ಸತತ ರೂಪಾಯಿ ಕುಸಿತ ಮತ್ತು ಡಾಲರ್ ಬಲವರ್ಧನೆ, ಏಕೆ?

ಯುಎಸ್ ಡಾಲರಿಗೆ ಎದುರಾಗಿ ರೂಪಾಯಿ ಕುಸಿಯುತ್ತಲೇ ಸಾಗಿದೆ-2014ರಲ್ಲಿ ‘ಅಚ್ಛೇ ದಿನ್’ ಆರಂಭದಲ್ಲಿ 62..33 ರೂ. ಇದ್ದದ್ದು ಜನವರಿ 13ರಂದು 86.12 ರೂ.ಗಳಷ್ಟಾಗಿದೆ. ಈ ಕುಸಿತ ಉಂಟಾಗಿರುವುದು ಭಾರತದಲ್ಲಿ ಹಣದುಬ್ಬರ ದರವು ಯುಎಸ್‌ಗಿಂತ ಹೆಚ್ಚಿನ ಮಟ್ಟದಲ್ಲಿದೆ ಎಂಬ ಕಾರಣದಿಂದಲ್ಲ. ಡಾಲರ್, ರೂಪಾಯಿಯ ಎದುರಿಗೆ ಮಾತ್ರವಲ್ಲ, ವಿಶ್ವದ ಪ್ರಮುಖ ಕರೆನ್ಸಿಗಳ ಎದುರಿಗೂ ಬಲಗೊಂಡಿದೆ, ಅಷ್ಟೇ ಅಲ್ಲ, ಕಳೆದ ದಶಕದ ಯಾವುದೇ ಸಮಯದಲ್ಲೂ ಇದ್ದಿರದಷ್ಟು ಬಲಗೊಂಡಿದೆ ಎನ್ನಲಾಗುತ್ತಿದೆ. ಏಕೆ? ಇದಕ್ಕೆ ಸರಳ ಉತ್ತರ-ಮುಕ್ತ ವ್ಯಾಪಾರದ ‘ಸದ್ಗುಣ’ಗಳ ಬಗ್ಗೆ ಐಎಂಎಫ್- ವಿಶ್ವಬ್ಯಾಂಕ್-ಡಬ್ಲ್ಯುಟಿಒ ನೀಡುವ ಉಪದೇಶಗಳು ಅವು ಹೇಳುವ ಏನನ್ನು ಬೇಕಾದರೂ ನಂಬುವ ಮೂರನೇ ಜಗತ್ತಿನ ರಾಜಕಾರಣಿಗಳ ಕಿವಿಗೆ ಮಾತ್ರ ಇಂಪಾಗಿರುತ್ತವೆ, ಆದರೆ ಸ್ವತಃ ಮಾರುಕಟ್ಟೆಯೇ ಈ ಉಪದೇಶಗಳನ್ನು ಕಿವಿಗೆ ಹಾಕಿಕೊಳ್ಳುವುದೇ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಈ ಮೂಲಕ ವಿಶ್ವ ಅರ್ಥವ್ಯವಸ್ಥೆಯಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಮೂಲಭೂತ ತರ್ಕಹೀನತೆಯು ಅನಾವರಣಗೊಳ್ಳುತ್ತಿದೆ.

-ಪ್ರೊ.ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್

ಕಳೆದ ಕೆಲವು ದಿನಗಳಲ್ಲಿ ಯುಎಸ್ ಡಾಲರ್ ಎದುರಾಗಿ ರೂಪಾಯಿ ಕುಸಿಯುತ್ತಿರುವ ಬಗ್ಗೆ ಭಾರತದ ವೃತ್ತ ಪತ್ರಿಕೆಗಳು ವ್ಯಾಪಕವಾಗಿ ವರದಿ ಮಾಡಿವೆ. ಕೇವಲ ಒಂದು ತಿಂಗಳ ಹಿಂದೆ, ನವೆಂಬರ್ 27ರಂದು, 84.559 ರೂಗಳಷ್ಟಿದ್ದ ಡಾಲರ್ ಮೌಲ್ಯವು ಡಿಸೆಂಬರ್ 29ಕ್ಕೆ 85.5 ರೂ.ಗಳಿಗೆ ಏರಿಕೆಯಾಗಿದೆ. ರೂಪಾಯಿಯ ಈ ಕುಸಿತವು ಅದನ್ನು ಸ್ಥಿರಗೊಳಿಸಲು ವಿದೇಶಿ ವಿನಿಮಯ ಸಂಗ್ರಹವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಇಳಿಕೆ ಮಾಡಿಕೊಂಡಿದ್ದರ (ಅಂದರೆ, ಡಾಲರ್‌ಗಳ ಮಾರಾಟದ) ಹೊರತಾಗಿಯೂ ಸಂಭವಿಸಿದೆ: ನವೆಂಬರ್ 22ರಂದು ಹೊಂದಿದ್ದ 657.89 ಶತಕೋಟಿ ಮೊತ್ತದ ಮೀಸಲು ಸಂಗ್ರಹವ ಡಿಸೆಂಬರ್ 20ರ ವೇಳೆಗೆ 644.39 ಶತಕೋಟಿಗೆ ಇಳಿದಿದೆ. ಅಷ್ಟಾಗಿಯೂ, ರೂಪಾಯಿಯ ಪತನವನ್ನು ತಡೆಯಲಾಗಿಲ್ಲ. ಮೀಸಲು ಸಂಗ್ರಹವನ್ನು ಒಂದು ವೇಳೆ ಮಾರಾಟ ಮಾಡದಿದ್ದರೆ, ಈ ಪತನವು ಇನ್ನೂ ಹೆಚ್ಚು ತೀವ್ರವಾಗಿರುತ್ತಿತ್ತು ಎಂಬುದು ಸ್ಪಷ್ಟವಾಗಿದೆ.

ಡಾಲರ್‌ಗೆ ಹೋಲಿಸಿದರೆ ರೂಪಾಯಿ ಮೌಲ್ಯವು ಬಹಳ ವರ್ಷಗಳಿಂದಲೂ ಕುಸಿತಯುತ್ತಲೇ ಬಂದಿದೆ ಮತ್ತು ಈ ಕುಸಿತವು ನಿರಂತರವಾಗಿ ಮುಂದುವರಿಯುತ್ತಲೇ ಇರುವ ಒಂದು ವಿದ್ಯಮಾನವೂ ಹೌದು. ಡಿರಿಜಿಸ್ಟ್ ಅವಧಿಯಲ್ಲಿ (ಅಂದರೆ, ನಿಯಂತ್ರಣ ನೀತಿಗಳ ಅವಧಿಯಲ್ಲಿ) ಸರ್ಕಾರವು ಡಾಲರ್‌ಗೆ ಎದುರಾಗಿ ರೂಪಾಯಿಯ ಬೆಲೆಯನ್ನು (ಮತ್ತು ಸಾಂದರ್ಭಿಕವಾಗಿ ಅದರ ಅಪಮೌಲ್ಯದ ಪ್ರಮಾಣವನ್ನು) ನಿರ್ಧರಿಸುವ ಮೂಲಕ ವಿದೇಶಿ ವಿನಿಮಯವನ್ನು ನಿಯಂತ್ರಿಸುತ್ತಿತ್ತು ಮತ್ತು ಆ ಮೂಲಕ ಅರ್ಥವ್ಯವಸ್ಥೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲಾಗಿತ್ತು. ಆದರೆ, ಈ ನಿಯಂತ್ರಣವನ್ನು 1991ರಲ್ಲಿ ಕಳಚಿಹಾಕಿದ ನಂತರ ರೂಪಾಯಿಯ ಮೌಲ್ಯವು ಇಳಿಯುತ್ತಲೇ ಬಂದಿದೆ. ನಿಯಂತ್ರಣಗಳನ್ನು ಕಳಚಿಹಾಕಿದ ಸಮಯದಲ್ಲಿ ವಿನಿಮಯ ದರವು ಡಾಲರ್‌ಗೆ 22.74 ರೂಪಾಯಿಗಳ ಮಟ್ಟದಲ್ಲಿತ್ತು. 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಸಮಯದಲ್ಲಿ 62.33 ರೂ.ಗಳಷ್ಟಿದ್ದ ಡಾಲರ್ ಮೌಲ್ಯವು ಈಗ 85.5 ರೂ.ಗಳ ಮಟ್ಟವನ್ನು ದಾಟಿದೆ. (ಜನವರಿ 13ರಂದು 1 ಡಾಲರ್ ಮೌಲ್ಯವು 86.12 ರೂ. ಎಂದು ವರದಿಯಾಗಿದೆ)

ಇದನ್ನೂ ಓದಿ: ಪ್ರಚೋದನಕಾರಿ ಭಾಷಣ: ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ತಾಲೋಕ್ ವಿರುದ್ಧ ಪ್ರಕರಣ ದಾಖಲು

ಬಹಳ ವರ್ಷಗಳಿಂದಲೂ ರೂಪಾಯಿ ಮೌಲ್ಯವು ಕುಸಿಯುತ್ತಲೇ ಬಂದಿದೆ. ಈ ಕುಸಿತವು ಭಾರತದಲ್ಲಿ ಹಣದುಬ್ಬರ ದರವು ಯುಎಸ್‌ಗಿಂತ ಹೆಚ್ಚಿನ ಮಟ್ಟದಲ್ಲಿದೆ ಎಂಬ ಕಾರಣದಿಂದ ಉಂಟಾದುದಲ್ಲ. ಹಣದುಬ್ಬರ ದರವು ನಿಸ್ಸಂಶಯವಾಗಿಯೂ ಹೆಚ್ಚಿನ ಮಟ್ಟದಲ್ಲಿದೆ. ಆದರೆ ಡಾಲರ್ ಎದುರು ರೂಪಾಯಿಯ ಮೌಲ್ಯವು ಕುಸಿಯಲು ಹಣದುಬ್ಬರವೇ ಪ್ರಾಥಮಿಕ ಕಾರಣವಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಭಾರತದಲ್ಲಿ ಹಣದುಬ್ಬರ ದರವು ಯುಎಸ್‌ಗಿಂತ ನಿರಂತರವಾಗಿ ಹೆಚ್ಚಿನ ಮಟ್ಟದಲ್ಲಿ ಇರುವುದಕ್ಕೆ ಪ್ರಮುಖ ಕಾರಣವೆಂದರೆ ರೂಪಾಯಿಯ ಮೌಲ್ಯದ ಕುಸಿತವೇ. ರೂಪಾಯಿ ಮೌಲ್ಯದ ಈ ಕುಸಿತವು ತೈಲದಂತಹ ಅಗತ್ಯ ವಸ್ತುಗಳ ಆಮದು ವೆಚ್ಚವನ್ನು ಹೆಚ್ಚಿಸುತ್ತದೆ. ತತ್ಪರಿಣಾಮವಾಗಿ ಬಳಕೆಯ ವಸ್ತುಗಳ ಬೆಲೆಗಳು ಏರುತ್ತವೆ.

ರೂಪಾಯಿಯ ಕುಸಿತಕ್ಕೆ ಯಾವುದೊ ಒಂದು ಪ್ರಾಥಮಿಕ ಕಾರಣವೂ ಇರಬಹುದು. ಆದರೆ, ಒಮ್ಮೆ ಹಣದುಬ್ಬರವು ಅದರಿಂದ ಉತ್ತೇಜಿತಗೊಂಡರೆ, ಅದು ಖಂಡಿತವಾಗಿಯೂ ರೂಪಾಯಿಯ ವಿನಿಮಯ ದರದ ಮೇಲೆ ಪ್ರತಿಕ್ರಿಯೆ ರೂಪದಲ್ಲಿ ವ್ಯಕ್ತಗೊಳ್ಳುತ್ತದೆ: ಹಣದುಬ್ಬರದಿಂದಾಗಿ ಸಟ್ಟಾ ಬಾಜಿಕೋರರು ರೂಪಾಯಿ ಮತ್ತಷ್ಟು ಅಪಮೌಲ್ಯಗೊಳ್ಳುವುದನ್ನು/ಇಳಿಕೆಯಾಗುವುದನ್ನು ನಿರೀಕ್ಷಿಸುತ್ತಾರೆ ಮತ್ತು ಮುಂದಿನ ದಿನಗಳಲ್ಕಿ ಅದು ವಾಸ್ತವವಾಗಿಯೂ ಕುಸಿಯುತ್ತದೆ. ಆದರೆ, ರೂಪಾಯಿ ಮೌಲ್ಯ ಕುಸಿತದ ಪ್ರಾಥಮಿಕ ಕಾರಣವೆಂದರೆ ಭಾರತದ ಶ್ರೀಮಂತರು ತಮ್ಮ ಸಂಪತ್ತನ್ನು ಭಾರತೀಯ ರೂಪಾಯಿಗಿಂತ ಹೆಚ್ಚಾಗಿ ಯುಎಸ್ ಡಾಲರ್ ರೂಪದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಇದು ರೂಪಾಯಿಯಿಂದ ಡಾಲರ್ ಕರೆನ್ಸಿಗೆ ಹೊರಳುವ ಒಂದು ನಿರಂತರ ಬದಲಾವಣೆಗೆ ಕಾರಣವಾಗುತ್ತದೆ. ಇದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗುತ್ತದೆ.

ಡಾಲರ್‌ಗೆ ಹೋಲಿಸಿದರೆ ದೇಶೀಯ ಕರೆನ್ಸಿಯ ವಿನಿಮಯ ದರದ ಇಂತಹ ದೀರ್ಘಾವಧಿಯ ಮತ್ತು ಸತತ ಮೌಲ್ಯಸವೆತದ ವಿದ್ಯಮಾನವು ಭಾರತಕ್ಕೆ ಮಾತ್ರ ಸೀಮಿತವಲ್ಲ. ಮೂರನೇ ಜಗತ್ತಿನ ಬಹುತೇಕ ದೇಶಗಳಲ್ಲಿ ಈ ಸಮಸ್ಯೆ ಇದ್ದೇ ಇದೆ. ರೂಪಾಯಿಯ ವಿನಿಮಯ ದರವನ್ನು ಎಂದಿಗೂ ತೇಲಲು ಬಿಡಬಾರದು, ಬದಲಿಗೆ ಡಾಲರ್ ಎದುರಿಗೆ ಲಗತ್ತಿಸಬೇಕು ಮತ್ತು ಅದನ್ನು ಡಿರಿಜಿಸ್ಟ್(ನಿಯಂತ್ರಣಗಳ) ಅವಧಿಯಲ್ಲಿದ್ದಂತೆ, ಬಂಡವಾಳದ ಹೊರ ಹರಿವಿನ ಮೇಲೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ವಿದೇಶಿ ವಿನಿಮಯದ ಮೇಲೆ ನಿಯಂತ್ರಣಗಳ ಮೂಲಕ ಕಾಯ್ದುಕೊಳ್ಳಬೇಕು ಎಂಬುದಕ್ಕೆ ಇದು ಒಂದು ಬಹುಮಹತ್ವದ ಕಾರಣ.

ಡಾಲರ್ ಬಲವರ್ಧನೆಯ ಒಗಟು

ರೂಪಾಯಿಯ ಈ ದೀರ್ಘಾವಧಿ ಪತನವು ಅಸಮಾನವಾಗಿ ಸಂಭವಿಸುತ್ತದೆ: ಕೆಲವು ಅವಧಿಗಳಲ್ಲಿ ಹೆಚ್ಚು ವೇಗವಾಗಿ ಬೀಳುತ್ತದೆ ಮತ್ತು ಕೆಲವು ಅವಧಿಗಳಲ್ಲಿ ಕುಸಿತದ ವೇಗವು ಕಡಿಮೆ ಇರುತ್ತದೆ. ಆದ್ದರಿಂದ ಕಳೆದ ಕೆಲವು ವಾರಗಳಲ್ಲಿ ರೂಪಾಯಿ ಮೌಲ್ಯವು ಹಠಾತ್ತಾಗಿ ಕುಸಿಯಿತು, ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ರೂಪಾಯಿ ಏಕೆ ತೀವ್ರವಾಗಿ ಈಗ ಕುಸಿಯುತ್ತಿದೆ ಎಂಬುದರ ಬಗ್ಗೆ ಪತ್ರಿಕೆಗಳು ವ್ಯಾಪಕವಾಗಿ ಚರ್ಚಿಸುತ್ತಿವೆ. ಭಾರತದ ಹಣದುಬ್ಬರ ದರವು ಯುಎಸ್‌ಗಿಂತ ಹೆಚ್ಚಿನ ಮಟ್ಟದಲ್ಲಿದೆ; ಭಾರತದ ವ್ಯಾಪಾರ ಕೊರತೆಯು ವಿಸ್ತರಿಸುತ್ತಿದೆ ಎಂಬ ವಿವರಣೆಯನ್ನು ವ್ಯಾಖ್ಯಾನಕಾರರು ನೀಡುತ್ತಾರೆ.

ಆದರೆ, ಹೆಚ್ಚು ಗಮನ ಪಡೆಯದ ಒಂದು ಅಂಶವೆಂದರೆ, ಡಾಲರ್‌ನ ಇತ್ತೀಚಿನ ಬಲವರ್ಧನೆಯು ಕೇವಲ ರೂಪಾಯಿಯ ಎದುರಿಗೆ ಮಾತ್ರವಲ್ಲ, ವಿಶ್ವದ ಪ್ರಮುಖ ಕರೆನ್ಸಿಗಳ ಎದುರಿಗೂ ಡಾಲರ್ ಬಲಗೊಂಡಿದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತ- ನಿರ್ದಿಷ್ಟ ಅಂಶಗಳ ಹೊರತಾಗಿ, ವಿಶ್ವದ ಪ್ರಮುಖ ಕರೆನ್ಸಿಗಳ ಎದುರಿಗೆ ಡಾಲರ್ ಈಗ ಏಕೆ ಬಲಗೊಳ್ಳುತ್ತಿದೆ ಎಂಬುದಕ್ಕೆ ಕೆಲವು ಮೂಲಭೂತ ಕಾರಣಗಳಿವೆ. ಡಾಲರ್ ಈಗಿರುವಷ್ಟು ಬಲವಾಗಿ ಕಳೆದ ದಶಕದ ಯಾವುದೇ ಸಮಯದಲ್ಲೂ ಇರಲಿಲ್ಲ: ಬ್ಲೂಮ್‌ಬರ್ಗ್ ಡಾಲರ್ ಸ್ಪಾಟ್ ಸೂಚ್ಯಂಕವು ಈ ವರ್ಷ ಶೇಕಡಾ 7ರಷ್ಟು ಏರಿಕೆಯಾಗಿದೆ. 2015ರ ನಂತರದ ಯಾವುದೇ ವರ್ಷದಲ್ಲಿ ಡಾಲರ್ ಹೊಂದಿದ್ದ ಮೌಲ್ಯಕ್ಕಿಂತಲೂ ಹೆಚ್ಚು ಬಲಗೊಂಡಿದೆ.

ಡಾಲರ್ ಬಲಗೊಳ್ಳುತ್ತಿರುವ ಅಂಶವು ಮೇಲ್ನೋಟದಲ್ಲೇ ಕುತೂಹಲಕಾರಿಯಾಗಿ ಕಾಣುತ್ತದೆ. ತಾವು ಅಧಿಕಾರ ವಹಿಸಿಕೊಂಡ ನಂತರ ಜಾರಿ ಮಾಡಲಿರುವ ಆಮದು ಸುಂಕಗಳ ಹೆಚ್ಚಳದ ಪ್ರಸ್ತಾಪವನ್ನು ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ್ದಾರೆ. ಐಎಂಎಫ್‌ನಿಂದ ಹಿಡಿದು ವಿಶ್ವಬ್ಯಾಂಕ್ ಮತ್ತು ವಿಶ್ವ ವ್ಯಾಪಾರ ಸಂಘಟನೆಯವರೆಗೆ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಪ್ರತಿದಿನವೂ ಮುಕ್ತ ವ್ಯಾಪಾರದ ಶ್ಲಾಘನೆಯ ಉಪದೇಶ ವಾಣಿಯನ್ನು ನಾವು ಕೇಳುತ್ತೇವೆ.

ಹಾಗಾಗಿ ಈ ಸಂಸ್ಥೆಗಳು ಟ್ರಂಪ್ ಜಾರಿ ಮಾಡಲಿರುವ ನೀತಿಯನ್ನು ಪ್ರತಿಗಾಮಿ ನೀತಿ ಎಂದು ವರ್ಗೀಕರಿಸಬೇಕು; ಯಾವುದು ಒಳ್ಳೆಯದು ಎಂಬುದು ಮಾರುಕಟ್ಟೆಗೇ ‘ಎಲ್ಲರಿಗಿಂತ ಚೆನ್ನಾಗಿ ಗೊತ್ತಿದೆ’ ಎಂದು ಈ ಸಂಸ್ಥೆಗಳು ನಂಬಿರುವುದರಿಂದಾಗಿ, ಈ ಮಾರುಕಟ್ಟೆ ಯುಎಸ್ ಅಮೆರಿಕಾದ ಭವಿಷ್ಯದ ಬಗ್ಗೆ ನಂಬಿಕೆಯನ್ನು ಸ್ವಲ್ಪ ಮಟ್ಟಗಾದರೂ ಕಳೆದುಕೊಳ್ಳುತ್ತಿರಬೇಕು ಮತ್ತು ಅಮೆರಿಕದಿಂದ ಸಣ್ಣ ಪ್ರಮಾಣದಲ್ಲಾದರೂ ಸರಿಯೇ ಬಂಡವಾಳದ ಹೊರ ಹರಿವು ಕಾಣಬೇಕಿತ್ತು, ಅಂದರೆ ಡಾಲರ್ ಮೌಲ್ಯವು ಇಳಿಯಬೇಕಾಗಿತ್ತು. ಆದರೆ, ತದ್ವಿರುದ್ಧವಾದುದನ್ನೇ ನಾವು ಕಾಣುತ್ತಿದ್ದೇವೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ, ಮಾರುಕಟ್ಟೆ ವೀಕ್ಷಕರಲ್ಲಿ ಅನೇಕರು
ಯುಎಸ್ ಹೊಂದಲಿರುವ ರಕ್ಷಣಾತ್ಮಕ ವ್ಯಾಪಾರ ನೀತಿಯೇ ಡಾಲರ್ ಬಲವರ್ಧನೆಯ ಹಿಂದಿರುವ ಅಂಶವೆAದು ಹೇಳುತ್ತಾರೆ. ಗೊಂದಲಮಯವಾಗಿ ತೋರುವ ಈ ವಿದ್ಯಮಾನವನ್ನು ನಾವು ವಿವರಿಸಬಹುದಾದರೂ ಹೇಗೆ?

ಒಗಟಾಗಿ ತೋರುವ ಈ ಸಮಸ್ಯೆಗೆ ಸರಳವಾಗಿ ಕೊಡಬಹುದಾದ ಒಂದು ಉತ್ತರವೆಂದರೆ, ಮುಕ್ತ ವ್ಯಾಪಾರದ ಸದ್ಗುಣಗಳ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆಗಳು ನೀಡುವ ಉಪದೇಶಗಳು ಏನನ್ನು ಬೇಕಾದರೂ ನಂಬುವ ಮೂರನೇ ಜಗತ್ತಿನ ರಾಜಕಾರಣಿಗಳ ಕಿವಿಗೆ ಮಾತ್ರ ಇಂಪಾಗಿರುತ್ತವೆ, ಆದರೆ ಸ್ವತಃ ಮಾರುಕಟ್ಟೆಯು ಈ ಉಪದೇಶವನ್ನು ಕಿವಿಗೆ ಹಾಕಿಕೊಳ್ಳುವುದೇ ಇಲ್ಲ ಎಂಬುದು. ಯುಎಸ್‌ನ ರಕ್ಷಣಾತ್ಮಕ ವ್ಯಾಪಾರ ನೀತಿಯು ದೇಶೀಯ ಉತ್ಪಾದನೆಯನ್ನು ಸ್ಥಳಾಂತರಿಸಿದ ಆಮದುಗಳನ್ನು ನಿಲ್ಲಿಸುವ ಮೂಲಕ ಆ ದೇಶದಲ್ಲಿ ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಉತ್ಪಾದನೆಯನ್ನು ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಜೊತೆಗೆ, ಈ ಕ್ರಮವು, ಬಂಡವಾಳಶಾಹಿ ಜಗತ್ತಿನ ಉಳಿದ ದೇಶಗಳಿಗೆ ನಷ್ಟವನ್ನುಂಟುಮಾಡಿ ಯುಎಸ್‌ನಲ್ಲಿ ಉದ್ಯೋಗ ಪರಿಸ್ಥಿತಿಯನ್ನು ಉತ್ತಮಗೊಳಿಸುತ್ತದೆ ಮಾತ್ರವಲ್ಲ, ಯುಎಸ್‌ನ ವ್ಯಾಪಾರ ಬಾಕಿಯ ಪರಿಸ್ಥಿತಿಯನ್ನೂ ಉತ್ತಮಗೊಳಿಸುತ್ತದೆ. ಹಾಗೆ ನೋಡಿದರೆ ಈ ಕ್ರಮವು ಆ ದೇಶದ ವ್ಯಾಪಾರದ ಬಾಕಿಯ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಮೂಲಕ ನಿಖರವಾಗಿ ಯುಎಸ್‌ನಲ್ಲಿ ಒಟ್ಟು ಬೇಡಿಕೆಯನ್ನು ಹೆಚ್ಚಿಸುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಯುಎಸ್ ತನ್ನ ರಕ್ಷಣಾತ್ಮಕ ವ್ಯಾಪಾರ ಕ್ರಮಗಳ ಮೂಲಕ ತನ್ನ ಪಾವತಿ ಶೇಷದ ಪರಿಸ್ಥಿತಿಯನ್ನು ಸುಧಾರಿಸುತ್ತದೆ, ಜೊತೆಗೆ ಅದರ ಉದ್ಯೋಗಾವಕಾಶಗಳನ್ನು ಮತ್ತು ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಈ ಎಲ್ಲ ಅಂಶಗಳಿಂದಾಗಿ ಯುಎಸ್ ಅರ್ಥವ್ಯವಸ್ಥೆಯು ಹದಗೆಡುವ ಬದಲು ಸುಧಾರಿಸುತ್ತದೆ ಎಂಬುದೇ ಮಾರುಕಟ್ಟೆಯು ಲೆಕ್ಕಹಾಕಿರುವಂತೆ ಕಾಣುತ್ತದೆ. ಇದು ಏನನ್ನು ನಾವು ನಂಬಬೇಕೆಂದು ಮುಕ್ತ ವ್ಯಾಪಾರದ ಸಮರ್ಥಕರು ಬಯಸುತ್ತಾರೋ ಅದಕ್ಕೆ ತದ್ವಿರುದ್ಧವಾಗಿದೆ. ಉತ್ತಮಗೊಂಡ ಈ ನಿರೀಕ್ಷೆಯ ಸಂದರ್ಭದಲ್ಲಿ ಇತರ ಪ್ರಮುಖ ಕರೆನ್ಸಿಗಳಿಗೆ ಹೋಲಿಸಿದರೆ ಡಾಲರ್ ಹೆಚ್ಚು ವಿಶ್ವಾಸಾರ್ಹವಾಗಿ ಕಾಣುತ್ತದೆ. ಆದ್ದರಿಂದ, ಇತರ ಕರೆನ್ಸಿಗಳಿಗೆ ಹೋಲಿಸಿದರೆ, ಡಾಲರ್‌ನ ವಿನಿಮಯ ದರದಲ್ಲಿ ಮೌಲ್ಯವರ್ಧನೆಯಾಗುತ್ತದೆ.

ಬಂಡವಾಳಶಾಹಿ ತರ್ಕಹೀನತೆ-ಸಟ್ಟಾಕೋರರ ಚಾಪಲ್ಯ

ಯುಎಸ್‌ನ ಈ ರಕ್ಷಣಾತ್ಮಕ ನೀತಿಯು ಅಲ್ಲಿ ಹಣದುಬ್ಬರ ದರವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಆದರೆ, ಬಂಡವಾಳಶಾಹಿ ಜಗತ್ತಿನ ಉಳಿದ ದೇಶಗಳಲ್ಲಿ ನಿಸ್ಸಂಶಯವಾಗಿ ಹಣದುಬ್ಬರ ದರವನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಹೆಚ್ಚಿಸುತ್ತದೆ. ಏಕೆಂದರೆ ಹಲವಾರು ಸರಕುಗಳ ಅಂತಾರಾಷ್ಟ್ರೀಯ ಬೆಲೆಗಳನ್ನು, ವಿಶೇಷವಾಗಿ ತೈಲದಂತಹ ನಿರ್ಣಾಯಕ ಲಾಗುವಾಡು ಸರಕುಗಳ ಬೆಲೆಗಳನ್ನು, ಡಾಲರ್ ಕರೆನ್ಸಿಯಲ್ಲಿ ನಿಗದಿಪಡಿಸಲಾಗಿದೆ. ಮತ್ತು, ಡಾಲರ್ ಮೌಲ್ಯವು ಇತರ ಕರೆನ್ಸಿಗಳ ಎದುರಿಗೆ ಬಲಗೊಂಡಿರುವುದರಿಂದ, ಅದು ಇತರ ಕರೆನ್ಸಿಗಳನ್ನು ಅಪಮೌಲ್ಯಗೊಳಿಸುವ ಪರಿಣಾಮವನ್ನು ಹೊಂದಿರುತ್ತದೆ. ಆದ್ದರಿಂದ ಬಂಡವಾಳಶಾಹಿ ಜಗತ್ತಿನ ಉಳಿದ ದೇಶಗಳು ಹಣದುಬ್ಬರ ಪರಿಸ್ಥಿತಿಗೆ ತಳ್ಳಲ್ಪಡುತ್ತವೆ.

ಬಂಡವಾಳಶಾಹಿ ಜಗತ್ತಿನ ಉಳಿದ ದೇಶಗಳ ದುಡಿಯುವ ಜನರು ಎರಡು ವಿಭಿನ್ನ ಕಾರಣಗಳಿಂದಾಗಿ ತಮ್ಮ ಜೀವನಮಟ್ಟದಲ್ಲಿ ಕುಸಿತವನ್ನು ಅನುಭವಿಸುತ್ತಾರೆ: ಮೊದಲನೆಯದು, ಅಮೇರಿಕದ ರಕ್ಷಣಾತ್ಮಕ ವ್ಯಾಪಾರ ನೀತಿಯ ಕಾರಣದಿಂದಾಗಿ ಅಮೆರಿಕದ ಮಾರುಕಟ್ಟೆಯನ್ನು ಕಳೆದುಕೊಂಡ ದೇಶಗಳಲ್ಲಿ ಉದ್ಯೋಗಗಳು ನಾಶವಾಗುತ್ತವೆ. ಎರಡನೆಯದು, ಡಾಲರ್‌ಗೆ ಹೋಲಿಸಿದರೆ ಉಳಿದ ದೇಶಗಳ ಕರೆನ್ಸಿಗಳ ಅಪ-ಮೌಲ್ಯದಿಂದಾಗಿ ಈ ದೇಶಗಳಲ್ಲಿ ವೆಚ್ಚ-ತಳ್ಳು ಹಣದುಬ್ಬರ ದರದ ಏರಿಕೆಯಾಗುತ್ತದೆ. ಈ ವೆಚ್ಚ-ತಳ್ಳು ಹಣದುಬ್ಬರವನ್ನು ಈ ದೇಶಗಳ ಸರ್ಕಾರಗಳು ನಿರುದ್ಯೋಗವನ್ನು ಹೆಚ್ಚಿಸುವ ಮತ್ತು ಕಾರ್ಮಿಕರ ಚೌಕಾಶಿ ಸಾಮರ್ಥ್ಯವನ್ನು ದುರ್ಬಲಗೊಳಿಸುವ ಮಿತವ್ಯಯ ಕ್ರಮಗಳಿಂದ ಕಾರ್ಮಿಕರಿಗೆ ನಷ್ಟ ಉಂಟುಮಾಡುವ ಮೂಲಕ ನಿಯಂತ್ರಿಸಲು ಪ್ರಯತ್ನಿಸಿದರೆ, ಅದು ದುಡಿಯುವ ಜನರನ್ನು ಬಡತನದೆಡೆಗೆ ಕೊಂಡೊಯ್ಯುವ ಮತ್ತೊಂದು ಮಾರ್ಗವಾಗುತ್ತದೆ.

ಹೊರ ದೇಶಗಳಿಂದ ಸಾಲ ಪಡೆದ ಮೂರನೇ ಜಗತ್ತಿನ ದೇಶಗಳ ಸಂದರ್ಭದಲ್ಲಿ, ಮೇಲೆ ತಿಳಿಸಿದ ನಿರುದ್ಯೋಗ ಮತ್ತು ಹಣದುಬ್ಬರ ಮೂಲಕದ ಮಾರ್ಗಗಳ ಜೊತೆಗೆ, ದುಡಿಯುವ ಜನರ ಮೇಲೆ ಹೊರೆ ಹೆಚ್ಚಿಸುವ ಇನ್ನೊಂದು ಹೆಚ್ಚುವರಿ ಮಾರ್ಗವಿದೆ. ಬಾಹ್ಯ ಸಾಲವನ್ನು ಸಾಮಾನ್ಯವಾಗಿ ಯುಎಸ್ ಡಾಲರ್ ರೂಪದಲ್ಲಿ ಪಡೆಯುವುದರಿಂದ, ಡಾಲರ್ ಬಲಗೊಂಡ ಪರಿಣಾಮವಾಗಿ ಉಂಟಾಗುವ ಸ್ಥಳೀಯ ಕರೆನ್ಸಿಯು ಅಪ-ಮೌಲ್ಯದಿಂದಾಗಿ ಸ್ಥಳೀಯ ಕರೆನ್ಸಿ ಲೆಕ್ಕದಲ್ಲಿ ಬಾಹ್ಯ ಸಾಲದ ಮೊತ್ತ ಹೆಚ್ಚುತ್ತದೆ. ಹಾಗಾಗಿ ಅವರಿಗೆ ಸಾಲದ ಹೊರೆ ಹೆಚ್ಚು ಭಾರವಾಗುತ್ತದೆ. ಈ ಭಾರವೂ ಅಗತ್ಯವಾಗಿ ದುಡಿಯುವ ಜನರ ಮೇಲೇ ಬೀಳುತ್ತದೆ.

ಹೀಗೆ ವಿಶ್ವ ಅರ್ಥವ್ಯವಸ್ಥೆಯಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಮೂಲಭೂತ ತರ್ಕಹೀನತೆಯು ಅನಾವರಣಗೊಳ್ಳುತ್ತಿದೆ. ಕೋಟ್ಯಂತರ ಜನರ ಜೀವನ ಪರಿಸ್ಥಿತಿಗಳು ಕೆಲವು ಸಟ್ಟಾಬಾಜಿಕೋರರ ಹುಚ್ಚಾಟ ಮತ್ತು ಚಾಪಲ್ಯಗಳ ಮೇಲೆ ಅವಲಂಬಿತವಾಗುತ್ತಿವೆ. ಅಮೇರಿಕದ ಅರ್ಥವ್ಯವಸ್ಥೆಯಲ್ಲಿ ಒಟ್ಟಾರೆ ಬೇಡಿಕೆ ಹೆಚ್ಚಬಹುದು. ಆ ಮೂಲಕ ಉದ್ಯೋಗಗಳು ಮತ್ತು ಉತ್ಪಾದನೆಯೂ ಹೆಚ್ಚಬಹುದು. ಇದು ರಕ್ಷಣಾತ್ಮಕ ವ್ಯಾಪಾರ ನೀತಿಯ ಮಹತ್ವದ ಅಂಶವೂ ಹೌದು. ಆದರೆ, ಈ ವ್ಯಾಪಾರ ನೀತಿಯು ಉಳಿದ ದೇಶಗಳ ವಿನಿಮಯ ದರಗಳ ಮೇಲೆ ಪ್ರಭಾವ ಬೀರುತ್ತದೆ. ಈ ಪ್ರಭಾವವು ಮಾರುಕಟ್ಟೆಯಲ್ಲಿ ಭಾಗವಹಿಸುವವರು ಏನು ನಿರೀಕ್ಷಿಸುತ್ತಾರೆ ಎಂಬುದರ ಮೂಲಕ ವ್ಯಕ್ತಗೊಳ್ಳುತ್ತದೆ. ಸಟ್ಟಾಕೋರ ವರ್ತನೆಗಳು ಇಂತಹ ನಿರೀಕ್ಷೆಗಳನ್ನು ಹುಟ್ಟುಹಾಕುತ್ತವೆ. ಮತ್ತು ಬಂಡವಾಳಶಾಹಿಯ ಅಡಿಯಲ್ಲಿ ಇದೇ ತಾನೇ ಮುಖ್ಯವಾಗುವುದು!

 

ವ್ಯಂಗ್ಯಚಿತ್ರ ಕೃಪೆ:
ಪಿ. ಮಹಮ್ಮದ್

 

 

 

ಇದನ್ನೂ ನೋಡಿ: ಉನ್ನತ ಶಿಕ್ಷಣವನ್ನು ಕೇಂದ್ರೀಕರಣಗೊಳಿಸುವ, ಆರೆಸ್ಸೆಸ್ ಸಿದ್ಧಾಂತಕ್ಕೆ ಅವಕಾಶ ಕಲ್ಪಿಸುವ ಯುಜಿಸಿ ತಿದ್ದುಪಡಿಗಳು…

Donate Janashakthi Media

Leave a Reply

Your email address will not be published. Required fields are marked *