ಬೆಂಗಳೂರು: ವಿಧಾನಸೌಧದಲ್ಲಿ ಕಾಂಗ್ರೆಸ್‌ನವರ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರ ಪದ ಪ್ರಯೋಗದ ಬಗ್ಗೆ ಕಾಂಗ್ರೆಸ್ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ “ಈಶ್ವರಪ್ಪನಿಗೆ ಸಂಸ್ಕಾರ, ಸಂಸ್ಕೃತಿಯೇ ಗೊತ್ತಿಲ್ಲ. ಯಾರು ಬೇಕಾದರೂ ಅವರು ಬಳಸಿರುವ ಪದವನ್ನು ಬಳಸಬಹುದು” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಈಶ್ವರಪ್ಪ ಬೆಳೆದು ಬಂದಿರುವ ಹಾದಿಯೇ ಅದು. ಅವರಂತಹ ವ್ಯಕ್ತಿಗಳಿಂದ ಇಂತಹ ಬದಲಾವಣೆಗಳನ್ನು ನಿರೀಕ್ಷಿಸಬಾರದು. ಸಂಸ್ಕಾರ ಇರುವವರು ಅಂತಹ ಪದವನ್ನು ಬಳಸುವುದಿಲ್ಲ. ಅವರು ಮೊದಲಿನಿಂದಲೂ ಹೀಗೆಯೇ ಮಾತನಾಡುತ್ತಿದ್ದಾರೆ. ಅವರಿಗೆ ಆರೋಗ್ಯಕರವಾದ ಸಂಸ್ಕೃತಿ ಇಲ್ಲ. ಬಿಜೆಪಿಯವರ ಸಂಸ್ಕೃತಿಯೇ ಇಂತದ್ದು. ಈಶ್ವರಪ್ಪರಿಗೆ ಬಿಜೆಪಿ ಬುದ್ದಿ ಹೇಳುವ ಕೆಲಸ ಮಾಡುತ್ತಿಲ್ಲʼʼ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಇದನ್ನು ಓದಿ: ಕೆ.ಎಸ್. ಈಶ್ವರಪ್ಪ ಪ್ರಚೋದನಕಾರಿ ಭಾಷಣ : ಕಾನೂನುಕ್ರಮ ಜರುಗಿಸುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ ವಕೀಲ
“ಅಧಿಕಾರವನ್ನು ನಡೆಸುವವರಿಂದ ಟೀಕೆಗಳನ್ನು ಆರೋಗ್ಯ ಪೂರ್ಣವಾಗಿ ಸ್ವೀಕರಿಸಬೇಕು. ರಾಜಕಾರಣದಲ್ಲಿ ಟೀಕೆ ಬರುವುದು ಸಹಜ. ಅದಕ್ಕೆ ಈ ರೀತಿ ಪ್ರತಿಕ್ರಿಯೆ ನಿಡುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ‘ಪ್ರಚೋದನಕಾರಿ ಭಾಷಣ ಮಾಡಿದ ಈಶ್ವರಪ್ಪ ವಿರುದ್ಧ ತಕ್ಷಣ ಪೊಲೀಸರು ಎಫ್ಐಆರ್ ದಾಖಲಿಸಬೇಕು. ರಾಜ್ಯದ ಪೊಲೀಸರು ನಿಷ್ಕ್ರಿಯ ಆಗಿದ್ದಾರೆ. ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಶ್ವರಪ್ಪ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ಅಂದುಕೊಂಡಿರಲಿಲ್ಲʼ ಎಂದು ಹೇಳಿದರು.
ʻʻಬೇಕಾದರೆ ಈಶ್ವರಪ್ಪ ತಮ್ಮ ಹೆಸರನ್ನು ಮೇರಾ ನಾಮ್ ಜೋಕರ್ ಎಂದು ಬದಲಾಯಿಸಿಕೊಳ್ಳಲಿ. ಅವರು ದ್ವೇಷದ ಭಾಷಣದಲ್ಲಿ ಹೆಸರುವಾಸಿಯಾದವರು. ಅದು ಅವರ ತಪ್ಪಲ್ಲ. ಈಶ್ವರಪ್ಪ ಕಲಿತ ನಾಗಪುರ ಯುನಿವರ್ಸಿಟಿ ಹೇಳಿಕೊಟ್ಟ ಪಾಠ. ಈಶ್ವರಪ್ಪ ತಮ್ಮ ಮನೆಯಲ್ಲೇ ನೋಟು ಎಣಿಸುವ ಮೆಷಿನ್ ಇಟ್ಟುಕೊಂಡಿದ್ದಾರೆ. ಆದರೂ ಅವರಿಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಆಗಲು ಸಾಧ್ಯವಾಗಲಿಲ್ಲ. ಹೀಗಾಗಿ, ಅವರು ಹತಾಶೆಯಿಂದ ಮಾತನಾಡಿದ್ದಾರೆ’ ಎಂದು ಹರಿಪ್ರಸಾದ್ ಟೀಕಿಸಿದರು.
ಸಚಿವ ಈಶ್ವರಪ್ಪ ಮುಖ್ಯಮಂತ್ರಿಯಾಗಲು ಪ್ರಯತ್ನಿಸಿ ವಿಫಲರಾದರು. ಕೊನೆಗೆ ಉಪಮುಖ್ಯಮಂತ್ರಿಯೂ ಆಗಲಿಲ್ಲ. ಹೀಗಾಗಿ ಸಚಿವ ಈಶ್ವರಪ್ಪಗೆ ಹುಚ್ಚು ಹಿಡಿದಿದೆ. ಆರೋಗ್ಯ ಸಚಿವರು ಆದಷ್ಟು ಬೇಗ ಅವರನ್ನು ನಿಮ್ಹಾನ್ಸ್‌ಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಚಿಕಿತ್ಸೆ ಕೊಡಿಸಬೇಕು ಹೇಳಿದರು.
ಇದನ್ನು ಓದಿ: ಕಾನೂನು ಸುವ್ಯವಸ್ಥೆ ಕಾಪಾಡಿ-ದಕ್ಷತೆಯಿಂದ ಕಾರ್ಯನಿರ್ವಹಿಸಿ: ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿಯೂ ಪ್ರತಿಕ್ರಿಯೆ ನೀಡಿ ಬಿಜೆಪಿಯವರದ್ದು ನಾಚಿಕೆಗೇಡಿನ ಸಂಗತಿ, ಬಿಜೆಪಿಗೇ ಒಂದು ಕಳಂಕ. ಈಶ್ವರಪ್ಪ ನಾಲಿಗೆ ಅವರ ಆಚಾರ ತೋರಿಸುತ್ತೆ. ಬಿಜೆಪಿಯವರ ತಂದೆ ತಾಯಂದಿರು ಈ ಸಂಸ್ಕೃತಿ ಕಲಿಸಿದ್ದಾರೆ. ಇಂತಹ ಭಾಷೆ ಬಳಸುವವರನ್ನು ಪಕ್ಷದಿಂದ ಕಿತ್ತುಹಾಕಬೇಕು. ಈ ರೀತಿ ಕೆಟ್ಟ ಭಾಷೆ, ಕೆಟ್ಟ ಪದ ಬೇರೆಯವರಿಗೂ ಗೊತ್ತಿರುತ್ತೆ. ಅದೇ ಪದವನ್ನು ಅವರ ಮೇಲೆ ಬಳಸಿದರೆ ಹೇಗಾಗಬಾರದು ಎಂದು ಹೇಳಿದ್ದಾರೆ.
ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ “ಈಶ್ವರಪ್ಪನವರು ಇಂತಹ ಹೇಳಿಕೆ ನೀಡಬಾರದು. ಸಚಿವರಾಗಿ ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣಬೇಕಾದವರಿಂದಲೇ ಇಂತಹ ಕೆಟ್ಟ ಪದಪ್ರಯೋಗಗಳು ಶೋಭೆ ತರುವುದಿಲ್ಲ” ಎಂದು ಹೇಳಿದರು.
ಈಶ್ವರಪ್ಪ ಹೇಳಿದ್ದು ʻಈಶ್ವರಪ್ಪ ಜೋಕರ್ʼ ಎಂದು ನೀಡಿದ ಹೇಳಿಕೆಯ ಬಗ್ಗೆ ಕಾಂಗ್ರೆಸ್ ನಾಯಕರ ವಿರುದ್ಧ ತಿರುಗಿಬಿದ್ದ ಸಚಿವ ಈಶ್ವರಪ್ಪ ಸೂ…ಮಕ್ಕಳು ಅಂತ ಕೆಟ್ಟಪದ ಪ್ರಯೋಗಳನ್ನು ಬಳಕೆ ಮಾಡಿದ್ದರು.