಂಡಿತ್ತು. ಕಲುಷಿತಗೊಂಡಿದ್ದ ನೀರು ಮನೆಗಳಿಗೆ ಸರಬರಾಜಾದ್ದರಿಂದ ಕೇವಲ 4 ದಿನಗಳ ಅಂತರದಲ್ಲಿ 94 ಜನರು ಅಸ್ವಸ್ಥಗೊಂಡಿದ್ದಾರೆ. ಈ ಪೈಕಿ 44 ಪುರುಷರು, 30 ಮಹಿಳೆಯರು, 12 ಬಾಲಕರು, 8 ಬಾಲಕಿಯರು ಇದ್ದಾರೆ. ಬಹುತೇಕರಿಗೆ ವಾಂತಿ-ಬೇಧಿ ಸಮಸ್ಯೆ ಕಾಡುತ್ತಿದೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿರಬೇಕಾದ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಆತಂಕ ಉಂಟಾಗಿದೆ. ಕಲುಷಿತ ನೀರು ಸೇವಿಸಿ ಮೃತಪಟ್ಟ ಶಿವಪ್ಪ ತೀವ್ರವಾಗಿ ಅಸ್ವಸ್ಥರಾಗಿದ್ದರಿಂದ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಸೇರಿಸಲಾಯಿತು.
ಅಸ್ವಸ್ಥಗೊಂಡಿರುವವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ‘ಆಸ್ಪತ್ರೆಗೆ ಕರೆತಂದಿರುವವರಿಗೆ ಉತ್ತಮ ಚಿಕಿತ್ಸೆ ಒದಗಿಸುತ್ತಿದ್ದೇವೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಜಿಲ್ಲಾಸ್ಪತ್ರೆ ಆರೋಗ್ಯಾಧಿಕಾರಿ ಡಾ ಪ್ರಕಾಶ್ ಬಿರಾದಾರ್ ಮಾಹಿತಿ ನೀಡಿದರು.
ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಚಿಕಿತ್ಸಾ ವ್ಯವಸ್ಥೆ ಮಾಡುವಂತೆ ರಾಮದುರ್ಗದ ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಆರೋಪಿಸಲಾಗುತ್ತಿದೆ. ಜಿಲ್ಲಾ ಹಿರಿಯ ಆರೋಗ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಬೆಳಗಾವಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಜಲಜೀವನ ಮಿಷನ್ ಅಡಿ ಕುಡಿಯುವ ನೀರು ಒದಗಿಸುವ ಯೋಜನೆಗಾಗಿ ಒಟ್ಟು 960 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದರು. ಈ ಯೋಜನೆ ಘೋಷಣೆ ಬೆನ್ನಲ್ಲೇ ದುರ್ಘಟನೆ ಸಂಭವಿಸಿದೆ.
ರೂ. 10 ಲಕ್ಷ ಪರಿಹಾರ ಘೋಷಣೆ
ಘಟನೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ, ಕೆಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲಿ 70 ವರ್ಷದ ವೃದ್ಧ ಶಿವಪ್ಪ ಎನ್ನುವವರು ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಜಿಲ್ಲೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಶಿವಪ್ಪ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಪರಿಹಾರ ವಿತರಣೆ ಕುರಿತು ಜಿಲ್ಲಾಡಳಿತಕ್ಕೆ ಕ್ರಮವಹಿಸಲು ತಿಳಿಸಲಾಗಿದೆ ಎಂದರು.