ನವದೆಹಲಿ: ಜಿ20 ಸಮಾರಂಭದ ಹಿನ್ನೆಲೆ ರಾಷ್ಟ್ರರಾಜಧಾನಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿರುವ ಔತಣಕೂಟದಲ್ಲಿ ಕಾಂಗ್ರೆಸ್ ಸರ್ಕಾರದ ಎಲ್ಲಾ ಮುಖ್ಯಮಂತ್ರಿ ಗೈರಾಗಲಿದ್ದಾರೆ ಎಂದು ವರದಿಯಾಗಿದೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದಿರುವ ರಾಷ್ಟ್ರಪತಿ ಕಚೇರಿಯ ನಿರ್ಧಾರವನ್ನು ವಿರೋಧಿಸಿ ಪಕ್ಷದ ಮುಖ್ಯಮಂತ್ರಿಗಳು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ವರದಿ ಹೇಳಿದೆ.
ರಾಷ್ಟ್ರಪತಿ ಆಯೋಜಿಸಿರುವ ಈ ಔತಣಕೂಟವು ಶನಿವಾರ ಸಂಜೆ ಭಾರತ ಮಂಟಪದ ಮಲ್ಟಿ ಫಂಕ್ಷನ್ ಹಾಲ್‌ನಲ್ಲಿ ನಡೆಯಲಿದೆ. ಔತಣಕೂಟದಲ್ಲಿ ವಿದೇಶಿ ನಾಯಕರು, ಮುಖ್ಯಮಂತ್ರಿಗಳು, ಸಂಪುಟ ಮತ್ತು ರಾಜ್ಯ ಸಚಿವರು, ಕೇಂದ್ರ ಸರ್ಕಾರದ ಕಾರ್ಯದರ್ಶಿಗಳಿಗೆ ಆಹ್ವಾನವಿದೆ.
ಇದನ್ನೂ ಓದಿ: ‘ಜಿ20 ಸರ್ವಂ ಮೋದಿ ಮಯಂ!’ | 12ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿ 963 ಜಾಹಿರಾತು!
ಕಾಂಗ್ರೆಸ್ ಅಧ್ಯಕ್ಷ, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದಿರುವುದರ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸರ್ಕಾರವು ಜಾತಿ ತಾರತಮ್ಯ ತೋರುತ್ತಿದ್ದು, ಖರ್ಗೆ ಅವರು ದಲಿತರಾಗಿದ್ದಕ್ಕೆ ಸರ್ಕಾರ ಅವರಿಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಲಾಗಿದೆ. ತಮಿಳುನಾಡು ಸಂಸದ ಮೋಹನ ಕುಮಾರಮಂಗಲಂ ಅವರು ಪ್ರಧಾನಿ ಮೋದಿ ಅವರನ್ನು ‘ಮನು’ವಿಗೆ ಹೋಲಿಸಿದ್ದಾರೆ. ಇದೀಗ ರಾಷ್ಟ್ರಪತಿ ಕಚೇರಿಯ ನಿರ್ಧಾರವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ.
ಕರ್ನಾಟಕದ ಸಿಎಂ ಸಿದ್ದರಾಮಯ್ಯ, ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಹಿಮಾಚಲ ಪ್ರದೇಶದ ಸಿಎಂ ಸುಖವಿಂದರ್ ಸಿಂಗ್ ಸುಖು ರಾಷ್ಟ್ರಪತಿ ಔತಣಕೂಟಕ್ಕೆ ಗೈರು ಹಾಜರಾಗಲಿದ್ದಾರೆ. ಇನ್ನು ಹಲವು ಪ್ರತಿಪಕ್ಷಗಳ ಮುಖ್ಯಮಂತ್ರಿಗಳು ಔತಣಕೂಟದಿಂದ ಹೊರಗುಳಿಯುವ ನಿರೀಕ್ಷೆಯಿದೆ.
ಅದಾಗ್ಯೂ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ವಿಡಿಯೊ ನೋಡಿ: ಮಾತು ಮತ್ತು ಹಾಡಿನ ಮೂಲಕ ಸೌಜನ್ಯ ಹೋರಾಟಕ್ಕೆ ಧ್ವನಿಯಾದ ಜನಪರ ಗಾಯಕ ಜನ್ನಿ Janashakthi Media