ಸಂವಿಧಾನ ತಿದ್ದುಪಡಿ ಪುನರುಚ್ಚರಿಸಿದ ಮತ್ತೊಬ್ಬ ಬಿಜೆಪಿ ನಾಯಕ

ಉತ್ತರಪ್ರದೇಶ : ಅತ್ತ ಸಂವಿಧಾನ ವಿರೋಧಿ ನೀತಿಗಳು ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್‌ ತರಬಲ್ಲವು ಎಂಬುದರ ಸೂಚನೆ ಸಿಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಎಚ್ಚೆತ್ತುಕೊಂಡಂತೆ ಮೇಲ್ನೋಟಕ್ಕೆ ಕಂಡರೂ ಕೂಡ ಬಿಜೆಪಿಯ ಇನ್ನೂ ಕೆಲವು ನಾಯಕರು ಮಾತ್ರ ಸಂವಿಧಾನವನ್ನು ಬದಲಾಯಿಸುವ ಹೇಳಿಕೆ ನೀಡುವುದರಿಂದ ಹೊರಬರುವಂತೆ ಕಾಣಿಸುತ್ತಿಲ್ಲ.

ಉತ್ತರಪ್ರದೇಶದ ಫೈಜಾಬಾದ್‌ ಸಂಸದ ಮತ್ತೊಮ್ಮೆ ಸಂಸದರಾಗಲು ಬಯಸಲು ಹೊರಟಿರುವ ಲಲ್ಲುಸಿಂಗ್‌ ಇದೀಗ ಇಂತಹ ಸಂವಿಧಾನದ ವಿರೋಧಿ ಹೇಳಿಕೆಗೆ ಗುರಿಯಾಗಿದ್ದಾರೆ. ಹೇಳಿಕೇಳಿ ಉತ್ತರಪ್ರದೇಶ ಯೋಗಿಆದಿತ್ಯನಾಥ್‌ ಸರ್ಕಾರವಿರುವ ರಾಜ್ಯ. ಈ ರಾಜ್ಯದಲ್ಲಿ ಈಗ ಸಂವಿಧಾನದ ವಿರೋಧದ ಹೇಳಿಕೆ ನೀಡಿ ಲಲ್ಲುಸಿಂಗ್‌ ವಿವಾದಕ್ಕೆ ಗುರಿಯಾಗಿದ್ದಾರೆ. ಬಿಜೆಪಿ ಪಕ್ಷ ಮೂರನೇ ಎರಡರಷ್ಟು ಬಹುಮತವನ್ನು ಈ 2024ರ ಚುನಾವಣೆಯಲ್ಲಿ ಪಡೆಯಲಿದ್ದು, ಇದರಿಂದ ನಾವು ಸಂವಿಧಾನವನ್ನು ತಿದ್ದುಪಡಿ ಮಾಡಬಹುದು ಎಂದಿದ್ದಾರೆ . ಕಳೆದ ಎರಡು ತಿಂಗಳಲ್ಲಿ ಹೀಗೆ ಹೇಳುತ್ತಿರುವ ಭಾರತೀಯ ಜನತಾ ಪಕ್ಷದ ಮೂರನೇ ನಾಯಕ ಈ ಲಲ್ಲುಸಿಂಗ್.‌

ಬಿಜೆಪಿ ನಾಯಕರಾದ ಅನಂತ್ ಕುಮಾರ್ ಹೆಗ್ಡೆ ಮತ್ತು ಜ್ಯೋತಿ ಮಿರ್ಧಾ ನಂತರ, ಈಗ ಫೈಜಾಬಾದ್‌ನ ಹಾಲಿ ಬಿಜೆಪಿ ಸಂಸದ ಲಲ್ಲು ಸಂವಿಧಾನವನ್ನು ತಿದ್ದುಪಡಿ ಮಾಡಬಹುದು ಎಂದಿದ್ದಾರೆ.

ವರದಿಯ ಪ್ರಕಾರ, ಏಪ್ರಿಲ್ 13 ರಂದು ಮಿಲ್ಕಿಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಿಂಗ್ ಹೀಗೆ ಹೇಳಿದ್ದಾರೆ ಎಂದು ವರದಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ವೈರಲ್ ಆಗಿವೆ. ಕಾರ್ಯಕ್ರಮದ ವಿಡೀಯೋದಲ್ಲಿ, 272 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸರ್ಕಾರ ರಚಿಸಬಹುದು. ಆದರೆ 272 ಸ್ಥಾನಗಳೊಂದಿಗೆ ರಚನೆಯಾದ ಸರ್ಕಾರವು ಸಂವಿಧಾನವನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಸಿಂಗ್ ಹೇಳುವುದನ್ನು ಕೇಳಬಹುದು.’ಅದಕ್ಕಾಗಿ ಅಥವಾ ಹೊಸ ಸಂವಿಧಾನವನ್ನು ಮಾಡಬೇಕಾದರೆ, ಮೂರನೇ ಎರಡರಷ್ಟು ಬಹುಮತ ಬೇಕಾಗುತ್ತದೆ. ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಅಯೋಧ್ಯೆ ವಿಧಾನಸಭಾ ಕ್ಷೇತ್ರವೂ ಸೇರಿದೆ. ಸಂಸದರಾಗುವ ಮೊದಲು ಸಿಂಗ್‌ ಅಯೋಧ್ಯೆಯಿಂದ ಐದು ಬಾರಿ ಶಾಸಕರಾಗಿದ್ದರು.

ದಿ ಪ್ರಿಂಟ್ ವರದಿಯ ಪ್ರಕಾರ, ಸಿಂಗ್ ನಂತರ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಲು ಲಲ್ಲು ಸಿಂಗ್‌ ಪ್ರಯತ್ನ ಮಾಡಿದ್ದು, ನಾಲಿಗೆ ಜಾರಿದಕ್ಕೆ ಹೀಗಾಗಿದೆ. ನಾನು ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದು, ದೇಶದ ಹಿತದ ಬಗ್ಗೆ ಈ ರೀತಿ ಮಾತನಾಡುವ ಅಭ್ಯಾಸವಿದೆ. ನಮ್ಮ ದೇಶವನ್ನು ಶ್ರೇಷ್ಠವಾಗಿಸಲು ನಾವು ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿ ಸಂವಿಧಾನದ ತಿದ್ದುಪಡಿಯನ್ನು ಮಾಡಬೇಕಾಗಬಹುದು ಸರ್ಕಾರ ರಚನೆಗೆ ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಾನು ಹೇಳುತ್ತಿದ್ದೆ ಎಂದಿದ್ದಾರೆ.

ಅರುಣ್‌ ಗೋವಿಲ್ ಮಾತನಾಡಿ, ‘ನಮ್ಮ ದೇಶದ ಸಂವಿಧಾನ ರಚನೆಯಾದಾಗ ಅದು ಸಂದರ್ಭಕ್ಕೆ ತಕ್ಕಂತೆ ಕ್ರಮೇಣ ಬದಲಾಗುತ್ತಿತ್ತು. ಬದಲಾವಣೆಗಳನ್ನು ಮಾಡುವುದು ಪ್ರಗತಿಯ ಸಂಕೇತವಾಗಿದೆ, ಅದರಲ್ಲಿ ಕೆಟ್ಟದ್ದೇನೂ ಇಲ್ಲ. ಅಂದಿನ ಸಂದರ್ಭಗಳೇ ಬೇರೆ, ಇಂದಿನ ಸಂದರ್ಭಗಳೇ ಬೇರೆ. ಸಂವಿಧಾನವು ಯಾವುದೇ ವ್ಯಕ್ತಿಯ ಇಚ್ಛೆಯಂತೆ ಬದಲಾಗುವುದಿಲ್ಲ, ಒಮ್ಮತ ಬಂದಾಗ ಮಾತ್ರ ಬದಲಾಗುತ್ತದೆ, ಈ ರೀತಿ ಏನಾದರೂ ಸಂಭವಿಸಿದರೆ ಅದು ಆಗುತ್ತದೆ.

ಇದನ್ನು ಓದಿ : ನಾಡನ್ನೇ ಸರ್ವನಾಶ ಮಾಡಿದ ಬಿಜೆಪಿ ಉಳಿಯುವ ಸಾಧ್ಯತೆ ಇಲ್ಲ – ಪರಕಾಲ ಪ್ರಭಾಕರ್

ಇದಕ್ಕೂ ಮುನ್ನ ಬಿಜೆಪಿ ನಾಯಕರಾದ ಅನಂತ್ ಕುಮಾರ್ ಹೆಗಡೆ ಮತ್ತು ಜ್ಯೋತಿ ಮಿರ್ಧಾ ಅವರು ಸಂವಿಧಾನ ತಿದ್ದುಪಡಿ ಬಗ್ಗೆ ಮಾತನಾಡಿದ್ದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ ಟ್ವಿಟರ್‌ನಲ್ಲಿ, ‘ಹೊಸ ಸಂವಿಧಾನವನ್ನು ರಚಿಸುವ ಮೂಲಕ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರಿಗೆ ನೀಡಲಾದ ಮೀಸಲಾತಿಯನ್ನು ಕೊನೆಗೊಳಿಸಲು ಬಿಜೆಪಿ ಗೆಲ್ಲಲು ಬಯಸುತ್ತದೆ, ಸಾರ್ವಜನಿಕರ ಸೇವೆಗಾಗಿ ಅಥವಾ ಅದರ ಕಲ್ಯಾಣಕ್ಕಾಗಿ ಅಲ್ಲ. ಭೀಮರಾವ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬಾಬಾ ಸಾಹೇಬರು ಬದಲಾಯಿಸಬಹುದಷ್ಟೇ ಎಂದಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, ಅಖಿಲೇಶ್ ಯಾದವ್, ಅರುಣ್ ಗೋವಿಲ್ ಅವರ ವೀಡಿಯೊವನ್ನು ಹಂಚಿಕೊಂಡು ‘ವಾಸ್ತವವಾಗಿ, ಸಂವಿಧಾನವನ್ನು ಉರುಳಿಸುವ ಮೂಲಕ ಬಿಜೆಪಿ ಬಡವರು, ವಂಚಿತರು, ಶೋಷಿತರು, ರೈತರು, ಯುವಕರು ಮತ್ತು ಮಹಿಳೆಯರ ಹಕ್ಕುಗಳು ಮತ್ತು ಮೀಸಲಾತಿಗಳನ್ನು ನಾಶಪಡಿಸುತ್ತಿದೆ. ಬಂಡವಾಳಶಾಹಿಗಳ ಪರವಾಗಿ ನೀತಿಗಳು ಮತ್ತು ಯೋಜನೆಗಳನ್ನು ಮಾಡುವ ಮೂಲಕ ತನ್ನ ಶಿಬಿರದಲ್ಲಿ ಕೆಲವು ಆಯ್ದ ಬಿಲಿಯನೇರ್‌ಗಳಿಗೆ ಎಲ್ಲಾ ಲಾಭವನ್ನು ನೀಡಲು ಬಯಸಿದೆ.

ಚುನಾವಣಾ ದೇಣಿಗೆ ಹೆಸರಿನಲ್ಲಿ ಬಿಜೆಪಿಗೆ ತಮ್ಮ ಭಾರೀ ಲಾಭದ ಭಾಗವನ್ನು ಯಾರು ನೀಡುತ್ತಾರೆ? ನಿಜವಾದ ಅರ್ಥದಲ್ಲಿ, ಇದು ಸಾರ್ವಜನಿಕರಿಂದ ಹಣ ವಸೂಲಿ ಮಾಡುವ ವಿಧಾನವಾಗಿದೆ ಏಕೆಂದರೆ ಯಾವುದೇ ಬಂಡವಾಳಶಾಹಿ ತನ್ನ ಸ್ವಂತ ಜೇಬಿನಿಂದ ನೀಡುವುದಿಲ್ಲ, ಅವನು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುವ ಮೂಲಕ ಬಿಜೆಪಿಯ ಪಕ್ಷ ಮತ್ತು ವೈಯಕ್ತಿಕ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತದೆ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ವಿಪಕ್ಷ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪ್ರಚಾರವು ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನವು ಕೇಂದ್ರದ ಆಡಳಿತ ಪಕ್ಷದಿಂದ ಅಸ್ತಿತ್ವದ ಬೆದರಿಕೆಯನ್ನು ಎದುರಿಸುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್, ‘ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನದಂದು ಮಾತನಾಡಿ, ಬಿಜೆಪಿಯವರು ರಚಿಸಿದ ಸಂವಿಧಾನವನ್ನು ಹಾಳು ಮಾಡಲು ಷಡ್ಯಂತ್ರ ನಡೆಸುತ್ತಿದ್ದಾರೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಧಾನಮಂತ್ರಿಯೇ ವೇದಿಕೆಯ ಮೇಲಿಂದ ಒಂದು ಮಾತನ್ನು ಹೇಳುತ್ತಾ ತನ್ನ ನಾಯಕರನ್ನು ಮತ್ತೇನನ್ನೋ ಹೇಳುವಂತೆ ಮಾಡುತ್ತಾರೆ. ಉದ್ದೇಶ ಸ್ಪಷ್ಟ – ಈ ಬಾರಿ ಅವರಿಗೆ ಅವಕಾಶ ಸಿಕ್ಕರೆ ಬಾಬಾ ಸಾಹೇಬರ ಸಂವಿಧಾನಕ್ಕೆ ದೊಡ್ಡ ಅಪಾಯ. ಕಾಂಗ್ರೆಸ್ ಮುಖಂಡ ಪವನ್ ಖೇಡ ಮಾತನಾಡಿ, ‘ಇಂದು ಅಂಬೇಡ್ಕರ್ ಜಯಂತಿ ಇದ್ದು, ಬಿಜೆಪಿ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದೆ.

ಸಂವಿಧಾನ ಬದಲಿಸುವ ಆರೆಸ್ಸೆಸ್-ಬಿಜೆಪಿಯ ಉದ್ದೇಶವನ್ನು ಅವರು ಬಯಲಿಗೆಳೆದಿದ್ದಾರೆ. ಇದನ್ನು ಯಾರು ಹೇಳಿದರೂ ಅದು ಆರ್‌ಎಸ್‌ಎಸ್ ಮತ್ತು ಮೋದಿಯ ಕಾರಣವನ್ನು ಪ್ರತಿನಿಧಿಸುತ್ತದೆ. ಅಂಬೇಡ್ಕರ್ ಅವರ ಸಂವಿಧಾನವನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುವ ಅವರು, ಸಂವಿಧಾನದ ಉದ್ಘಾಟನೆಯ ವೇಳೆ ಆರ್ ಎಸ್ ಎಸ್ ನವರು ಸಂವಿಧಾನದ ಪ್ರತಿಗಳನ್ನು ಸುಟ್ಟು ಹಾಕಿದ್ದರು ಎಂಬುದು ಆಧಾರ ರಹಿತ ಆರೋಪವಲ್ಲ ಎಂದು ಬಿಜೆಪಿಯ ವಿರುದ್ಧ ಕುಟುಕಿದ್ದಾರೆ.

ಒಟ್ಟಾರೆ ಸಂವಿಧಾನವನ್ನು ಬದಲಿಸುವ ಬಿಜೆಪಿಯ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಯಾರೂ ಬಂದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಇತ್ತೀಚಿಗಷ್ಟೇ ಚುನಾಣಾ ದೃಷ್ಟಿಯಿಂದ ಹೇಳಿಕೆ ನೀಡಿರುವ ಪ್ರಧಾನಿ ಮೋದಿ ಇದಕ್ಕೆ ಉತ್ತರಿಸುವರೇ?ಎಂಬ ಪ್ರಶ್ನೆ ಹುಟ್ಟಿದೆ.

ಇದನ್ನು ನೋಡಿ : ಹುಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಬಿಜೆಪಿಯನ್ನು ಸೋಲಿಸಿ – ವಸುಂಧರಾ ಭೂಪತಿ Janashakthi Media

Donate Janashakthi Media

Leave a Reply

Your email address will not be published. Required fields are marked *