ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್ ಮೀಸಲಾತಿ ವಿರೋಧಿಸಿ ಕಾಂಗ್ರೆಸ್ ಮುಖಂಡರು ವಿಕಾಸಸೌಧದಲ್ಲಿರುವ ನಗರಾಭಿವೃದ್ಧಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಕಾಸಸೌಧದ 4ನೇ ಮಹಡಿಯಲ್ಲಿರುವ ಕಚೇರಿಗೆ ಬಿಜೆಪಿ, ಆರ್ಎಸ್ಎಸ್ ಕಚೇರಿ ಎಂದು ಬೋರ್ಡ್ ಹಿಡಿದು ಲಗ್ಗೆ ಇಟ್ಟ ಕಾಂಗ್ರೆಸ್ ಮುಖಂಡರು, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದು, ಮೀಸಲಾತಿ ಕುರಿತು ಪ್ರಕಟಿಸಿರುವ ಅವರು, ಸುಪ್ರಿಂಕೋರ್ಟ್ ನಿರ್ದೇಶನದ ಪ್ರಕಾರ ಮೀಸಲಾತಿ ಹಂಚಿಕೆ ಮಾಡಿದ್ದಾರೆ. ಆದರೆ ಸರ್ಕಾರದಿಂದ ಅನುಮೋದನೆ ಪಡೆಯದೆ ಮೀಸಲಾತಿ ಪ್ರಕಟ ಮಾಡಲಾಗಿದೆ. ವಾರ್ಡ್ ವಿಂಗಡಣೆ ಮಾಡುವಾಗಲೂ ಮಾರ್ಗಸೂಚಿ ಅನುಸರಿಸಿಲ್ಲ ಎಂದು ಹೇಳಿದರು.
ಎಂದಿನಂತೆ ಕಂದಾಯ ಅಧಿಕಾರಿಗಳು ಮೀಸಲಾತಿ ನಿಗದಿ ಮಾಡುತ್ತಿದ್ದರು. ಆದರೆ ಈ ಬಾರಿ ಮುಖ್ಯ ಆಯುಕ್ತರು ಒಂದು ಸಭೆಯನ್ನೂ ಮಾಡಿಲ್ಲ. ಆರ್ಎಸ್ಎಸ್ನ ಕೇಶವಕೃಪಾದಲ್ಲಿ ಕುಳಿತವರ ಸೂಚನೆಯಂತೆ ವಾರ್ಡ್ ವಿಂಗಡಣೆಯಾಗಿದೆ. ಎಲ್ಲೆಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೋ ಅಲ್ಲೆಲ್ಲ ಅಮೀಬಾ ರೀತಿ ವಾರ್ಡ್ ವಿಂಗಡಣೆ ಮಾಡಿದ್ದಾರೆ. ನಗರಾಭಿವೃದ್ಧಿ ಇಲಾಖೆಯು ಒಂದು ರಬ್ಬರ್ ಸ್ಟಾಂಪ್ ಇಲಾಖೆಯಂತೆ ಕೆಲಸ ಮಾಡುತ್ತಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾರ್ಡ್ ವಿಂಗಡನೆ ಸಂದರ್ಭದಲ್ಲಿಯೂ ಅನ್ಯಾಯವಾಗಿದೆ. ಮೂರುವರೆ ಸಾವಿರ ಆಕ್ಷೇಪಣೆಗಳು ಬಂದಿದ್ದರೂ ಸಹ ಸರ್ಕಾರ ಅದನ್ನು ಕೇರ್ ಮಾಡಿಲ್ಲ. ಮೀಸಲಾತಿ ಪಟ್ಟಿಯನ್ನು ಸಹ ಸರಿಯಾಗಿ ಮಾಡಿಲ್ಲ. ಮನಸ್ಸಿಗೆ ಬಂದಂತೆ ಮೀಸಲಾತಿ ಮಾಡಲಾಗಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಮಾತ್ರ ಮಹಿಳೆಯರಿಗೆ 100% ನೀಡಿದ್ದಾರೆ. ಒಬಿಸಿ ಮೀಸಲಾತಿಯನ್ನು ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಹೆಚ್ಚು ಹಾಕಿದ್ದಾರೆ. ಇದೊಂದು ವ್ಯವಸ್ಥಿತವಾಗಿ ಮಾಡಿರುವ ಅನ್ಯಾಯ, ಅಕ್ರಮ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಮಾತನಾಡಿ, ಬೆಂಗಳೂರು ನಗರಕ್ಕೆ ಮೀಸಲಾತಿ ಪಟ್ಟಿಯಿಂದ ಅನುಕೂಲ ಆಗಲು ಸಾದ್ಯವಿಲ್ಲ ಎಂದು ಹೇಳಿದರು. ಬಿಜೆಪಿಯವರು ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಮೀಸಲಾತಿ ವಿಂಗಡಿಸಿದ್ದಾರೆ. ಒಂದು ವಾರ್ಡ್ನಲ್ಲಿ 16,000 ಜನಸಂಖ್ಯೆಯಿದ್ದರೆ, ಪಕ್ಕದ ವಾರ್ಡ್ನಲ್ಲಿ 45,000 ಜನಸಂಖ್ಯೆಯಿದೆ. ಜನಸಂಖ್ಯೆಗಿಂತಲೂ ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂದರು.
ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್, ನನ್ನ ಕ್ಷೇತ್ರದಲ್ಲಿ 6 ವಾರ್ಡ್ಗೆ ಮಹಿಳಾ ಮೀಸಲಾತಿ ಘೋಷಿಸಲಾಗಿದೆ. ಕಾಂಗ್ರೆಸ್ಗೆ ಹಿನ್ನಡೆಯಾಗಬೇಕು ಎಂಬುದೇ ಇದಕ್ಕೆ ಕಾರಣ. ಎಸ್ಟಿ ಸಮುದಾಯ ಇಲ್ಲದ ಕಡೆ ಎಸ್ಟಿ ಮೀಸಲಾತಿ ಘೋಷಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ಸಂಸದ ಡಿ.ಕೆ.ಸುರೇಶ್, ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.