ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು : ದೇಶದಲ್ಲಿ ಇಂಧನ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಮಹಿಳಾ ಕಾಂಗ್ರೆಸ್ ನಾಯಕರು ರಸ್ತೆಯಲ್ಲೇ ಅಡುಗೆ ಮಾಡಿ ವಿನೂತನ ಪ್ರತಿಭಟನೆ ಮಾಡಿದರು. ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಪುಷ್ಪ ಅಮರನಾಥ್ ಇತರ ನಾಯಕರ ನೇತೃತ್ವದಲ್ಲಿ ನಿತ್ಯದ ವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮೌರ್ಯ ವೃತ್ತದಿಂದ ರಾಜಭವನದ ಮೆರವಣಿಗೆ ನಡೆಸಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲಿಸರು ತಡೆದರು, ರಾಜಭವನಕ್ಕೆ ತೆರಳುವ ಮಾರ್ಗ ಮಧ್ಯೆ ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಅಡುಗೆ ಅನಿಲ, ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆಯ ಅಂಗವಾಗಿ ರಸ್ತೆಯಲ್ಲೇ ಸೌಧೆ ಒಲೆಯಿಟ್ಟು, ತರಕಾರಿಗಳೊಂದಿಗೆ ಅಡುಗೆ ಮಾಡುವ ಅಣಕು ಪ್ರದರ್ಶನ, ಬೈಕ್, ಕಾರುಗಳನ್ನು ಎತ್ತಿನಗಾಡಿಯಲ್ಲಿಎಳೆಯುವ ಮೂಲಕ ಪೆಟ್ರೋಲ್, ಡಿಸೇಲ್ ದರ ಹೆಚ್ಚಳಕ್ಕೆ ಆಕ್ರೋಶ ವ್ಯಕ್ತ ಪಡಿಸಲಾಯಿತು. ಮಹಿಳೆಯರು ಸಿಲಿಂಡರ್ ಮಾದರಿಯನ್ನು ತಲೆ ಮೇಲೆ ಹೋತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ಬೆಲೆ ಏರಿಕೆ ಮಾಡಿದ್ದರೂ ಕೂಡ ಬಿಜೆಪಿಯ ನಾಯಕರಾಗಿದ್ದ ಮೋದಿ, ಯಡಿಯೂರಪ್ಪ, ಶೋಭಾಕರಂದ್ಲಾಜೆ, ಸ್ಮೃತಿಇರಾನಿ ಸೇರಿದಂತೆ ಅನೇಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಆದರೆ, ಈಗ ಜನವಿರೋಧಿಯಾದ ಬೆಲೆ ಏರಿಕೆಯಾಗುತ್ತಿದ್ದರೂ ಯಾರು ಬಾಯಿ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

2014ರಲ್ಲಿ 400 ರೂ. ಇದ್ದ ಅಡುಗೆ ಅನಿಲ ಸಿಲಿಂಡರ್ ದರ ಈಗ 950 ರೂಪಾಯಿಗೆ ತಲುಪಿದೆ. ಇನ್ನೂ ಈ ಬೇಳೆಕಾಳುಗಳು, ಅಡುಗೆ ಎಣ್ಣೆ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿಹೋಗಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.

ದಿನನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಏರರುಗತಿಯಲ್ಲೇ ಸಾಗುತ್ತದೆ. ಇದರಿಂದ ಸಹಜವಾಗಿ ಅಗತ್ಯ ವಸ್ತುಗಳ ದರಗಳು ಏರಿಕೆಯಾಗಿದ್ದು, ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಗಮನ ಹರಿಸುತ್ತಿಲ್ಲ. ರಾಜ್ಯಪಾಲರು, ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಬೆಲೆಯೇರಿಕೆ ನಿಯಂತ್ರಿಸಲು ಮುಂದಾಗಬೇಕು ಎಂದು ಆಗ್ರಹಿಸಿಸರು.

ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಕೃಷ್ಣಬೈರೇಗೌಡ, ಕೆ.ಜೆ.ಜಾರ್ಜ್, ಶಾಸಕಿ ಸೌಮ್ಯಾರೆಡ್ಡಿ , ಶಾಸಕ ರಿಜ್ವಾನ್ ಅರ್ಷದ್, ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಮಾತನಾಡಿದರು.

ಪ್ರತಿಭಟನೆ ಹಾಗೂ ಮೆರವಣಿಗೆಯನ್ನು ಅರ್ಧಕ್ಕೆ ತಡೆದ ಪೊಲೀಸರು ನಾಯಕರನ್ನು ವಶಕ್ಕೆ ಪಡೆದುಕೊಂಡರು. ಈ ವೇಳೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರನ್ನು ಒತ್ತಾಯ ಪೂರ್ವಕವಾಗಿ ಎಳೆದಾಡಲಾಯಿತು. ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತಳ್ಳಾಟ ನಡೆಯಿತು.

Donate Janashakthi Media

Leave a Reply

Your email address will not be published. Required fields are marked *