ಬಳ್ಳಾರಿ: ಕಾನ್‌ಸ್ಟೇಬಲ್ ಒಬ್ಬನ್ನು ದೂರು ನೀಡಲು ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿಸಲಾಗಿದೆ.
ಪತಿಯಿಂದ ಅನ್ಯಾಯವಾಗಿದೆ ಎಂದು ನ್ಯಾಯ ಕೋರಿ ಠಾಣೆಗೆ ದೂರು ನೀಡಲು ಬಂದ ಮಹಿಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಕಾನ್‌ಸ್ಟೇಬಲ್ ಒಬ್ಬನನ್ನು ಬುಧವಾರ ಬಂಧಿಸಲಾಗಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.
ಇದು ಬಳ್ಳಾರಿಯಲ್ಲಿನಡೆದಿದೆ. ನಗರದ ಸಂಚಾರ ಠಾಣೆಯ ಕಾನ್‌ಸ್ಟೇಬಲ್ ಆಜಾದ್ ಬಂಧಿತ ಆರೋಪಿ. ನಗರದ ಕೌಲ್ ಬಜಾರ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸೈಯದ್ ಇಮ್ರಾನ್ ಪರಾರಿಯಾಗಿದ್ದಾನೆ. ಈತನ ಬಂಧನಕ್ಕಾಗಿ ಬಲೆ ಬೀಸಲಾಗಿದೆ. ಸಂಸಾರದಲ್ಲಿ ಬಿರುಕು ಮೂಡಿ, ಪತಿಯ ವಿರುದ್ಧ ದೂರು ನೀಡಲು ಬಂದ ನೊಂದ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಮಾಡಿದ ಆರೋಪದಲ್ಲಿ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಅತ್ಯಾಚಾರ ಪ್ರಕರಣದಲ್ಲಿ ಜಾಮೀನು; ತನ್ನ ವಿರುದ್ಧ ಸಾಕ್ಷಿ ಹೇಳದಂತೆ ಬಾಲಕಿಯನ್ನು ಕೊಂದ ಆರೋಪಿ
ನಗರದ ಬಂಡಿಹಟ್ಟಿ ವೃತ್ತದ ಪದ್ಮಶ್ರೀ ಕಾಲನಿಯ 35 ವರ್ಷದ ಮಹಿಳ ತನ್ನ ಪತಿ ವಿರುದ್ಧ ಕೌಲ್ ಬಜಾರ್ ಠಾಣೆಯಲ್ಲಿ 2023ರ ಎಪ್ರಿಲ್ 19ರಂದು ದೂರು ನೀಡಲು ತೆರಳಿದ್ದರು. ಈ ವೇಳೆ ಠಾಣೆಯಲ್ಲಿದ್ದ ಹೆಡ್ ಕಾನ್‌ಸ್ಟೇಬಲ್ ಸೈಯದ್ ಇಮ್ರಾನ್, ಈ ಪ್ರಕರಣವು ಮಹಿಳಾ ಠಾಣಾ ವ್ಯಾಪ್ತಿಗೆ ಬರಲಿದ್ದು, ಸಹಾಯ ಮಾಡುವುದಾಗಿ ನೊಂದ ಮಹಿಳೆಯ ಮೊಬೈಲ್ ನಂಬರ್ ಪಡೆದಿದ್ದ. ನಂತರ ಎಪ್ರಿಲ್ 20ರಂದು ಮಹಿಳೆಗೆ ತನ್ನ ಪತಿ ಪುನಃ ಮನೆ ಖಾಲಿ ಮಾಡುವಂತೆ ಗಲಾಟೆ ಮಾಡಿದಾಗ ನೊಂದ ಮಹಿಳೆಯು ಸೈಯದ್ ಇಮ್ರಾನ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಈ ವೇಳೆ ಇಮ್ರಾನ್ 15 ಸಾವಿರ ಧನಸಹಾಯ ಮಾಡಿದ್ದಾರೆ. ಬಳಿಕ ಆ ಹಣದಲ್ಲಿ ಮಹಿಳೆ ಕೌಲ್ ಬಜಾರ್‌ನಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ವಾಸವಾಗಿದ್ದಳು. ಈ ವೇಳೆ ಆರೋಪಿ ಇಮ್ರಾನ್ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಆಕೆಯನ್ನು ಐದು ತಿಂಗಳ ಕಾಲ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ.
ನಂತರ ಬಳ್ಳಾರಿ ಸಂಚಾರ ಠಾಣೆಯ ಸಿಬ್ಬಂದಿ ಆಜಾದ್ ನೊಂದ ಮಹಿಳೆಗೆ ಎರಡು ತಿಂಗಳೊಳಗೆ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಆತನೂ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಈ ಇಬ್ಬರು ಮದುವೆ ಮಾಡಿಕೊಳ್ಳದೇ ನಂಬಿಕೆ ದ್ರೋಹ ಎಸಗಿದ್ದಾರೆಂದು ಮಹಿಳೆಯು ನಗರದ ಮಹಿಳಾ ಠಾಣೆಗೆ ಬುಧವಾರ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ಮತ್ತೊಬ್ಬನನ್ನು ಹುಡುಕಲಾಗುತ್ತಿದೆ.
ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಕೇಳಿಬಂದ ಬೆನ್ನಲ್ಲೇ ಆ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಶೋಭಾರಾಣಿ ತಿಳಿಸಿದ್ದಾರೆ.
ಇದನ್ನೂ ನೋಡಿ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡ: ಹಿಂದುಳಿದ ಜಾತಿಗಳ ಒಕ್ಕೂಟ ಮನವಿ Janashakthi Media