ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿರುವ 50 ಮಹಿಳೆಯರು ಸೇರಿದಂತೆ 125 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಉತ್ತರ ಪ್ರದೇಶ ಚುನಾವಣೆಗಳಿಗಾಗಿ ನಾವು ಜನತೆಯ ಸಮಸ್ಯೆಗಳು, ಮಹಿಳೆಯರು ಮತ್ತು ಅಭಿವೃದ್ಧಿ ವಿಷಯಗಳನ್ನು ಪ್ರಧಾನವಾಗಿ ಚರ್ಚಿಸುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
ಶೇಕಡಾ 40ರಷ್ಟು ಮಹಿಳೆಯರು ಮತ್ತು ಶೇಕಡಾ 40ರಷ್ಟು ಯುವಕರನ್ನು ಕಣಕ್ಕಿಳಿಸುವ ಮೂಲಕ ನಾವು ಉತ್ತರ ಪ್ರದೇಶದಲ್ಲಿ ಹೊಸ ಮಾದರಿಯ ರಾಜಕೀಯವನ್ನು ಆರಂಭಿಸುವ ಭರವಸೆ ಹೊಂದಿದ್ದೇವೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಉತ್ತರ ಪ್ರದೇಶದ ಉಜ್ವಲ ಭವಿಷ್ಯಕ್ಕಾಗಿ ನಾವು ಸಕಾರಾತ್ಮಕ ಪ್ರಚಾರಕ್ಕಿಳಿಯುವುದಿಲ್ಲ. ಸಕಾರಾತ್ಮಕವಾಗಿ ಪ್ರಚಾರ ಮಾಡುತ್ತೇವೆ ಎಂದು ಅವರು ನುಡಿದಿದ್ದಾರೆ.
ದೇಶಾದ್ಯಂತ ಸಂಚಲನ ಮೂಡಿಸಿದ್ದ ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಲಾಗಿದೆ.
ಉತ್ತರ ಪ್ರದೇಶದಲ್ಲಿ ನ್ಯಾಯಕ್ಕಾಗಿ ಯಾರು ಹೋರಾಡಿದ್ದಾರೋ ಮತ್ತು ಹೋರಾಡುವ ಸಾಮರ್ಥ್ಯ ಹೊಂದಿರುವರೋ ಅಂಥವರನ್ನು ಕಣಕ್ಕಿಳಿಸುವ ಪ್ರಯತ್ನ ಮಾಡಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ಪ್ರತಿಪಾದಿಸಿದ್ದಾರೆ.
ಸೋನಭದ್ರ ಹತ್ಯಾಕಾಂಡದ ಸಂತ್ರಸ್ತರಲ್ಲಿ ಒಬ್ಬರಾದ ರಾಮರಾಜ್ ಗೊಂಡ್ ಅವರಿಗೆ, ಆಶಾ ಕಾರ್ಯಕರ್ತರ ಗೌರವಧನ ಹೆಚ್ಚಿಸಲು ನಡೆದ ಹೋರಾಟದ ನೇತೃತ್ವ ವಹಿಸಿದ್ದ ಪೂನಂ ಪಾಂಡೆ ಅವರಿಗೆ ಷಹಜಹಾನ್‌ಪುರದಿಂದ ಟಿಕೆಟ್ ಘೋಷಿಸಲಾಗಿದೆ.
ರಾಮ್ಪುರ್ ಖಾಸ್‌ನಿಂದ ಹಾಲಿ ಶಾಸಕಿ ಆರಾಧನಾ ಮಿಶ್ರಾ ಹಾಗೂ ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ ನಡೆಸಿ ಜೈಲು ವಾಸ ಅನುಭವಿಸಿದ್ದ ಕಾಂಗ್ರೆಸ್ ನಾಯಕಿ ಸದಾಫ್ ಜಾಫರ್ ಅವರಿಗೆ ಲಖನೌ ಸೆಂಟ್ರಲ್‌ನಿಂದ ಟಿಕೆಟ್ ನೀಡಲಾಗಿದೆ. ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಶಿದ್ ಅವರ ಪತ್ನಿ ಲೂಯಿಸ್ ಖುರ್ಶಿದ್, ನೋಡ್ಡಾದಿಂದ ಪಂಖುಡಿ ಪಾಠಕ್ ಸೇರಿದಂತೆ ಹಲವು ಮಹಿಳೆಯರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ದೌರ್ಜನ್ಯಗಳು ನಡೆದರೆ ನಿಮ್ಮ ಹಕ್ಕುಗಳಿಗಾಗಿ ಹೋರಾಡಿ ಎಂಬುದು ನನ್ನ ಸಂದೇಶ. ಅಂತಹ ಮಹಿಳೆಯರೊಂದಿಗೆ ಕಾಂಗ್ರೆಸ್ ಇದೆ. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಮಹಿಳೆಯರು ಹೋರಾಟ ಮತ್ತು ಧೈರ್ಯಶಾಲಿ ಮಹಿಳೆಯರು. ಅವರಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.