ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆ (Animal Care and Management)ಯ 10 ತಿಂಗಳುಗಳ ಡಿಪ್ಲೊಮಾ ಕೋರ್ಸ್ ಆರಂಭಕ್ಕೆ ಅರಣ್ಯ ಇಲಾಖೆ ತಾತ್ವಿಕ ಅನುಮೋದನೆ ನೀಡಿದೆ.
ವಿಕಾಸಸೌಧದಲ್ಲಿನ ಅರಣ್ಯ ಸಚಿವರ ಕಚೇರಿಯಲ್ಲಿ ಈ ಕುರಿತು ಸಭೆ ನಡೆದಿದ್ದು, ಸಭೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಾತ್ವಿಕ ಅನುಮೋದನೆ ನೀಡಿದ್ದಾರೆ.
ಇದನ್ನೂ ಓದಿ: ಯಾವುದೇ ತನಿಖೆಗೂ ಸಿದ್ದ: ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್
ಮೃಗಾಲಯ ಪ್ರಾಧಿಕಾರದ 156ರ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮೃಗಾಲಯಗಳಲ್ಲಿ ವನ್ಯಜೀವಿಗಳ ಆರೈಕೆಗೆ ನುರಿತ ಸಿಬ್ಬಂದಿಯ ಅಗತ್ಯವಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಬೆಂಗಳೂರಿನ ಲೈಫ್ ಸೈನ್ಸ್ ಎಡ್ಯುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಈ ಕೋರ್ಸ್ ಆರಂಭಿಸಲು ತಾತ್ವಿಕ ಅನುಮೋದನೆ ನೀಡಿದ್ದಾರೆ.
ಈ ಡಿಪ್ಲೊಮಾ ಪದವಿ ಪಡೆದವರಿಗೆ ಉದ್ಯೋಗಾವಕಾಶಗಳು ಲಭಿಸುವಂತಿರಬೇಕು. ದೀರ್ಘಕಾಲ ಈ ಕೋರ್ಸ್ ಪ್ರಾಮುಖ್ಯತೆ ಪಡೆಯುವಂತಿರಬೇಕು, ಈ ನಿಟ್ಟಿನಲ್ಲಿ ಪಠ್ಯಕ್ರಮ ಮತ್ತು ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ರೂಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಾಧಕ ಬಾಧಕ ಚರ್ಚಿಸಿ ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಲು ಸೂಚಿಸಲಾಯಿತು.
ಪ್ರಾಣಿಗಳ ಆರೈಕೆ ಹಾಗೂ ನಿರ್ವಹಣೆ ಮಾಡಲು ಆಸಕ್ತ ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ ವನ್ಯಜೀವಿ ಮತ್ತು ಸಾಕುಪ್ರಾಣಿಗಳ ಸಂರಕ್ಷಣೆ, ನಿರ್ವಹಣೆ, ಆರೈಕೆ ಕುರಿತಂತೆ ಅಗತ್ಯ ಜ್ಞಾನ ಮತ್ತು ಕೌಶಲ ನೀಡುವ ಈ ಡಿಪ್ಲೊಮಾ ಕೋರ್ಸ್ ಪಡೆದವರು ಮೃಗಾಲಯಗಳಲ್ಲಿ, ಪುನರ್ವಸತಿ ಕೇಂದ್ರಗಳಲ್ಲಿ ಪ್ರಾಣಿಪಾಲಕರಾಗಿ ಕೆಲಸ ನಿರ್ವಹಿಸಬಹುದು. ಅದೇ ರೀತಿ ಖಾಸಗಿಯಾಗಿಯೂ ಸಾಕು ಪ್ರಾಣಿಗಳ ಆರೈಕೆ ಕೇಂದ್ರಗಳನ್ನು ನಡೆಸಬಹುದು. ಶಾಲಾ, ಕಾಲೇಜುಗಳಲ್ಲಿ ಪ್ರಾಣಿ ಆರೈಕೆಯ ತರಬೇತಿ ನೀಡಬಹುದು ಎಂದು ಸಭೆಗೆ ತಿಳಿಸಲಾಯಿತು.
ಇದನ್ನೂ ನೋಡಿ: ಲೋಕಸಭೆ ಚುನಾವಣೆ 2024: ಹಲವು ಕ್ಷೇತ್ರಗಳಲ್ಲಿ NOTA ಮತದಾನ ಪ್ರಮಾಣ ಹೆಚ್ಚು!Janashakthi Media