ಬೆಂಗಳೂರು: ಮೀಸಲಾತಿ ಭಿಕ್ಷೆ ಅಲ್ಲ ಅದು ನಮ್ಮ ಹಕ್ಕು. ಇತ್ತೀಚೆಗೆ ಅನೇಕ ಟೀಕೆ ಟಿಪ್ಪಣಿ ಕೇಳಿ ಬರುತ್ತಿದೆ. ಆದರೆ ಅಸ್ಪೃಶ್ಯತೆ ಇರುವವರೆಗೆ ಮೀಸಲಾತಿ ಇರಲಿದೆ. ಮೀಸಲಾತಿ ಪರ, ವಿರೋಧದ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಎಸ್ಸಿ, ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಲು ಕಾನೂನು ಮಾಡಲಾಗಿತ್ತು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವತಿಯಿಂದ ಜನವರಿ 8ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಂಡಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ‘ಐಕ್ಯತಾ ಸಮಾವೇಶ’ದ ಬಗ್ಗೆ ವಿವರಿಸಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ದಲಿತರನ್ನು ಒಂದು ವೇದಿಕೆಯಲ್ಲಿ ತರಬೇಕೆಂಬ ಉದ್ದೇಶದಿಂದ ದಲಿತ ಸಮಾವೇಶ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರಲಿದ್ದಾರೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಇಂದಿನವರೆಗೂ ಸಮಾಜದಲ್ಲಿ ಶೋಷಿತ ವರ್ಗಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಾ ಬಂದಿವೆ. ಅಂದಿನಿಂದ ಇಲ್ಲಿಯವರೆಗೂ ಈ ಸಮುದಾಯಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡ ಅವರ ಕ್ಷೇಮಾಭಿವೃದ್ಧಿಗೆ ಕೇಂದ್ರ-ರಾಜ್ಯದಲ್ಲಿ ಅನೇಕ ಕಾನೂನು ತರುವ ಮೂಲಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಅವುಗಳನ್ನು ಜಾರಿಗೆ ತರಲು ಎಲ್ಲ ಪ್ರಯತ್ನ ಮಾಡಿದೆ ಎಂದು ವಿವರಿಸಿದರು.
ಬೇರೆ ಬೇರೆ ಪಕ್ಷಗಳು ಅವರ ಮನವೊಲಿಕೆಗೆ ಯತ್ನಿಸುತ್ತಿವೆ. ಅವರ ಯೋಗಕ್ಷೇಮಕ್ಕೆ ಬೇರೆ ಪಕ್ಷಗಳು ಕೆಲಸ ಮಾಡಲಿಲ್ಲ. ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಿಕೊಂಡಿಲ್ಲ. ಇಂದು ಅಂತಹ ಪಕ್ಷಗಳ ನಾಯಕರು ಇದ್ದಕಿದ್ದಂತೆ ಅವರ ಮನೆಯಲ್ಲಿ ಮಲಗೋದಕ್ಕೆ ಹೋಗುತ್ತಿದ್ದಾರೆ. ಹೊಟೇಲ್ ನಿಂದ ಊಟ ತರಿಸಿಕೊಂಡು ದಲಿತರ ಮನೆಯಲ್ಲಿ ಊಟ ಮಾಡುತ್ತಾರೆ. ದಲಿತ ಸಮುದಾಯವನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಆಗುತ್ತಿದೆ’ ಎಂದರು.
‘ದಲಿತರ ಮನೆಗೆ ಹೋಗಿ ದಳದವರು ಮಲಗುತ್ತಾರೆ. ಬಿಜೆಪಿಯವರು ಹೋಗಿ ಮಲಗುತ್ತಾರೆ. ಎಷ್ಟು ದಿನ ಈ ನಾಟಕ ನಡೆಯಲಿದೆ. ಯಾರೂ ಈ ನಾಟಕಕ್ಕೆ ಬಲಿಯಾಗಬೇಡಿ. ನಾವು ಇದ್ದೇವೇ ಎಂಬ ಸಂದೇಶ ನೀಡಲಿಕ್ಕಾಗಿಯೇ ಸಮಾವೇಶ ಮಾಡುತ್ತಿದ್ದೇವೆ’ ಎಂದರು.
ದಲಿತ ಸಮುದಾಯಗಳನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿವೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರುಗಳು ನಮ್ಮ ಜನರಿಗೆ ನಿಮ್ಮ ಜತೆ ಇದ್ದೇವೆ. ನಿಮ್ಮ ಕ್ಷೇಮ ಕಾಪಾಡಲು ನಾವು ಇದ್ದೇವೆ ಎಂದು ಮರುಭರವಸೆ ನೀಡುವ ಸಮಾವೇಶ ಇದಾಗಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ಈಗ ದಲಿತರ ಓಲೈಕೆಗೆ ಪಕ್ಷ ಪ್ರಯತ್ನಿಸುತ್ತಿದೆಯೇ ಎಂಬ ವಿಚಾರವಾಗಿ ಮಾತನಾಡಿ, ನಾವೇ ದಲಿತರಾಗಿದ್ದೇವೆ. ನಾವು ಯಾರನ್ನೂ ಓಲೈಸುವ ಅಗತ್ಯವಿಲ್ಲ. ದಲಿತರ ಮೇಲಿನ ದೌರ್ಜನ್ಯ, ಹತ್ಯೆಗಳಾಗಿದ್ದು, ಇವರ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಪಕ್ಷವಾಗಿ ನಮ್ಮ ಅಜೆಂಡಾ ದಲಿತರ ರಕ್ಷಣೆಯಾಗಿವೆ ಎಂದರು.
ದಲಿತ ಮುಖ್ಯಮಂತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ʻಸದ್ಯಕ್ಕೆ ಈ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ನಾವೆಲ್ಲ ಒಟ್ಟಿಗೆ ಇದ್ದರೆ ಶಕ್ತಿ ಬರಲಿದೆ. ಪಕ್ಷವನ್ನು ಸದೃಢ ಮಾಡಲು ಹೊರಟಿದ್ದೇವೆ. ಮುಖ್ಯಮಂತ್ರಿ ಯಾರು ಅನ್ನೋದು ಪಕ್ಷ ನಿರ್ಧರಿಸಲಿದೆ. ನಮ್ಮಲ್ಲಿ ಹೈಕಮಾಂಡ್ ಇದೆ. ಪಕ್ಷದ ಚೌಕಟ್ಟಿನಲ್ಲಿ ನಾವು ಚರ್ಚೆ ಮಾಡ್ತೇವೆ. ಸಂದರ್ಭ ಬಂದಾಗ ಹೈಕಮಾಂಡ್ ಗಮನಕ್ಕೆ ತರಲಾಗುವುದುʼ ಎಂದರು.
ಸಮಾವೇಶಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸನ್ಮಾನಿಸಲಾಗುವುದು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಇಲ್ಲವೇ ಸೋನಿಯಾ ಗಾಂಧಿ ಪೈಕಿ ಯಾರಾದರೊಬ್ಬರು ಭಾಗವಹಿಸುವ ನಿರೀಕ್ಷೆಯಿದೆ. ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್, ಎಂ.ಬಿ. ಪಾಟೀಲ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವರಾದ ಕೆ.ಎಚ್ ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಹೆಚ್.ಸಿ ಮಹದೇವಪ್ಪ, ಹೆಚ್. ಆಂಜನೇಯ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.