ಕೊಪ್ಪಳ: ಜನರು ಜಾತ್ರೆ, ಪರಿಷೆಗಳಿಗಾಗಿ ದೇಣಿಗೆ ಕೊಡುತ್ತಾರೆ. ಜನರು ಕೊಟ್ಟ ದೇಣಿಗೆ ಹಣ, ಭಕ್ತಿಯ ಕಾಣಿಕೆಗಳನ್ನು ಬಳಕೆ ಮಾಡಿಕೊಂಡು ಜಾತ್ರೆ, ಪರಿಷೆ ನಡೆದ ಬಳಿಕ ಉಳಿಕೆ ಹಣವನ್ನು ಸಂಬಂಧಿಸಿದ ಗುಡಿ ಗುಂಡಾರಗಳ ಹೆಸರಿನಲ್ಲಿಡುವುದನ್ನು ನೋಡಿದ್ದೇವೆ. ಆದರೆ ಇದಕ್ಕೆ ಅಪವಾದ ಎಂಬಂತೆ ಇಲ್ಲೊಂದು ಗ್ರಾಮದ ಜನರು ಜಾತ್ರೆಯ ಉಳಿಕೆಯ ಹಣವನ್ನು ಶಿಕ್ಷಣಕ್ಕೆ ವಿನಿಯೋಗಿಸುವ ಮೂಲಕ ಅಕ್ಷರ ಜ್ಯೋತಿ ಬೆಳಗಿಸಿದ್ದಾರೆ. ಕೊಪ್ಪಳ
ಅದೆಷ್ಟೋ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಶಾಲಾ ಕೊಠಡಿಗಳ ಕೊರತೆ ಇದೆ. ನಮ್ಮೂರಿನ ಶಾಲೆಗೆ ಕೊಠಡಿಗಳನ್ನು ನಿರ್ಮಾಣ ಮಾಡಿಕೊಡಿ ಎಂದು ಸರ್ಕಾರಕ್ಕೆ ಕೇಳಿದರೂ ಅದು ಬೇಡಿಕೆಯಾಗಿಯೇ ಉಳಿದ ಉದಾಹರಣೆಗಳಿವೆ. ಕೊಪ್ಪಳ
ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದ ಜಿಲ್ಲೆಯ ಕುಷ್ಟಗಿ ತಾಲೂಕಿನ ಗ್ರಾಮಸ್ಥರು ಈಗ ತಮ್ಮೂರಿನ ಸರ್ಕಾರಿ ಶಾಲೆಗೆ ಸುಮಾರು 20 ಲಕ್ಷ ರೂಪಾಯಿ ಖರ್ಚು ಮಾಡಿ ಮೂರು ಕೊಠಡಿಗಳನ್ನು ನಿರ್ಮಾಣ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಈ ಮೂರು ಕೊಠಡಿಗಳನ್ನು ನಿರ್ಮಾಣ ಮಾಡಲು ಬಳಕೆ ಮಾಡಿಕೊಂಡಿರುವ ಹಣ ಅದು ಜಾತ್ರೆಯಲ್ಲಿನ ಉಳಿಕೆ ಹಣ ಎಂಬುದು ವಿಶೇಷ.
ಇದನ್ನೂ ಓದಿ: ನವದೆಹಲಿ| ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ
ವಣಗೇರಿ ಗ್ರಾಮದ ಗ್ರಾಮದೇವತೆಯಾಗಿರುವ ಶಿವನಮ್ಮದೇವಿಯ ಜಾತ್ರೆ ಇತ್ತೀಚಿಗೆ ಜರುಗಿತ್ತು. ಜಾತ್ರೆಗಾಗಿ ಗ್ರಾಮಸ್ಥರು ದೇಣಿಗೆಯನ್ನು ಸಂಗ್ರಹಿಸಿದ್ದಾರೆ. ಸಂಗ್ರಹವಾದ ದೇಣಿಗೆ ಹಣದಲ್ಲಿ ದೇವಿಯ ಜಾತ್ರೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. ಅದಾದ ಬಳಿಕವೂ ಜಾತ್ರೆಗಾಗಿ ಸಂಗ್ರಹಿಸಿದ ದೇಣಿಗೆಯಲ್ಲಿ ಹಣ ಉಳಿಕೆಯಾಗಿದೆ. ಆಗ ಗ್ರಾಮಸ್ಥರು ಉಳಿಕೆ ಹಣವನ್ನು ಏನು ಮಾಡುವುದು ಎಂದು ಯೋಚಿಸಿದಾಗ ತಮ್ಮೂರ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ಕೊರತೆಯನ್ನು ನೀಗಿಸುವ ನಿರ್ಧಾರಕ್ಕೆ ಬಂದಿದ್ದಾರೆ.
“ದೇಗುಲದ ಜಾತ್ರೆಯ ಉಳಿಕೆ ಹಣದಿಂದ ಜ್ಞಾನ ದೇಗುಲ ಕಟ್ಟುವ ಮೂಲಕ ಮಾದರಿಯಾಗಿದ್ದಾರೆ. ಶಾಲಾ ಕೊಠಡಿಗಳ ಸಮಸ್ಯೆ ಬಗೆಹರಿಸುವಂತೆ ಸಾಕಷ್ಟು ಬಾರಿ ಸಂಬಂಧಿಸಿದವರಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಗ್ರಾಮಸ್ಥರೇ ಈ ನಿರ್ಧಾರ ಮಾಡಿ ಕೊಠಡಿಗಳನ್ನು ಕಟ್ಟಿಸಿದ್ದೇವೆ” ಎನ್ನುತ್ತಾರೆ ವಣಗೇರಿ ಗ್ರಾಮದ ಮುಖಂಡರು.
“ದೇವರ ಉತ್ಸವ, ಪರಿಷೆಗಳಿಗಾಗಿ ಸಂಗ್ರಹವಾದ ದೇಣಿಗೆಯನ್ನು ರಾಮನ ಲೆಕ್ಕ, ಕೃಷ್ಣನ ಲೆಕ್ಕ ತೋರಿಸಿ ಗುಳುಂ ಮಾಡುವ ಈ ಕಾಲದಲ್ಲಿ ಜಾತ್ರೆಯ ಉಳಿಕೆ ಹಣವನ್ನು ಜ್ಞಾನ ದೇಗುಲ ನಿರ್ಮಾಣ ಮಡಿರುವ ಗ್ರಾಮಸ್ಥರ ಕಾರ್ಯ ಅವರ ಶಿಕ್ಷಣದ ಪ್ರೀತಿಯನ್ನು ತೋರಿಸುತ್ತದೆ. ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಇಲಾಖೆಯೊಂದಿಗೆ ಸಾರ್ವಜನಿಕರು, ಯುವ ಮಿತ್ರರು, ಸಂಘ ಸಂಸ್ಥೆಗಳು ಕೈ ಜೋಡಿಸಬೇಕು. ನಮ್ಮ ತಾಲೂಕಿನ ವಣಗೇರಿ ಗ್ರಾಮಸ್ಥರ ಈ ಕಾರ್ಯ ಇತರೆ ಗ್ರಾಮಗಳಿಗೂ ಮಾದರಿಯಾಗಿದೆ” ಎಂದು ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ: ಕೊಪ್ಪಳ ಬಂದ್ | ಕಾರ್ಖಾನೆ ಸ್ಥಾಪನೆಗೆ ವಿರೋಧ Janashakthi Media