ರಾಹುಲ್‌ ಗಾಂಧಿ ಇಡಿ ವಿಚಾರಣೆ ಮೂರನೇ ದಿನಕ್ಕೆ; ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ)ದ ರಾಹುಲ್‌ ಗಾಂಧಿ ವಿಚಾರಣೆಯು ಇಂದು (ಜೂನ್‌ 15) ಮೂರನೇ ದಿನಕ್ಕೂ ಮುಂದುವರೆದಿದೆ. ರಾಹುಲ್‌ ಗಾಂಧಿ ಜಾರಿ ನಿರ್ದೇಶನಾಲಯ ಮುಂದೆ ಹಾಜರಾಗುತ್ತಿದ್ದಂತೆ, ಪೊಲೀಸರು ನವದೆಹಲಿಯಲ್ಲಿರುವ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಗೆ ಬಲವಂತವಾಗಿ ನುಗ್ಗಿ ಕಾರ್ಯಕರ್ತರನ್ನು ಥಳಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.‌

ಕಾಂಗ್ರೆಸ್ ನಾಯಕರ ವಿಚಾರಣೆ ಖಂಡಿಸಿ ಎಐಸಿಸಿ ಕಚೇರಿಯಿಂದ ಇಡಿ ಕಚೇರಿವರೆಗೂ ಪ್ರತಿಭಟನೆ ನಡೆಸಲು ಪ್ರಯತ್ನಿಸಿರು. 144 ಸೆಕ್ಷನ್ ಜಾರಿ ಹಿನ್ನಲೆ ಪ್ರತಿಭಟನೆ ಆರಂಭವಾಗುತ್ತಿದ್ದಂತೆ ತಡೆಯಲು ಮುಂದಾದ ದೆಹಲಿ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ದೊಡ್ಡ ಸಂಘರ್ಷ ನಡೆದಿದೆ.

ರಾಹುಲ್ ಗಾಂಧಿ ವಿಚಾರಣೆ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್‌ ಪಕ್ಷವು ಒಂದು ಕಡೆ ಸಹ ಉಗ್ರ ಪ್ರತಿಭಟನೆ ನಡೆಸಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಇಡಿ ಕಚೇರಿಯ ಕೂಗಳತೆ ದೂರದಲ್ಲಿರುವ ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದು ಕಡೆ ಪೋಲೀಸ್ ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ ಏರ್ಪಟ್ಟಿತ್ತು.

ಕಾಂಗ್ರೆಸ್ ವಿಡಿಯೊವೊಂದನ್ನು ಶೇರ್ ಮಾಡಿದ್ದು ಇಂದು ಮಧ್ಯಾಹ್ನ ಎಐಸಿಸಿ ಪ್ರಧಾನ ಕಚೇರಿಗೆ ಪ್ರವೇಶಿಸಲು ಮುಂದಾದ ಪ್ರತಿಭಟನಾಕಾರರನ್ನು, ಭದ್ರತಾ ಸಿಬ್ಬಂದಿಗಳು ತಳ್ಳುತ್ತಿರುವುದವನ್ನು ಕಾಣಬಹುದು. ಓ ಸರ್ವಾಧಿಕಾರಿಯೇ. ನೀವು ಆಸ್ತಿಯನ್ನು ಧ್ವಂಸ ಮಾಡಬೇಕಾದರೆ, ಪ್ರಜಾಪ್ರಭುತ್ವದ ಕುರ್ಚಿಯಿಂದ ಕೆಳಗಿಳಿದು ಜನರ ಮುಂದೆ ನಿಂತುಕೊಳ್ಳಿ. ನೀವು ನಿಮ್ಮ ಪೋಲೀಸ್ ಗೂಂಡಾಗಳನ್ನು ವಾಪಸ್ಸು ಕರೆಸಿಕೊಳ್ಳಿ. ನಿಮ್ಮ ದುರಹಂಕಾರಕ್ಕೆ ಕಾರಣವಾದರೂ ಏನು?  ನಾವು ನಿಮ್ಮ ಅಹಂಕಾರವನ್ನು ಮುರಿಯುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಸದ ಡಿ.ಕೆ ಸುರೇಶ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರನ್ನು ಪೊಲೀಸರು ಕೈ ಕಾಲು ಹಿಡಿದು ಹೊತ್ತಿಕೊಂಡು ಹೋಗಿ ವಾಹನದಲ್ಲಿ ತುಂಬಿಸಿದ್ದಾರೆ. ಈ ವೇಳೆ ಡಿ.ಕೆ ಸುರೇಶ್ ದೆಹಲಿ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದರು.

ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್, ಬಿಜೆಪಿ ಭಾರತದ ಪ್ರಜಾಪ್ರಭುತ್ವವನ್ನು ಕೊಂದು ಹಾಕುತ್ತಿದೆ. ಎಐಸಿಸಿ ಪ್ರಧಾನ ಕಚೇರಿ ಬಾಗಿಲು ಒಡೆದ ಅವರು ನಮ್ಮ ಪೂರ್ವಜರು ಹೋರಾಡಿ ತಮ್ಮ ಪ್ರಾಣವನ್ನು ಕೊಟ್ಟ ಪ್ರಜಾಪ್ರಭುತ್ವವನ್ನು ತುಳಿದು ಹಾಕಿದರು ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್‌ ನಾಯಕ ರಣದೀಪ್‌ ಸುರ್ಜೇವಾಲಾ ಕಾಂಗ್ರೆಸ್‌ ಪ್ರಧಾನ ಕಚೇರಿಗೆ ಪ್ರವೇಶಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದರು. ಇಂದು ಎಲ್ಲಾ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ನಾಳೆ ಕಾಂಗ್ರೆಸ್ ಭಾರತದಾದ್ಯಂತ ಎಲ್ಲಾ ರಾಜಭವನಗಳಿಗೆ ಘೇರಾವ್ ಮಾಡಲಿದೆ. ನಾಳೆಯ ದಿನವೂ ಎಲ್ಲಾ ಜಿಲ್ಲಾ ಮಟ್ಟದಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿ ನಡೆಸಿದ ವಿಶೇಷ ಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸಾಗರ್ ಹೂಡಾ, ಈವರೆಗೆ 150 ಮಂದಿಯನ್ನು ಬಂಧಿಸಲಾಗಿದೆ. ಇಂದು 3 ನೇ ದಿನದ ಪ್ರತಿಭಟನೆ ಆಗಿದ್ದು ಪೊಲೀಸರು ಸರಿಯಾದ ವ್ಯವಸ್ಥೆ ಮಾಡಿದ್ದಾರೆ. ಕಾಂಗ್ರೆಸ್ ಇಂದು ಸಭೆಗೆ ಯಾವುದೇ ಅನುಮತಿ ತೆಗೆದುಕೊಂಡಿರಲಿಲ್ಲ, ಯಾವ ಪ್ರದೇಶದಲ್ಲಿ ಸೆಕ್ಷನ್ 144 ಹೇರಲಾಗಿದೆ ಎಂದು ಅವರ ಪದಾಧಿಕಾರಿಗಳಿಗೆ ತಿಳಿದಿದೆ. ಎರಡೂವರೆ ದಿನಗಳಲ್ಲಿ ಸುಮಾರು 800 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *